International News: ಮುಂಬೈ ದಾಳಿಯ ರೂವಾರಿ ಉಗ್ರ ತಹವ್ವೂರ್ ರಾಣಾನನ್ನು ಪ್ರಧಾನಿ ಮೋದಿ ಮನವಿಯ ಮೇರೆಗೆ ಅಮೆರಿಕ ಭಾರತಕ್ಕೆ ಹಸ್ತಾಂತರಿಸಿದೆ. ಅಮೆರಿಕದಿಂದ ಏಪ್ರಿಲ್ 10ರ ಗುರುವಾರ ಸಂಜೆ 6.30ರ ಹೊತ್ತಿಗೆ ವಿಶೇಷ ವಿಮಾನದ ಮೂಲಕ ಪಾಲಂ ಏರ್‌ಪೋರ್ಟ್‌ಗೆ ಕರೆತರಲಾಗಿತ್ತು. ಬಳಿಕ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ರಾಷ್ಟ್ರೀಯ ತನಿಖಾ ಸಂಸ್ಥೆ ಎನ್‌ಐಎ ಬಂಧನ ಪ್ರಕ್ರಿಯೆ ನಡೆಸಿತ್ತು. ಮೋಸ್ಟ್ ವಾಂಟೆಡ್ ಉಗ್ರನ ಆಗಮನ ಹಿನ್ನೆಲೆ ಏರ್‌ಪೋರ್ಟ್ ಸುತ್ತಮುತ್ತ ಭಾರೀ ಬಿಗಿ ಭದ್ರತೆ ಕಲ್ಪಿಲಾಗಿತ್ತು.
ಇನ್ನೂ ಬಂಧನದ ಬಳಿಕ ನೇರವಾಗಿ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ಎನ್‌ಐಎ ನ್ಯಾಯಾಲಯದ ಮುಂದೆ ಕಸ್ಟಡಿಗೆ ಅರ್ಜಿ ಸಲ್ಲಿಸುತ್ತದೆ. ರಾಣಾ ಕರೆತರುವ ಹಿನ್ನೆಲೆ ನ್ಯಾಯಾಲಯದ ಹೊರಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ, ಅಲ್ಲದೆ ನ್ಯಾಯಾಲಯದ ಹೊರಗೆ ಅರೆಸೇನಾ ಪಡೆಗಳು ಮತ್ತು ದೆಹಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಏತನ್ಮಧ್ಯೆ, ರಾಣಾನನ್ನು ಹೆಚ್ಚಿನ ಭದ್ರತೆಯ ಜೈಲು ವಾರ್ಡ್‌ನಲ್ಲಿ ಇರಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಮತ್ತು ನ್ಯಾಯಾಲಯದ ಆದೇಶಗಳಿಗಾಗಿ ಕಾಯುತ್ತಿದ್ದೇವೆ ಎಂದು ತಿಹಾರ್ ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಮುಂಬೈ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಣಾನನ್ನು ಮುಂಬೈಗೆ ವಿಚಾರಣೆಗಾಗಿ ಕರೆತರುವ ಸಾಧ್ಯತೆಗಳು ಇವೆ ಎನ್ನಲಾಗುತ್ತಿದೆ.
ನರೇಂದ್ರ ಮಾನ್ ನೇಮಕ..!
ಇನ್ನೂಈ ಪ್ರಕರಣದಲ್ಲಿ ವಿಶೇಷ ಸಾರ್ವಜನಿಕ ಅಭಿಯೋಜಕರಾಗಿ ಅಡ್ವೊಕೇಟ್ ನರೇಂದ್ರ ಮಾನ್ ನೇಮಕಗೊಂಡಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ನಡೆಸುತ್ತಿರುವ ಮುಂಬೈ ಭಯೋತ್ಪಾದಕ ದಾಳಿಯ ಪಿತೂರಿ ಪ್ರಕರಣದಲ್ಲಿ ಕೇಂದ್ರ ಸರ್ಕಾರವು ವಕೀಲ ನರೇಂದ್ರ ಮಾನ್ ಅವರನ್ನು ವಿಶೇಷ ಸಾರ್ವಜನಿಕ ಅಭಿಯೋಜಕರನ್ನಾಗಿ ನೇಮಿಸಿದೆ.
ರಾಣಾಗೆ ಶಾಕ್ ನೀಡಿದ್ದ ಅಮೆರಿಕ..
ಭಾರತಕ್ಕೆ ಹಸ್ತಾಂತರದ ಕುರಿತು ರಾಣಾ ಸಲ್ಲಿಸಿದ್ದ ಅರ್ಜಿ ಅಮೆರಿಕದ ಕೋರ್ಟ್ ತಿರಸ್ಕರಿಸಿತ್ತು. ರಾಣಾನನ್ನು ಲಾಸ್ ಏಂಜಲೀಸ್‌ನ ಮೆಟ್ರೋಪಾಲಿಟನ್ ಡಿಟೆನ್ಷನ್ ಸೆಂಟರ್‌ನಲ್ಲಿ ಇರಿಸಲಾಗಿತ್ತು. ಬಳಿಕ ಆತ 2025ರ ಫೆಬ್ರವರಿ 27ರಂದು ಅಮೆರಿಕದ ಸರ್ವೋಚ್ಚ ನ್ಯಾಯಾಲಯದ ಸಹಾಯಕ ನ್ಯಾಯಾಧೀಶರು ಮತ್ತು ಒಂಬತ್ತನೇ ಸರ್ಕ್ಯೂಟ್ ನ್ಯಾಯಾಧೀಶರಾದ ಎಲೆನಾ ಕಗನ್ ಅವರಿಗೆ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ಬಾಕಿ ಇರುವವರೆಗೆ ತಡೆಯಾಜ್ಞೆಗಾಗಿ ತುರ್ತು ಅರ್ಜಿಯನ್ನು ಸಲ್ಲಿಸಿದ್ದನು. ಕಗನ್ ಕಳೆದ ತಿಂಗಳು ಆ ಅರ್ಜಿಯನ್ನು ತಿರಸ್ಕರಿಸಿದ್ದರು. ನಂತರ ರಾಣಾ ನ್ಯಾಯಮೂರ್ತಿ ಕಗನ್‌ಗೆ ಈ ಹಿಂದೆ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ಬಾಕಿ ಇರುವವರೆಗೆ ತಡೆಯಾಜ್ಞೆಗಾಗಿ ತುರ್ತು ಅರ್ಜಿಯನ್ನು ಪುನಃ ಸಲ್ಲಿಸಿ, ಆ ಪುನರಾವರ್ತಿತ ಅರ್ಜಿಯನ್ನು ಅಮೆರಿಕದ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್‌ಗೆ ನಿರ್ದೇಶಿಸುವಂತೆ ಕೋರಿದ್ದನು. ಆದರೆ ಸರ್ವೋಚ್ಚ ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸೂಚನೆಯೊಂದು, ಆತನ ಅರ್ಜಿಯನ್ನು ನ್ಯಾಯಾಲಯವು ನಿರಾಕರಿಸಿದೆ ಎಂದು ತಿಳಿಸಿತ್ತು.
ನನ್ನ ಮೇಲೆ ಹಿಂಸೆಯಾಗಬಹುದು..
ಪುನಃ ಮೇಲ್ಮನವಿಯಲ್ಲಿ ರಾಣಾ, ನನ್ನ ಗಡಿಪಾರು, ಅಮೆರಿಕದ ಕಾನೂನು ಮತ್ತು ಕಿರುಕುಳ ವಿರುದ್ಧದ ವಿಶ್ವಸಂಸ್ಥೆಯ ನಿಯಮಗಳ ಉಲ್ಲಂಘನೆಯಾಗಲಿದೆ. ಯಾಕೆಂದರೆ ನಾನು ಪಾಕಿಸ್ತಾನಿ ಮೂಲದ ಮುಸ್ಲಿಂ. ಜೊತೆಗೆ ಪಾಕ್ ಸೇನೆಯಲ್ಲೂ ಕಾರ್ಯನಿರ್ವಹಿಸಿದ್ದೆ. ಈ ವಿಷಯಗಳು ಭಾರತದ ಜೈಲುಗಳಲ್ಲಿ ನನ್ನ ಮೇಲೆ ಹಿಂಸೆಗಳಿಗೆ ಕಾರಣವಾಗಬಹುದು. ಅದು ನನ್ನ ಸಾವಿಗೂ ಕಾರಣವಾಗಬಹುದು ಎನ್ನುವುದಕ್ಕೆ ನನಗೆ ನಂಬಿಕೆ ಇದೆ ಎಂದು ಮೇಲ್ಮನವಿಯಲ್ಲಿ ಉಲ್ಲೇಖಿಸಿ ತನಗೆ ಜೀವ ಭಯವಿದೆ ಎಂದು ಹೇಳಿಕೊಂಡಿದ್ದನು. ಇನ್ನೂ ನಾನು ಮೂತ್ರಕೋಶದ ಕ್ಯಾನ್ಸರ್, ಅಸ್ತಮಾ, ಕೋವಿಡ್ ಸೇರಿದಂತೆ ಹಲವು ವೈದ್ಯಕೀಯ ಸಮಸ್ಯೆಗಳಿಂದ ಬಳಲುತ್ತಿದ್ದೇನೆ. ನನ್ನ ವಿರುದ್ಧ ಹೊರಿಸಲಾಗಿರುವ ಪ್ರಕರಣದಲ್ಲಿ ಗಲ್ಲು ಶಿಕ್ಷೆ ಖಚಿತ. ಹೀಗಾಗಿ ನನ್ನನ್ನು ಭಾರತಕ್ಕೆ ಗಡಿಪಾರು ಮಾಡಲು ಹೊರಡಿಸಿರುವ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿ ರಾಣಾ ಅರ್ಜಿ ಸಲ್ಲಿಸಿದ್ದಾನೆ. ರಾಣಾ, ಈ ಹಿಂದೆ 166 ಜನರ ಸಾವಿಗೆ ಕಾರಣವಾದ ಮುಂಬೈ ದಾಳಿಯ ಪ್ರಮುಖ ಸಂಚುಕೋರ ಲಷ್ಕರ್-ಎ-ತೊಯ್ದಾದ ಡೇವಿಡ್ ಹೆಡ್ಲಿಯೊಂದಿಗೆ ಸಂಬಂಧವನ್ನು ಈ ರಾಣಾ ಹೊಂದಿದ್ದಾನೆ.
ಟ್ರಂಪ್ ಕೊಟ್ಟಿದ್ದರು ಭರವಸೆ..
ಇನ್ನೂಕಳೆದ ಫೆಬ್ರವರಿ 12 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಲು ವಾಷಿಂಗ್ಟನ್‌ಗೆ ತೆರಳಿದ್ದರು. ಆಗ ರಾಣಾ ಅವರ ವಕೀಲರಿಗೆ ರಾಜ್ಯ ಇಲಾಖೆಯಿಂದ ಪತ್ರವೊಂದು ತಲುಪಿತ್ತು. ಆ ಪತ್ರದಲ್ಲಿ ಫೆಬ್ರವರಿ 11, 2025 ರಂದು, ವಿದೇಶಾಂಗ ಕಾರ್ಯದರ್ಶಿಗಳು ಭಾರತಕ್ಕೆ ರಾಣಾನನ್ನು ಒಪ್ಪಿಸಲು ಅನುಮತಿ ನೀಡಿದ್ದಾರೆ ಎಂದು ತಿಳಿಸಲಾಗಿತ್ತು. ಇದು ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಭಾರತದ ನಡುವಿನ ಗಡಿಪಾರು ಒಪ್ಪಂದದ ಪ್ರಕಾರ ಕೈಗೊಳ್ಳಲಾದ ನಿರ್ಧಾರವಾಗಿತ್ತು. ಅದರಂತೆ ರಾಣಾನನ್ನು ಭಾರತಕ್ಕೆ ಒಪ್ಪಿಸುವುದಾಗಿ ಟ್ರಂಪ್ ಮೋದಿಗೆ ಭರವಸೆ ನೀಡಿದ್ದರು. ಹಲವು ವರ್ಷಗಳ ಬಳಿಕ ಆಗಮಿಸಿರುವ ಪಾತಕಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಈಗಾಗಲೇ ದೇಶಾದ್ಯಂತ ಒತ್ತಾಯಗಳು ಹೆಚ್ಚಾಗಿವೆ. ಅಲ್ಲದೆ ರಾಣಾನನ್ನು ಹಸ್ತಾಂತರಿಸಿಕೊಂಡಿದ್ದು ಭಾರತ ಹಾಗೂ ಅಮೆರಿಕದ ನಡುವಿನ ರಾಜತಾಂತ್ರಿಕತೆ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಯಾಗಿದೆ. ಇನ್ನೂ ಈ ವಿಚಾರದಲ್ಲಿ ಭಾರತವು ಅತ್ಯಂತ ದೊಡ್ಡ ರಾಜತಾಂತ್ರಿಕ ಗೆಲುವಾಗಿರುವುದು ಭಾರತದ ಶಕ್ತಿ ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಹೆಚ್ಚಾಗಿದೆ.