1. ಅಶ್ಲೀಲ ಪದ ಬಳಕೆ ಪ್ರಕರಣ. ತಕ್ಷಣ ಬಿಡುಗಡೆಗೆ ಹೈಕೋರ್ಟ್ ಆದೇಶ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಉಚ್ಚ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ. ಇದರಿಂದಾಗಿ ಸಿ.ಟಿ. ರವಿ ಬೆಂಬಲಿಗರಲ್ಲಿ ಹರ್ಷ ಮೂಡಿಸಿದೆ.ಗುರುವಾರ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಅಧಿವೇಶನದ ಸಂದರ್ಭದಲ್ಲಿ ವಿಧಾನಪರಿಷತ್ ನಲ್ಲಿ ತನ್ನ ವಿರುದ್ಧ ಸಿ.ಟಿ ರವಿ ಅವಹೇಳನಾಕಾರಿ ಪದ ಬಳಸಿದ್ದಾರೆ ಎಂದು ಆರೋಪಿಸಿ ಲಕ್ಷ್ಮಿ ಹೆಬ್ಬಾಳ್ಕರ್ ದೂರು ದಾಖಲಿಸಿದ್ದರು. ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಸಿಟಿ ರವಿ ವಿರುದ್ಧ ಬಿಎನ್‌ಎಸ್ ಕಾಯ್ದೆ 75 ಮತ್ತು 79ಅಡಿಯಲ್ಲಿ ಎಫ್ಐಆರ್ ದಾಖಲಾಗಿತ್ತು. ಲೈಂಗಿಕ ಕಿರುಕುಳ, ಮಹಿಳೆ ಇಚ್ಛೆ ವಿರುದ್ಧ ಅಶ್ಲೀಲತೆ ತೋರುವುದು. ಮಹಿಳೆಯ ನಮ್ರತೆ ಅವಮಾನಿಸುವ ಉದ್ದೇಶದಿಂದ ಸನ್ನೆ, ಪದ ಅಥವಾ ಕ್ರಿಯೆ, ಲೈಂಗಿಕ ಬಣ್ಣದ ಟೀಕೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿತ್ತು. ಎಫ್ ಐಆರ್ ದಾಖಲಾದ ಬಳಿಕ ಸಿಟಿ ರವಿ ಅವರನ್ನು ಬಂಧಿಸಲಾಗಿತ್ತು. ಸಿ.ಟಿ ರವಿ ಜಾಮೀನು ಅರ್ಜಿ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿ ಕೋರ್ಟ್ ಪ್ರಕರಣವನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾಹಿಸಿದ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ಬೆಂಗಳೂರಿಗೆ ಕರೆತರುತ್ತಿದ್ದರು. ಈ ಮಧ್ಯೆಯೇ ವಿಚಾರಣೆ ನಡೆಸಿದ ನ್ಯಾಯಾಲಯ ವಿಚಾರಣೆಯನ್ನು ನಾಳೆಗೆ ಮುಂದೂಡಿತ್ತು. ಈ ಮಧ್ಯೆ ಸಿಟಿ ರವಿ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ. ಉಮಾ ಅವರನ್ನೊಳಗೊಂಡ ನ್ಯಾಯಪೀಠ ತನಿಖೆಗೆ ಸಹಕರಿಸುವಂತೆ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿತು.
2. ಲಕ್ಷ್ಮೀ ಹೆಬ್ಬಾಳ್ಕರ್ ಕಣ್ಣೀರಿನ ಮಾತು. ನನ್ನ ಪರ ನಿಂತಿದ್ದು ನನ್ನ ಪಕ್ಷ, ನನ್ನ ಜನ
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕುರಿತಾಗಿ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅಸಭ್ಯ ಹೇಳಿಕೆ ಆರೋಪ ಬೆಳಗಾವಿ ಅಧಿವೇಶನದ ದಿಕ್ಕನ್ನೇ ಬದಲಿಸಿದೆ. ಸದ್ಯ ಇದೇ ವಿಚಾರವಾಗಿ ಬಿಜೆಪಿ ಎಂಎಲ್‌ಸಿ ಸಿ.ಟಿ ರವಿ ಅವರನ್ನ ಪೊಲೀಸರು ಬಂಧಿಸಿದ್ರು .ಇನ್ನು ಸದನದಲ್ಲಿ ನಡೆದ ವಿವಾದತ್ಮಕ ಹೇಳಿಕೆ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸುದ್ದಿಗೋಷ್ಠಿ ನಡೆಸಿ ಕಣ್ಣೀರಿಟ್ಟಿದ್ದಾರೆ.. ಸಿಟಿ ರವಿ ಅವರು ಹೇಳಿಕೆಯಿಂದ್ ಶಾಕ್ ಆಯ್ತು ಅಂತ ಬೇಸರ ಹೊರಹಾಕಿದ್ರು. “ಅಧಿವೇಶನದಲ್ಲಿ ಧರಣಿ ಮಾಡಿ ಮುಗಿಸಿ ಕುಳಿತುಕೊಂಡಿದ್ದೆವು. ಸಭಾಪತಿಗಳು ಸದನ ಮುಂದೂಡಿದ್ದರು. ಆಗ ನಾನು ನನ್ನ ಜಾಗದಲ್ಲಿ ಕುಳಿತುಕೊಂಡಿದ್ದೆ. ಸಿ ಟಿ ರವಿ ಅವರು ರಾಹುಲ್ ಗಾಂಧಿ ಅವರನ್ನು ಡ್ರಗ್ ಅಡಿಕ್ಟ್ ಎಂದರು. ನಾನು ಮೊದಲಿಗೆ ಕೇಳಿಸಿಕೊಂಡು ಸುಮ್ಮನೆ ಇದ್ದೆ. ಮತ್ತೆ ಅದೇ ರೀತಿ ರಾಹುಲ್ ಗಾಂಧಿ ಅವರನ್ನು ನಿಂದಿಸಿದರು. ಆಗ ನಾನು ತಿರುಗಿ ಪ್ರಶ್ನೆ ಮಾಡಿದೆ. ನೀವು ಆಕ್ಸಿಡೆಂಟ್ ಮಾಡಿದ್ರಿ.. ನೀವು ಕೊಲೆಗಾರನಾ ಅಂತ ಕೇಳಿದೆ.. ಆದ್ರೆ ಅಷ್ಟಕ್ಕೆ ಸಿಟ್ಟಾದ ಸಿಟಿ ರವಿ ಅವಾಚ್ಯ ಶಬ್ಧ ಬಳಸಿದ್ದಾರೆ ಇದು ನನಗೆ ಶಾಕ್ ತಂದಿತ್ತು ಅಂತ ಲಕ್ಷ್ಮಿ ಹೆಬ್ಬಾಳ್ಕರ್ ಭಾವುಕರಾಗಿ ಹೇಳಿದ್ರು. ನಾನೂ ಕೂಡ ಒಬ್ಬಳು ತಾಯಿ, ಒಬ್ಬ ಅಕ್ಕ.. ನಾನು ರಾಜಕೀಯದಲ್ಲಿ ಕಷ್ಟಪಟ್ಟು ಮುಂದೆ ಬಂದಿದ್ದೇನೆ.. ನನ್ನ ನೋಡಿ ಸಾವಿರಾರು ಜನರು ರಾಜಕೀಯಕ್ಕೆ ಬರಬೇಕು ಅಂತಿದ್ದಾರೆ. ರಾಜಕಾರಣದಲ್ಲಿ ರೋಷಾವೇಷವಾಗಿ ಭಾಷಣ ಮಾಡ್ತಿವಿ. ನಾನು ನನ್ನ ಪಾಡಿಗೆ ರಾಜಕೀಯ ಮಾಡುತ್ತ ಕೈಲಾದಷ್ಟು ಜನರ ಸೇವೆ ಮಾಡಿಕೊಂಡು ಬಂದಿದ್ದೇನೆ. ರಾಜಕೀಯದಲ್ಲಿ ಇರಬೇಕು ಅಂದ್ರೆ ಧೈರ್ಯವಾಗಿರಬೇಕು. ವಿಧಾನಸೌಧವನ್ನು ಹಿರಿಯರ ಚಾವಡಿ, ಬುದ್ದಿವಂತರ ಕಟ್ಟೆ ಅಂತ ಕರೆಯುತ್ತಾರೆ. ಇಂಥ ಪವಿತ್ರಸ್ಥಳದಲ್ಲಿ ಆ ರೀತಿ ಪದ ಬಳಕೆ ಮಾಡಬಾರದು. ಮಾಡಿದರೂ ಅದನ್ನು ಯಾರೂ ಖಂಡಿಸಲಿಲ್ಲ. ಬಿಜೆಪಿ ನಾಯಕರು ಕಿವಿಯಲ್ಲಿ ಬಂದು ಸಾರಿ ಕೇಳಿದ್ರು ಬಿಟ್ರೆ. ಯಾರು ನನ್ನ ಪರ ನಿಂತಿಲ್ಲ . ನನ್ನ ಪರ ನಿಂತಿದ್ದು ನನ್ನ ಪಕ್ಷ , ನನ್ನ ರಾಜ್ಯದ ಜನ.. ನನ್ನ ಮಗ, ನನ್ನ ಸೊಸೆ ಕೂಡ ಕಾಲ್ ಮಾಡಿ ಧೈರ್ಯ ಹೇಳಿದ್ದಾರೆ ಅಂತ ಲಕ್ಷ್ಮೀ ಹೆಬ್ಬಾಳ್ಕರ್ ಕಣ್ಣೀರಿಟ್ಟಿದ್ದಾರೆ.
3. ರವಿ ಹಣೆಗೆ ರಕ್ತ ಬರುವಂತೆ ಹಲ್ಲೆ. ಪೊಲೀಸರ ವಿರುದ್ದ ಸಿ.ಟಿ ರವಿ ಕಿಡಿ
ಸುವರ್ಣಸೌಧದಲ್ಲಿ ಡಿ. 19ರಂದು ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಅವಾಚ್ಯ ಶಬ್ದಗಳಿಂದ ಬಿಜೆಪಿ ನಾಯಕ ಸಿ.ಟಿ ರವಿ ನಿಂದಿಸಿದ್ದು ರಾಜ್ಯ ರಾಜಕೀಯದಲ್ಲಿ ದೊಡ್ಡ ರಾದ್ಧಾಂತವಾಗಿದೆ. ಮಹಿಳೆಯರಿಗೆ ಅಪಮಾನವಾಗುವಂತಹ ಬಳಸಿದ್ದಕ್ಕಾಗಿ ಅವರ ಎಫ್ಐಆರ್ ಕೂಡ ಆಗಿದೆ. ಪೊಲೀಸರು ಬಂಧಿಸಿ ರಾತ್ರಿಯಿಡೀ ಸುತ್ತಾಡಿಸಿದ್ದಾರೆ. ಈ ವೇಳೆ ಸಿ.ಟಿ ರವಿ ಅವರ ಮೇಲೆ ಹಲ್ಲೆಯೂ ನಡೆದ್ದು, ತಲೆಗೆ ಗಾಯವಾಗಿದೆ. ಹಣೆಯಿಂದ ರಕ್ತ ಸೋರುತ್ತಿರುವ ದೃಶ್ಯಗಳು ಕಂಡುಬಂದಿವೆ. ಅಲ್ಲದೇ ಹಣೆಯಲ್ಲಿ ರಕ್ತ ಸೋರುತ್ತಿದ್ದರೂ ಪೊಲೀಸರು ಹೊತ್ತು ಅವರನ್ನು ಜೀಪ್‌ನಲ್ಲಿ ಕೂರಿಸಿರುವ ದೃಶ್ಯಗಳು ಜಾಲತಾಣಗಳಲ್ಲೂ ಸದ್ದು ಮಾಡುತ್ತಿವೆ. ಇನ್ನೂ ಸಿ.ಟಿ ರವಿ ಅವರನ್ನ ಬೆಂಗಳೂರಿಗೆ ಕರೆತರುವ ವೇಳೆ ಖಾನಾಪುರ ಪೊಲೀಸ್ ಠಾಣೆ ಮುಂದೆ ಭಾರೀ ಹೈಡ್ರಾಮಾ ನಡೆದಿದೆ. ಹಣೆಗೆ ಪೆಟ್ಟಾಗಿ ರಕ್ತ ಸೋರುತ್ತಿದ್ದರೂ, ಪೊಲೀಸರು ಸಿ.ಟಿ ರವಿ ಅವರನ್ನ ಹೊತ್ತು ವಾಹನದಲ್ಲಿ ಹಾಕಿದ್ದಾರೆ. ಈ ವೇಳೆ ನನ್ನ ಕೊಲೆಗೆ ಸಂಚು ರೂಪಿಸಿದ್ದಾರೆ ಅಂತ ಸಿ.ಟಿ ರವಿ ಚೀರಾಡಿದ್ದಾರೆ. ಸಿ.ಟಿ ರವಿ ಬಂಧನ ಖಂಡಿಸಿ ತಡರಾತ್ರಿ ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿರುವ ಆರ್. ಅಶೋಕ್, ರಾಜ್ಯವನ್ನು ಕಾಂಗ್ರೆಸ್‌ನವರು ಮಿನಿ ಪಾಕಿಸ್ತಾನ ಮಾಡಿದ್ದಾರೆ, ಸಿಟಿ ರವಿ ಜನಪ್ರತಿನಿಧಿಯೆಂಬುದನ್ನು ಮರೆತು ಹಲ್ಲೆ ಮಾಡಿದ್ದಾರೆ. ಸಿಟಿ ರವಿ ಹಣೆಗೆ ರಕ್ತ ಬರುವಂತೆ ಹಲ್ಲೆ ಮಾಡಿದ್ದಾರೆ, ಪೊಲೀಸರಿಗೆ ನಮ್ಮ ಸರ್ಕಾರ ಬಂದ ಬಳಿಕ ತಕ್ಕ ಪಾಠ ಕಲಿಸುತ್ತೇವೆ ಅಂತ ಎಚ್ಚರಿಕೆ ನೀಡಿದ್ದಾರೆ.
4. ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ. ಕಾರ್ಯಕರ್ತರು ಪೊಲೀಸ್ ವಶಕ್ಕೆ!
ಬೆಳಗಾವಿಯ ವಿಧಾನ ಪರಿಷತ್ತಿನಲ್ಲಿ ರಾಜ್ಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ರವಿ ಅವರನ್ನು ಬಂಧಿಸಲಾಗಿತ್ತು. ಪೊಲೀಸರ ನಡೆಯನ್ನು ಖಂಡಿಸಿದ ಕಾರ್ಯಕರ್ತರು, ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಬಿಜೆಪಿ ಸದಸ್ಯ ರವಿಯನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು. ರವಿ ಬಂಧನದ ಹಿನ್ನೆಲೆಯಲ್ಲಿ ಅವರ ಹುಟ್ಟೂರಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಕ್ಷ ಬಂದ್‌ಗೆ ಕರೆ ನೀಡಿತ್ತು. ಪೊಲೀಸರ ಪ್ರಕಾರ, ಹನುಮತ್ತಪ್ಪ ವೃತ್ತದಲ್ಲಿ ಬಿಜೆಪಿಯ ಸುಮಾರು 100 ಸದಸ್ಯರು ಮತ್ತು ಬೆಂಬಲಿಗರು ರವಿ ಬಂಧನವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ವಿರುದ್ಧ ಅಶ್ಲೀಲ ಪದ ಬಳಸಿ ನಿಂದಿಸಿದ್ದಾರೆ ಅಂತ ದೂರು ನೀಡಿದ್ದು ಈ ಹಿನ್ನೆಲೆಯಲ್ಲಿ ಸಿಟಿ ರವಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಹೀಗಾಗಿ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಸಿಟಿ ರವಿ ವಿರುದ್ಧ ಬಿಎನ್‌ಎಸ್ ಕಾಯ್ದೆ 75 ಮತ್ತು 79ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಲೈಂಗಿಕ ಕಿರುಕುಳ, ಮಹಿಳೆ ಇಚ್ಛೆ ವಿರುದ್ಧ ಅಶ್ಲೀಲತೆ ತೋರುವುದು. ಮಹಿಳೆಯ ನಮ್ರತೆ ಅವಮಾನಿಸುವ ಉದ್ದೇಶದಿಂದ ಸನ್ನೆ, ಪದ ಅಥವಾ ಕ್ರಿಯೆ, ಲೈಂಗಿಕ ಬಣ್ಣದ ಟೀಕೆ ಅಂತ ಎಫ್ಐಆರ್ನಲ್ಲಿ ಉಲ್ಲೇಖವಾಗಿದೆ.
5. ಲಕ್ಷ್ಮೀ ಹೆಬ್ಬಾಳ್ಕರ್ ಗೆ ನಿಂದನೆ ಆರೋಪ. ಸಿಟಿ ರವಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು
ಶಾಂತಿಯುವತಾಗಿ ನಡೆಯುತ್ತಿದ್ದ ಬೆಳಗಾವಿ ಅಧಿವೇಶದಲ್ಲಿ ನಿನ್ನೆ ಕೋಲಾಹಲವೇ ಸೃಷ್ಟಿಯಾಗಿತ್ತು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಬಿಜೆಪಿ ಎಂಎಲ್‌ಸಿ ಸಿಟಿ ರವಿ ಆಡಿದ ಅದೊಂದು ಮಾತು ಸಂಘರ್ಷಕ್ಕೆ ಕಾರಣವಾಗಿತ್ತು. ಮಾತಿನಿಂದಲೇ ಆಪತ್ತು ತಂದುಕೊಂಡಿರುವ ಸಿಟಿ ರವಿ ಸದ್ಯ ಅರೆಸ್ಟ್ ಕೂಡ ಆಗಿದ್ದಾರೆ. ಬೆಂಗಳೂರು ನ್ಯಾಯಾಲಯಕ್ಕೆ ವರ್ಗಾವಣೆ ಮಾಡುತ್ತಿದ್ದಾರೆ. ಈ ಮಧ್ಯೆ ಸಿಟಿ ರವಿ ವಿರುದ್ಧ ಮಹಿಳಾ ಆಯೋಗಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ದೂರು ನೀಡಲಾಗಿದೆ. ಅಂದಹಾಗೆ ಬೆಳಗಾವಿ ಅಧಿವೇಶನ ನಡೆಯುತ್ತಿದ್ದ ಸುವರ್ಣ ಸೌಧದ ವಿಧಾನ ಪರಿಷತ್ ಕಲಾಪದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಕ್ಟರ್ ಅವರಿಗೆ ವಿಧಾನ ಪರಿಷತ್ತಿನ ಸದಸ್ಯ ಸಿ.ಟಿ. ರವಿ ಅವರು ಅಸಭ್ಯ ಮತ್ತು ಅಸಂವಿಧಾನಿಕ ಪದ ಬಳಕೆ ಮಾಡಿ ಅಪಮಾನಿಸಿದ್ದಾರೆ. ಮಾಜಿ ಮಂತ್ರಿಯಾಗಿದ್ದು, ಹೆಣ್ಣು ಮಕ್ಕಳ ಬಗ್ಗೆ ಅಪಾರ ಕಾಳಜಿ, ಗೌರವ ಹೊಂದಿರಬೇಕಾದ ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿಯೇ ಘನತವತ್ತ ಸದನದಲ್ಲಿ ಮಹಿಳಾ ಮಂತ್ರಿಯೊಬ್ಬರನ್ನು ಅತೀ ಕೀಳು ಮಟ್ಟದ ಅಸಾಂವಿಧಾನಿಕ ಪದ ಪ್ರಯೋಗ ಮಾಡಿದ್ದರೆ ಅದು ನಾಡಿನ ಇಡೀ ಹೆಣ್ಣು ಕುಲಕ್ಕೇ, ಅವರ ಭಾವನೆಗಳಿಗೆ, ಅವರ ಘನತೆಗೆ ಉಂಟು ಮಾಡಿರುವ ಅಪಮಾನ. ಹಾಗಾಗಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕೆಂದು ಕೋರಲಾಗಿದೆ.
6.ಟೆರರಿಸ್ಟ್ ರೀತಿ ನಡ್ಕೋತಾರೆ!.ಇದು ಪ್ರಜಾಪ್ರಭುತ್ವದ ಕಗ್ಗೊಲೆ
ವಿಧಾನ ಪರಿಷತ್ ಸದಸ್ಯನನ್ನು ಒಬ್ಬ ಟೆರರಿಸ್ಟ್ ರೀತಿ ನಡೆಸಿಕೊಂಡಿದ್ದಾರೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಕ್ರೋಶ ಹೊರಹಾಕಿದ್ರು. ಸಿ.ಟಿ ರವಿ ಬಂಧನ ಹಿನ್ನೆಲೆ ವಿಜಯೇಂದ್ರ ಬೆಳಗಾವಿಗೆ ಭೇಟಿ ನೀಡಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಸಿ.ಟಿ ರವಿ ಗೆ ಗಾಯ ಆಗಿದೆ, ಆಸ್ಪತ್ರೆಗೆ ಕರೆದುಕೊಮಡು ಹೋಗಿಲ್ಲ. ರಾತ್ರಿಯೆಲ್ಲಾ 400-500 ಕಿ.ಮೀ ಸುತ್ತಾಡಿಸಿದ್ದಾರೆ. ಎಲ್ಲೂ ಕೂಡ ಕೂರುವುದಕ್ಕೆ ಅವಕಾಶ ಕೊಟ್ಟಿಲ್ಲ. ಬೆಂಗಳೂರಿಗೆ ಹಾಜರು ಪಡಿಸುತ್ತೇವೆ ಅಂತ ಗದಗ, ರಾಮದುರ್ಗ ಸೇರಿ ಎಲ್ಲಾ ಪೊಲೀಸ್ ಸ್ಟೇಷನ್ ಸುತ್ತಾಡಿಸಿ ಈಗ ವಾಪಸ್ ಬೆಳಗಾವಿಗೆ ಕರೆತರುತ್ತಿದ್ದಾರೆ ಅಂತ ಕಿಡಿಕಾರಿದರು.ಸರ್ಕಾರದ ನಡವಳಿಕೆ, ಸುವರ್ಣಸೌಧದೊಳಕ್ಕೆ ನುಗ್ಗಿ ಕೆಲವು ಪುಡಾರಿಗಳು, ರೌಡಿಗಳು ದಾಂಧಲೆ ನಡೆಸಲು ಹೊರಟಿದ್ದರು. ನಡುರಸ್ತೆಯಲ್ಲಿ ಹಲ್ಲೆ ಮಾಡಲು ಹೋಗಿದ್ದರು. ಹಲ್ಲೆಯಾಗಿದ್ದರೆ ಯಾರು ಕಾರಣ? ಯಾರು ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದರು? ಪೊಲೀಸರದ್ದು ಅತಿರೇಕದ ವರ್ತನೆ. ಸರ್ಕಾರದ ಕುಮ್ಮಕ್ಕಿನಿಂದ ನಡೆದಿದೆ. ಇದರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ಕೊಟ್ದಿದ್ದೇವೆ. ಪ್ರಜಾಪ್ರಭುತ್ವದ ಕಗ್ಗೊಲೆಯಿದು ಅಂತ ಗುಡುಗಿದರು.
7. ಬಿಜೆಪಿಗೆ ಮಾನ- ಮರ್ಯಾದೆ ಇಲ್ಲ. ಕಮಲ ನಾಯಕರ ವಿರುದ್ದ ಡಿಕೆಶಿ ವಾಗ್ದಾಳಿ
ಬಿಜೆಪಿ ಪಕ್ಷ ಹಾಗೂ ಅದರ ನಾಯಕರಿಗೆ ಮಾನ ಮರ್ಯಾದೆ ಇಲ್ಲ. ಬಿಜೆಪಿಯಿಂದ ಇಡೀ ದೇಶಕ್ಕೆ ಅವಮಾನ. ಆ ಪಕ್ಷಕ್ಕೆ ಇದು ಅವಮಾನ ಅಂತ ಡಿಸಿಎಂ ಡಿ.ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿ ಸುವರ್ಣಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು. ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯ ಸಿ.ಟಿ. ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಬಗ್ಗೆ ಕೇಳಿದಾಗ ಶಿವಕುಮಾರ್ ಅವರು, “ಬಿಜೆಪಿ ನಾಯಕರು ಸದನದಲ್ಲಿ ನಡೆದುಕೊಂಡ ರೀತಿಗೆ ನಾಚಿಕೆಯಾಗಬೇಕು. ಯಾವಾಗಲು ಧರ್ಮ, ಸಂಸ್ಕೃತಿ ಬಗ್ಗೆ ಮಾತನಾಡುವ ಅವರು ಭಾರತ ಮಾತೆಗೆ, ಮಾತೃಭೂಮಿಗೆ ಅಪಮಾನ ಮಾಡಿದ್ದಾರೆ. ಶಾಸಕ ಮುನಿರತ್ನ ವಿಚಾರದಲ್ಲಿಯೂ ಬಿಜೆಪಿ ಹೀಗೆ ವರ್ತನೆ ಮಾಡಿತು” ಅಂತ ಕಿಡಿಕಾರಿದರು. ಸರ್ಕಾರ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವುದೇ ಎಂದು ಕೇಳಿದಾಗ, “ಕಾನೂನೇ ಅವರ ಮೇಲೆ ಕ್ರಮ ತೆಗೆದುಕೊಳ್ಳಲಿದೆ, ಸರ್ಕಾರವಲ್ಲ” ಅಂತ ತಿಳಿಸಿದರು. ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿ, “ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಪದ ಬಳಕೆ ಪ್ರಕರಣದಲ್ಲಿ ಸಿ.ಟಿ.ರವಿ ಬಂಧನ ವಿಷಯವನ್ನು ಪೊಲೀಸ್ ಇಲಾಖೆ ಮತ್ತು ನ್ಯಾಯಾಲಯ ನೋಡಿಕೊಳ್ಳುತ್ತದೆ” ಎಂದರು.
8. 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ. ಮಂಡ್ಯದಲ್ಲಿ ಸಿಎಂ ಸಿದ್ದರಾಮಯ್ಯ ಚಾಲನೆ
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದೀಪ ಬೆಳಗಿಸುವುದರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ನಿರ್ಮಲಾನಂದನಾಥ ಶ್ರೀ, ಗೋ.ರು.ಚನ್ನಬಸಪ್ಪ, ಸಚಿವರಾದ ಚಲುವರಾಯಸ್ವಾಮಿ, ಮಹದೇವಪ್ಪ, ಶಿವರಾಜ್ ತಂಗಡಗಿ, ಸಭಾಧ್ಯಕ್ಷ ಯು.ಟಿ.ಖಾದರ್, ಸಾಹಿತಿ ಚಂದ್ರಶೇಖರ ಕಂಬಾರ, ಶಾಸಕರು ಸೇರಿದಂತೆ ಹಲವರು ಭಾಗಿಯಾಗಿದ್ದರು. ಸಮ್ಮೇಳನದ ಮಹಾದ್ವಾರಗಳು, ಪ್ರವೇಶದ್ವಾರ, ಪುಸ್ತಕ ಮಳಿಗೆ, ವಾಣಿಜ್ಯ ಮಳಿಗೆಗಳಿಗೆ ಶಾಸಕರು ಮತ್ತು ಸಚಿವರು ಚಾಲನೆ ನೀಡಿದರು. “ಹೊಂಬಾಳೆ ಅರಳಿಸಿ ಕನ್ನಡ ನುಡಿ ಅರಳಲಿ” ಎಂಬ ಆಶಯದೊಂದಿಗೆ ಈ ಬಾರಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಸಮ್ಮೇಳನದಲ್ಲಿ ಶಾಸಕ ನರೇಂದ್ರಸ್ವಾಮಿ ಸಂವಿಧಾನ ಪೀಠಿಕೆ ಬೋಧಿಸಿದರು. ಸಕ್ಕರೆ ನಾಡು ಮಂಡದಲ್ಲಿ ಮೂವತ್ತು ವರ್ಷಗಳ ನಂತರ ಮತ್ತೊಮ್ಮೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮೂರು ದಿನಗಳ ಕಾಲ ಮಂಡ್ಯದಲ್ಲಿ ನಡೆಯುತ್ತಿದೆ. ನುಡಿಜಾತ್ರೆಯನ್ನು ಸಾಕಷ್ಟು ಅರ್ಥಪೂರ್ಣವಾಗಿ ಹಾಗೂ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ.
9. ಮಾಜಿ ಸಿಎಂ ಓಂ ಪ್ರಕಾಶ್ ಚೌಟಾಲಾ ನಿಧನ.ಗುರುಗ್ರಾಮದ ನಿವಾಸದಲ್ಲಿ ಕೊನೆಯುಸಿರು
ಹಿರಿಯ ಭಾರತೀಯ ರಾಷ್ಟ್ರೀಯ ಲೋಕದಳ ನಾಯಕ ಮತ್ತು ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ಅವರು ಇಂದು 89ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ತಮ್ಮ ಗುರುಗ್ರಾಮದ ನಿವಾಸದಲ್ಲಿ ಹೃದಯ ಸ್ತಂಭನಕ್ಕೆ ಒಳಗಾಗಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ಅವರು ಮೃತಪಟ್ಟಿರುವುದಾಗಿ ಘೋಷಿಸಲಾಯಿತು. ಹರಿಯಾಣ ರಾಜಕೀಯದಲ್ಲಿ ಅಪ್ರತಿಮ ವ್ಯಕ್ತಿಯಾಗಿರುವ ಓಂ ಪ್ರಕಾಶ್ ಚೌಟಾಲಾ ಡಿಸೆಂಬರ್ 1989ರಿಂದ 4 ಅವಧಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಕೊನೆಯ ಬಾರಿ 1999 ರಿಂದ 2005ರವರೆಗೆ ಸಿಎಂ ಆಗಿದ್ದರು. ಅವರು ಹರಿಯಾಣದ ಶಾಸಕರಾಗಿ ಸುದೀರ್ಘ ಸೇವೆ ಸಲ್ಲಿಸಿದ ನಾಯಕರು ಎಂಬ ಹೆಗ್ಗಳಿಕೆಯನ್ನು ಹೊಂದಿದ್ದರು.
10.ತ್ರಿಷಾ-ವಿಜಯ್ ಫೋಟೊ ಲೀಕ್. ಅಣ್ಣಾಮಲೈ ಸ್ಪೋಟಕ ಹೇಳಿಕೆ
ನಟ ವಿಜಯ್ ಹಾಗೂ ತ್ರಿಷಾ ಇತ್ತೀಚೆಗೆ ಸುದ್ದಿಯಲ್ಲಿದ್ದರು. ಇಬ್ಬರು ಒಟ್ಟಿಗೆ ವಿಮಾನದಲ್ಲಿ ಪ್ರಯಾಣ ಮಾಡಿದ್ದು, ಈಗಾಗಲೇ ಚಾಲ್ತಿಯಲ್ಲಿರುವ ಇವರಿಬ್ಬರ ಸಂಬಂಧದ ಕತೆಗೆ ಇನ್ನಷ್ಟು ಪುಷ್ಠಿ ನೀಡಿತು. ತ್ರಿಷಾ ಹಾಗೂ ವಿಜಯ್ ಪರಸ್ಪರ ರಿಲೇಷನ್ಶಿಪ್ನಲ್ಲಿದ್ದಾರೆ ಎಂಬ ಸುದ್ದಿ ಕಳೆ ಕೆಲ ವರ್ಷಗಳಿಂದಲೂ ಹರಿದಾಡುತ್ತಿದೆ. ಅಸಲಿಗೆ ಈ ಇಬ್ಬರ ಸಂಬಂಧದ ಬಗ್ಗೆ ಹತ್ತು ವರ್ಷದ ಹಿಂದೆಯೂ ಸುದ್ದಿಯಾಗಿತ್ತು. ಇದೀಗ ಈ ಇಬ್ಬರು ಒಟ್ಟಿಗೆ ಖಾಸಗಿ ವಿಮಾನದಲ್ಲಿ ಟ್ರಾವೆಲ್ ಮಾಡುವ ಚಿತ್ರಗಳು ವೈರಲ್ ಆಗಿದ್ದು, ಈಗ ಮತ್ತೆ ಅದೇ ಸುದ್ದಿಗಳು ಹರಿದಾಡುತ್ತಿವೆ. ಆದರೆ ಈ ಬಗ್ಗೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ತ್ರಿಷಾ ಹಾಗೂ ವಿಜಯ್ ಅವರುಗಳ ಚಿತ್ರ ವೈರಲ್ ಆಗುವ ಹಿಂದೆ ತಮಿಳುನಾಡಿನ ಆಡಳಿತ ಪಕ್ಷವಾದ ಡಿಎಂಕೆಯ ಐಟಿ ಸೆಲ್ ಹಾಗೂ ರಾಜ್ಯದ ಗುಪ್ತಚರ ಇಲಾಖೆಯ ಕೈವಾಡ ಇದೆ ಎಂದು ಅಣ್ಣಾಮಲೈ ಆರೋಪಿಸಿದ್ದಾರೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿಜಯ್ ಮತ್ತು ತ್ರಿಷಾ ಅವರುಗಳು ಭದ್ರತಾ ಪರೀಕ್ಷೆಗೆ ಒಳಗಾಗುವ ವೇಳೆ ರಾಜ್ಯ ಗುಪ್ತಚರ ಇಲಾಖೆಯವರು ಅವರಿಬ್ಬರ ವಿಡಿಯೋಗಳನ್ನು ಗುಟ್ಟಾಗಿ ತೆಗೆದು ಅವುಗಳನ್ನು ವೈರಲ್ ಮಾಡಿದ್ದಾರೆ ಎಂದು ಅಣ್ಣಾಮಲೈ ಹೇಳಿದ್ದಾರೆ.