Sunday, July 20, 2025

Latest Posts

ಗಡಿಪಾರು ಆದೇಶ ಹಿಂಪಡೆಯದಿದ್ದಲ್ಲಿ ಆಗುವ ಪರಿಣಾಮಗಳಿಗೆ ರಾಜ್ಯ ಸರ್ಕಾರವೇ ಜವಾಬ್ದಾರಿ: ವಿಜಯೇಂದ್ರ

- Advertisement -

Political News: ದಕ್ಷಿಣ ಕನ್ನಡದಲ್ಲಿ ಕೋಮುಗಲಭೆ ತಡೆಯಲು ರಾಜ್ಯ ಸರ್ಕಾರ ಕೆಲವು ಹಿಂದೂ ಮುಖಂಡರನ್ನು ಗಡಿಪಾರು ಮಾಡುವ ಯೋಜನೆ ರೂಪಿಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುರ್ತುಪರಿಸ್ಥಿತಿ ಕುಖ್ಯಾತಿಯ ಕಾಂಗ್ರೆಸ್ ಕರಾವಳಿ ಪ್ರದೇಶದಲ್ಲಿ ಮತ್ತೆ ಅದನ್ನು ಜನರಿಗೆ ನೆನಪಿಸಲು ಹೊರಟು ಹಿಂದೂ ಪ್ರಮುಖರು ಹಾಗೂ ಬಿಜೆಪಿ ಹಿಂದೂ ಕಾರ್ಯಕರ್ತರನ್ನು ಬೆದರಿಸಲು ಹೊರಟಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ತಮ್ಮ ಮತ ಬ್ಯಾಂಕ್ ಭದ್ರ ಪಡಿಸಿಕೊಳ್ಳಲು ಮುಸ್ಲಿಂ ಸಮುದಾಯವನ್ನು ಓಲೈಸುವ ಭರದಲ್ಲಿ ವಿದ್ವಂಸಕ ಕೃತ್ಯ ನಡೆಸುತ್ತಿರುವವರ ರಕ್ಷಣೆಗೆ ನಿಲ್ಲುತ್ತಲೇ ಬಂದಿದೆ ಎಂದು ರಾಜ್ಯ ಸರ್ಕಾರದ ವಿರುದ್ದ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿದ ಸಮಾಜಘಾತುಕ ಶಕ್ತಿಗಳ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯುವ ನಿರ್ಧಾರವನ್ನು ಕೈಗೊಂಡಿದೆ, ಮೊನ್ನೆಯಷ್ಟೇ ಈ ಸಂಬಂಧ ಘನ ಉಚ್ಛ ನ್ಯಾಯಾಲಯ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದೆ. ಕರಾವಳಿ ಪ್ರದೇಶದಲ್ಲಿ ಮತಾಂಧ ದುಷ್ಟಶಕ್ತಿಗಳ ನಿರಂತರ ಅಟ್ಟಹಾಸ ಹಾಗೂ ಹಿಂದೂ ಕಾರ್ಯಕರ್ತರ ಮೇಲಿನ ಹಲ್ಲೆ, ಕೊಲೆ ಪ್ರಕರಣಗಳು ಸರಣಿ ರೂಪದಲ್ಲಿ ಘಟಿಸುತ್ತಲೇ ಇವೆ, ಈ ಸಂಬಂಧ ಹಿಂದೂ ಸಮಾಜಕ್ಕೆ ರಕ್ಷಣೆ ನೀಡಬೇಕಿದ್ದ ಪೊಲೀಸ್ ವ್ಯವಸ್ಥೆ ವಿಪರ್ಯಾಸ ಎನ್ನುವಂತೆ ಹಿಂದೂ ಸಂಘಟಕರಿಗೆ ನಿರಂತರ ಕಿರುಕುಳ ನೀಡುತ್ತಾ, ಸುಳ್ಳು ಕೇಸುಗಳನ್ನು ದಾಖಲಿಸುತ್ತಿದೆ ಎಂದು ವಿಜಯೇಂದ್ರ ಜರಿದಿದ್ದಾರೆ.

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಮುಸ್ಲಿಂ ಸಮುದಾಯದ ಟ್ರಕ್ ಚಾಲಕನೊಬ್ಬನ ಕೊಲೆ ಪ್ರಕರಣವನ್ನು ಮುಂದಿಟ್ಟುಕೊಂಡು ಸಂಘಟಿತವಾಗಿ ಸರ್ಕಾರಕ್ಕೆ ಬೆದರಿಕೆ ಒಡ್ಡಿದ ಮುಸ್ಲಿಂ ಸಮುದಾಯದ ಒತ್ತಾಯಕ್ಕೆ ಬೆದರಿ ದಿಢೀರನೇ ಮಂಗಳೂರು ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ವರಿಷ್ಠಾಧಿಕಾರಿಯನ್ನು 24 ಗಂಟೆಯೊಳಗೆ ವರ್ಗಾವಣೆ ಮಾಡಿತ್ತು, ಇದರ ಬೆನ್ನಲ್ಲೇ ಹಿಂದೂ ಸಮಾಜದ ಮುಖ್ಯಸ್ಥರ ವಿರುದ್ಧ ಸುಳ್ಳು ಕೇಸುಗಳನ್ನು ದಾಖಲಿಸಿ ಜೈಲಿಗೆ ದೂಡುವ ಪಿತೂರಿ ನಡೆಯುತ್ತಿದೆ.  ಇಂದು ಹಿರಿಯರಾದ ಕಲ್ಲಡ್ಕ ಪ್ರಭಾಕರ್ ಭಟ್ ಅವರೂ ಸೇರಿದಂತೆ 15ಕ್ಕೂ ಹೆಚ್ಚು ಕಾರ್ಯಕರ್ತರ ಮೇಲೆ ಎಫ್ಐಆರ್ ದಾಖಲಿಸಿದ್ದು, ಹಿಂದೂ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರ ಮನೆ, ಮನೆಗಳನ್ನು ಶೋಧಿಸಿ ಆತಂಕದ ವಾತಾವರಣ ಸೃಷ್ಟಿಸುತ್ತಿರುವುದು ಅತ್ಯಂತ ಖಂಡನೀಯ ಕ್ರಮವಾಗಿದೆ ಎಂದು ವಿಜಯೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಅದೇರೀತಿ ನಮ್ಮ ಪಕ್ಷದ ಮುಖಂಡರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ಗಡಿಪಾರು ಮಾಡುತ್ತಿರುವ ಕ್ರಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ನಾಚಿಕೆಗೇಡಿನ ಕ್ರಮವಾಗಿದೆ. ಒಂದು ಸಮುದಾಯದ ಪರವಾಗಿ ಪೊಲೀಸ್ ವ್ಯವಸ್ಥೆ ಹಾಗೂ ಸರ್ಕಾರ ನಿಲ್ಲುವ ಮೂಲಕ ಕರಾವಳಿ ಪ್ರದೇಶದ ಸಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡಿ ದಕ್ಷಿಣ ಕನ್ನಡ ಹಾಗೂ ಉಡುಪಿಯನ್ನು ಭಯ ಪೀಡಿತ ಜಿಲ್ಲೆಗಳನ್ನಾಗಿಸಲು ರಾಜ್ಯ ಸರ್ಕಾರ ಹೊರಟಂತಿದೆ. ಕಾಂಗ್ರೆಸ್ ಸರ್ಕಾರದ ನಡೆ, ಪೊಲೀಸರ ವರ್ತನೆ ಏಕಪಕ್ಷೀಯವಾಗಿ ಇದೇ ರೀತಿ ಮುಂದುವರೆದರೆ ಬಿಜೆಪಿ ಸುಮ್ಮನೆ ಕೂರದು ಎಂದು ಎಚ್ಚರಿಸ ಬಯಸುತ್ತೇನೆ. ಈ ಕೂಡಲೇ ಕಲ್ಲಡ್ಕ ಪ್ರಭಾಕರ್ ಭಟ್ ಅವರೂ ಸೇರಿದಂತೆ 15 ಕ್ಕೂ ಹೆಚ್ಚು ಹಿಂದೂ ಸಂಘಟನೆಗಳ ಪ್ರಮುಖರ ಮೇಲೆ ದಾಖಲಿಸಿರುವ ಎಫ್ಐಆರ್ ರದ್ದುಪಡಿಸಿ ಗಡಿಪಾರು ಆದೇಶ ಹಿಂಪಡೆಯಲಿ, ಇಲ್ಲವಾದರೆ ಮುಂದಿನ ಪರಿಣಾಮಗಳಿಗೆ ಸರ್ಕಾರವೇ ಜವಾಬ್ದಾರಿಯಾಗಬೇಕಾದೀತು ಎಂದು ವಿಜಯೇಂದ್ರ ಎಚ್ಚರಿಸಿದ್ದಾರೆ.

- Advertisement -

Latest Posts

Don't Miss