ಮಳೆ.. ಮಳೆ.. ಮಳೆ..! ಹೀಗೆ ಪದೇ ಪದೇ ಮಳೆ ಸುದ್ದಿಗಳನ್ನು ಕೇಳಿ ಕೇಳಿ ಜನರು ಸುಸ್ತಾಗಿದ್ದರೂ, ಮಳೆರಾಯ ಮಾತ್ರ ಸೈಲೆಂಟ್ ಆಗೋದಿಲ್ಲ, ಬದಲಾಗಿ ವೈಲೆಂಟ್ ಆಗ್ತಿದ್ದಾನೆ. ರಾಜ್ಯದ ಹಲವು ಭಾಗಗಳಲ್ಲಿ ಮಳೆ ಮುಂದುವರಿದಿದ್ದು, ಇದೀಗ ಮತ್ತೆ 72 ಗಂಟೆಗಳಲ್ಲಿ ಮಳೆ ಆರ್ಭಟ ಗ್ಯಾರಂಟಿ ಆಗಿದೆ. ಮಳೆ ನಿಂತು ಹೋಯ್ತು ಅಂತ ಸಂತೋಷಪಟ್ಟವರಿಗೂ ಮತ್ತೆ ಮಳೆ ಬರ್ತಿದೆ ಅನ್ನೋ ಸುದ್ದಿ ಈಗ ಶಾಕ್ ಕೊಟ್ಟಿದೆ.
ಉಯ್ಯೋ ಉಯ್ಯೋ ಮಳೆರಾಯ ಬಾ ಅಂದ ಕಾಲ ಹೋದ್ರು… ಈಗ ನಿಲ್ಲೋ ನಿಲ್ಲೋ ಮಳೆರಾಯ ಅಂತ ಹೇಳುವ ಪರಿಸ್ಥಿತಿ ಬಂದಿದೆ. ಯಾಕಂದ್ರೆ ನಿರಂತರ ಮಳೆಯಿಂದಾಗಿ ಹಸಿ ಬರ ಪರಿಸ್ಥಿತಿ ಎದುರಾಗುವ ಭೀತಿ ಇದೆ. ಅತಿಯಾದ ಮಳೆಯ ಪರಿಣಾಮವಾಗಿ ಬೆಳೆ ಹಾನಿ, ರಸ್ತೆಗಳ ಹಾನಿ, ನೀರಿನ ನಿಲ್ಲುವಿಕೆ ಸೇರಿದಂತೆ ಹಲವು ಸಮಸ್ಯೆಗಳು ಹೆಚ್ಚಾಗಿವೆ. ಈಗ ಮತ್ತೆ ಮೂರು ದಿನ ಮಳೆಯ ಅಬ್ಬರ ಮುಂದುವರಿಯಲಿದೆ.
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ನಾಳೆ ಬೀದರ್, ಕಲ್ಬುರ್ಗಿ, ಯಾದಗಿರಿ, ರಾಯಚೂರು, ಬಾಗಲಕೋಟೆ, ವಿಜಯಪುರ ಮತ್ತು ಕೊಪ್ಪಳ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ನವೆಂಬರ್ 5 ಮತ್ತು 6ರಂದು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿಯೂ ಮುಂದಿನ ಎರಡು ದಿನ ಸಾಧಾರಣ ಮಳೆಯಾಗಲಿದ್ದು, ಮೋಡ ಕವಿದ ವಾತಾವರಣ ಇರಲಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಗಾಳಿಯ ವೇಗ ಗಂಟೆಗೆ 10 ಕಿ.ಮೀ. ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಣಹವೆ ಮುಂದುವರಿದಿದ್ದರೂ, ಮುಂದಿನ 72 ಗಂಟೆಗಳಲ್ಲಿ ಮಳೆ ಮತ್ತೊಮ್ಮೆ ಆರ್ಭಟಿಸುವುದು ಖಚಿತವಾಗಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

