Spiritual: ಹಣದ ಸಮಸ್ಯೆ ಎಲ್ಲರಿಗೂ ಇರುತ್ತದೆ. ಶ್ರೀಮಂತರಿಗೂ ಹಣದ ಸಮಸ್ಯೆ ಇರುತ್ತದೆ ಎಂಬುದು ವಿಪರ್ಯಾಸದ ಸಂಗತಿ. ಏಕೆಂದರೆ, ಮನುಷ್ಯನ ಆಸೆಗೆ ಮಿತಿ ಇಲ್ಲ. ಎಷ್ಟೇ ಆಸ್ತಿ ಅಂತಸ್ತು ಇದ್ದರೂ, ಅದಕ್ಕೆ ತಕ್ಕಂತೆ ಅವರ ಜೀವನಶೈಲಿ ಇರುತ್ತದೆ.
ಸಾಮಾನ್ಯ ಜನರು ಕಡಿಮೆ ಬೆಲೆಯ ಬಟ್ಟೆ ಖರೀದಿಸಿದ್ರೆ, ಶ್ರೀಮಂತರು ಬ್ರ್ಯಾಂಡೆಡ್ ಬಟ್ಟೆ ಧರಿಸುತ್ತಾರೆ. ಸಾಮಾನ್ಯರಿಗಿಂತ ಹೆಚ್ಚು ಶ್ರೀಮಂತರು ಪ್ರವಾಸಕ್ಕಾಗಿ ಖರ್ಚು ಮಾಡುತ್ತಾರೆ. ಹಾಗಾಗಿ ಇನ್ನೂ ಹಣ ಬೇಕು ಎನ್ನುವ ಗುಣ ಎಲ್ಲರಿಗೂ ಇರುತ್ತದೆ.
ಆದ್ರೆ ಕೊಂಚವಾದ್ರೂ ಶ್ರೀಮಂತರಾಗಬೇಕು. ಇರುವ ಶ್ರೀಮಂತಿಕೆ ಹಾಗೇ ಉಳಿಯಬೇಕು. ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು ಅಂದ್ರೆ ನೀವು ಕೆಲವು ಕೆಲಸಗಳನ್ನು ಮಾಡಬೇಕು. ಅಂಥ ಕೆಲಸಗಳಲ್ಲಿ ಅನ್ನದಾನ ಕೂಡ ಒಂದು. ನಿಜ, ನೀವು ಬಡವರಿಗೆ, ಹಸಿದವರಿಗೆ ಅನ್ನದಾನ ಮಾಡಿದ್ರೆ, ಆ ಪುಣ್ಯದಿಂದಲೇ, ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.
ಆದರೆ ಈಗಿನ ಕಾಲದಲ್ಲಿ ಅನ್ನ ಹಾಕಿದರೂ, ಬಟ್ಟೆಕೊಟ್ಟರೂ, ಸಣ್ಣಪುಟ್ಟ ಸಹಾಯ ಮಾಡಿದರೂ, ಮುಂದೆ ಕ್ಯಾಮೆರಾ ಇರಬೇಕು. ಆ ಬಗ್ಗೆ ಬ್ಲಾಗ್, ಪೋಸ್ಟ್ ಹಾಕಬೇಕು. ಇಂಥ ಸ್ವಾರ್ಥ ದಾನ ಎಂದಿಗೂ ದೇವರನ್ನು ತಲುಪುವುದಿಲ್ಲ. ಬದಲಾಗಿ, ಯಾರಿಗೂ ಗೊತ್ತಿರದ ರೀತಿ, ಅನ್ನದಾನ ಮಾಡಿದರೆ, ಅದು ದೇವರಿಗೆ ಸಮರ್ಪಣೆಯಾಗುತ್ತದೆ. ಅಲ್ಲದೇ ನಿಮ್ಮ ಮನಸ್ಸಿಗೂ ನೆಮ್ಮದಿ ಸಿಗುತ್ತದೆ.
ಅನ್ನದಾನಕ್ಕಾಗಿ ಸಾವಿರ ಸಾವಿರ, ಲಕ್ಷ ಲಕ್ಷ ಖರ್ಚು ಮಾಡಬೇಕೆಂದಿಲ್ಲ. ಅನ್ನದಾನಕ್ಕಾಗಿ ನೀವು ನೂರು ರೂಪಾಯಿ ಕೊಟ್ಟರೂ, ಅದು ಪುಣ್ಯದ ಕೆಲಸವೇ. ಹಸಿದವರ ಹೊಟ್ಟೆ ತುಂಬಿಸುವುದಕ್ಕಿಂತ ಪುಣ್ಯದ ಕೆಲಸ ಮತ್ತೊಂದಿಲ್ಲ. ಆದರೆ ಆ ಕೆಲಸದಲ್ಲಿ ತೋರಿಕೆ ಇರಬಾರದು ಅಷ್ಟೇ.