Political News: ಐಪಿಎಸ್ ಅಧಿಕಾರಿ ಚಂದ್ರಶೇಖರ್, ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಹಂದಿ ಎಂಬ ಪದ ಬಳಸಿದ್ದು, ಈ ಬಗ್ಗೆ ರಾಜ್ಯದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ. ಇದೀಗ ರಾಜ್ಯ ಒಕ್ಕಲಿಗ ಸಂಘದಿಂದಲೂ, ಈ ಬಗ್ಗೆ ದೂರು ನೀಡಲಾಗಿದ್ದು, ಅಧಿಕಾರಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಲಾಗಿದೆ.
ಐಪಿಎಸ್ ಅಧಿಕಾರಿ ಶ್ರೀ ಚಂದ್ರಶೇಖರ್ ಅವರು, ಕೇಂದ್ರ ಸಚಿವರಾದ ಶ್ರೀ ಕುಮಾರಸ್ವಾಮಿ ಅವರ ಬಗ್ಗೆ ಅವಾಚ್ಯ, ಅವಹೇಳನಕಾರಿ ಶಬ್ದ ಬಳಕೆ ಮಾಡಿರುವುದು ತೀವ್ರವಾಗಿ ಖಂಡಿಸುತ್ತೇವೆ. ಚುನಾಯಿತ ಪ್ರತಿನಿಧಿಯೊಬ್ಬರು ಸರ್ಕಾರದ ವಿರುದ್ಧ ಆರೋಪ ಮಾಡಿದಾಗ, ಅದಕ್ಕೆ ಪ್ರತಿಕ್ರಿಯಿಸಲು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಸಚಿವರು ಇರುತ್ತಾರೆ. ಆದರೆ ಕಾರ್ಯಾಂಗದ ವ್ಯವಸ್ಥೆಯಲ್ಲಿ ಚುನಾಯಿತ ಪ್ರತಿನಿಧಿಗಳ ವಿರುದ್ಧ ಪ್ರತಿಕ್ರಿಯಿಸುವ ಅಧಿಕಾರವನ್ನು ಈ ಅಧಿಕಾರಿಗೆ ಯಾರು ಕೊಟ್ಟಿದ್ದಾರೆ ಎಂದು ಪ್ರಶ್ನಿಸಲಾಗಿದೆ.
2 ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ರಾಜ್ಯದ ಹಾಲಿ ಕೇಂದ್ರ ಸಚಿವರ ಬಗ್ಗೆ ಲಘುವಾಗಿ ಪ್ರತಿಕ್ರಿಯಿಸಿರುವ ಅಧಿಕಾರಿ ಮೇಲೆ ರಾಜ್ಯ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇವೆ. ಐಪಿಎಸ್ ಅಧಿಕಾರಿಯು ಉದ್ಧಟತನ ತೋರಿ, ಆಕ್ಷೇಪಾರ್ಹ ಪದ ಬಳಕೆ ಮಾಡಿರುವುದನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ. ಅಧಿಕಾರಿಯು ತಮ್ಮ ಸಹೋದ್ಯೋಗಿಗೆ ಬರೆದ ಪತ್ರದಲ್ಲಿ ಅಂಥ ಪದ ಬಳಕೆ ಮಾಡಿರುವುದು ಸರಿಯಲ್ಲ. ಈಗಾಗಲೇ ಹಲವು ಆರೋಪಗಳನ್ನು ಎದುರಿಸುತ್ತಿರುವ ಈ ಅಧಿಕಾರಿಯು, ತಮ್ಮ ಎಲ್ಲೆ ಮೀರಿದ್ದಾರೆ ಎನ್ನಿಸುತ್ತಿದೆ.
ಇದೇ ರೀತಿ ಬೇರೆ ಚುನಾಯಿತ ಪ್ರತಿನಿಧಿಗಳ ಬಗ್ಗೆ ಮುಂದಿನ ದಿನಗಳಲ್ಲಿ ಪದ ಬಳಕೆ ಮಾಡಬಹುದು. ಹೀಗಾಗಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಿ, ಹದ್ದುಬಸ್ತಿನಲ್ಲಿ ಇರಿಸಬೇಕು ಎಂದು ಆಗ್ರಹಿಸುತ್ತೇವೆ ಎಂದು ರಾಜ್ಯ ಒಕ್ಕಲಿಗರ ಸಂಘ ಪತ್ರ ಬರೆದಿದೆ.