ರೊಟ್ಟಿಗವಾಡದಲ್ಲಿ ಇನ್ನೂ ಜೀವಂತವಾಗಿದೆ ಅಸ್ಪೃಶ್ಯತೆ ಅನ್ನೋ ಅನಿಷ್ಠ ಪದ್ಧತಿ

Dharwad News: ಧಾರವಾಡ: ಅಸ್ಪೃಶ್ಯತೆ ತೊಡೆದು ಹಾಕಲು ಕಾನೂನು ಇದ್ದರೂ ದೇಶದಲ್ಲಿ ಈ ಕೆಟ್ಟ ಪದ್ದತಿಯನ್ನು ಸಂಪೂರ್ಣವಾಗಿ ತೊಡೆದುಹಾಕುವಲ್ಲಿ ಆಡಳಿತ ಯಂತ್ರ ವಿಫಲವಾಗಿದೆ. ಅದಾಗ್ಯೂ, ಕರ್ನಾಟಕದಲ್ಲಿ ವಿನಯ ಸಾಮರಾಸ್ಯ ಯೋಜನೆ ಜಾರಿಯಾದರೂ ಧಾರವಾಡ ಜಿಲ್ಲೆಯಲ್ಲಿ ಅಸ್ಪೃಶ್ಯತೆ ಪ್ರಕರಣ ಬೆಳಕಿಗೆ ಬಂದಿದೆ.

ಆಧುನಿಕವಾಗಿ ಎಷ್ಟೇ ಮುಂದುವರಿದಿದ್ದರೂ ಅಸ್ಪೃಶ್ಯತೆ ಅನ್ನೋ ಅನಿಷ್ಠ ಪದ್ಧತಿ ಕುಂದಗೋಳ ತಾಲೂಕಿನ ರೊಟ್ಟಿಗವಾಡ ಗ್ರಾಮದಲ್ಲಿ ಜೀವಂತವಾಗಿದೆ. ಹುಬ್ಬಳ್ಳಿಯಿಂದ ಕೇವಲ 30 ಕಿಮೀ ದೂರದಲ್ಲಿರುವ ರೊಟ್ಟಿಗವಾಡ ಗ್ರಾಮದಲ್ಲಿ ದಲಿತರಿಗೆ ದೇವಸ್ಥಾನ, ಕ್ಷೌರದ ಅಂಗಡಿ, ಹೋಟೆಲ್‌ಗಳಿಗೆ ಪ್ರವೇಶವಿಲ್ಲ. ಇವತ್ತಿಗೂ ಕೂಡ ದಲಿತರು ಬೊಗಸೆಯಲ್ಲಿ ನೀರು ಕೊಡುವ ಪದ್ಧತಿ ಈ ಭಾಗದಲ್ಲಿದೆ.

ಎಲ್ಲಾ ಜನರು ದಲಿತರಿಗೆ ದೂರದಿಂದಲೇ ನೀರನ್ನು ಎತ್ತಿ ಹಾಕುತ್ತಾರೆ. ಅದನ್ನೇ ದಲಿತರು ಬೊಗಸೆಯಲ್ಲಿ ಕುಡಿಯುತ್ತಾರೆ. ಮೇಲ್ವರ್ಗದ ಹೋಟೆಲ್‌ನಲ್ಲಿ ದಲಿತರು ನೀರು ಮುಟ್ಟೋ ಹಾಗಿಲ್ಲ. ಅಲ್ಲದೇ ಗ್ರಾಮದಲ್ಲಿ ಕ್ಷೌರ ಅಂಗಡಿಯಲ್ಲಿ ದಲಿತರಿಗೆ ಕ್ಷೌರ ಮಾಡುವುದಿಲ್ಲ. ಇದರಿಂದ ರೋಸಿ ಹೋಗಿರುವ ದಲಿತರು ಈ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ.

ವಿಡಿಯೋದಲ್ಲಿ, ಕ್ಷೌರದ ಅಂಗಡಿಯ ಮಾಲೀಕ ದಲಿತ ವ್ಯಕ್ತಿಯೋರ್ವನಿಗೆ ಕ್ಷೌರ ಮಾಡದೇ, ಊರಿನ ದೊಡ್ಡವರು ದಲಿತರ ಕ್ಷೌರ ಮಾಡುವುದು ಬೇಡಾ ಎಂದಿದ್ದಾರೆ. ಅವರು ಹೇಳಿದರೇ ನಾವು ಕ್ಷೌರ ಮಾಡುವುದಕ್ಕೆ ಯಾವುದೇ ಅಭ್ಯಂತರವಿಲ್ಲ. ಅವರು ಹೇಳಲಿ. ಆಮೇಲೆ ನೋಡೋಣಾ ಎಂದು ಹೇಳಿದ್ದಾರೆ. ಈ ವಿಡಿಯೋ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಘಟನೆಯ ಕುರಿತು ಹುಬ್ಬಳ್ಳಿಯಲ್ಲಿ ರೊಟ್ಟಿಗವಾಡ ಗ್ರಾಮಸ್ಥರು ಆಗಮಿಸಿ ಮಾಧ್ಯಮದ ಮುಂದೆ ತಮ್ಮ ಅಳಲು ತೊಡಿಕೊಂಡಿದ್ದಾರೆ. ರೊಟ್ಟಿಗವಾಡ ಗ್ರಾಮದಲ್ಲಿ 40 ದಲಿತ ಕುಟುಂಬಗಳಿದ್ದು, 400 ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದೇವೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಸಹ ನಮಗೆ ಸಮಾನತೆ ಎಂಬುದು ಗೊತ್ತಿಲ್ಲ. ಸರ್ಕಾರದ ಸವಲತ್ತುಗಳು ದೊರೆತ್ತಿಲ್ಲ, ಗ್ರಾಮದಲ್ಲಿ ದೇವಸ್ಥಾನಗಳಿಗೆ ನಮಗೆ ಪ್ರವೇಶವಿಲ್ಲ, ಕ್ಷೌರ ಮಾಡಿಸಿದ ಕ್ಷೌರದ ಅಂಗಡಿಗೆ ಹೋದರೇ ನಮಗೆ ಕ್ಷೌರ ಮಾಡುವುದಿಲ್ಲ, ಹೊಟೆಲ್’ಗಳಲ್ಲಿ ನಮಗೆ ಪ್ರವೇಶಕ್ಕೆ ನಿರ್ಬಂಧವಿದೆ. ಈ ಬಗ್ಗೆ ತಾಲೂಕು ಆಡಳಿತಕ್ಕೆ ತಿಳಿಸಿದರು ನಮಗೆ ನ್ಯಾಯ ಸಿಕ್ಕಿಲ್ಲ, ಹೀಗಾಗಿ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು, ಸಮಾಜ ಕಲ್ಯಾಣ ಇಲಾಖೆಯ ಸಚಿವರು, ಮುಖ್ಯಮಂತ್ರಿಗಳು ನಮಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಒತ್ತಾಯಿಸಿದ್ದಾರೆ.

ಮಲಗಿದ್ದವರ ಮೇಲೆ ಬಿದ್ದ ಮೇಲ್ಛಾವಣಿ: 7 ಮಂದಿಗೆ ಗಾಯ, ಓರ್ವ ಬಾಲಕಿಯ ಸ್ಥಿತಿ ಗಂಭೀರ

‘ಮುಟ್ಟು ಅನ್ನೋದು ಅಂಗವೈಕಲ್ಯವಲ್ಲ. ಹೆಣ್ಣು ಮಕ್ಕಳಿಗೆ ವೇತನ ಸಹಿತ ರಜೆಯ ಅಗತ್ಯವಿಲ್ಲ’

‘ಹಿಂದಿನ ಕಹಿ ನೆನಪು ಇನ್ನೂ ಇದೆ. ಇದು ಸರ್ಕಾರಕ್ಕೆ ಕೆಟ್ಟ ಹೆಸರು’

About The Author