ಟಾಲಿವುಡ್ ನಟ ವಿಜಯ್ ದೇವರಕೊಂಡ ಕಾರು ಅಪಘಾತಕ್ಕೀಡಾಗಿದೆ. ಪುಟ್ಟಪರ್ತಿಯಿಂದ ಹೈದರಾಬಾದ್‌ಗೆ ಮರಳುತ್ತಿದ್ದಾಗ, ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಗದ್ವಾಲ್ ಬಳಿ ವರಸಿದ್ಧಿ ವಿನಾಯಕ ಕಾಟನ್ ಮಿಲ್ ಮೂಲಕ ಹೋಗುವಾಗ, ದುರ್ಘಟನೆ ನಡೆದಿದೆ. ದೇವರಕೊಂಡ ಕಾರಿನ ಮುಂದೆ ಲಾರಿಯೊಂದು ಹೋಗುತ್ತಿತ್ತು. ಕುರಿಗಳನ್ನು ತುಂಬಿಕೊಂಡು ಸಾಗುತ್ತಿದ್ದ ಲಾರಿ ಚಾಲಕ, ಏಕಾಏಕಿ ಬ್ರೇಕ್ ಹಾಕಿದ್ದಾನೆ. ಆ ಲಾರಿಗೆ ಡಿಕ್ಕಿ ಹೊಡೆಯುವದನ್ನು ತಪ್ಪಿಸಲು ಹೋಗಿ, ವಿಜಯ್ ದೇವರಕೊಂಡ ಕಾರು ಚಾಲಕ, ಎದುರಿನಿಂದ ಬರುತ್ತಿದ್ದ ಬೊಲೆರೋ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ.
ಎರಡೂ ಕಾರುಗಳ ವೇಗ ನಾರ್ಮಲ್ ಸ್ಪೀಡ್ ಇದ್ದಿದ್ರಿಂದ ಹೆಚ್ಚಿನ ಹಾನಿ ಸಂಭವಿಸಿಲ್ಲ. ಪರಸ್ಪರ ಡಿಕ್ಕಿ ಹೊಡೆದಾಗ ಕೇವಲ ಕಾರುಗಳ ಮುಂಭಾಗಕ್ಕೆ ಅಷ್ಟೇ ಹಾನಿಯಾಗಿದೆ. ಅದೃಷ್ಟವಷಾತ್ ಪ್ರಾಣಾಪಾಯದಿಂದ ಎಲ್ಲರೂ ಪಾರಾಗಿದ್ದಾರೆ. ತಕ್ಷಣವೇ ಕಾರಿನಿಂದ ಹೊರಬಂದ ದೇವರಕೊಂಡ, ತಮ್ಮ ಸ್ನೇಹಿತರೊಬ್ಬರಿಗೆ ಕರೆ ಮಾಡಿದ್ದಾರೆ. ಬಳಿಕ ಬೇರೆ ಕಾರಿನಲ್ಲಿ ಎಲ್ಲರೂ ಪ್ರಯಾಣ ಬೆಳೆಸಿದ್ದಾರೆ.
ಅಪಘಾತ ಪ್ರಕರಣ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಗೆ, ವಿಜಯ್ ದೇವರಕೊಂಡ ಕಾರು ಚಾಲಕ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಕ್ಟೋಬರ್ 3ರಂದು ವಿಜಯ್ ದೇವರಕೊಂಡ, ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ನೆರವೇರಿತ್ತು. ಬಳಿಕ ತಮ್ಮ ಕುಟುಂಬ ಸದಸ್ಯರೊಂದಿಗೆ ವಿಜಯ್ ದೇವರಕೊಂಡ, ಪುಟ್ಟಪರ್ತಿಯಲ್ಲಿರುವ ಶ್ರೀ ಸತ್ಯ ಸಾಯಿ ಬಾಬಾ ಅವರ ಪ್ರಶಾಂತಿ ನಿಲಯಂ ಆಶ್ರಮಕ್ಕೆ ಭೇಟಿ ನೀಡಿದ್ದರು. ವಾಪಸ್ ಬರುವಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.