Saturday, July 12, 2025

Latest Posts

ಪ್ರತಿಷ್ಠೆಯಾದ ಕೋಮುಲ್ ಅಧ್ಯಕ್ಷ ಸ್ಥಾನ ಯಾರಿಗೆ?

- Advertisement -

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿನ ಅಸಮಾಧಾನ ತಿಳಿಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಈ ಹೊತ್ತಿನಲ್ಲಿಯೇ ಕೋಲಾರ ಜಿಲ್ಲಾ ಕಾಂಗ್ರೆಸ್​​ನಲ್ಲಿ ಬಣ ಬಡಿದಾಟ ಜೋರಾಗಿದೆ. ಇಲ್ಲಿನ ಪ್ರತಿಷ್ಠಿತ ಹಾಲು ಒಕ್ಕೂಟ ಆಡಳಿತ ಮಂಡಳಿಯ ಚುನಾವಣೆ ನಡೆದರೂ ಕಾಂಗ್ರೆಸ್​ನ ಇಬ್ಬರು ಶಾಸಕರ ನಡವಿನ ಆಂತರಿಕ ಬೇಗುದಿ ಕಡಿಮೆಯಾಗಿಲ್ಲ.

ಮಾಲೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ವೈ. ನಂಜೇಗೌಡ ಹಾಗೂ ಬಂಗಾರಪೇಟೆ ಶಾಸಕ ಎಸ್.ಎನ್, ನಾರಾಯಣಸ್ವಾಮಿ ನಡುವೆ ಕೋಮುಲ್ ತೀವ್ರ ಪ್ರತಿಷ್ಠೆಯ ಪಣವಾಗಿ ಪರಿಣಮಿಸಿದೆ. ಈ ಬೆಳವಣಿಗೆಯು ಕೋಲಾರ ಜಿಲ್ಲಾ ಕಾಂಗ್ರೆಸ್​​ನಲ್ಲಿ ಎರಡು ಬಣಗಳ ಸಂಘರ್ಷಕ್ಕೆ ಕಾರಣವಾಗಿದೆ.

ಈ ಇಬ್ಬರು ಶಾಸಕರ ಫೈಟ್ ನಡುವೆಯೇ ಅತ್ತ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಸಚಿವ ಕೆ.ಹೆಚ್. ಮುನಿಯಪ್ಪ ಎಂಟ್ರಿಕೊಟ್ಟಿದ್ದಾರೆ. ಈ ಮೂಲಕ ತಮ್ಮ ತಮ್ಮ ಬಣದಿಂದ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ಪರ ಬ್ಯಾಟ್ ಬೀಸುತ್ತಿದ್ದಾರೆ.

ಅತ್ತ ಮುನಿಯಪ್ಪ ಬಣದಿಂದ ಶಾಸಕ ನಾರಾಯಣಸ್ವಾಮಿ, ಇತ್ತ ರಮೇಶ್ ಕುಮಾರ್ ಟೀಂನಿಂದ ಅಧ್ಯಕ್ಷಸ್ಥಾನದ ಆಕಾಂಕ್ಷಿಯಾಗಿ ನಂಜೇಗೌಡ ಅವರಿಗೆ ಮಣೆ ಹಾಕಲು ಇಬ್ಬರು ಹಿರಿಯ ಕಾಂಗ್ರೆಸ್ ನಾಯಕರು ಸಜ್ಜಾಗಿದ್ದಾರೆ. ಮುಖ್ಯವಾಗಿ ಈಗಾಗಲೇ ಹಾಲು ಒಕ್ಕೂಟದ ನಿರ್ದೇಶಕಾಗಿರುವ ನಾರಾಯಣಸ್ವಾಮಿ ಅವರನ್ನೇ ಅಧ್ಯಕ್ಷರನ್ನಾಗಿಸುವಂತೆ ದಲಿತ ಸಮುದಾಯದಲ್ಲಿ ಭಾರಿ ಪ್ರಮಾಣದ ಕೂಗು ಎದ್ದಿದೆ.

ಈ ಕೋಲಾರ ಹಾಲು ಒಕ್ಕೂಟದ ಇತಿಹಾಸದಲ್ಲಿಯೇ ಪರಿಶಿಷ್ಟ ಜಾತಿಯವರು ಸ್ಪರ್ಧಿಸಿರಲಿಲ್ಲ. ಆದರೆ ಬಲಗೈ ಸಮುದಾಯದ ಪರಿಶಿಷ್ಟ ಜಾತಿಯ ಪ್ರತಿನಿಧಿಯಾಗಿ ನಾರಾಯಣಸ್ವಾಮಿ ಆಯ್ಕೆಯಾಗಿದ್ದಾರೆ. ಅವರು ಸತತ ಮೂರು ಬಾರಿ ಶಾಸಕರಾಗಿದ್ದಾರೆ. ಅವರಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂದು ದಲಿತ ಸಮುದಾಯ ಆಗ್ರಹಿಸಿದೆ.

ಇದಕ್ಕೆ ಪೂರಕ ಎಂಬಂತೆ 13 ನಿರ್ದೇಶಕರ ಸ್ಥಾನಗಳಲ್ಲಿ ಕಾಂಗ್ರೆಸ್​ ಬೆಂಬಲಿತ 9 ನಿರ್ದೇಶಕರು ಆಯ್ಕೆಯಾಗಿದ್ದಾರೆ. ಇದರ ಜೊತೆಗೆ 2 ಜನ ನಾಮ ನಿರ್ದೇಶಿತ ಸದಸ್ಯರು ಹಾಗೂ ಮೂರು ಜನ ಸರ್ಕಾರದ ಅಧಿಕಾರಿಗಳಿಗೆ ಅಧ್ಯಕ್ಷ ಚುನಾವಣೆಯಲ್ಲಿ ಮತದಾನ ಮಾಡುವ ಅರ್ಹತೆ ಇರುವ ಕಾರಣ ಕಾಂಗ್ರೆಸ್​ ಪಕ್ಷವೇ ಅಧ್ಯಕ್ಷ ಸ್ಥಾನಕ್ಕೇರುವುದು ಖಚಿತವಾಗಿದ್ದು, ಹಾಗಾಗಿ ಸರ್ಕಾರ ಪರಿಶಿಷ್ಟ ಜಾತಿಯ ಹಿರಿಯ ಶಾಸಕ ನಾರಾಯಣಸ್ವಾಮಿ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಿ ಎನ್ನಲಾಗುತ್ತಿದೆ.

ಈಗಾಗಲೇ ಶಾಸಕ ನಾರಾಯಣಸ್ವಾಮಿ ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಹೆಚ್​ ಮುನಿಯಪ್ಪ ಅವರನ್ನು ಭೇಟಿ ಮಾಡಿ ತಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಅತ್ತ ರಮೇಶ್​ ಕುಮಾರ್ ಬಣದ ನಂಜೇಗೌಡ ರಮೇಶ್​ ಕುಮಾರ್ ಅವರನ್ನೇ ಮುಂದಿಟ್ಟುಕೊಂಡು ಅಧ್ಯಕ್ಷ ಸ್ಥಾನಕ್ಕಾಗಿ ಗಾಳ ಹಾಕುತ್ತಿದ್ದಾರೆ. ಇಷ್ಟು ದಿನಗಳ ಕಾಲ ನಿರ್ದೇಶಕ ಸ್ಥಾನದ ಚುನಾವಣೆ ಕಾವು ಜೋರಾಗಿತ್ತು. ಆದರೆ ಇದೀಗ ಒಕ್ಕೂಟದ ಅಧ್ಯಕ್ಷರು ಯಾರಾಗಲಿದ್ದಾರೆ, ಯಾವ ನಾಯಕನ ಕೈ ಮೇಲಾಗಲಿದೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.

- Advertisement -

Latest Posts

Don't Miss