International News: ಭಾರತವನ್ನ ಸುದೀರ್ಘ ವರ್ಷಗಳ ಕಾಲ ಆಳ್ವಿಕೆ ಮಾಡಿದ್ದ ಆಂಗ್ಲರಲ್ಲಿ ಈಗ ಧಾರ್ಮಿಕತೆಯ ವಿಚಾರಕ್ಕೆ ಭಯ ಶುರುವಾಗಿದೆ. ನಮ್ಮ ರಾಷ್ಟ್ರ ಮುಸ್ಲಿಂ ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವ ದಿನಗಳು ದೂರವಿಲ್ಲ ಎಂದು ಅಲ್ಲಿನ ಮಾಜಿ ಗೃಹ ಕಾರ್ಯದರ್ಶಿ ಆತಂಕ ವ್ಯಕ್ತಪಡಿಸಿದ್ಯಾಕೆ..? ಮೇಕ್ ಬ್ರಿಟನ್ ಗ್ರೇಟ್ ಅಗೇನ್ ಅಭಿಯಾನಕ್ಕೆ ಅಲ್ಲಿ ಕರೆ ನೀಡಿದ್ಯಾಕೆ..? ಕ್ರೈಸ್ತರ ನಾಡಿನಲ್ಲಿ ಜಾರಿಯಾಗುತ್ತಾ ಷರಿಯಾ ಕಾನೂನು.? ಅಮೇರಿಕಾ ಉಪಾಧ್ಯಕ್ಷ ಜೆ ಡಿ ವ್ಯಾನ್ಸ್ ಹೇಳಿಕೆ ಬ್ರಿಟನ್‌ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ಯಾಕೆ..? ಬ್ರಿಟನ್‌ನಲ್ಲಿ ಮೂಲೆ ಗುಂಪಾಯ್ತಾ ಅಲ್ಲಿನ ಕಾನೂನು ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
ಬ್ರಿಟನ್..2011ರ ಜನಗಣತಿಯ ಪ್ರಕಾರ ಶೇ 59.30 ರಷ್ಟು ಕ್ರಿಶ್ಚಿಯನ್ನರೇ ಇರುವ ದೇಶವಾಗಿದೆ. ಅಲ್ದೆ ಕ್ರಿಶ್ಚಿಯನ್ನ ಧರ್ಮವೇ ಈ ದೇಶದ ಅತೀ ದೊಡ್ಡ ಧರ್ಮವಾಗಿದೆ. ಇನ್ನೂ ಇಸ್ಲಾಂ ಜನಸಂಖ್ಯೆ ಎರಡನೇಯ ಸ್ಥಾನದಲ್ಲಿದೆ. 20ನೇ ಶತಮಾನದಲ್ಲಿ ದಕ್ಷಿಣ ಏಷ್ಯಾದಿಂದ ಆಗಿರುವ ಸಾಮೂಹಿಕ ವಲಸೆಯು ಇಲ್ಲಿ ಕ್ರಿಸ್ಚಿಯನ್ನೇತರ ಧರ್ಮಗಳು ಅಂದರೆ ಹಿಂದೂ, ಮುಸ್ಲಿಂ ಹಾಗೂ ಸಿಖ್ ಸೇರಿದಂತೆ ಹಲವು ಧರ್ಮಗಳು ಉದಯವಾಗಲು ಕಾರಣವಾಗುತ್ತೆ. ಇವುಗಳನ್ನ ಬ್ರಿಟನ್ನಿನ ಅಧಿಕೃತ ಧರ್ಮಗಳೆಂದು ಪರಿಗಣಿಸಲಾಗಿಲ್ಲ. ಆದರೆ ಇಸ್ಲಾಂ ಜನರ ಹಣಕಾಸಿನ ವ್ಯವಹಾರಕ್ಕೆ ಇದು ಪ್ರಮುಖ ಕೇಂದ್ರವಾಗಿದೆ. ಅಲ್ದೆ ಬ್ರಿಟನ್‌ನ ಆಚೆಗೂ ಅಂದರೆ ಪ್ರಮುಖವಾಗಿ ಮುಸ್ಲಿಂ ರಾಷ್ಟ್ರಗಳೊಂದಿಗೂ ಸಹ ಇವರ ಸಂಬಂಧವಿದೆ.
ಇದೇ ವಿಚಾರದ ಕುರಿತು ಮೇಲಿಂದ ಮೇಲೆ ಬ್ರಿಟನ್‌ನಲ್ಲಿ ಚರ್ಚೆಗಳಾಗುತ್ತಿದ್ದವು. ಆದರೆ ಈ ವಿಷಯದ ಬಗ್ಗೆ ಅಲ್ಲಿನ ಸರ್ಕಾರದ ಮಾಜಿ ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರೆವರ್‌ಮನ್ ಆತಂಕ ವ್ಯಕ್ತಪಡಿಸಿ ನೀಡಿರುವ ಹೇಳಿಕೆ ಇದೀಗ ಅಲ್ಲಿನ ಸರ್ಕಾರವು ತನ್ನ ಭದ್ರತೆಯ ಜೊತೆಗೆ ಸಂಭಾವ್ಯ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸುವಂತಾಗಿದೆ.
ಇನ್ನೂ ಇರಾನ್‌ನಂತೆ ಪರಮಾಣು ಶಸ್ತ್ರಾಸ್ತ್ರಗಳನ್ನ ಹೊಂದಿರುವ ಇಸ್ಲಾಮಿಸ್ಟ್ ರಾಷ್ಟ್ರವಾಗಿ ಬ್ರಿಟನ್ ಬದಲಾಗಬಹುದು. ಬ್ರಿಟನ್ ಅನ್ನು ಮತ್ತೊಮ್ಮೆ ಗ್ರೇಟ್ ಬ್ರಿಟನ್ ಮಾಡುವ ಅಗತ್ಯತೆ ನಮ್ಮೆಲ್ಲರ ಮೇಲಿದೆ. ಆದ್ದರಿಂದ ಮುಸ್ಲಿಂ ಮೂಲಭೂತವಾದ ನಮ್ಮ ರಾಷ್ಟ್ರದಲ್ಲಿ ನೆಲೆಯೂರಲು ಬಿಡಬಾರದು ಎಂದು ಸುಯೆಲ್ಲಾ ಬ್ರೆವರ್‌ಮನ್ಎಚ್ಚರಿಸಿದ್ದಾರೆ. ಈಗಿನ ದಿನಗಳಲ್ಲಿ ಬ್ರಿಟನ್ ದೇಶವು ದುರ್ಬಲ ನಾಯಕತ್ವದಿಂದ ಕೂಡಿದೆ, ಜಾಗತಿಕ ಮಟ್ಟದಲ್ಲಿಯೂ ಸಹ ಸಂಬಂಧಗಳನ್ನ ಕಡಿದುಕೊಂಡಿರುವ ದೇಶವಾಗಿದೆ. ಏನಾದರೂ ಯುನೈಟೆಡ್ ಕಿಂಗ್ ಡಮ್ ಅಂದ್ರೆ ಯುಕೆಯನ್ನ ಮುಸ್ಲಿಂ ಮೂಲಭೂತವಾದಿಗಳ ಕೈಗೆ ಕೊಟ್ಟರೇ, ನಮ್ಮ ಕಾನೂನು ವ್ಯವಸ್ಥೆಯು ಷರಿಯಾ ಕಾನೂನಿಗೆ ಬದಲಾಗುತ್ತದೆ. ಅಲ್ದೆ ಇರಾನ್ ನಂತರದ ಪರಮಾಣು ಸಾಮರ್ಥ್ಯವುಳ್ಳ ಮುಸ್ಲಿಂ ರಾಷ್ಟ್ರವಾಗುವತ್ತ ಬ್ರಿಟನ್ ಹೆಜ್ಜೆ ಹಾಕುತ್ತೆ ಎಂದು ಕಳವಳ ವ್ಯಕ್ತಪಡಿಸಿದ್ದರು.
ಈಗ ನಾವು ಎಚ್ಚರಿಕೆ ವಹಿಸದಿದ್ದರೇ ಮುಂದಿನ 20 ವರ್ಷಗಳಲ್ಲಿ ರಷ್ಯಾ ಅಥವಾ ಚೀನಾದ ಬದಲಾಗಿ ಅಮೆರಿಕಾಗೆ ನಾವೇ ಅತಿ ದೊಡ್ಡ ವೈರಿ ರಾಷ್ಟ್ರವಾಗುತ್ತೇವೆ. ಇನ್ನೂ ನಮ್ಮಲ್ಲಿನ ಸಾಮೂಹಿಕ ವಲಸೆಯು ನಮ್ಮ ದೇಶದ ಜನರ ಜೀವನ ಶೈಲಿ ಮೇಲೆ, ಹಾಗೂ ಪಾಶ್ಚಿಮಾತ್ಯ ನಾಗರಿಕತೆಯ ಅಸ್ತಿತ್ವದ ಮೇಲೆಯೂ ಬೆದರಿಕೆ ಹಾಕಿದಂತಾಗುತ್ತೆ. ಅಲ್ದೆ ಈ ವಿಚಾರದಲ್ಲಿ ಅಮೇರಿಕಾ ನೂತನ ಉಪಾಧ್ಯಕ್ಷ ಜೆ ಡಿ ವ್ಯಾನ್ಸ್ ಮಾತು ನಿಜವಾಗುತ್ತೆ ಎಂದು ಸುಯೆಲ್ಲಾ ಬ್ರೆವರ್‌ಮನ್ ವಾರ್ನ್ ಮಾಡಿದ್ದರು. ಅಲ್ದೆ ಈಗ ಸದ್ಯಕ್ಕೆ ಯುಕೆನಲ್ಲಿ ಭಾರತದ ಅಳಿಯ ರಿಷಿ ಸುನಕ್ ನೇತೃತ್ವದ ಕನ್ಸರ್ವೇಟಿವ್ ಸರ್ಕಾರ ಅಧಿಕಾರ ಕಳೆದುಕೊಂಡಿದೆ. ಜಾತ್ಯತೀತ ನಿಲುವುಗಳನ್ನೇ ಪ್ರತಿಪಾದಿಸುತ್ತ ಬಂದಿರುವ ನಾಯಕ ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಾರ್ಟಿ ಆಡಳಿತ ನಡೆಯುತ್ತಿದೆ.
ಹೇಳಿ ಕೇಳಿ ಇದೂ ಸೆಕ್ಯುಲರ್ ಗೌರ್ವನಮೆಂಟ್… ಈ ರೀತಿಯ ವಿಚಾರಗಳನ್ನ ಅದು ಗಂಭೀರವಾಗಿ ಪರಿಗಣಿಸದೇ ಇರುವ ಪರಿಣಾಮವೇ ಇಂದಿನ ಈ ಧಾರ್ಮಿಕ ಸಂಘರ್ಷಕ್ಕೆ ಕಾರಣವಾಗಿದೆ ಅನ್ನೋದು ಗುಟ್ಟಾಗಿ ಉಳಿದಿಲ್ಲ. ಇನ್ನೂ ಈ ಬ್ರಿಟನ್ ಇಂಗ್ಲೇಂಡ್, ವೇಲ್ಸ್, ನಾರ್ಥ್ ಐರ್ಲೆಂಡ್ ಹಾಗೂ ಸ್ಕಾಟ್ಲೆಂಡ್‌ಗಳನ್ನ ಒಳಗೊಂಡಿರುವ ಭೂಪ್ರದೇಶವಾಗಿದೆ. ಇದೇ ಕಾರಣಕ್ಕೆ ಯುಕೆ ಅಂದ್ರೆ ಯುನೈಟೇಡ್ ಕಿಂಗ್‌ಡಮ್ ಅಂತ ಕರೆಯಲಾಗುತ್ತೆ. ದ್ವೀಪರಾಷ್ಟ್ರದ ಈ ಎಲ್ಲ ಕಡೆಗಳಲ್ಲೂ ಇಸ್ಲಾಂ ಧರ್ಮ ತನ್ನ ಅಧಿಪತ್ಯ ಸ್ಥಾಪಸಬಾರದು, ಇದರಿಂದ ಮೂಲ ಧರ್ಮದ ಅವನತಿಗೆ ಕಾರಣ ಆಗಬಾರದು ಅಂತಲೇ ಬ್ರೆವರ್‌ಮನ್ ಮೇಕ್ ಬ್ರಿಟನ್ ಗ್ರೇಟ್ ಅಗೇನ್ ಅನ್ನೋ ಅಭಿಯಾನಕ್ಕೆ ಕರೆ ನೀಡಿದ್ದಾರೆ ಅನ್ನೋದು ಸ್ಪಷ್ಟವಾಗುತ್ತೆ.
ಯಾರಿವರು ಸುಯೆಲ್ಲಾ ಬ್ರೆವರ್‌ಮನ್? ಹಿನ್ನೆಲೆ ಏನು..?
ಎರಡು ಮಕ್ಕಳ ತಾಯಿಯಾಗಿರುವ ಸುಯೆಲ್ಲಾ ಹಿಂದೂವಾಗಿದ್ದಾರೆ. ಇನ್ನೂ ತಾಯಿ ಉಮಾ ತಮಿಳು ಹಿನ್ನೆಲೆಯವರು ಹಾಗೂ ಗೋವಾ ಮೂಲದ ತಂದೆ ಕ್ರಿಸ್ಟಿ ಫರ್ನಾಂಡಿಸ್ ದಂಪತಿಯ ಮಗಳಾಗಿ ಲಂಡನ್‌ನಲ್ಲಿ ಜನಿಸಿದ್ದಾರೆ. ಸುಯೆಲ್ಲಾ ತಾಯಿ ಮಾರಿಷಸ್‌ನಿಂದ ಇಂಗ್ಲೆಂಡ್‌ಗೆ ವಲಸೆ ಹೋಗಿದ್ದವರು, ಇನ್ನೂ ತಂದೆ 1960 ರ ದಶಕದಲ್ಲಿ ಕೀನ್ಯಾದಿಂದ ವಲಸೆ ಬಂದರು. ಸುಯೆಲ್ಲಾ ಬ್ರಾವರ್‌ಮನ್, ನೀ ಫೆರ್ನಾಂಡಿಸ್ ಆಗ್ನೇಯ ಇಂಗ್ಲೆಂಡ್‌ನ ಫರೆಹ್ಯಾಮ್‌ನ ಸಂಸತ್ತಿನ ಕನ್ಸರ್ವೇಟಿವ್ ಪಕ್ಷದ ಸದಸ್ಯರಾಗಿದ್ದಾರೆ, ಅಲ್ದೆ ಬ್ರಿಟನ್ ಸರ್ಕಾರದ ಗೃಹ ಕಾರ್ಯದರ್ಶಿಯಾಗಿ ಕ್ಯಾಬಿನೆಟ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ. ತಾನು ಬ್ರಿಟನ್ ಅನ್ನು ಪ್ರೀತಿಸುತ್ತೇನೆ. ನನ್ನಬದುಕಿನಲ್ಲಿ ಈ ದೇಶ ಭರವಸೆಯನ್ನು ನೀಡಿದೆ. ಇದು ನನಗೆ ಭದ್ರತೆಯ ಜೊತೆಗೆ ಈ ದೇಶವು ಉತ್ತಮ ಅವಕಾಶಗಳನ್ನ ಒದಗಿಸುವುದೆ.
ಇಲ್ಲಿ ನಾನು ರಾಜಕೀಯಕ್ಕೆ ಬಂದು ಅನಿರೀಕ್ಷಿತ ಸಾಧನೆಗೆ ಈ ದೇಶ ಕಾರಣವಾಗಿದೆ ಎಂದು ಕಳೆದ ತಮ್ಮ ಚುನಾವಣಾ ಪ್ರಚಾರದ ವೇಳೆ ಬ್ರೆವರ್‌ಮನ್ ತಮ್ಮ ಬ್ರಿಟನ್ ಪ್ರೇಮವನ್ನ ಮೆರೆದಿದ್ದರು. ಅಲ್ದೆ ಈ ಹಿಂದೆ ಬ್ರಿಟನ್ ಪ್ರಧಾನಿಯಾಗಿದ್ದ ಭಾರತದ ಅಳಿಯ ರಿಷಿ ಸುನಾಕ್ ಸರ್ಕಾರದಲ್ಲಿ ಗೃಹ ಇಲಾಖೆ ಕಾರ್ಯದರ್ಶಿಯಾಗಿ ನೇಮಕವಾಗಿದ್ದ ಸುಯೆಲ್ಲಾ ಬ್ರೆವರ್‌ಮನ್ ಅವರು ಲಂಡನ್ ಪೊಲೀಸರು ಫೆಲಸ್ತೀನಿನ ಪರ ಪಕ್ಷಪಾತ ನೀತಿಯನ್ನ ಹೊಂದಿದ್ದಾರೆಂದು ಆರೋಪಿಸಿ ಬರೆದ ಲೇಖನ ತೀವ್ರ ವಿವಾದ ಸ್ವರೂಪ ಪಡೆದುಕೊಂಡಿತ್ತು. ಇದೇ ಕಾರಣಕ್ಕೆ ಅವರು ತಮ್ಮ ಸ್ಥಾನವನ್ನ ತೊರೆಯಬೇಕಾಗಿ ಬಂತು. ಇನ್ನೂ ಈ ಬ್ರೆವರ್‌ಮನ್ ಕ್ಯಾಬಿನೆಟ್ ಸ್ಥಾನವನ್ನ ಮಧ್ಯದಲ್ಲಿಯೇ ತೊರೆದಿರುವುದು ಎರಡನೇ ಬಾರಿ ಅನ್ನೋದು ಇಂಟ್ರೆಸ್ಟಿಂಗ್..
ಬ್ರಿಟನ್ ಬಗ್ಗೆ ಅಮೇರಿಕಾದ ವ್ಯಾನ್ಸ್ ಹೇಳಿದ್ದೇನು..?
ಪರಮಾಣು ಶಸ್ತ್ರಾಸ್ತ್ರಗಳನ್ನ ಪಡೆಯುವ ಮೊದಲ ದೇಶ ಯಾವುದು? ಅದು ಬಹುಶಃ ಇರಾನ್ ಆಗಬಹುದು, ನಂತರ ಪಾಕಿಸ್ತಾನ ಇರಬಹದು ಅದರ ಬಳಿಕ ಅಂತಿಮವಾಗಿ ಯುಕೆ ಅಂದ್ರೆ ಬ್ರಿಟನ್ ಇಸ್ಲಾಮಿಕ್ ರಾಷ್ಟ್ರ ಆಗಲೂಬಹುದು ಅಂತ ನಾವು ತೀರ್ಮಾನಿಸಿದ್ದೇವೆ ಎಂದು ತಮ್ಮ ಚುನಾವಣಾ ಪ್ರಚಾರದ ಸಭೆಯೊಂದರಲ್ಲಿ ಇತ್ತೀಚೆಗೆ ಅಮೇರಿಕಾದ ನೂತನ ಉಪಾಧ್ಯಕ್ಷ ಜೆ ಡಿ ವ್ಯಾನ್ಸ್ ವ್ಯಾಖಾನಿಸಿದ್ದರು. ಈ ರೀತಿಯ ಬೆಳವಣಿಗೆಯು ಜಾಗತಿಕ ಮಟ್ಟದಲ್ಲಿ ಪರಮಾಣು ಬಳಕೆ ವಿಶ್ವದ ದೊಡ್ಡ ಅಪಾಯಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದ್ದರು. ಆದರೆ ಈ ನಾಯಕರ ಹೇಳಿಕೆಗಳಲ್ಲೂ ಸಹ ವಾಸ್ತವಾಂಶ ಕಂಡು ಬರುತ್ತೆ. ಯಾಕಂದ್ರೆ ಯುರೋಪಿನ ಪಶ್ಚಿಮ ಹಾಗೂ ಉತ್ತರ ಸೇರಿದಂತೆ ಹೆಚ್ಚಿನ ಭಾಗಗಳಲ್ಲಿ ವಲಸಿಗ ಮುಸ್ಲಿಂ ಜನರ ಸಂಖ್ಯೆಯು ವ್ಯಾಪಕವಾಗಿದೆ. ಈ ಹಿನ್ನೆಲೆಯಲ್ಲಿ ಏರಿಕೆಯಾಗುತ್ತಿರುವ ಮುಸ್ಲಿಂ ಸಂಪ್ರದಾಯದ ಕಾರಣಕ್ಕಾಗಿ ಇದೊಂದು ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿಯೂ ಇಸ್ಲಾಮಿಕ್ ರಾಷ್ಟ್ರವಾಗುವತ್ತ ಸಾಗುತ್ತಿದೆ. ಇದು ಈಗ ಕ್ರಿಶ್ಚಿಯನ್ ಪಾರುಪತ್ಯದ ರಾಷ್ಟ್ರದಲ್ಲಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
1982ರಲ್ಲಿ ಬ್ರಿಟನ್‌ನಲ್ಲಿ ಪ್ರಾರಂಭವಾಗಿರುವ ಷರಿಯಾ ಕಾನೂನು ಇದೀಗ ಆ ದೇಶವನ್ನ ತಲ್ಲಣಗೊಳಿಸಿದೆ. ಎಸ್… ಅತಿ ಹೆಚ್ಚು ಕ್ರಿಶ್ಚಿಯನ್ ಜನರನ್ನೇ ಹೊಂದಿರುವ ಈ ಬ್ರಿಟನ್‌ನಲ್ಲಿ ಕ್ರಿಮಿನಲ್ ಪ್ರಕರಣಗಳಲ್ಲಿ ಸ್ಥಳೀಯ ಕಾನೂನನ್ನ ಫಾಲೋ ಮಾಡಿದರೆ, ಇನ್ನುಳಿದ ಪ್ರಕರಣಗಳಲ್ಲಿ ಅವರು ನೆಲದ ಕಾನೂನನ್ನ ತಿರಸ್ಕರಿಸಿ ಷರಿಯಾ ಲಾ ಅನುಸರಿಸುತ್ತಿದ್ದಾರೆ. ಅಲ್ದೆ ಈಗಾಗಲೇ ನಿಮಗೆ ಗೊತ್ತಿರುವ ಹಾಗೆ ಈ ಷರಿಯಾ ಲಾ ನಲ್ಲಿ ಮುಖ್ಯವಾಗಿ ಆಸ್ತಿ, ಕೌಟುಂಬಿಕ ವಿಚಾರಗಳಿಗೆ ಸಂಬಂಧಿಸಿದ ರೂಲ್ಸ್‌ಗಳೇ ಹೆಚ್ಚಾಗಿವೆ. ಅದರಲ್ಲೂ ನಮ್ಮ ಭಾರತದಲ್ಲಿ ಬ್ಯಾನ್ ಆಗಿರುವ ತ್ರಿವಳಿ ತಲಾಖ್ ಅಲ್ಲಿ ಈಗಲೂ ಸಹ ಚಾಲ್ತಿಯಲ್ಲಿದೆ. ಇದರಿಂದ ಸುಲಭವಾಗಿ ಪತಿಯು ತನ್ನ ಪತ್ನಿಗೆ ವಿವಾಹ ವಿಚ್ಚೇದನವನ್ನ ಯಾವುದೇ ಜೀವನಾಂಶವಿಲ್ಲದೆ ನೀಡಲು ಅವಕಾಶವಿದೆ. ಅಲ್ದೆ ನಿಖಾ ಹಲಾಲ್ ಅಂದ್ರೆ ಬಹುಪತ್ನಿತ್ವ ಪದ್ದತಿಗೆ ಈ ಕಾನೂನಿನಲ್ಲಿ ಅವಕಾಶವಿದೆ. ಇನ್ನೂ ಕಬೂಲ್ ಅಂದ್ರೆ ಮಹಿಳೆಯು ಮದುವೆಗೆ ಒಪ್ಪಿಗೆ ಸೂಚಿಸಿದಂತೆ. ಆದರೆ ನಾವಿಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಎಲ್ಲ ನಿಯಮಗಳು ಮಹಿಳಾ ವಿರೋಧಿ ನೀತಿಗಳಾಗಿವೆ. ಈ ಷರಿಯಾ ಕಾನೂನು ಇದೀಗ ಬ್ರಿಟನ್ ತುಂಬ ವ್ಯಾಪಕವಾಗಿ ಹರಡುತ್ತಿದ್ದು, ಇದರಿಂದ ಕ್ರೈಸ್ತರಲ್ಲಿ ಆತಂಕ ಮನೆ ಮಾಡಿದೆ.
ಇನ್ನೂ ಕಾನೂನು ಬದ್ಧವಾಗಿ ವಿವಾಹ ನೋಂದಣಿಯನ್ನ ಮಾಡಬೇಕು. ಒಬ್ಬರಿಗೆ ಒಂದೇ ಮದುವೆ ಎಂಬ ಕಟ್ಟು ನಿಟ್ಟಿನ ಕಾನೂನು ಬ್ರಿಟನ್‌ನಲ್ಲಿ ಜಾರಿಯಲ್ಲಿದೆ. ಈ ಎಲ್ಲ ನಿಯಮಗಳಿಂದ ತಪ್ಪಿಸಿಕೊಂಡು ಸುಲಭವಾಗಿ ಬಹು ಪತ್ನಿತ್ವಕ್ಕೆ ಚಾನ್ಸ್ ಸಿಗುತ್ತೆ ಅಂತ ಮುಸ್ಲಿಂ ಸಮುದಾಯದ ಪುರುಷರು ನಿಖಾ ಹಲಾಲ್ ಆಚರಣೆಯನ್ನ ಹೆಚ್ಚಿನ ಸಂಖ್ಯೆಯಲ್ಲಿ ಮುಂದುವರೆಸಿದ್ದಾರೆ. ಅಲ್ದೆ ಮೊದಲಿನ ಪತ್ನಿಗೆ ಡಿವೋರ್ಸ್ ನೀಡಿದರೆ ಯಾವುದೇ ನ್ಯಾಯಾಲಯ ಹಾಗೂ ಕಾನೂನುಗಳ ಕಿರಿ ಕಿರಿ ಆಗುವುದಿಲ್ಲ, ಬದಲಿಗೆ ಅವರಿಗೆ ಪರಿಹಾರವನ್ನ ನೀಡುವುದು ತಪ್ಪುತ್ತೆ ಅನ್ನೋ ಲೆಕ್ಕಾಚಾರವನ್ನ ಹಾಕಿ ಅಧಿಕ ಸಂಖ್ಯೆಯಲ್ಲಿ ಬ್ರಿಟನ್ ದೇಶದಲ್ಲಿ ಪುರುಷರಿಂದ ಷರಿಯಾ ಕಾನೂನನ್ನ ಅನುಸರಿಸಲಾಗುತ್ತೆ. ಇನ್ನೂ ಅಚ್ಚರಿಯೆಂದರೆ ಈ ಷರಿಯಾದಲ್ಲಿರುವ ಲಾಭಗಳನ್ನ ತಿಳಿದು ಕ್ರಿಶ್ಚಿಯನ್ನರು ಸೇರಿದಂತೆ ಅನ್ಯ ಧರ್ಮಿಯರು ಸಹ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುತ್ತಿರುವುದು ಬ್ರಿಟನ್ ಹೋರಾಟಗಾರರಿಗೆ ಮರ್ಮಾಘಾತವನ್ನೇ ನೀಡುತ್ತಿದೆ. ಅಲ್ದೆ ಇದರಿಂದ ಕ್ರೈಸ್ತರ ನಂಬಿಕೆಗಳು ಕಡಿಮೆಯಾಗುತ್ತಿವೆ. ನಾಸ್ತಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಹೀಗೆಯೇ ಕೆಲ ದಿನಗಳವರೆಗೆ ಮುಂದುವರೆದರೆ ಶೀಘ್ರದಲ್ಲೇ ಕ್ರೈಸ್ತ ಧರ್ಮದ ಅವನತಿಗೆ ಷರಿಯಾ ಕಾರಣವಾಗಬಹುದು ಅನೋ ಭಯ ಅವರಿಗೆ ಎದುರಾಗಿದೆ.
ಇದೇ ವಿಚಾರವನ್ನ ಮುಂದಿಟ್ಟುಕೊಂಡು ಬ್ರಿಟನ್ ದೇಶದ ಹಲವೆಡೆ ನಿರಂತರ ದಂಗೆಗಳು ಮುಂದುವರೆದಿವೆ. ಅಲ್ದೆ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ಕಿರುಕುಳದ ಪ್ರಕರಣಗಳು, ಮಹಿಳೆಯರ ಮೇಲಿನ ದೌರ್ಜನ್ಯ ಹೀಗೆ ದಿನಕ್ಕೊಂದರಂತೆ ಘಟನೆಗಳು ನಡೆಯುತ್ತಿವೆ. ಅಲ್ದೆ ಪ್ರಮುಖವಾಗಿ ಈ ಎಲ್ಲ ಘಟನೆಗಳಿಗೆ ವಲಸಿಗ ಮುಸ್ಲಿಂ ಜನರೇ ನೇರ ಕಾರಣರಾಗುತ್ತಿದ್ದಾರೆ ಅನ್ನೋದು ಅಲ್ಲಿನ ಹೋರಾಟಗಾರರ ಆರೋಪವಾಗಿದೆ. ಅಲ್ದೆ ಬ್ರಿಟನ್‌ನ ಪಶ್ಚಿಮ ಭಾಗವೂ ಷರಿಯಾ ಕಾನೂನಿನ ರಾಜ್ಯಧಾನಿ ಆಗಿ ಬದಲಾಗುತ್ತಿದೆ. ಈ ಕೂಡಲೇ ಷರಿಯಾ ಕಾನೂನಿಗೆ ಕಡಿವಾಣ ಹಾಕದೇ ಹೋದರೆ ಅಲ್ಲಿನ ನ್ಯಾಯ ವ್ಯವಸ್ಥೆಯ ಮೇಲೆ ಅದು ಸವಾರಿ ಮಾಡುತ್ತೆ ಅನ್ನೋ ಟೆನ್ಶನ್ ಬ್ರಿಟನ್‌ನ ಫಾರ್ ಹೋರಾಟಗಾರರಿಗೆ ಕಾಡುತ್ತಿದೆ.
ಈಗಾಗಲೇ ಇಲ್ಲಿ ಚಾಲ್ತಿಯಲ್ಲಿರುವ ಮೂರು ಸಂವಿಧಾನಬದ್ದ ಕಾನೂನುಗಳ ಒಳಗೆ ನಾಲ್ಕನೇಯದಾಗಿ ಷರಿಯಾ ಕಾನೂನು ನುಸುಳುತ್ತಿದೆ ಅನ್ನೋ ಚಿಂತೆ ಇಲ್ಲಿ ಶುರುವಾಗಿದೆ. ಇಂಗ್ಲೇಂಡ್ ಹಾಗೂ ವೇಲ್ಸ್ ಗಳಿಗೆ ಸಂಬಂಧಿಸಿದ ಒಂದು ಕಾನೂನು ಇದ್ರೆ, ಉತ್ತರ ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್‌ಗಳಿಗೆ ಬೇರೆಯದ್ದೇ ಕಾನೂನುಗಳಿವೆ. ಇಲ್ಲಿಗೆ ಒಂದು ರಾಷ್ಟ್ರ ಮೂರು ಕಾನೂನುಗಳು ಅನ್ನೋ ಹಣೆಪಟ್ಟಿ ಈ ಆಂಗ್ಲರ ನಾಡಿನದ್ದಾಗಿದೆ. ಕಳೆದ 42 ವರ್ಷಗಳ ಅವಧಿಯಲ್ಲಿ 85 ಕ್ಕೂ ಅಧಿಕ ಷರಿಯಾ ಕೋರ್ಟ್‌ಗಳು ಇಲ್ಲಿ ನಿರ್ಮಾಣವಾಗಿವೆ. ಈ ಬೆಳವಣಿಗೆಯಿಂದ ಪ್ರೇರಣೆಗೊಂಡ ಜರ್ಮನಿಯ ಜನರು ನಮ್ಮಲ್ಲೂ ಷರಿಯಾ ಕೋರ್ಟ್‌ಗಳು ಬೇಕು ಅಂತ ಪ್ರತಿಭಟನೆಗಿಳಿದಿರುವುದು ಅಚ್ಚರಿಯಾಗಿದೆ..
ಒಟ್ನಲ್ಲಿ ಇಡೀ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ತನ್ನ ಪ್ರಭುತ್ವ ಸಾಧಿಸಿ. ಭಾರತವನ್ನೂ ಸಹ ಧೀರ್ಘಕಾಲದವರೆಗೆ ಆಳ್ವಿಕೆ ಮಾಡಿದ್ದ ಬ್ರಿಟಿಷರು.. ಆಯಾ ದೇಶಗಳಲ್ಲಿ ಕ್ರಿಶ್ಚಿಯನ್ನ ಧರ್ಮವನ್ನ ಪ್ರಸಾರ ಮಾಡಿದ್ದರು. ಭಾರತದಲ್ಲಿ ಕ್ರಿಶ್ಚಿಯನ್ ಧರ್ಮದ ಬೆಳವಣಿಗೆಗೆ ದೊಡ್ಡ ಕೊಡುಗೆ ಕೊಟ್ಟಿದ್ದ ಬ್ರಿಟಿಷರ ನಾಡಿನಲ್ಲೇ ಈಗ ಕ್ರಿಶ್ಚಿಯನ್ನ ಧರ್ಮ ಅವನತಿಯ ಆತಂಕ ಎದುರಿಸುತ್ತಿರೋದು ವಿಪರ್ಯಾಸವೇ ಸರಿ..