ಸುನಿತಾ ಭೂಮಿಗೆ ಬರಲು ಮುಹೂರ್ತ ಫಿಕ್ಸ್‌ : ಮಾರ್ಚ್‌ 19ರಂದು ಲ್ಯಾಂಡ್‌ ಆಗಲಿರುವ ಗಗನ ಯಾತ್ರಿಗಳ ತಂಡ

International News: ಗಗಯಾತ್ರಿಗಳಾದ ಸುನಿತಾ ವಿಲಿಯಮ್ಸ್‌ ಹಾಗೂ ಬುಚ್‌ ವಿಲ್ಮೋರ್‌ ಅವರು ಮಾರ್ಚ್‌ 18ರಂದು ಭೂಮಿಗೆ ವಾಪಸ್‌ ಆಗಲಿದ್ದಾರೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ತಿಳಿಸಿದೆ. ಕಳೆದ 9 ತಿಂಗಳಿಂದಲೂ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಗಗನಯಾತ್ರಿಗಳನ್ನು ಕರೆತರಲು ಸ್ಪೇಸ್‌ ಎಕ್ಸ್‌ ಜೊತೆಯಾಗಿ ನಾಸಾ ಸಿದ್ದತೆಗಳನ್ನು ಆರಂಭಿಸಿದೆ. ಅಲ್ಲದೆ ಇದಕ್ಕಾಗಿಯೇ ಮಾರ್ಚ್‌ 15ರಂದು ಕೆನಡಾದ ಫಾಲ್ಕನ್‌ 9 ರಾಕೆಟನ್ನೂ ಸಹ ಉಡಾವಣೆ ಮಾಡಲಾಗಿತ್ತು.

ಅಲ್ಲದೆ ಉಡಾವಣೆಗೊಂಡ ಬಳಿಕ ಅಂದರೆ ಮಾರ್ಚ್‌ 16ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸ್ಪೇಸ್‌ ಎಕ್ಸ್‌ ತಲುಪಿದೆ. ಇಬ್ಬರೂ ಗಗನಯಾತ್ರಿಗಳು ಕಳೆದ ಜೂನ್‌ ತಿಂಗಳಲ್ಲಿ ಬೋಯಿಂಗ್‌ ಸ್ಟಾರ್‌ ಲೈನರ್‌ ಮೂಲಕ ಬಾಹ್ಯಾಕಾಶವನ್ನು ತಲುಪಿದ್ದರು. ಆದರೆ ಅದರಲ್ಲಿನ ತಾಂತ್ರಿಕ ತೊಂದರೆಯಿಂದಾಗಿ ಅವರು ಭೂಮಿಗೆ ವಾಪಸ್‌ ಆಗಲು ಸಾಧ್ಯವಾಗಿರಲಿಲ್ಲ. ಅಂದಹಾಗೆ 284 ದಿನಗಳನ್ನು ಬಾಹ್ಯಾಕಾಶದಲ್ಲಿಯೇ ಕಳೆದಿರುವ ಅವರು ಕೇವಲ 8 ದಿನಗಳಲ್ಲಿ ಭೂಮಿಗೆ ಮರಳಬೇಕಾಗಿತ್ತು. ಆದರೆ 9 ತಿಂಗಳು ಅಲ್ಲೇ ಸಿಲುಕಿಕೊಳ್ಳುವಂತಾಗಿತ್ತು.

ಈ ಇಬ್ಬರು ಮತ್ತು ಇತರ ಇಬ್ಬರು ಗಗನಯಾತ್ರಿಗಳು 18ರಂದು ಸಂಜೆ ಭೂಮಿಗೆ ಮರಳಲಿದ್ದಾರೆ. ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಮತ್ತು ಮತ್ತೊಬ್ಬ ಅಮೇರಿಕನ್ ಗಗನಯಾತ್ರಿ ನಿಕ್ ಹೇಗ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೋರ್ಬುನೋವ್ ಅವರು ಅಂದು ಸಂಜೆ 6 ಗಂಟೆ ಸುಮಾರಿಗೆ ಫ್ಲೋರಿಡಾ ಕರಾವಳಿಯಲ್ಲಿ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಕ್ರಾಫ್ಟ್ ಬಾಹ್ಯಾಕಾಶ ನೌಕೆಯಲ್ಲಿ ಇಳಿಯುವ ಸಾಧ್ಯತೆ ಇದೆ. ಈ ಬಾರಿ ಏಲಿಯನ್ ಮುಖವಾಡ ಧರಿಸಿದಂತೆ, ಇದಕ್ಕೂ ಮೊದಲು, ನಾಸಾ ಗಗನಯಾತ್ರಿಗಳು ಸೂಪರ್‌ಮ್ಯಾನ್, ಸ್ಪೈಡರ್‌ಮ್ಯಾನ್, ಮಿನಿಯನ್, ಡಾರ್ತ್ ವಾಡೆರ್, ವಾಲ್ಡೊ ಮತ್ತು ಮಾರಿಯೊ ಸಹೋದರರಂತಹ ವೇಷಭೂಷಣಗಳನ್ನು ಧರಿಸಿರುವುದು ವಿಶೇಷವಾಗಿದೆ.

ಇನ್ನೂ ತಾವು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅಲ್ಲಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರೂ ಸಹ ಈ ಕುರಿತು, ಇಬ್ಬರು ಗಗನಯಾನಿಗಳನ್ನು ಶೀಘ್ರದಲ್ಲಿ ಸುರಕ್ಷಿತವಾಗಿ ಕರೆತರುವ ಕೆಲಸವನ್ನು ಸ್ಪೇಸ್‌ ಎಕ್ಸ್‌ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ಸುನಿತಾಗೆ ಕೋಟಿಗಟ್ಟಲೇ ಸಂಬಳ..

ಅಮೆರಿಕದ ಬಾಹ್ಯಾಕಾಶ ಸಂಸ್ಥೆಯಾಗಿರುವ ನಾಸಾದಲ್ಲಿ ಜಿಎಸ್-15‌ ಗ್ರೇಡ್‌ನ ಹೊಂದಿರುವ ಸರ್ಕಾರಿ ನೌಕರರಾಗಿರುವ ಸುನಿತಾ ವಿಲಿಯಮ್ಸ್‌ ಹಾಗೂ ಬುಚ್‌ ವಿಲ್ಮೋರ್‌ ಅವರು ವಾರ್ಷಿಕವಾಗಿ 1.08 ಕೋಟಿ ರೂಪಾಯಿಗಳಿಂದ 1.41 ಕೋಟಿ ರೂಪಾಯಿಗಳವರೆಗೆ ವೇತನ ಪಡೆಯುತ್ತಾರೆ. ಆದರೆ ಈಗ ಅವರು ಐಎಸ್‌ಎಸ್‌ ಅಂದರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಹೆಚ್ಚುವರಿಯಾಗಿ 9 ತಿಂಗಳುಗಳನ್ನು ಕಳೆದಿರುವುದರಿಂದ ಇಬ್ಬರಿಗೂ 81 ಲಕ್ಷ ರೂಪಾಯಿಗಳಿಂದ 1.05 ಕೋಟಿ ರೂಪಾಯಿಗಳವರೆಗೆ ವೇತನ ಸಿಗುವ ಸಾಧ್ಯತೆ ಇದೆ ಎಂದು ನಾಸಾದ ನಿವೃತ್ತ ಗಗನಯಾತ್ರಿಗಳು ತಿಳಿಸಿದ್ದಾರೆ.

ಭೂಮಿಗೆ ಬಂದ ಬಳಿಕ ಕಾಡಲಿವೆ ಆರೋಗ್ಯ ಸಮಸ್ಯೆಗಳು..

ಭೂಮಿಯ ಗುರುತ್ವಾಕರ್ಷಣೆ ಹಾಗೂ ಬಾಹ್ಯಾಕಾಶದ ಗುರುತ್ವಾಕರ್ಷಣೆಯಲ್ಲಿ ತುಂಬಾ ವ್ಯತ್ಯಾಸ ಇರಲಿದೆ. ಭೂಮಿಯ ವಾತವರಣಕ್ಕೆ ಒಗ್ಗಿಕೊಳ್ಳುವಾಗ ಇಬ್ಬರು ಗಗನಯಾತ್ರಿಗಳು ಆರೋಗ್ಯದ ಸಮಸ್ಯೆಗೆ ಒಳಗಾಗುವರು. ವಿಲಿಯಮ್ಸ್, ವಿಲ್ಮೋರ್ ಇಬ್ಬರ ಪಾದಗಳು ಮಗುವಿನ ಪಾದಗಳಂತೆ ಆಗಿರುತ್ತವೆ. ಇಷ್ಟು ದಿನ ತೇಲಾಡಿಕೊಂಡೆ ಇದ್ದಿದ್ರಿಂದ ಭೂಮಿಗೆ ಬಂದಾಗ ಅದೇ ಅನುಭವವಾಗುತ್ತೆ.

ದೇಹ ಭಾರವಿಲ್ಲ ಎನ್ನುವಂತೆ ಅವರಿಗೆ ಅನಿಸುತ್ತದೆ. ಜೊತೆಗೆ ಅವರ ದೇಹದ ಚರ್ಮ ಮೊದಲಿನಂತೆ ಇರುವುದಿಲ್ಲ. ಅದು ಸಹಜ ಸ್ಥಿತಿಗೆ ಬರಬೇಕು ಎಂದರೆ ಸಮಯ ತೆಗೆದುಕೊಳ್ಳುತ್ತದೆ. ಗಗನಯಾತ್ರಿಗಳ ದೇಹದ ಮೇಲೆ ಭೂಮಿಯ ಗುರುತ್ವಾಕರ್ಷಣೆಯ ಕೊರತೆಯಿಂದ ಮೂಳೆಯ ಸಾಂದ್ರತೆ ಮತ್ತು ಸ್ನಾಯು ಕ್ಷೀಣತೆ ಅನುಭವಿಸುತ್ತಾರೆ. ಇದನ್ನು ವ್ಯಾಯಾಮದ ಮೂಲಕ ಮರಳಿ ಪಡೆಯಬಹುದು. ಮತ್ತೆ ಸಾಮಾನ್ಯರಂತೆ ಆಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಇದಕ್ಕೆ ತಕ್ಕಂತೆ ಇಬ್ಬರು ನಿತ್ಯ ಆರೋಗ್ಯದ ನಿಯಮಗಳನ್ನು ಪಾಲಿಸಲೇಬೇಕು.

ಒಟ್ನಲ್ಲಿ.. ಬೋಯಿಂಗ್‌ ಪ್ರತಿಸ್ಪರ್ಧಿಯಾದ ಸ್ಪೇಸ್‌ ಎಕ್ಸ್‌ ಕಂಪನಿಯು ಈ ಇಬ್ಬರು ಗಗನಯಾನಿಗಳು 2025ರ ಫೆಬ್ರುವರಿಯಲ್ಲಿ ಕರೆತರಲಿದೆ ಎಂದು ನಾಸಾ ಹೇಳಿತ್ತು. ಆದರೆ ಈ ಕಾರ್ಯಕ್ಕಾಗಿ ಹೊಸ ಬಗೆಯ ನೌಕೆಯನ್ನು ಸ್ಪೇಸ್‌ ಎಕ್ಸ್‌, ಸಿದ್ದಪಡಿಸಿತ್ತು. ಅದರೆ ಇದೀಗ ಅಂತಿಮವಾಗಿ ಗಗನಯಾತ್ರಿಗಳು ಭೂಮಿಗೆ ಬಂದಿಳಿಯುವುದನ್ನು ಕಣ್ತುಂಬಿಕೊಳ್ಳಲು ನಾಸಾ ತಂಡ ಕಾತರವಾಗಿದೆ.ಅಂದುಕೊಂಡಂತೆ ಎಲ್ಲವೂ ಆದರೆ ಸುನಿತಾ ವಿಲಿಯಮ್ಸ್‌ ಅವರ ದಾಖಲೆಗಳಿಗೆ ಈ 9 ತಿಂಗಳು ಬಾಹ್ಯಾಕಾಶದ ವಾಸವು ಒಂದು ಸೇರಿಕೊಳ್ಳಲಿದೆ ಎನ್ನುವುದು ಮಾತ್ರ ಸತ್ಯವಾಗಿದೆ.

About The Author