ನಾವಿವತ್ತು ಎಲ್ಲರ ಫೆವರಿಟ್ ಬ್ರೇಕ್ಫಾಸ್ಟ್ ಶ್ಯಾವಿಗೆ ಉಪ್ಪಿಟ್ ಮಾಡೋದು ಹೇಗೆ ಅನ್ನೋದನ್ನ ಹೇಳಲಿದ್ದೇವೆ. ಅದಕ್ಕೆ ಬೇಕಾಗುವ ಪದಾರ್ಥವನ್ನ ನೋಟ್ ಮಾಡಿಕೊಳ್ಳಿ.
ಒಂದು ಕಪ್ ಶ್ಯಾವಿಗೆ, 4 ಸ್ಪೂನ್ ಎಣ್ಣೆ, ಚಿಟಿಕೆ ಸಾಸಿವೆ ಮತ್ತು ಜೀರಿಗೆ, 5ರಿಂದ 6 ಎಸಳು ಕರೀಬೇವು, 2 ಹಸಿಮೆಣಸು, ಸ್ವಲ್ಪ ಹಸಿ ಶುಂಠಿ, ಒಂದು ಸಣ್ಣಗೆ ಹೆಚ್ಚಿದ ಈರುಳ್ಳಿ, ಒಂದು ಆಲೂ, ಕ್ಯಾರೆಟ್ , ಒಂದು ಕ್ಯಾಪ್ಸಿಕಂ, ಅರ್ಧ ಕಪ್ ಬಟಾಣಿ, ಚಿಟಿಕೆ ಅರಿಷಿನ, ಒಂದು ಸ್ಪೂನ್ ಪಲ್ಯದ ಮಸಾಲೆ ಅಥವಾ ಗರಂ ಮಸಾಲೆ, ಒಂದು ಸ್ಪೂನ್ ನಿಂಬೆರಸ, ಸ್ವಲ್ಪ ಕೊತ್ತೊಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು.
ಗ್ಯಾಸ್ ಆನ್ ಮಾಡಿ, ಪ್ಯಾನ್ ಇರಿಸಿ ಅದಕ್ಕೆ 3 ಸ್ಪೂನ್ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಕರೀಬೇವು, ಹಸಿಮೆಣಸು, ಶುಂಠಿ ಹಾಕಿ ಹುರಿಯಿರಿ. ಈಗ ಈರುಳ್ಳಿ ಹಾಕಿ ಕೊಂಚ ಬಾಡಿಸಿ.
ಇದಕ್ಕೆ ಆಲೂ, ಕ್ಯಾರೆಟ್, ಕ್ಯಾಪ್ಸಿಕಂ, ಬಟಾಣಿ ಸೇರಿಸಿ ಮತ್ತೆ 2 ನಿಮಿಷ ಹುರಿಯಿರಿ. ಈ ಮಿಶ್ರಣಕ್ಕೆ ಅರಿಷಿಣ, ಪಲ್ಯ ಮಸಾಲೆ ಅಥವಾ ಗರಂ ಮಸಾಲೆ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕೊಂಚ ಫ್ರೈ ಮಾಡಿ, ಎರಡು ಕಪ್ ನೀರು ಹಾಕಿ 5ನಿಮಿಷ ಕುದಿಯಲು ಇರಿಸಿ.
ಈಗ ಮತ್ತೊಂದು ಪ್ಯಾನ್ನಲ್ಲಿ ಕೊಂಚ ಎಣ್ಣೆ ಮತ್ತು ಶ್ಯಾವಿಗೆ ಹಾಕಿ, ಅದು ತಿಳಿ ಕಂದು ಬಣ್ಣಕ್ಕೆ ತಿರುಗುವ ತನಕ ಹುರಿಯಿರಿ.
ತರಕಾರಿ ಮಿಶ್ರಣ ಕುದಿ ಬರಲು ಶುರುವಾದಾಗ, ಅದಕ್ಕೆ ಹುರಿದ ಶ್ಯಾವಿಗೆ ಸೇರಿಸಿ ಸ್ವಲ್ಪ ಬಾಡಿಸಿ, ಪ್ಯಾನ್ ಮುಚ್ಚಳ ಮುಚ್ಚಿ ಒಂದು ನಿಮಿಷ ಮಂದ ಉರಿಯಲ್ಲಿ ಬೇಯಲು ಬಿಡಿ. ನಂತರ ಕೊತ್ತೊಂಬರಿ ಸೊಪ್ಪು, ನಿಂಬೆ ಹುಳಿ ಸೇರಿಸಿ ಮತ್ತೆ ಕೈಯಾಡಿಸಿ ಗ್ಯಾಸ್ ಆಫ್ ಮಾಡಿ 5 ನಿಮಿಷ ಪ್ಯಾನ್ ಮುಚ್ಚಳ ಮುಚ್ಚಿಡಿ. ಇದೀಗ ಘಮಘಮಿಸುವ ಶ್ಯಾವಿಗೆ ಉಪ್ಪಿಟ್ಟು ರೆಡಿ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ





