ಬೆಂಗಳೂರು ನಗರವನ್ನು ಬೆಚ್ಚಿಬೀಳಿಸಿದ ಡಾ. ಕೃತಿಕಾ ರೆಡ್ಡಿ ಕೊಲೆ ಪ್ರಕರಣದಲ್ಲಿ ಈಗ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ನಾನು ಮಾಡ್ಲಿಲ್ಲ ಅಂತಿದ್ದ ಕಿಲ್ಲರ್ ಡಾಕ್ಟರ್ ಮಹೇಂದ್ರ ರೆಡ್ಡಿಯೇ, ಪೊಲೀಸರ ಮುಂದೆ ಕೊನೆಗೂ ತಪ್ಪೊಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ವಿಚಾರಣೆ ವೇಳೆ ಆತ ಮಾಡಿದ ಒಪ್ಪಂಗೆಯಿಂದ ತನಿಖೆ ಹೊಸ ತಿರುವು ಪಡೆದುಕೊಂಡಿದೆ. ಮಾರತ್ತಹಳ್ಳಿ ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿ ಕೃತಿಕಾ ಕೊಲೆ ಹಿಂದಿನ ಪ್ಲ್ಯಾನ್ ಹಾಗೂ ಉದ್ದೇಶ ಬಯಲಾಗುತ್ತಿವೆ.
ಪೊಲೀಸ್ ವಿಚಾರಣೆಯಲ್ಲಿ ಮಹೇಂದ್ರ ರೆಡ್ಡಿಯ ಚಾಟ್ ಹಿಸ್ಟರಿ ಪ್ರಮುಖ ಪತ್ತೆಯಾಗಿದೆ. ಆತ ತನ್ನ ಆಪ್ತ ಸ್ನೇಹಿತೆಯೊಬ್ಬಳೊಂದಿಗೆ ಪದೇಪದೇ ಚಾಟಿಂಗ್ ಮಾಡುತ್ತಿದ್ದಾನೆ ಎಂಬ ಮಾಹಿತಿ ಹೊರಬಂದಿದೆ. ಹೆಂಡತಿ ಕುರಿತ ವೈಯಕ್ತಿಕ ವಿಚಾರಗಳನ್ನೇ ಗೆಳತಿಗೆ ಹಂಚಿಕೊಂಡಿದ್ದಾನೆ ಎಂಬುದು ತನಿಖಾಧಿಕಾರಿಗಳ ಶಂಕೆ. ಗೆಳತಿ ವಾಟ್ಸಾಪ್‌ನಲ್ಲಿ ಬ್ಲಾಕ್ ಮಾಡಿದ ನಂತರವೂ ಮಹೇಂದ್ರ ಸುಮ್ಮನಿರದೆ ಫೋನ್‌ಪೇ ಆಪ್‌ನಲ್ಲೂ ಚಾಟಿಂಗ್ ಮುಂದುವರಿಸಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಈ ಎಲ್ಲಾ ಚಾಟಿಂಗ್ ಮೆಸೇಜ್‌ಗಳನ್ನು FSL ತಜ್ಞರು ರಿಕವರ್ ಮಾಡಿದ್ದಾರೆ. ಫೋನ್‌ಪೇನಲ್ಲಿ ಡಿಲೀಟ್ ಆಗದ ಮೆಸೇಜ್‌ಗಳ ಮೂಲಕ ಚಾಟಿಂಗ್ ಹಿಸ್ಟರಿ ಪತ್ತೆಯಾಗಿದೆ. ಮಹೇಂದ್ರ ರೆಡ್ಡಿಯ ಮೊಬೈಲ್ ಮತ್ತು ಲ್ಯಾಪ್‌ಟಾಪ್ ಈಗಾಗಲೇ FSLಗೆ ರವಾನೆಯಾಗಿದ್ದು, ತಾಂತ್ರಿಕ ಪರಿಶೀಲನೆ ನಡೆಯುತ್ತಿದೆ. ಇನ್ನೊಂದೆಡೆ, ಡಾ. ಕೃತಿಕಾ ಅವರ ಫೋನ್ ಐಫೋನ್ ಆಗಿದ್ದು ಲಾಕ್ ಆಗಿರುವುದರಿಂದ ಪೊಲೀಸರು ಅದನ್ನು ಓಪನ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಕೃತಿಕಾಳ ಫೋನ್‌ನಿಂದ ಡೇಟಾ ರಿಟ್ರೀವ್ ಆಗಿದ್ರೆ, ಪ್ರಕರಣದ ಸಂಪೂರ್ಣ ಚಿತ್ರ ಸ್ಪಷ್ಟವಾಗುವ ನಿರೀಕ್ಷೆಯಿದೆ.
ಪೊಲೀಸರು ಈಗ ಮಹೇಂದ್ರ ರೆಡ್ಡಿಯ ಗೆಳತಿಯ ಹೇಳಿಕೆ ದಾಖಲಿಸಲು ಸಿದ್ಧತೆ ನಡೆಸಿದ್ದಾರೆ. ಮಹಿಳೆಯು ಚಾಟಿಂಗ್‌ನಿಂದ ಬೇಸತ್ತು ಮಹೇಂದ್ರನನ್ನು ಬ್ಲಾಕ್ ಮಾಡಿದ್ದಾಳೆ ಎಂದು ಹೇಳಲಾಗಿದೆ. ಕೃತಿಕಾ ಕುಟುಂಬ ಸದಸ್ಯರೂ ಕೂಡ ಕೊಲೆಗೆ ಅಕ್ರಮ ಸಂಬಂಧವೇ ಕಾರಣ ಎಂಬ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಚಾಟಿಂಗ್ ದಾಖಲೆಗಳು ಮತ್ತು ಅವರ ವೈಯಕ್ತಿಕ ಸಂಬಂಧಗಳ ಕುರಿತು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸರ ಮುಂದೆ ಮಹೇಂದ್ರ ರೆಡ್ಡಿ ಕೊನೆಗೂ ಬಾಯಿ ಬಿಟ್ಟಿದ್ದು, ಕೃತಿಕಾಳನ್ನು ನಾನು ಕೊಂದೇ ಎಂದು ಒಪ್ಪಿಕೊಂಡಿದ್ದಾನೆ. ಆಕೆಯ ಆರೋಗ್ಯ ಸಮಸ್ಯೆಯಿಂದ ಬೇಸತ್ತು, ಪರ್ಸನಲ್ ಲೈಫ್ ಇಲ್ಲದೇ ಕೋಪಗೊಂಡು ಆತ ಕೊಲೆಗೆ ಮುಂದಾಗಿದ್ದಾನೆ ಎಂಬ ಅಂಶ ತನಿಖೆಯಲ್ಲಿ ಬಹಿರಂಗವಾಗಿದೆ. ಆಕೆಗೆ ಡಿವೋರ್ಸ್ ನೀಡಿದರೆ ಆಸ್ತಿ ಸಿಗಲ್ಲ ಎಂಬ ಆಲೋಚನೆಯಿಂದ ಆತ ಕೊಲೆ ಪ್ಲ್ಯಾನ್ ಮಾಡಿದ್ದಾನೆ ಎಂದು ತಿಳಿದುಬಂದಿದೆ. ತನಿಖಾ ಅಧಿಕಾರಿಗಳೇ ಈ ಪ್ಲ್ಯಾನ್ ಕೇಳಿ ಶಾಕ್ ಆಗಿದ್ದಾರೆ. ಈಗ ಮಹೇಂದ್ರ ರೆಡ್ಡಿಯ ಒಪ್ಪಂಗೆಯೊಂದಿಗೆ ಕೃತಿಕಾ ಕೊಲೆ ಪ್ರಕರಣದ ಹಿಂದಿನ ನಿಜದ ಕಥೆ ಬಯಲಾಗುತ್ತಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

