ಕಳೆದ ಕೆಲ ವಾರಗಳಿಂದ ಚಿನ್ನದ ಬೆಲೆಗಳು ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿವೆ. ಮಧ್ಯೆ ಅಲ್ಪ ಇಳಿಕೆ ಕಂಡರೂ ತಕ್ಷಣವೇ ಮತ್ತೆ ಹೊಸ ದಾಖಲೆ ನಿರ್ಮಿಸುತ್ತಿವೆ. ಅಕ್ಟೋಬರ್ 9ರಂದು 24 ಕ್ಯಾರೆಟ್ ಚಿನ್ನದ ದರ ₹1, 24,150 ತಲುಪಿದೆ. ತಜ್ಞರ ಪ್ರಕಾರ ಇದು ಹಠಾತ್ ಬದಲಾವಣೆ ಆಗಿದ್ದು, ಬಬಲ್ ಟ್ರೆಂಡ್‌ನ ಲಕ್ಷಣಗಳು ಕಾಣಿಸುತ್ತಿವೆ — ಅಂದರೆ ವೇಗವಾಗಿ ಏರಿದ ಬೆಲೆಗಳು ಶೀಘ್ರದಲ್ಲೇ ಇಳಿಯುವ ಸಾಧ್ಯತೆ ಇದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಮೊದಲ ಬಾರಿಗೆ ಒಂದು ಔನ್ಸ್‌ಗೆ $4,000 ಮೀರಿದ್ದು, 4,014ಕ್ಕೆ ತಲುಪಿದೆ. ಅಮೆರಿಕಾ ಆರ್ಥಿಕ ಅಸ್ಥಿರತೆ, ಡಾಲರ್ ಮೌಲ್ಯದ ಇಳಿಕೆ ಮತ್ತು ಹಣದುಬ್ಬರ ಏರಿಕೆಯ ಪರಿಣಾಮವಾಗಿ ಹೂಡಿಕೆದಾರರು ಚಿನ್ನದ ಕಡೆ ಮುಖಮಾಡಿದ್ದಾರೆ. ಇದರಿಂದ ದರದಲ್ಲಿ ಅತಿಯಾದ ಏರಿಕೆ ದಾಖಲಾಗಿದೆ.
ಕಳೆದ ಒಂದು ವರ್ಷದಲ್ಲಿ ಚಿನ್ನದ ಬೆಲೆ ಶೇಕಡಾ 50ರಷ್ಟು ಏರಿಕೆಯಾಗಿದೆ, ಡಾಲರ್ ಮೌಲ್ಯ ಶೇಕಡಾ 10ರಷ್ಟು ಇಳಿದಿದೆ. ದೇಶಗಳ ಸೆಂಟ್ರಲ್ ಬ್ಯಾಂಕ್‌ಗಳು ಮತ್ತು ರಿಟೈಲ್ ಹೂಡಿಕೆದಾರರ ಖರೀದಿಯೂ ಈ ಏರಿಕೆಗೆ ಕಾರಣವಾಗಿದೆ. ಆದರೆ ಅಮೆರಿಕಾ ಆರ್ಥಿಕ ಪರಿಸ್ಥಿತಿ ಸ್ಥಿರವಾದರೆ, ದರ ಶೇಕಡಾ 10–20ರಷ್ಟು ಇಳಿಯುವ ಸಾಧ್ಯತೆ ತಜ್ಞರು ಸೂಚಿಸಿದ್ದಾರೆ.
ಕೆಲವರು ಇದನ್ನು 1979ರ ಬಂಗಾರದ ಬಬಲ್‌ನ ಪುನರಾವರ್ತನೆ ಎಂದು ಹೇಳುತ್ತಿದ್ದು, ಇನ್ನು ಕೆಲವರು ಇದನ್ನು ಬಲವಾದ ಬುಲ್ ರನ್ ಎಂದು ಅಭಿಪ್ರಾಯಪಡುತ್ತಿದ್ದಾರೆ. ಬೆಲೆ ಏರಿಕೆಯ ವೇಗದಿಂದ ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಅಸ್ಥಿರತೆ ಸಾಧ್ಯತೆಯಿದೆ. ಅಂದಹಾಗೇ, ಬಬುಲ್ ಟ್ರೆಂಡ್ ಎಂದರೆ ಆರ್ಥಿಕ ಮಾರುಕಟ್ಟೆಯಲ್ಲಿ ಒಂದು ಆಸ್ತಿಯ ಬೆಲೆಯೂ ನಿಜವಾದ ಮೌಲ್ಯಕ್ಕಿಂತ ತುಂಬಾ ಹೆಚ್ಚಾಗಿ ಏರಿಕೆಯಾಗುವುದು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

