National Political News: ಕೇಂದ್ರ ಸರ್ಕಾರದ ಕ್ಷೇತ್ರ ಮರುವಿಂಗಡಣೆಯ ನಿಲುವನ್ನು ವಿರೋಧಿಸುತ್ತಿರುವ ಡಿಎಂಕೆ ನಾಯಕರದ್ದು ಒಡೆದು ಆಳುವ ರಾಜಕೀಯವಾಗಿದೆ ಎಂಬ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಟೀಕೆಗೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ತಿರುಗೇಟು ನೀಡಿದ್ದಾರೆ.
ಇನ್ನೂ ಈ ಕುರಿತು ತಮ್ಮ ಟ್ವಿಟ್ಟರ್‌ನಲ್ಲಿ ಫೋಸ್ಟ್ ಮಾಡಿರುವ ಅವರು, ಯೋಗಿ ಆದಿತ್ಯನಾಥ ಅವರ ಹೇಳಿಕೆಯು ರಾಜಕೀಯದ ಕರಾಳ ಕುಚೋದ್ಯದ ಭಾಗವಾಗಿದೆ. ಆದರೆ ತಮಿಳುನಾಡು ಭಾಷೆಯನ್ನು ಯಾವತ್ತೂ ವಿರೋಧಿಸಲ್ಲ, ಬದಲಿಗೆ ಹಿಂದಿ ಹೇರಿಕೆ ಹಾಗೂ ಅದರ ಮೇಲಿನ ದುರಾಭಿಮಾನವನ್ನು ಖಂಡಿಸುತ್ತದೆ. ನಾವು ತ್ರಿಭಾಷಾ ಸೂತ್ರವನ್ನು ಹಾಗೂ ಡಿಲಿಮಿಟೇಷನ್ ಅನ್ನು ವಿರೋಧಿಸುತ್ತಿದ್ದೇವೆ. ಆದರೆ ದ್ವಿಭಾಷಾ ನೀತಿಗೆ ನಾವು ಬದ್ಧರಾಗಿದ್ದೇವೆ. ಇದರಿಂದ ಬಿಜೆಪಿಯವರಿಗೆ ಗರ ಬಡಿದಂತಾಗಿದ್ದು, ನಮ್ಮದು ನ್ಯಾಯಯುತವಾದ ಬೇಡಿಕೆಯಾಗಿದೆ ಎಂದು ಸ್ಟಾಲಿನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದ್ವೇಷ, ವೈಷಮ್ಯದ ಕುರಿತು ನೀವು ನಮಗೆ ಪಾಠ ಮಾಡಲು ಮುಂದಾಗಿದ್ದೀರಿ..? ಇದು ವ್ಯಂಗ್ಯವಾಗುವುದಿಲ್ಲವೆ..? ಇದು ನಿಮ್ಮಂತೆ ರಾಜಕೀಯದ ಲಾಭಕ್ಕಾಗಿ ಮತ ವಿಭಜನೆಯ ಕೃತ್ಯವಲ್ಲ, ಆದರೆ ಘನತೆ ಹಾಗೂ ನ್ಯಾಯಕ್ಕಾಗಿ ಮುಂದುವರೆದಿರುವ ಹೋರಾಟವಾಗಿದೆ ಎಂದು ಟಾಂಗ್ ನೀಡಿದ್ದಾರೆ.
ಸ್ಟಾಲಿನ್ ಕುರಿತು ಯೋಗಿ ಹೇಳಿದ್ದೇನು..?
ಇನ್ನೂ ಸುದ್ದಿ ಸಂಸ್ಥೆ ಎಎನ್‌ಐಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಯೋಗಿ ಆದಿತ್ಯನಾಥ್, ಸ್ಟಾಲಿನ್ ತಮ್ಮ ವೋಟ್ ಬ್ಯಾಂಕ್ ಅಪಾಯದಲ್ಲಿದೆ ಎಂದು ಭಾವಿಸಿ ಒಂದು ಪ್ರದೇಶ ಮತ್ತು ಭಾಷೆಯ ಆಧಾರದ ಮೇಲೆ ವಿಭಜನೆಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ತ್ರಿಭಾಷಾ ನೀತಿ ಹಾಗೂ ಡಿಲಿಮಿಟೇಷನ್ ವಿರೋಧಿಸುವುದು ಇದೊಂದು ರಾಜಕೀಯದ ಕಾರಣವಾಗಿದೆ, ಈ ವಿಚಾರದಲ್ಲಿ ಗೃಹ ಸಚಿವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಇದು ಒಂದು ಸಭೆಯ ನೆಪದಲ್ಲಿ ಸ್ಟಾಲಿನ್ ಅವರ ರಾಜಕೀಯದ ಮುಂದಿನ ಕಾರ್ಯಸೂಚಿಯಾಗಿದೆ. ಗೃಹ ಸಚಿವರ ಸ್ಪಷ್ಟನೆಯ ಬಳಿಕವೂ, ಈ ವಿಷಯದ ಮೇಲೆ ಯಾವುದೇ ಪ್ರಶ್ನೆಗಳು ವ್ಯಕ್ತವಾಗಬಾರದಿತ್ತು ಎನ್ನುವುದು ಭಾವನೆಯಾಗಿದೆ ಎಂದು ಯೋಗಿ ಕುಟುಕಿದ್ದರು. ಅಲ್ಲದೆ ಒಂದೇ ದೇಶದಲ್ಲಿ ಇದ್ದುಕೊಂಡು ಹಿಂದಿಯನ್ನು ನಾವ್ಯಾಕೆ ದ್ವೇಷಿಸಬೇಕು..? ಈ ತಮಿಳುನಾಡಿನಲ್ಲಿ ಹಿಂದಿ ಭಾಷೆಗೆ ಇರುವ ವಿರೋಧದ ಬಗ್ಗೆ ನಾವು ನೋಡಿದಾಗ, ನಮ್ಮ ದೇಶವನ್ನು ಭಾಷೆ ಅಥವಾ ಪ್ರದೇಶವನ್ನು ಗಮನಿಸಿ ಅದರ ಆಧಾರದಿಂದ ವಿಭಜನೆ ಮಾಡಬಾರದು ಎಂದು ಅವರು ಪ್ರತಿಪಾದಿಸಿದ್ದರು.
ತಮಿಳು ಅತ್ಯಂತ ಹಳೆಯ ಭಾಷೆ..
ತಮಿಳು ಭಾರತದ ಅತ್ಯಂತ ಹಳೆಯ ಭಾಷೆಗಳ ಪೈಕಿ ಒಂದಾಗಿದೆ. ಅದರ ಇತಿಹಾಸವು ಸಂಸ್ಕ್ರತದಷ್ಟೇ ಹಳೆಯದಾಗಿದೆ. ಮುಖ್ಯವಾಗಿ ದೇಶದ ಪರಂಪರೆ, ಆಚಾರ ಹಾಗೂ ವಿಚಾರಗಳ ಅನೇಕ ಅಂಶಗಳು ಭಾಷೆಯಲ್ಲಿ ತನ್ನ ಜೀವಂತಿಕೆಯನ್ನು ತೋರಿಸುತ್ತವೆ. ಅಲ್ಲದೆ ಪ್ರತಿಯೊಬ್ಬ ಭಾರತೀಯನಿಗೆ ತಮಿಳು ಭಾಷೆಯ ಮೇಲೆ ಗೌರವ ಹಾಗೂ ಪೂಜ್ಯನೀಯ ಭಾವನೆ ಇದೆ. ಹೀಗಿರುವಾಗ ಭಾರತದಲ್ಲಿ ಹಿಂದಿಯನ್ನು ನಾವು ವಿರೋಧಿಸಬೇಕೆ.. ಎಂದು ಯೋಗಿ ಪ್ರಶ್ನೆ ಮಾಡಿದ್ದರು. ಅಲ್ಲದೆ ಮುಖ್ಯವಾಗಿ ವಾರಣಾಸಿಯಲ್ಲಿ ಮೂರನೇ ತಲೆಮಾರಿನ ಕಾಶಿ ತಮಿಳು ಸಂಗಮವನ್ನು ಆಯೋಜಿಸಿದ್ದಕ್ಕಾಗಿ ನಾವು ಪ್ರಧಾನಿ ಮೋದಿ ಅವರಿಗೆ ಕೃತಜ್ಞರಾಗಿರುತ್ತೇವೆ ಎಂದು ಅವರು ಹೇಳಿದ್ದರು.