Bengaluru News: ಬೆಂಗಳೂರು: ಬೀದಿ ನಾಯಿಗಳ ದಾಳಿಯಿಂದ ಗಾಯಗೊಂಡವರಿಗೆ ರೂ.5,000 ಹಾಗೂ ಜೀವ ಕಳೆದುಕೊಂಡವರಿಗೆ ರೂ.5 ಪರಿಹಾರ ನೀಡುವ ಬಗ್ಗೆ ಚರ್ಚಿಸಲಾಗಿದೆ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಬುಧವಾರ ಮಾಹಿತಿ ನೀಡಿದೆ.
ಪ್ರಾಣಿಗಳ ಜನನ ನಿಯಂತ್ರಣ (ನಾಯಿ) ಅಧಿನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ, ತುಮಕೂರಿನ ವಕೀಲ ಎಲ್ ರಮೇಶ್ ನಾಯ್ಕ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು, ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲರು, ರಾಜ್ಯ ನಗರಾಭಿವೃದ್ಧಿ ಇಲಾಖೆಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ 2023ರ ಅಕ್ಟೋಬರ್ 6ರಂದು ಸಭೆಯಲ್ಲಿ ನಡೆಸಲಾಗಿದೆ. ನಾಯಿ ದಾಳಿಗೆ ತುತ್ತಾಗಿ ಗಾಯಗೊಂಡವರಿಗೆ ರೂ.5,000 ಹಾಗೂ ಜೀವ ಕಳೆದುಕೊಂಡವರಿಗೆ ರೂ.5 ಲಕ್ಷ ಪರಿಹಾರ ನೀಡಲು ಸಭೆಯಲ್ಲಿ ಚರ್ಚಿಸಲಾಗಿದೆ. ಎರಡನೇ ಸಭೆ ನಡೆಸಲು ಉದ್ದೇಶಿಸಲಾಗಿದೆ. ಅದಕ್ಕೆ ಕಾವಲಾವಕಾಶ ನೀಡಬೇಕು ಎಂದು ಕೋರಿ ಅಫಿಡವಿಟ್ ಸಲ್ಲಿಸಿದರು.
ಇದನ್ನು ಪರಿಗಣಿಸಿದ ಪೀಠವು ನಾಯಿ ಸೇರಿದಂತೆ ಬೀದಿ ಪ್ರಾಣಿಗಳಿಗೆ, ಆಹಾರ ನೀಡುವ ಮತ್ತು ಮಾನವನ ಜೊತೆಗಿನ ಅವುಗಳ ಸಂಘರ್ಷ ತಪ್ಪಿಸಲು, ರೂಪಿಸಲಾಗಿರುವ ಮಾರ್ಗಸೂಚಿಗಳಿಗೆ ಸರ್ಕಾರ ವ್ಯಾಪಕ ಪ್ರಚಾರ ನೀಡಬೇಕು. ಇನ್ನು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಮುಂದಿನ ನಾಲ್ಕು ವಾರಗಳಲ್ಲಿ ಎರಡನೇ ಸಭೆ ನಡೆಸಬೇಕು. ಸಭೆಯಲ್ಲಿ ಚರ್ಚಿಸಿ ಕೈಗೊಂಡ ಕ್ರಮಗಳ ಕುರಿತು, ಆರು ವಾರದಲ್ಲಿ ಮಾಹಿತಿ ಒದಗಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆ ಮುಂದೂಡಿತು.
ಬೀದಿ ಪ್ರಾಣಿಗಳ ಆಹಾರ ಪೂರೈಕೆಗೆ ಮಾರ್ಗಸೂಚಿಗಳನ್ನು ರಚಿಸಲಾಗಿದೆ. ಆದರೆ, ಅವುಗಳ ಕುರಿತು ಸಾರ್ವಜನಿಕರಿಗೆ ಅರಿವು ಇಲ್ಲವಾಗಿದೆ. ಮಾರ್ಗಸೂಚಿಗಳ ಬಗ್ಗೆ ಸಾರ್ವಜನಿಕರು ಹಾಗೂ ನಿವಾಸಿಗಳಿಗೆ ಅರಿವು ಮೂಡಿಸದೆ ಹೋದರೆ, ಅವುಗಳು ಪರಿಣಾಮಕಾರಿಯಾಗಿ ಜಾರಿ ಮಾಡಲು ಸಾಧ್ಯವಿಲ್ಲ. ಮಾರ್ಗಸೂಚಿಗಳನ್ನು ಜಾರಿಯಾಗಬೇಕಾದರೆ, ಅವುಗಳ ಬಗ್ಗೆ ರಾಜ್ಯ ಸರ್ಕಾರ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ವ್ಯಾಪಕ ಪ್ರಚಾರ ನೀಡಬೇಕು ಎಂದು ಪೀಠ ನಿರ್ದೇಶಿಸಿದೆ.
ಅಲ್ಲದೆ, ನಗರದ ಜನದಟ್ಟಣೆ ಪ್ರದೇಶಗಳಲ್ಲಿ ಮತ್ತು ನೋಂದಾಯಿತ ಸಹಕಾರ ಸಂಘಗಳಲ್ಲಿ ಮಾಹಿತಿ ಇಲಾಖೆಯಿಂದ ಮಾರ್ಗಸೂಚಿಗಳ ಕುರಿತು ಅರಿವು ಮೂಡಿಸುವ ಕರಪತ್ರಗಳ ಹಂಚುವ ವಿಧಾನಗಳನ್ನು ಸರ್ಕಾರ ಅನುಸರಿಸಬೇಕು. ಮಾರ್ಗಸೂಚಿಗಳ ಕುರಿತ ಮಾಹಿತಿಯನ್ನು ಒಳಗೊಂಡ ಕಿರುಚಿತ್ರಗಳನ್ನು ಪ್ರಸಾರ ಮಾಡುವಂತೆ ಸ್ಥಳೀಯ ಟಿವಿ ಮಾಧ್ಯಮ, ಚಿತ್ರಮಂದಿರಗಳ ಮಾಲೀಕರಿಗೆ ಸರ್ಕಾರ ಮನವಿ ಮಾಡಬೇಕು. ಗ್ರಾಮೀಣ ಅಥವಾ ಸ್ಥಳೀಯ ಮಟ್ಟದಲ್ಲಿ ತಮಟೆ ಬಾರಿಸುವಂತಹ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಜಿಲ್ಲಾ ಪಂಚಾಯತಿ, ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರ ಸೂಚಿಸಬೇಕು. ಈ ಸಲಹೆಗಳಲ್ಲದೇ ಇನ್ನಿತರ ವಿಧಾನಗಳ ಮೂಲಕ ಸರ್ಕಾರ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಬಹುದಾಗಿದೆ ಎಂದು ಪೀಠ ಹೇಳಿದೆ.
ಬೀದಿ ಪ್ರಾಣಿಗಳ ಜೊತೆಗಿನ ಮಾನವ ಸಂಘರ್ಷ ಪರಿಹಾರ ಸೂತ್ರದಲ್ಲಿ ನಾಗರಿಕರು ಮತ್ತು ಸ್ಥಳೀಯ ನಿವಾಸಿಗಳು ಪಾಲ್ಗೊಳ್ಳುವುದು ಅಗತ್ಯ. ತಮ್ಮ ಪ್ರದೇಶದಲ್ಲಿನ ಎಲ್ಲಾ ನಾಯಿಗಳಿಗೆ ಸ್ಥಳೀಯ ಪ್ರಾಧಿಕಾರದಿಂದ ನಿಯಮಿತವಾಗಿ ಲಸಿಕೆ ನೀಡುವುದನ್ನು ಖಾತರಿಪಡಿಸುವುದು ಸ್ಥಳೀಯ ನಿವಾಸಿಗಳ ಜವಾಬ್ದಾರಿ. ಸಮುದಾಯದ ನಾಯಿಗಳಿಗೆ ಆಹಾರ ನೀಡುವವರ (ಫೀಡರ್‌ಗಳ) ಯಾವುದೇ ಕಾರ್ಯಕ್ಕೆ ಸಂಬಂಧಿಸಿದಂತೆ ಯಾರಿಗಾದರೂ ಕುಂದುಕೊರತೆಯಿದ್ದರೆ, ಅವರು ಪ್ರಾಣಿ ಕಲ್ಯಾಣ ಸಮಿತಿ ಮೂಲಕ ಸಂವಾದ ಮತ್ತು ಚರ್ಚೆಯಲ್ಲಿ ತೊಡಗಬೇಕು. ಇದು ಪರಿಹಾರವಾಗದಿದ್ದರೆ, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವು (ಆರ್‌ಡಬ್ಲ್ಯುಎ) ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ತಡೆಗಟ್ಟುವ ಜಿಲ್ಲಾ ಸೊಸೈಟಿಯ ಗಮನಕ್ಕೆ ತರಬಹುದು (ಡಿಎಸ್‌ಪಿಸಿಎ) ಎಂದು ಮಾರ್ಗಸೂಚಿ ಹೇಳುತ್ತದೆ ಎಂದು ಪೀಠ ಆದೇಶದಲ್ಲಿ ಉಲ್ಲೇಖಿಸಿದೆ.
ಸಾಕು ನಾಯಿ ಕಚ್ಚಿದ ಪ್ರಕರಣ: 15 ನಿಮಿಷ ವಿಚಾರಣೆಗೆ ಹಾಜರಾದ ನಟ ದರ್ಶನ್
ಕಿಂಗ್ ಕೊಹ್ಲಿ 50ನೇ ಶತಕ ಸಿಡಿಸಿದ್ದಕ್ಕೆ ಕ್ರಿಕೇಟ್ ದೇವರು ಹೇಳಿದ್ದೇನು..?
ಬಿಗ್ ಬಾಸ್ನಲ್ಲಿ ಜೋಡಿ ಆಗಿದ್ದೂ ಇವರೇ, ಕೇಸ್ ಹಾಕಿಸಿಕೊಂಡಿದ್ದೂ ಇವರೇ, ಎಂಥ ಕಾಕತಾಳೀಯ