Saturday, October 19, 2024

Latest Posts

‘ತಮ್ಮ ಎಲೆಯಲ್ಲಿ ಆನೆ ಸತ್ತು ಬಿದ್ದಿರುವಾಗ, ನಮ್ಮ ಎಲೆಯಲ್ಲಿ ನೊಣವನ್ನು ಹುಡುಕಿದಂತಿದೆ ಬಿಜೆಪಿಗರ ದುಸ್ಥಿತಿ’

- Advertisement -

Political News: ಬಿಜೆಪಿ ಇಂದು ಕಾಂಗ್ರೆಸ್ ವಿರುದ್ಧ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ್ದು, ರಾಜ್ಯದಲ್ಲಿ ಆಗುತ್ತಿರುವ ತೊಂದರೆ ಬಗ್ಗೆ, ರಾಜ್ಯ ಸರ್ಕಾರದ ಆಡಳಿತದ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ಸಾಲು ಸಾಲು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

1. ನಮ್ಮ ಸರ್ಕಾರದ ವಿರುದ್ಧ ಬಿಜೆಪಿ ಇಂದು ಬೆಳಗಾವಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಯನ್ನು ಸ್ವಾಗತಿಸುತ್ತೇನೆ. ನಮ್ಮ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡುವ ಮೊದಲು ಬಿಜೆಪಿಯ ಶಾಸಕರೇ ಆಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಿನ್ನೆ ಸದನದ ಒಳಗೆ ಮತ್ತು ಹೊರಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷರಾದ ಅವರ ಮಗ ಬಿ.ವೈ.ವಿಜಯೇಂದ್ರ, ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಈ ಪ್ರತಿಭಟನಾ ಸಭೆಯಲ್ಲಿ ಉತ್ತರ ನೀಡುತ್ತಾರೆ ಎಂದು ನಂಬಿದ್ದೇನೆ. ಬಿ.ಎಸ್. ಯಡಿಯೂರಪ್ಪನವರು ಹೈಕಮಾಂಡ್‌ಗೆ ಎರಡು ಸಾವಿರ ಕೋಟಿ ರೂಪಾಯಿ ಕಾಣಿಕೆ ನೀಡಿ ಮುಖ್ಯಮಂತ್ರಿಯಾಗಿದ್ದಾರೆ ಎಂದು ಹಿಂದೆ ಆರೋಪಿಸಿದ್ದ ಬಸನಗೌಡ ಪಾಟೀಲ್ ಯತ್ನಾಳ್, ನಿನ್ನೆ ಹೊಸ ಬಾಂಬು ಹಾಕಿದ್ದಾರೆ. ಕೇಂದ್ರದ ಬಿಜೆಪಿ ನಾಯಕರನ್ನು ಯಡಿಯೂರಪ್ಪನವರು ಬ್ಲಾಕ್ ಮೇಲ್ ಮಾಡಿ ತಮ್ಮ ಮಗನನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಏನಿದು ಬ್ಲಾಕ್ ಮೇಲ್? ಈ ಬಗ್ಗೆ ಯಡಿಯೂರಪ್ಪನವರು ಇಂದಿನ ಸಾರ್ವಜನಿಕ ಸಭೆಯಲ್ಲಿ ವಿವರ ನೀಡಲಿ.

2. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಬಿಜೆಪಿ ನಾಯಕ ವಿ.ಸೋಮಣ್ಣನವರನ್ನು ಸೋಲಿಸಲಿಕ್ಕಾಗಿಯೇ ಬೆಂಗಳೂರಿನಿಂದ ಓಡಿಸಿ ಮೈಸೂರಿನ ಎರಡು ಕ್ಷೇತ್ರಗಳಲ್ಲಿ ಚುನಾವಣಾ ಸ್ಪರ್ಧಿಸುವಂತೆ ಮಾಡಿ ಸೋಲಿಸಿದ್ದಾರೆ ಎಂದು ಇಲ್ಲಿಯ ವರೆಗೆ ಬಸನಗೌಡ ಪಾಟೀಲ್ ಯತ್ನಾಳ್ಆ ರೋಪಿಸುತ್ತಾ ಬಂದಿದ್ದರು. ಆದರೆ ಅವರು ಈಗ ಬೊಮ್ಮಾಯಿ ಅವರನ್ನೂ ಸೋಲಿಸಲು ವಿಜೇಂದ್ರ ಹಣ ಕೊಟ್ಟು ಕಳಿಸಿದ್ದರು ಎಂದು ಗುರುತರವಾದ ಇನ್ನೊಂದು ಆರೋಪ ಮಾಡಿದ್ದಾರೆ. ಈ ಬಗ್ಗೆ ಆತ್ಮವಿಶ್ವಾಸದಿಂದ ಮಾತನಾಡಿರುವ ಯತ್ನಾಳ್ ಅವರನ್ನು ಬೊಮ್ಮಾಯಿ ಅವರನ್ನು ದೇವರ ಮೇಲೆ ಆಣೆಗೆ ಕರೆದಿದ್ದನ್ನು ನೋಡಿದರೆ ಆರೋಪದಲ್ಲಿ ಸತ್ಯಾಂಶ ಇದ್ದ ಹಾಗಿದೆ. ಚುನಾವಣೆಯ ಕಾಲದಲ್ಲಿ ಈ ರೀತಿಯ ಹಣ ಸಂದಾಯ ಮಾಡುವುದು ಕಾನೂನಿನ ದೃಷ್ಟಿಯಿಂದಲೂ ಶಿಕ್ಷಾರ್ಹ ಅಪರಾಧವಾಗಿದೆ. ಉತ್ತರ ಕರ್ನಾಟಕಕ್ಕೆ ನಮ್ಮ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ದೂರುತ್ತಿರುವ ಬಿಜೆಪಿ ನಾಯಕರು ನಿನ್ನೆ ಸದನದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮದೇ ಪಕ್ಷ ಮತ್ತು ಸರ್ಕಾರದ ವಿರುದ್ಧವೇ ಮಾಡಿರುವ ಆರೋಪಗಳನ್ನು ಕೇಳಿದ್ದಾರೆಂದು ನಂಬಿದ್ದೇನೆ. ರಾಜ್ಯ ಬಿಜೆಪಿಯಲ್ಲಿ ಉತ್ತರ ಕರ್ನಾಟಕದ ನಾಯಕರನ್ನು ನಿರಂತರವಾಗಿ ತುಳಿಯಲಾಗುತ್ತಿದೆ. ಬಿಜೆಪಿಯಲ್ಲಿನ ದಕ್ಷಿಣದ ಕೆಲವು ನಾಯಕರು ತಮ್ಮಲ್ಲಿರುವ ಹಣದ ಬಲದಿಂದ ಅಧಿಕಾರದ ಸ್ಥಾನಗಳನ್ನು ಪಡೆಯುತ್ತಿದ್ದಾರೆ ಎಂದು ಆರೋಪಿಸುವ ಮೂಲಕ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಆರ್ .ಅಶೋಕ್ ಅವರ ಬಗ್ಗೆಯೂ ಅನುಮಾನ ಹುಟ್ಟಿಸುವಂತೆ ಮಾಡಿದ್ದಾರೆ.

3. ಬಸನಗೌಡ ಪಾಟೀಲ್ ಯತ್ನಾಳ್ ಅವರು ನಿರಂತರವಾಗಿ ತಮ್ಮ ಪಕ್ಷದವರ ವಿರುದ್ಧವೇ ಮಾಡಿಕೊಂಡು ಬಂದಿರುವ ಆರೋಪಗಳು ಗಂಭೀರ ಸ್ವರೂಪದ್ದಾಗಿದೆ. ಇದಕ್ಕೆ ಉತ್ತರ ನೀಡಬೇಕಾಗಿರುವುದು ರಾಜ್ಯ ಬಿಜೆಪಿ ನಾಯಕರ ಕರ್ತವ್ಯವಾಗಿದೆ. ಇದನ್ನು ತಿಳಿದುಕೊಳ್ಳುವ ಹಕ್ಕು ರಾಜ್ಯದ ಜನತೆಗಿದೆ. ಉತ್ತರ ಕರ್ನಾಟಕದ ಅಭಿವೃದ್ದಿ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ರಾಜ್ಯದ ಬಿಜೆಪಿ ನಾಯಕರಿಗೆ ಇಲ್ಲ. ಸಂವಿಧಾನಕ್ಕೆ ತಿದ್ದುಪಡಿ ಮಾಡಿ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂಬ ಬೇಡಿಕೆಯನ್ನು ಆಗಿನ ಗೃಹಸಚಿವ ಎಲ್.ಕೆ.ಅಡ್ವಾಣಿ ತಿರಸ್ಕರಿಸಿ ಮಾಡಿರುವ ಅನ್ಯಾಯ ಇತಿಹಾಸದ ಪುಟದಲ್ಲಿದೆ. ಇದನ್ನು ನಿರಾಕರಿಸುವ ಧೈರ್ಯ ಯಾವ ಬಿಜೆಪಿ ನಾಯಕರಿಗೆ ಇದೆ? ಈ ವಿಶೇಷ ಸ್ಥಾನಮಾನವನ್ನು ನೀಡಿದ್ದು ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ. ಮಲ್ಲಿಕಾರ್ಜುನ ಖರ್ಗೆಯವರನ್ನು ಕಲ್ಪುರ್ಗಿ ಜನ ಗೆಲ್ಲಿಸಿ ಕಾಂಗ್ರೆಸ್ ಸರ್ಕಾರವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತಂದರೆ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕೊಡಿಸುವುದಾಗಿ ನಮ್ಮ ನಾಯಕರಾದ ರಾಹುಲ್ ಗಾಂಧಿಯವರು ಚುನಾವಣಾ ಪ್ರಚಾರ ಸಭೆಯಲ್ಲಿ ವಾಗ್ದಾನ ಮಾಡಿದ್ದರು. ಆ ಮಾತನ್ನು ಅವರು ಉಳಿಸಿಕೊಂಡಿರುವ ಕಾರಣಕ್ಕಾಗಿಯೇ ವಿಶೇಷ ಸ್ಥಾನಮಾನ ಸಿಕ್ಕಿದೆ ಎನ್ನುವುದನ್ನು ಬಿಜೆಪಿಯವರು ಮೊದಲು ತಿಳಿದುಕೊಳ್ಳಲಿ.

4. ರಾಜ್ಯದಲ್ಲಿ ತೀವ್ರ ಬರಗಾಲ ಇದೆ. ರಾಜ್ಯ ಸರ್ಕಾರ ಶಕ್ತಿಮೀರಿ ಪರಿಹಾರ ಕಾರ್ಯವನ್ನು ನಡೆಸುತ್ತಿದೆ. ರಾಜ್ಯದ 223 ತಾಲ್ಲೂಕುಗಳಲ್ಲಿ ಬರಪರಿಸ್ಥಿತಿ ಇದೆ. ಬರಪರಿಹಾರಕ್ಕಾಗಿ ರೂ.18,171 ಕೋಟಿ ನೆರವನ್ನು ಕೇಂದ್ರ ಸರ್ಕಾರದಿಂದ ಕೇಳಿದ್ದೇವೆ. 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಆಗಿದೆ. ಈ ನಷ್ಟಕ್ಕೆ ಪರಿಹಾರ ನೀಡಲು ರೂ.4,663 ಕೋಟಿ ಕೇಳಿದ್ದೇವೆ. ಸೆಪ್ಟಂಬರ್ 21 ರಂದು ಬರಪರಿಹಾರಕ್ಕಾಗಿ ಕೇಂದ್ರಕ್ಕೆ ಮೊದಲ ಮನವಿ ಮಾಡಿದ್ದೆವು. ಕೇಂದ್ರದ ತಂಡ ಬಂದು ಸಮೀಕ್ಷೆ ನಡೆಸಿ, ವರದಿಯನ್ನೂ ಕೂಡಾ ನೀಡಿದೆ. ರಾಜ್ಯ ಸರ್ಕಾರದ ಮನವಿಗೆ ಇಲ್ಲಿಯ ವರೆಗೆ ಕೇಂದ್ರ ಬಿಜೆಪಿ ಸರ್ಕಾರ ಸ್ಪಂದಿಸಿಲ್ಲ. ನಾವು ಬರೆದ ಪತ್ರಗಳಿಗೆ ಪ್ರತಿಕ್ರಿಯೆ ಇಲ್ಲ. ಪ್ರಧಾನಮಂತ್ರಿ ನರೇಂದ್ರಮೋದಿ ಅವರನ್ನು ಭೇಟಿ ಮಾಡಲು ಅವಕಾಶ ಕೇಳಿದರೂ ಕೊಟ್ಟಿಲ್ಲ. ರಾಜ್ಯದ ಬಿಜೆಪಿ ನಾಯಕರು ಪ್ರತಿಭಟನೆ ಮಾಡಬೇಕಾಗಿರುವುದು ಬೆಳಗಾವಿಯಲ್ಲಿ ಅಲ್ಲ, ಮೊದಲು ತಮ್ಮದೇ ಪಕ್ಷದ 25 ಸಂಸದರನ್ನು ದೆಹಲಿಗೆ ಕಳಿಸಿ ಬರಪರಿಹಾರವನ್ನು ಶೀಘ್ರದಲ್ಲಿ ಬಿಡುಗಡೆಮಾಡುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿಯವರ ಮನೆ ಮುಂದೆ ಧರಣಿ ನಡೆಸುವಂತೆ ಮಾಡಲಿ. ಅವರಿಗೇನಾದರೂ ಪ್ರಧಾನಿ ಬಗ್ಗೆ ಅಂಜಿಕೆ ಇದ್ದರೆ ಅವರ ದನಿಗೆ ದನಿಗೂಡಿಸಲು ನನ್ನ ಸಂಪುಟದ ಸದಸ್ಯರ ಜೊತೆ ನಾನೂ ಸೇರಿಕೊಳ್ಳುತ್ತೇನೆ. ಸುಮ್ಮನೆ ಇಲ್ಲಿ ಪ್ರಚಾರಕ್ಕಾಗಿ ಕೂಗಾಡಿದರೆ ಏನೂ ಪ್ರಯೋಜನವಾಗದು.

5. ರಾಜ್ಯದ ಬಿಜೆಪಿ ನಾಯಕರ ದಮ್ಮು – ತಾಕತ್ ಎಲ್ಲವೂ ಮೊನ್ನೆ ಸದನದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಯಲಾಗಿದೆ. ಉತ್ತರ ಕರ್ನಾಟಕದ ಅಭಿವೃದ್ದಿ ಯೋಜನೆಗಳ ಬಗ್ಗೆ ಚರ್ಚೆ ನಡೆಯಬೇಕಾಗಿದ್ದ ಸಮಯವನ್ನು ಅನಗತ್ಯವಾದ ಪ್ರತಿಭಟನೆಯ ಮೂಲಕ ಬಿಜಿಪಿ ಶಾಸಕರು ವಿಧಾನಸಭೆಯಲ್ಲಿ ಪೋಲು ಮಾಡಿದ್ದಾರೆ. ಉತ್ತರ ಕರ್ನಾಟಕದ ಬಗ್ಗೆ ಪ್ರೀತಿ-ಕಾಳಜಿ ಇದ್ದಿದ್ದರೆ ಇಂತಹ ಮೂರ್ಖತನದ ಕೆಲಸವನ್ನು ಮಾಡುತ್ತಿರಲಿಲ್ಲ. ಇಂತಹವರಿಗೆ ಉತ್ತರ ಕರ್ನಾಟಕದ ಬಗ್ಗೆ ಮಾತನಾಡುವ ಯಾವ ಹಕ್ಕಿದೆ? ವಿಧಾನಸಭೆಯಲ್ಲಿ ನಮ್ಮ ಸರ್ಕಾರದ ವಿರುದ್ಧ ಧರಣಿ ನಡೆಸಿ ಬಳಲಿ ಬೆಂಡಾಗಿ, ಸೋತು ಸುಣ್ಣವಾಗಿ ಹೋಗಿರುವ ಬಿಜೆಪಿ ಶಾಸಕರು ಇಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂಪ್ಪ ಅವರನ್ನು ಕರೆತಂದು ಬೆಳಗಾವಿಯಲ್ಲಿ ನಮ್ಮ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರಂತೆ. ಪಾಪ ಆ ಯಡಿಯೂರಪ್ಪನವರಿಗೆ ವಯಸ್ಸಾಗಿದೆ ಎಂದು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಕಣ್ಣೀರು ಹಾಕಿಸಿದ ಬಿಜೆಪಿ ನಾಯಕರು ಈಗ ಬೇರೆ ಗತಿಯೇ ಇಲ್ಲದೆ ಅವರ ಪಾದಕ್ಕೆ ಬಿದ್ದಿರುವುದನ್ನು ರಾಜ್ಯದ ಜನತೆ ತಮಾಷೆಯಾಗಿ ನೋಡುತ್ತಿದ್ದಾರೆ.

6. ಹೊಸ ವಿಧಾನಸಭೆ ರಚನೆಗೊಂಡು 150 ದಿನಗಳಾಗುವ ವರೆಗೆ ವಿರೋಧಪಕ್ಷದ ನಾಯಕನನ್ನು ಮಾಡುವ ಯೋಗ್ಯತೆ ಬಿಜೆಪಿಗೆ ಇಲ್ಲ. ಈಗಲೂ ವಿವಾದ ಬಗೆಹರಿದಿಲ್ಲ. ವಿರೋಧ ಪಕ್ಷದ ನಾಯಕರಾಗಿ ಆರ್,ಅಶೋಕ್ ಅವರನ್ನಾಗಲಿ, ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರನ್ನಾಗಲಿ ಬಹುಸಂಖ್ಯೆಯ ಬಿಜೆಪಿಯ ಶಾಸಕರು ಒಪ್ಪಿಕೊಂಡಿಲ್ಲ. ತಮ್ಮ ಊಟದೆಲೆಯಲ್ಲಿ ಆನೆ ಸತ್ತು ಬಿದ್ದಿರುವಾಗ ನಮ್ಮ ಪಕ್ಷದ ಎಲೆಯಲ್ಲಿನ ನೊಣವನ್ನು ಹುಡುಕಿಕೊಂಡು ಓಡಾಡುತ್ತಿರುವ ಹಾಗಿದೆ ರಾಜ್ಯದ ಬಿಜೆಪಿ ನಾಯಕರ ದುಸ್ಥಿತಿ ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಲೋಕಸಭೆಯ ಒಳಗೆ ಭದ್ರತಾ ಉಲ್ಲಂಘನೆಯು ತೀವ್ರ ಕಳವಳಕಾರಿಯಾಗಿದೆ: DCM D.K.Shivakumar

ಮಧ್ಯಪ್ರದೇಶದ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಡಾ.ಮೋಹನ್ ಯಾದವ್

ಇದೇ ದಿನ ಸಂಸತ್‌ ಮೇಲೆ ದಾಳಿ ನಡೆಸುುತ್ತೇನೆಂದು ಹೇಳಿದ್ದ ಖಲಿಸ್ತಾನಿ ಉಗ್ರ..

- Advertisement -

Latest Posts

Don't Miss