ಬೆಂಗಳೂರು : ಭಾರತದಲ್ಲಿ ಆಗಬಹುದಾಗಿದ್ದ ಇನ್ನೊಂದು ಬೃಹತ್ ಅನಾಹುತ ತಪ್ಪಿಸಲಾಗಿದೆ. ಮಹತ್ವದ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್‌ಐಎ ನಿಷೇಧಿತ ಭಯೋತ್ಪಾದಕ ಸಂಘಟನೆ ಐಸಿಸ್‌ನ ಸ್ಲೀಪರ್ ಸೆಲ್ ನ ಇಬ್ಬರು ಭಯೋತ್ಪಾದಕರನ್ನು ಬಂಧಿಸಿದೆ. ಕಳೆದ 2023ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಸುಧಾರಿತ ಸ್ಫೋಟಕ ಸಾಧನಗಳ ಐಇಡಿ ತಯಾರಿಕೆ ಮತ್ತು ಪರೀಕ್ಷೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿತರನ್ನು ಅಬ್ದುಲ್ಲಾ ಫಯಾಜ್ ಶೇಖ್ ಮತ್ತು ತಲ್ಹಾ ಖಾನ್ ಎಂದು ಗುರುತಿಸಲಾಗಿದೆ. ಇಂಡೋನೇಷ್ಯಾದ ಜಕಾರ್ತಾದಿಂದ ಭಾರತಕ್ಕೆ ಹಿಂತಿರುಗಿದ್ದ ಉಗ್ರರನ್ನು ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ -2 ರಲ್ಲಿ ವಲಸೆ ಬ್ಯೂರೋ ಅಧಿಕಾರಿಗಳು ಬಂಧಿಸಿದ್ದಾರೆ.
ಆರೋಪಿಗಳ ಬಂಧನಕ್ಕೆ 6 ಲಕ್ಷ ಘೋಷಿಸಿದ್ದ ಎನ್‌ಐಎ..
ಇಬ್ಬರು ಆರೋಪಿಗಳು ಎರಡು ವರ್ಷಗಳಿಗೂ ಹೆಚ್ಚು ಕಾಲ ತಲೆಮರೆಸಿಕೊಂಡಿದ್ದರಲ್ಲದೆ, ಮುಂಬೈನ ಎನ್‌ಐಎ ವಿಶೇಷ ನ್ಯಾಯಾಲಯವು ಅವರ ವಿರುದ್ಧ ಜಾಮೀನು ರಹಿತ ವಾರಂಟ್‌ಗಳನ್ನು ಹೊರಡಿಸಿತ್ತು. ಕಳೆದ 2023ರಲ್ಲಿ ಪುಣೆಯಲ್ಲಿ ದಾಖಲಿಸಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಬೇಕಾಗಿದ್ದ ಇಬ್ಬರನ್ನು ಬಂಧಿಸಲಾಗಿದೆ.
ಇದರಲ್ಲಿ ಐಸಿಸ್‌ನ ಸ್ಲೀಪರ್ ಸೆಲ್‌ಗಳಿಂದ ಐಇಡಿಗಳನ್ನು ತಯಾರಿಸಲು ಮತ್ತು ಪರೀಕ್ಷಿಸಲು ಸಂಚು ರೂಪಿಸಲಾಗಿತ್ತು. ಈ ಪ್ರಕರಣದಲ್ಲಿ ಅಬ್ದುಲ್ಲಾ ಫಯಾಜ್ ಶೇಖ್ ಮತ್ತು ತಲ್ಹಾ ಖಾನ್ ಅವರನ್ನು ಪರಾರಿಯಾಗಿರುವ ಆರೋಪಿಗಳೆಂದು ತಿಳಿಸಲಾಗಿತ್ತು. ಆಗ ಅವರ ಸುಳಿವು ನೀಡಿ, ಬಂಧನಕ್ಕೆ ಸಹಾಯ ಮಾಡುವವರಿಗೆ ತಲಾ 3 ಲಕ್ಷ ರೂಪಾಯಿ ನಗದು ಬಹುಮಾನವನ್ನು ನೀಡುವುದಾಗಿ ಎನ್‌ಐಎ ಘೋಷಿಸಿತ್ತು. ಕಾನೂನುಬಾಹಿರ ಚಟುವಟಿಕೆಗಳು ತಡೆಗಟ್ಟುವಿಕೆ ಕಾಯ್ದೆ ಯುಎಪಿಎಯ ಸೆಕ್ಷನ್ 25ರ ಅಡಿಯಲ್ಲಿ ಇಬ್ಬರೂ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಎನ್‌ಐಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಮೊಸ್ಟ್ ವಾಂಟೆಡ್ ಉಗ್ರರ ಬಂಧನ..
ಇನ್ನೂ ತನಿಖೆಯ ವೇಳೆ, ಪುಣೆಯ ಕೊಂಡ್ವಾ ಪ್ರದೇಶದಲ್ಲಿ ಗುಪ್ತಚರ ಕಾರ್ಯಾಗಾರವನ್ನು ನಡೆಸಲಾಗಿದ್ದು, ಆ ಪ್ರದೇಶದಲ್ಲಿ ಐಇಡಿ ತಯಾರಿಕೆ, ಪರೀಕ್ಷೆ ಮತ್ತು ತರಬೇತಿ ಚಟುವಟಿಕೆಗಳು ನಡೆಯುತ್ತಿವೆ ಎಂದು ಗೊತ್ತಾಗಿದೆ. ಈ ಕಾರ್ಯಾಗಾರದಲ್ಲಿ ಅಬ್ದುಲ್ಲಾ ಫಯಾಜ್ ಶೇಖ್ ಅಂಗಡಿಯನ್ನು ಬಳಸಲಾಯಿತು. ಪ್ರಕರಣದಲ್ಲಿ 11 ಆರೋಪಿಗಳ ವಿರುದ್ಧ ಎನ್‌ಐಎ ಆರೋಪಪಟ್ಟಿ ಸಲ್ಲಿಸಿದ್ದು, ಅವರಲ್ಲಿ ಮೂವರು ಇನ್ನೂ ತಲೆಮರೆಸಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಬಂಧಿತರಾದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಉಗ್ರರಾದ ಅಬ್ದುಲ್ಲಾ ಫಯಾಜ್ ಶೇಖ್ ಮತ್ತು ತಲ್ಹಾ ಖಾನ್ ಅವರಲ್ಲದೆ, ಮೊಹಮ್ಮದ್ ಇಮ್ರಾನ್ ಖಾನ್, ಮೊಹಮ್ಮದ್ ಯೂನಸ್ ಸಾಕಿ, ಅಬ್ದುಲ್ ಖಾದಿರ್ ಪಠಾಣ್, ಸಿಮಾಬ್ ನಾಸಿರುದ್ದೀನ್ ಖಾಜಿ, ಜುಲ್ಫಿಕರ್ ಅಲಿ ಬರೋಡಾವಾಲಾ, ಶಾಮಿಲ್ ನಾಚನ್, ಅಖಿಫ್ ನಾಚನ್ ಮತ್ತು ಶಹನವಾಜ್ ಆಲಂ ಪ್ರಕರಣದ ಇತರ ಆರೋಪಿಗಳಾಗಿದ್ದಾರೆ ಎಂದು ರಾಷ್ಟ್ರೀಯ ತನಿಖಾ ದಳ ಹೇಳಿದೆ.
ಕೋಮು ಸೌಹಾರ್ದತೆ ಹಾಳು ಮಾಡುವ ಗುರಿ..
ಹಿಂಸಾಚಾರ ಮತ್ತು ಭಯೋತ್ಪಾದನೆಯ ಮೂಲಕ ದೇಶದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸುವ ಐಸಿಸ್ ಕಾರ್ಯಸೂಚಿಯನ್ನು ಮುಂದುವರಿಸಲು ಹಾಗೂ ಭಾರತ ಸರ್ಕಾರದ ವಿರುದ್ಧ ಪಿತೂರಿ ನಡೆಸುವ ಮೂಲಕ ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕದಡುವ ಗುರಿಯೊಂದಿಗೆ ಅವರು ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿದ್ದರು ಎಂದು ಎನ್‌ಐಎ ಹೇಳಿದೆ. ಇನ್ನೂ ಬಹಳ ದಿನಗಳಿಂದ ಜಕಾರ್ತದಲ್ಲಿ ಅಡಗಿದ್ದ ಈ ಉಗ್ರರು ಭಾರತದಲ್ಲಿ ಇನ್ನಷ್ಟು ಭಯೋತ್ಪಾದಕ ಕೃತ್ಯಗಳಿಗೆ ಸಿದ್ಧತೆ ನಡೆಸುತ್ತಿದ್ದರು. ಎನ್‌ಐಎಯ ಮಿಂಚಿನ ಕಾರ್ಯಾಚರಣೆಯಿಂದ ದೇಶದಲ್ಲಿ ಆಗಬಹುದಾಗಿದ್ದ ಅನಾಹುತಗಳು ತಪ್ಪಿದಂತಾಗಿವೆ.