ಎದುರಾಳಿಗಳಿಗೆ ಸಂಕಷ್ಟ – ಪ್ರಧಾನಿ ರೇಸ್‌ನಲ್ಲಿ ವಿಜಯ್‌ ಮೇಲುಗೈ!

ತಮಿಳುನಾಡಿನಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿ ಕೇವಲ ಮೂರೇ ತಿಂಗಳಲ್ಲಿ, ನಟ-ರಾಜಕಾರಣಿ ಸಿ. ಜೋಸೆಫ್ ವಿಜಯ್ ರಾಷ್ಟ್ರೀಯ ರಾಜಕಾರಣದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಖ್ಯಾತ ಮಾಧ್ಯಮವೊಂದು ನಡೆಸಿದ ‘ಮೂಡ್ ಆಫ್ ದಿ ನೇಷನ್’ ಆಗಸ್ಟ್ 2026ರ ಸಮೀಕ್ಷೆಯಲ್ಲಿ, ಭಾರತದ ಮುಂದಿನ ಪ್ರಧಾನಿ ಹುದ್ದೆಯ ರೇಸ್‌ನಲ್ಲಿ ವಿಜಯ್ ಬರೋಬ್ಬರಿ ಮೂರನೇ ಸ್ಥಾನಕ್ಕೆ ಜಿಗಿದು ದಿಗ್ಗಜರನ್ನೇ ಬೆರಗುಗೊಳಿಸಿದ್ದಾರೆ.

ಹೌದು ‘ಸಮೀಕ್ಷೆಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಶೇ. 48.7 ರಷ್ಟು ಮತಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ರಾಹುಲ್ ಗಾಂಧಿ ಶೇ. 27.1 ರಷ್ಟು ಬೆಂಬಲದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಆದರೆ ಎಲ್ಲರನ್ನೂ ಅಚ್ಚರಿಗೊಳಿಸುವಂತೆ ‘ತಮಿಳಗ ವೆಟ್ರಿ ಕಳಗಂ’ ಮುಖ್ಯಸ್ಥ ಹಾಗೂ ತಮಿಳುನಾಡು ಸಿಎಂ ವಿಜಯ್ ಅವರು ಶೇ. 9.2 ರಷ್ಟು ಜನಬೆಂಬಲ ಪಡೆದು ಮೂರನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇವರ ನಂತರದ ಸ್ಥಾನಗಳಲ್ಲಿ ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್ ಮತ್ತು ಅರವಿಂದ್ ಕೇಜ್ರಿವಾಲ್ ಇದ್ದಾರೆ.

ಕೇವಲ ಪ್ರಧಾನಿ ಆಯ್ಕೆ ಮಾತ್ರವಲ್ಲದೆ, ವಿರೋಧ ಪಕ್ಷಗಳ ಮೈತ್ರಿಕೂಟವನ್ನು ಮುನ್ನಡೆಸಲು ಅತ್ಯಂತ ಸೂಕ್ತ ನಾಯಕ ಯಾರು ಎಂಬ ಪ್ರಶ್ನೆಗೂ ವಿಜಯ್ ಶೇ. 12.2 ರಷ್ಟು ಬೆಂಬಲದೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. 2024ರಲ್ಲಿ ಪಕ್ಷ ಕಟ್ಟಿ, 2026ರಲ್ಲಿ ಮೊದಲ ಚುನಾವಣೆಯಲ್ಲೇ ಗೆದ್ದು ಮುಖ್ಯಮಂತ್ರಿಯಾಗಿರುವ ವಿಜಯ್ ಅವರನ್ನು ‘ಮುಂದಿನ ಪಿಎಂ’ ಎಂದು ತಮಿಳುನಾಡು ಸಚಿವರು ಈಗಾಗಲೇ ಬಹಿರಂಗವಾಗಿ ಪ್ರತಿಪಾದಿಸಲು ಶುರು ಮಾಡಿದ್ದಾರೆ.

ಇದರ ಜೊತೆಗೆ ‘ದಕ್ಷಿಣ ಭಾರತದಿಂದ, ಅದರಲ್ಲೂ ತಮಿಳುನಾಡಿನಿಂದಲೇ ಮುಂದಿನ ಪ್ರಧಾನಿ ಹೊರಹೊಮ್ಮಲಿದ್ದಾರೆ ಎಂಬ ಚರ್ಚೆಗೆ ಟಿವಿಕೆ ನಾಯಕರು ನಾಂದಿ ಹಾಡಿದ್ದಾರೆ. ಈ ಬೆಳವಣಿಗೆಯು ರಾಷ್ಟ್ರಮಟ್ಟದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಪ್ರಮುಖ ನಾಯಕರ ಮತಬ್ಯಾಂಕ್ ಮೇಲೆ ಪ್ರಭಾವ ಬೀರಲಿದೆ ಅಂತಾನೆ ಹೇಳಬಹುದು. ವಿಜಯ್ ಕೇವಲ ತಮಿಳುನಾಡಿನ ಗಡಿಗೆ ಸೀಮಿತವಾಗದೆ, ರಾಷ್ಟ್ರೀಯ ರಾಜಕೀಯದ ಕಲ್ಪನೆಯಲ್ಲಿ ಗಟ್ಟಿಯಾಗಿ ನೆಲೆಯೂರಲು ಆರಂಭಿಸಿದ್ದಾರೆ ಎಂಬುದನ್ನು ಈ ಸಮೀಕ್ಷೆ ಸಾಬೀತುಪಡಿಸಿದೆ.

2029ರ ಸಾರ್ವತ್ರಿಕ ಚುನಾವಣೆಗೆ ಇನ್ನೂ ಮೂರು ವರ್ಷಗಳ ಸಮಯವಿದ್ದು, ಈ ಜನಪ್ರಿಯತೆಯನ್ನು ರಾಷ್ಟ್ರಮಟ್ಟದ ಚುನಾವಣಾ ಶಕ್ತಿಯಾಗಿ ಪರಿವರ್ತಿಸುವುದು ವಿಜಯ್ ಅವರ ಮುಂದಿರುವ ದೊಡ್ಡ ಸವಾಲು. ಏನೇ ಇರಲಿ, ದಳಪತಿ ವಿಜಯ್ ಅವರ ಈ ರಾಜಕೀಯ ಜಿಗಿತ ಸದ್ಯ ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿರುವುದಂತೂ ಸತ್ಯ.

About The Author