ಹೆಚ್‌ಡಿಕೆ ಬಹಿರಂಗ ಕ್ಷಮೆಯಾಚನೆ

ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿಯವ್ರು, ಬಹಿರಂಗವಾಗಿ ಆದಿಚುಂಚನಗಿರಿ ಶ್ರೀಗಳ ಕ್ಷಮೆ ಕೇಳಿದ್ದಾರೆ. ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆ ನಾನು ನೀಡಿದ್ದ ಹೇಳಿಕೆಯಿಂದ, ನಿರ್ಮಲಾನಂದನಾಥ ಶ್ರೀಗಳಿಗೆ ನೋವಾಗಿದ್ದರೆ, ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ರು.

ಮಂಡ್ಯದ ವಿಸಿ ಫಾರಂನ ಕೃಷಿ ಮೇಳ ಕಾರ್ಯಕ್ರಮದಲ್ಲಿ, ಹೆಚ್‌ಡಿಕೆ ಮಾತನಾಡಿದ್ರು. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರಷ್ಟು ವಿದ್ಯಾವಂತರಾದ ಮತ್ತೊಬ್ಬ ಸ್ವಾಮೀಜಿಗಳು ಇಲ್ಲ. ಅವರಿಗೆ ಅಗೌರವ ಆಗಬಾರದು ಎಂಬ ದೃಷ್ಟಿಯಿಂದ, ಶ್ರೀಗಳನ್ನು ಬಳಕೆ ಮಾಡಿಕೊಳ್ಳಬಾರದು ಎಂದಿದ್ದೆ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳು ಸಮಾಜದ ಗೌರವ ಉಳಿಸಲಿಕ್ಕೆ ಬೀದಿಗೆ ಬಂದವರು.

ಅವರಿಗೆ ದೇವೇಗೌಡರು ಸಿಎಂ ಆಗಲಿ ಎನ್ನುವುದು ಮನಸ್ಸಿನಲ್ಲಿತ್ತು. ನನ್ನನ್ನು ಕಂಡರೂ ಅವರಿಗೆ ತುಂಬಾ ವಾತ್ಸಲ್ಯವಿತ್ತು. ನಮ್ಮ ಹಾಗೂ ದೊಡ್ಡ ಸ್ವಾಮೀಜಿಗಳ ಸಂಬಂಧ ಹಲವರಿಗೆ ಗೊತ್ತಿಲ್ಲ. ನನ್ನಿಂದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳಿಗೆ ಅಪಚಾರವಾಗಿದ್ದರೆ, ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೇನೆ. ಪ್ರಸಕ್ತ ರಾಜಕೀಯ ವಿದ್ಯಮಾನಗಳು ಏನು ನಡೆಯುತ್ತಿವೆ ಎಂದು ಎಲ್ಲರಿಗೂ ಗೊತ್ತು.

ಈ‌ ಬಗ್ಗೆ ನಮ್ಮ ನಿರ್ಮಲಾನಂದನಾಥ ಶ್ರೀಗಳು ಮಾತನಾಡಿದ್ದಾರೆ. ಅವರು ಮಾತಾಡಿದ್ದಕ್ಕೆ ಇನ್ಯಾರೋ ಮಾತಾಡಿದ್ದಾರೆ. ಸ್ವಾಮೀಜಿಗಳು ಅವರದ್ದೇ ಆದ ಕಲ್ಪನೆಗಳನ್ನು ಹೊಂದಿರುತ್ತಾರೆ. ಇಂತಹ ಸ್ವಾಮೀಜಿಗಳು ಇಲ್ಲಿಗೆ ಬರಬಾರದು. ಅವರಿಗೆ ಅಗೌರವ ಆಗಬಾರದು ಎಂಬ ದೃಷ್ಟಿಯಿಂದ ಬಳಕೆ ಮಾಡಿಕೊಳ್ಳಬಾರದು ಎಂದು ಹೇಳಿದ್ದಾಗಿ, ಹೆಚ್‌ಡಿಕೆ ಸ್ಪಷ್ಟನೆ ಕೊಟ್ಟಿದ್ದಾರೆ.

About The Author