ಆಪರೇಷನ್ ಸಿಂಧೂರ್ ವಿಶೇಷ :
ನವದೆಹಲಿ : ಪಾಕಿಸ್ತಾನದ ಮೇಲೆ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಬಳಿಕ ಭಾರತದ ಮೇಲೆ ಡ್ರೋನ್ ದಾಳಿ ನಡೆಸಲು ಟರ್ಕಿಶ್ ಸೇನೆಯ ಅಧಿಕಾರಿಗಳು ಪಾಕಿಸ್ತಾನಕ್ಕೆ ಸಹಾಯ ಮಾಡಿದ್ದರು. ಪಾಕಿಸ್ತಾನವು ಭಾರತದ ವಿರುದ್ಧ ಬೇರಕ್ತಾರ್ ಟಿಬಿ2 ಮತ್ತು ಯಿಹಾ ಡ್ರೋನ್‌ಗಳನ್ನು ಬಳಸಿತ್ತು. ಡ್ರೋನ್‌ಗಳ ನಿರ್ದಿಷ್ಟ ಗುರಿಯನ್ನು ತಿಳಿಯಲು ಮತ್ತು ಸಂಭಾವ್ಯವಾಗಿ ಕಾಮಿಕೇಜ್ ದಾಳಿಗಳಿಗೆ ಬಳಸಲಾಗುತ್ತದೆ. ಈ ಡ್ರೋನ್‌ಗಳನ್ನು ಟರ್ಕಿಯು ಪಾಕಿಸ್ತಾನಕ್ಕೆ ಪೂರೈಕೆ ಮಾಡಿತ್ತು. ಇದೀಗ ಈ ವಿಚಾರ ಬಯಲಾಗುತ್ತಿದ್ದಂತೆ ಟರ್ಕಿಯ ವಿರುದ್ಧ ಭಾರತೀಯರೆಲ್ಲರೂ ಸಿಡಿದೆದ್ದಿದ್ದು, ಟರ್ಕಿಯನ್ನು ಬಹಿಷ್ಕರಿಸಿ ಎನ್ನುವ ಅಭಿಯಾನ ಜೋರಾಗಿಯೇ ನಡೆಯುತ್ತಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದಲ್ಲಿ ಪಾಕ್ ಪರ ನಿಂತಿರುವ ಟರ್ಕಿಯ ಉತ್ಪನ್ನಗಳನ್ನು ಖರೀದಿಸದಂತೆ ಜಾಗೃತಿ ಮೂಡಿಸಲಾಗುತ್ತಿದೆ.
ಟರ್ಕಿಯ ಸೆಲೆಬಿಗೆ ಶಾಕ್ ನೀಡಿದ್ದ ಕೇಂದ್ರ ಸರ್ಕಾರ..
ಇನ್ನೂ ಇದರ ಮೊದಲ ಭಾಗವಾಗಿ ಟರ್ಕಿಯ ಕಂಪನಿಯಾಗಿರುವ ಸೆಲೆಬಿ ಏವಿಯೇಷನ್ ಬೆಂಗಳೂರು, ದೆಹಲಿ ಮತ್ತು ಮುಂಬೈ ಸೇರಿದಂತೆ ಒಂಬತ್ತು ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸುತ್ತಿತ್ತು. ನಾಗರಿಕ ವಿಮಾನಯಾನ ಸಚಿವಾಲಯದ ಭದ್ರತಾ ವಿಭಾಗವಾದ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ ಗುರುವಾರ ಸೆಲೆಬಿ ಏವಿಯೇಷನ್‌ನ ಪರವಾನಗಿಯನ್ನು ರದ್ದುಗೊಳಿಸಿದ್ದು, ತಕ್ಷಣದಿಂದಲೇ ಭಾರತದ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಆ ಕಂಪನಿಯ ಸೇವೆ ಸ್ಥಗಿತಗೊಳಿಸುವಂತೆ ಆದೇಶಿಸುವ ಮೂಲಕ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಿತ್ತು.
ಕೇಂದ್ರದ ವಿರುದ್ಧವೇ ಸೆಡ್ಡು ಹೊಡೆದ ಸೆಲೆಬಿ..
ಆದರೆ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಸೆಲೆಬಿ ದೆಹಲಿ ಹೈಕೋರ್ಟ್‌ನಲ್ಲಿ ತನ್ನ ಮೊಕದ್ದಮೆಯನ್ನು ಹೂಡಿದ್ದು, ಈ ಮೂಲಕ ನಮ್ಮ ನೆಲದಲ್ಲಿಯೇ ನಿಂತು ನಮ್ಮ ವಿರುದ್ಧವೇ ತಿರುಗಿ ಬೀಳುವ ಕೆಲಸಕ್ಕೆ ಮುಂದಾಗಿದೆ. ಅಲ್ಲದೆ ರಾಷ್ಟ್ರೀಯ ಭದ್ರತೆಯ ಕಾರಣ ನೀಡಿ ಕಂಪನಿ ಸೇವೆಯನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ಆದೇಶವನ್ನು ತಡೆ ಹಿಡಿಯುವಂತೆ ಕೋರಿದೆ. ಹಾಗೆಯೇ ನಮ್ಮಿಂದ ರಾಷ್ಟ್ರೀಯ ಭದ್ರತೆಗೆ ಯಾವ ರೀತಿಯಲ್ಲಿ ಹಾನಿಯಾಗುತ್ತದೆ ಎಂದು ಹೇಳಿಲ್ಲ. ಕಂಪನಿಗೂ ಯಾವುದೇ ಎಚ್ಚರಿಕೆ ನೀಡದೆ ಈ ಆದೇಶ ಹೊರಡಿಸಲಾಗಿದೆ ಎಂದು ದೂರಿದೆ. ಹೀಗೆ ಮಾಡುವುದರಿಂದ 3791 ಜನರು ಉದ್ಯೋಗ ವಂಚಿತರಾಗುತ್ತಾರೆ. ಜೊತೆಗೆ ಹೂಡಿಕೆದಾರರು ಕೂಡ ವಿಶ್ವಾಸ ಕಳೆದುಕೊಳ್ಳುತ್ತಾರೆ ಎಂದು ಸೆಲೆಬಿ ವಾದಿಸುವ ಮೂಲಕ ಕೇಂದ್ರದ ವಿರುದ್ಧವೇ ಸೆಡ್ಡು ಹೊಡೆದಿದೆ.
ಏನಿದು ಸೆಲೆಬಿ ಏವಿಯೇಷನ್..?
ಸೆಲೆಬಿ ಏವಿಯೇಷನ್ ಟರ್ಕಿಶ್ ಮೂಲದ ಬಹುರಾಷ್ಟ್ರೀಯ ಕಂಪನಿಯಾಗಿದ್ದು, ಇದು ವಿಮಾನ ನಿಲ್ದಾಣಗಳ ಗ್ರೌಂಡ್ ಹ್ಯಾಂಡ್ಲಿಂಗ್ ಆಪರೇಷನ್, ವಿಮಾನ ಲ್ಯಾಂಡ್ ಆಗಿ ಟ್ಯಾಕ್ಸಿ ವೇಗೆ ಬಂದ ನಂತರದ ಸೇವೆಗಳನ್ನು ಒದಗಿಸುತ್ತದೆ. ಅಲ್ಲದೆ ವಿಮಾನ ನಿಲ್ದಾಣದ ಇತರ ಸೇವೆಗಳನ್ನು ಒದಗಿಸುತ್ತದೆ. ಈ ಕಂಪನಿ ಟರ್ಕಿಯಲ್ಲಿ 1958 ರಲ್ಲಿ ಸ್ಥಾಪನೆಯಾಗಿದೆ. ಅಂದಿನಿಂದ ಈವರೆಗೆ ವಿಶ್ವದಾದ್ಯಂತ 70 ಸ್ಥಳಗಳಿಗೆ ತನ್ನ ಕಾರ್ಯಾಚರಣೆ ವಿಸ್ತರಿಸಿದೆ. ಗ್ರೌಂಡ್ ಹ್ಯಾಂಡ್ಲಿಂಗ್ ಆಪರೇಷನ್, ಸರಕು ಮತ್ತು ಗೋದಾಮಿನ ನಿರ್ವಹಣೆ ಮತ್ತು ಸಾಮಾನ್ಯ ವಾಯುಯಾನ ಬೆಂಬಲ ಸೇವೆಗಳನ್ನು ಒದಗಿಸುತ್ತಿದೆ.
ಇನ್ನೂ ಕಳೆದ ಮೇ 7 ಮತ್ತು 8 ರ ಮಧ್ಯರಾತ್ರಿಯಲ್ಲಿ, ಪಾಕಿಸ್ತಾನ ಸೇನೆಯು ಉತ್ತರ ಮತ್ತು ಪಶ್ಚಿಮ ಗಡಿಗಳಲ್ಲಿ ಭಾರತೀಯ ಮಿಲಿಟರಿ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಸುಮಾರು 300–400 ಡ್ರೋನ್‌ಗಳನ್ನು ಬಳಸಿತ್ತು. ಇದೀಗ ಡ್ರೋನ್‌ಗಳ ಅವಶೇಷಗಳ ಬಗ್ಗೆ ವಿಧಿ ವಿಜ್ಞಾನ ತನಿಖೆ ನಡೆಸಲಾಗುತ್ತಿದೆ. ಆರಂಭಿಕ ತನಿಖೆಯಲ್ಲಿ ಅವು ಟರ್ಕಿಶ್ ಆಸಿಸ್‌ಗಾರ್ಡ್ ಸೊಂಗರ್ ಡ್ರೋನ್‌ಗಳು ಎಂಬುದು ತಿಳಿದುಬಂದಿದೆ ಎಂದು ಕರ್ನಲ್ ಸೋಫಿಯಾ ಖುರೇಷಿ ಆಪರೇಷನ್ ಸಿಂಧೂರ್ ಕುರಿತು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಇನ್ನು ಪಾಕ್ ದಾಳಿ ನಡೆಸಿರುವ ಡ್ರೋನ್‌ಗಳನ್ನು ಭಾರತೀಯ ಸೇನೆ ಯಶಸ್ವಿಯಾಗಿ ಹೊಡೆದುರುಳಿಸಿತ್ತು. ಲೆಹ್ ನಿಂದ ಸರ್ ಕ್ರೀಕ್‌ವರೆಗಿನ 36 ಸ್ಥಳಗಳಲ್ಲಿನ ಮಿಲಿಟರಿ ಮೂಲಸೌಕರ್ಯಗಳನ್ನು ಗುರಿಯಾಗಿಸಲು ಪಾಕಿಸ್ತಾನ ಟರ್ಕಿಶ್ ನಿರ್ಮಿತ ಡ್ರೋನ್‌ಗಳನ್ನು ಬಳಸಿದೆ ಎಂದು ಸೇನೆ ತಿಳಿಸಿತ್ತು.
ಭಾರತದ ಸಹಾಯ ಪಡೆದಿದ್ದ ಟರ್ಕಿ..
ಪ್ರಮುಖವಾಗಿ ಕಳೆದ 2023ರ ಫೆಬ್ರವರಿ 6ರಂದು ಟರ್ಕಿಯ ಆಗ್ನೇಯ ಭಾಗ ಮತ್ತು ಸಿರಿಯಾದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಈ ಭೀಕರ ಭೂಕಂಪದಲ್ಲಿ 50,000ಕ್ಕೂ ಅಧಿಕ ಜನರು ಮೃತಪಟ್ಟಿದ್ದರು. ಜಗತ್ತಿನ ಮೊಟ್ಟ ಮೊದಲ ದೇಶವಾಗಿ ಈ ಸಂದರ್ಭದಲ್ಲಿ ಭಾರತ ಸರ್ಕಾರವು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ತಕ್ಷಣವೇ ಆಪರೇಷನ್ ದೋಸ್ತ್ ಅನ್ನು ಟರ್ಕಿಗಾಗಿ ಆರಂಭಿಸಿತ್ತು. ಭೂಕಂಪದ ಮಾಹಿತಿ ತಿಳಿಯುತ್ತಿದ್ದಂತೆಯೇ ಭಾರತೀಯ ವಾಯುಪಡೆಯ ಸಿ-17 ಗ್ಲೋಬ್‌ಮಾಸ್ಟರ್ ವಿಮಾನಗಳ ಮೂಲಕ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ಅಂದರೆ ಎನ್‌ಡಿಆರ್‌ಎಫ್ ತಂಡ, ವೈದ್ಯಕೀಯ ತಂಡಗಳು, ಔಷಧಿಗಳು, ಆಹಾರ ಸಾಮಗ್ರಿಗಳು ಮತ್ತು ತಾತ್ಕಾಲಿಕ ಆಸ್ಪತ್ರೆಗಳನ್ನು ಸಹ ಭಾರತದಿಂದ ಟರ್ಕಿಗೆ ರವಾನಿಸಲಾಗಿತ್ತು. ಅಲ್ಲದೆ ಈ ವೇಳೆ ಭಾರತ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿತ್ತು. ಆದರೆ ಇದನೆಲ್ಲ ಮರೆತು ಭಾರತ ಹಾಗೂ ಪಾಕ್ ಸಂಘರ್ಷದ ಸಮಯದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡುವ ಮೂಲಕ ತಮ್ಮ ನಿಷ್ಠೆ ಯಾವತ್ತಿದ್ದರೂ ಮುಸ್ಲಿಂ ರಾಷ್ಟ್ರಕ್ಕೆ ಎನ್ನುವುದನ್ನು ಕಂತ್ರಿ ಬುದ್ಧಿಯ ಟರ್ಕಿ ತೋರಿಸಿಕೊಟ್ಟಿತ್ತು.