ಬೆಂಗಳೂರು : ನಮ್ಮ ದಿನನಿತ್ಯದ ಜೀವನದಲ್ಲಿ ಕೆಲವೊಂದು ವಿಸ್ಮಯಕಾರಿ ಘಟನೆಗಳನ್ನು ನೋಡಿದ್ದೇವೆ. ಅವುಗಳಲ್ಲಿ ಕೆಲವೊಂದು ಅತ್ಯಂತ ಮನ ಮುಟ್ಟುತ್ತವೆ, ಇನ್ನನೂ ಕೆಲವು ನಮ್ಮನ್ನು ಮಂತ್ರಮುಗ್ದರನ್ನಾಗಿಸುತ್ತವೆ. ಆದರೆ ಇದೇ ರೀತಿಯಾದ ಅಚ್ಚರಿಯ ಸನ್ನಿವೇಶಕ್ಕೆ ಕೇರಳ ಸಾಕ್ಷಿಯಾಗಿದೆ. ಮೂರು ವರ್ಷದ ಹಿಂದೆ ಕಾಗೆ ಹೊತ್ತೊಯ್ದಿದ್ದ ಚಿನ್ನದ ಬಳೆಯೊಂದು ಪುನಃ ಆ ಮಹಿಳೆಯ ಕೈ ಸೇರಿರುವ ಅಪರೂಪದ ಘಟನೆ ನಡೆದಿದೆ.
ಇನ್ನೂ ಕೇರಳದ ಮಲಪ್ಪುರಂನ ತ್ರಿಕ್ಕಲಂಗೋಡ್‌ನಲ್ಲಿನ ರುಕ್ಮಿಣಿ ಎನ್ನುವ ಮಹಿಳೆಯು ಮನೆಯ ಬಳಿ ಕೆಲಸ ಮಾಡುತ್ತಿದ್ದ ವೇಳೆ ಕೈಯಿಂದ ಚಿನ್ನದ ಬಳೆಯನ್ನು ತೆಗೆದಿಟ್ಟಿದ್ದಳು. 12 ಗ್ರಾಂ ತೂಕವಿದ್ದ ಚಿನ್ನದ ಬಳೆಯನ್ನು ರಪ್ಪಕ್ಕನೇ ಬಂದಿದ್ದ ಕಾಗೆಯೊಂದು ಕಳ್ಳತನಮಾಡಿತ್ತು. ಅದನ್ನು ಎತ್ತಿಕೊಂಡಿದ್ದ ಕಾಗೆ ಕ್ಷಣಾರ್ಧದಲ್ಲಿಯೇ ಹಾರಿ ಹೋಗಿತ್ತು.
ಚಿನ್ನದ ಬಳೆಯನ್ನು ಕಳೆದುಕೊಂಡಿದ್ದ ರುಕ್ಮಿಣಿ ಬಳೆಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದರು. ಆದರೆ ಕಳೆದ ಮೂರು ತಿಂಗಳ ಹಿಂದೆ ಅದೇ ಗ್ರಾಮದ ಅನ್ವರ್ ಸಾದತ್ ಎನ್ನುವವರು ತೆಂಗಿನಕಾಯಿ ಕೀಳಲು ಹೋಗಿದ್ದರು. ಆದರೆ ಈ ವೇಳೆ ಮಗಳ ಬೇಡಿಕೆಯ ಮೇರೆಗೆ ಮಾವಿನ ಹಣ್ಣು ಕಿತ್ತು ಕೊಡಲು ಮರ ಹತ್ತಿದ್ದರು. ಆಗ ಮಾವಿಗಾಗಿ ಕೊಂಬೆಯನ್ನು ಅಲ್ಲಾಡಿಸುವ ವೇಳೆ ಮರದಲ್ಲಿ ಹೊಳೆಯುತ್ತಿರುವ ವಸ್ತುವೊಂದು ಕೆಳಗೆ ಬಿದ್ದಿದೆ. ತಕ್ಷಣ ಇದನ್ನು ಗಮನಿಸಿದ ಪುತ್ರಿ ಫಾತಿಮಾ ಅದನ್ನು ಎತ್ತಿಕೊಂಡು ಅದು ಚಿನ್ನವಾ ಎಂದು ಪರೀಕ್ಷಿಸಿದ್ದಾರೆ.
ಇನ್ನೂ ತಮಗೆ ಸಿಕ್ಕ ಚಿನ್ನ ಅಸಲಿ ಎಂದು ಗೊತ್ತಾದ ಬಳಿಕ ಅನ್ವರ್ ಅದನ್ನು ಗ್ರಾಮದ ಗ್ರಂಥಾಲಯಕ್ಕೆ ನೀಡಿದ್ದಾರೆ. ಅಲ್ಲದೆ ಅದು ಸಂಬಂಧಪಟ್ಟವರ ಕೈ ಸೇರಲಿ ಎಂದು ಗ್ರಂಥಾಲಯದ ಸಿಬ್ಬಂದಿಗೆ ತಿಳಿಸಿದ್ದಾರೆ. ಅಲ್ಲದೆ ಈ ವಿಚಾರ ತಿಳಿಯುತ್ತಿದ್ದಂತೆಯೇ ಸಂತಸದಿಂದ ಲೈಬ್ರರಿಗೆ ಓಡಿ ಬಂದ ರುಕ್ಮಿಣಿ ಅದನ್ನು ಗಮನಿಸಿದ್ದಾರೆ. ಬಳಿಕ ಅದನ್ನು ಯಾರು ಪತ್ತೆ ಹಚ್ಚಿದ್ದಾರೋ ಅವರ ಕೈಯಿಂದಲೇ ಬಳೆಯನ್ನು ವಾಪಸ್ ಪಡೆಯಬೇಕೆಂದಿದ್ದಾರೆ. ಬಳಿಕ ಗ್ರಾಮದ ಹಿರಿಯರು ಸೇರಿ ಅನ್ವರ್ ಸಾದತ್ ಕೈಯಿಂದ ರುಕ್ಮಿಣಿ ಅವರಿಗೆ ಬಳೆಯನ್ನು ಹಸ್ತಾಂತರಿಸಿದ್ದಾರೆ.
ಇನ್ನೂ ಇದ್ದಕ್ಕಿದ್ದಂತೆ, ಎಲ್ಲಿಂದಲೋ ಒಂದು ಕಾಗೆ ಹಾರಿ ಬಂದು ಚಿನ್ನದ ಬಳೆಯೊಂದಿಗೆ ಹಾರಿಹೋಗಿತ್ತು. ಏನಾಯಿತು ಎಂದು ನಾನು ತಿಳಿದುಕೊಳ್ಳುವ ಮೊದಲೇ ಅದು ಹಾರಿಹೋಗಿತ್ತು. ನಾನು ಕಾಗೆಯನ್ನು ಬೆನ್ನಟ್ಟಿದೆ, ಆದರೆ ಹಕ್ಕಿ ಬಹಳ ಅದಕ್ಕೂ ಮೊದಲೇ ಮಾಯವಾಗಿತ್ತು. ನಾನು ಈ ಬಳೆಯನ್ನು ಮತ್ತೆ ನೋಡುತ್ತೇನೆಂದು ಎಂದಿಗೂ ಭಾವಿಸಿರಲಿಲ್ಲ. ಇದು ವಿಸ್ಮಯದಂತಾಗಿದೆ ಇದೊಂದು ನಂಬಲಸಾಧ್ಯವಾದ ಸಂಗತಿ ಎಂದು ರುಕ್ಮಿಣಿ ತನ್ನ ಒಡೆದ ಬಳೆಯ ತುಣುಕುಗಳನ್ನು ಹಿಡಿದುಕೊಂಡು ಉದ್ಗರಿಸಿದ್ದಾರೆ. ಪರರ ವಸ್ತು ಪಾಶಾನಕ್ಕೆ ಸಮ ಎನ್ನುವಂತೆಯೇ ತಮಗೆ ಸಿಕ್ಕಿರುವ ಬಳೆಯನ್ನು ಮರಳಿಸಿದ ಅನ್ವರ್ ಸಾದತ್ ಅವರ ಪ್ರಾಮಾಣಿಕತೆಯನ್ನು ಎಲ್ಲರೂ ಹಾಡಿಹೊಗಳಿದ್ದಾರೆ.