ತಮಿಳು ಮಾತ್ರವಲ್ಲದೆ ಹಲವು ಭಷೆಗಳಲ್ಲಿ ಮಿಂಚಿರುವ ನಟ ವಿಜಯ್ ಸೇತುಪತಿ ಕೆಲದಿನಗಳ ಹಿಂದೆ ಪುನೀತ್ ರಾಜ್‌ಕುಮಾರ್ ಸಮಾಧಿ ಬಳಿ ಭೇಟಿ ನೀಡಿ ಪೂಜೆ ಸಲ್ಲಿಸಿ, ಪುನೀತ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದರು. ಅದರ ಹಿಂದಿನ ದಿನವಷ್ಟೆ ವಿಜಯ್ ಸೇತುಪತಿ ಮೇಲೆ ಬೆಂಗಳೂರು ಅಂತರಾಷ್ಟಿಯ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದ. ನವೆಂಬರ್ ೦೨ ರಂದು ರಾತ್ರಿ ಚೆನ್ನೈನಿಂದ ಬೆಂಗಳೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರೊಟ್ಟಿಗೆ ವಿಮಾನದಲ್ಲಿ ಪ್ರಯಾಣ ಮಾಡಿದ ವ್ಯಕ್ತಿಯೊಬ್ಬ ವಿಜಯ್ ಹಾಗೂ ಅವರ ಮ್ಯಾನೇಜರ್ ಜೊತೆ ಜಗಳವಾಡಿ, ವಿಜಯ್ ಸೇತುಪತಿ ವಿಮಾನ ನಿಲ್ದಾಣದಿಂದ ಹೊರಗೆ ಬರಬೇಕಾದರೆ ಹಲ್ಲೆ ಮಾಡುವ ಯಾತ್ನಮಾಡಿದ್ದ. ಆ ವಿಡಿಯೋ ಅಲ್ಲೆ ಇದ್ದ ಯಾರೋ ಒಬ್ಬರು ಮೊಬೈಲ್‌ನಲ್ಲಿ ಸೆರೆಯಾಗಿತ್ತು. ನಂತರ ವೈರಲ್ ಕೂಡ ಆಗಿತ್ತು.
ಈ ಘಟನೆ ಬಗ್ಗೆ ಈಗ ಮಾತನಾಡಿರುವ ನಟ ವಿಜಯ್ ಸೇತುಪತಿ, ”ಅದೊಂದು ಬಹಳ ಸಣ್ಣ ಘಟನೆ ಆದರೆ ಅಲ್ಲಿದ್ದ ಯಾರೋ ಒಬ್ಬರು ಮೊಬೈಲ್‌ನಲ್ಲಿ ಅದನ್ನು ಸೆರೆಹಿಡಿದಿದ್ದರಿಂದ ವಿಷಯ ದೊಡ್ಡದಾಯಿತು, ಮೊಬೈಲ್ ಇದ್ದವರೆಲ್ಲ ಕ್ಯಾಮೆರಾಮನ್‌ಗಳಾಗಿದ್ದಾರೆ ಹಾಗಾಗಿ ಇಂಥಹಾ ಸಣ್ಣ ಘಟನೆಗಳಿಗೂ ಪ್ರಾಮುಖ್ಯತೆ ಸಿಗುತ್ತಿದೆ. ಆ ಯುವಕ ಕುಡಿದಿದ್ದ, ವ್ಯಕ್ತಿಯೊಬ್ಬ ತನ್ನ ನಿಯಂತ್ರಣದಲ್ಲಿ ಇಲ್ಲದೇ ಇದ್ದಾಗ ಹಾಗೆ ವರ್ತಿಸುತ್ತಾನೆ. ಮಾಸ್ಕ್ ಹಾಕಿರುವ ಕಾರಣ ಇತ್ತೀಚಿನ ದಿನಗಳಲ್ಲಿ ಯಾರು ಕುಡಿದಿದ್ದಾರೆ ಯಾರು ಕುಡಿದಿಲ್ಲ ಎಂಬುದು ಹೇಳುವುದು ಸಹ ಕಷ್ಟ. ಹಲ್ಲೆಗೆ ಮುಂದಾದ ವ್ಯಕ್ತಿ ನನ್ನ ಅಭಿಮಾನಿ ಅಲ್ಲ ಬದಲಿಗೆ, ವಿಮಾನದಲ್ಲಿ ಸಹ ಪ್ರಯಾಣಿಕ. ವಿಮಾನದಲ್ಲಿಯೇ ನಮ್ಮೊಂದಿಗೆ ಜಗಳ ಆರಂಭಿಸಿದ. ವಿಮಾನ ಇಳಿದ ಮೇಲೂ ಜಗಳ ಮುಂದುವರೆಸಿದ” ಎಂದಿದ್ದಾರೆ ವಿಜಯ್.
ವಿಜಯ್ ಸೇತುಪತಿಗೆ ಪ್ರತ್ಯೇಕವಾಗಿ ಭದ್ರತಾ ಸಿಬ್ಬಂದಿ ಇಲ್ಲ, ಈ ಬಗ್ಗೆ ಪ್ರಶ್ನೆ ಮಾಡಿದಾಗ ಮಾತನಾಡಿದ ನಟ ವಿಜಯ್, “ನನ್ನೊಂದಿಗೆ ನನ್ನ ಗೆಳೆಯ ಇರುತ್ತಾನೆ. ಮೂವತ್ತು ವರ್ಷಗಳಿಂದಲೂ ನಾವಿಬ್ಬರು ಗೆಳೆಯರು. ಈಗ ಅವನೇ ನನ್ನ ಮ್ಯಾನೇಜರ್. ನನ್ನ ಸುತ್ತಲೂ ಜನರರಿರುವುದು ನನಗೆ ಇಷ್ಟವಾಗುವುದಿಲ್ಲ. ನನಗೆ ಜನರೊಂದಿಗೆ ಬೆರೆಯುವುದು, ಮಾತನಾಡುವುದು ಇಷ್ಟ. ಜನರಿಂದ ದೂರ ಉಳಿದು ಸ್ಟಾರ್ ಎನಿಸಿಕೊಳ್ಳಲು ನನಗೆ ಇಷ್ಟವಿಲ್ಲ. ನಮ್ಮ ಮೇಲೆ ಹಲ್ಲೆಗೆ ಯತ್ನಿಸಿದ ಆ ವ್ಯಕ್ತಿಯನ್ನು ನಾವು ಪೊಲೀಸರಿಗೆ ಒಪ್ಪಿಸಿದೆವು. ಅಲ್ಲಿಗೆ ಪ್ರಕರಣ ಮುಗಿಯಿತು. ನನ್ನ ಅಭಿಮಾನಿಗಳಿಂದ ನನಗೆ ಎಂದೂ ತೊಂದರೆ ಆಗಿಲ್ಲ, ಯಾರಿಂದಲೂ ನನ್ನನ್ನು ರಕ್ಷಿಸುವ ಅಗತ್ಯವೂ ಇಲ್ಲ. ಜನರಿಗೆ ನೀವು ಪ್ರೀತಿ ತೋರಿಸಿದರೆ ಅವರು ಮರಳಿ ನಿಮ್ಮನ್ನು ಪ್ರೀತಿಸುತ್ತಾರೆ ಅಷ್ಟೆ” ಎಂದು ಹೇಳಿದ್ದಾರೆ ಸೇತುಪತಿ.
ಇನ್ನೂ ವಿಜಯ್ ಮೇಲೆ ಹಲ್ಲೆ ಮಾಡಲು ಮುಂದಾದ ಆ ವ್ಯಕ್ತಿ ಕೇರಳ ಮೂಲದವನಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದ. ಘಟನೆ ನಡೆದ ದಿನ ಆ ವ್ಯಕ್ತಿ ನಟ ವಿಜಯ್ ಬಳಿ ಸೆಲ್ಪಿ ಕೇಳಿದ್ದ, ಆದರೆ ಆತ ಕುಡಿದಿರೋದು ಗೊತ್ತಾಗಿ ಸೇತುಪತಿ ಫೋಟೊ ಕೊಡಲು ನಿರಾಕರಿಸಿದ್ದಾರೆ. ಆಗ ವಿಜಯ್ ಸೇತುಪತಿ ಸಹಾಯಕ ಆ ವ್ಯಕ್ತಿಯನ್ನು ತಳ್ಳಿ ಮುಂದೆ ಸಾಗಿದ್ದಾನೆ. ಇದೇ ಕಾರಣಕ್ಕೆ ಕೋಪಗೊಂಡ ಆ ವ್ಯಕ್ತಿ ವಿಜಯ್ ಸೇತುಪತಿ ಸಹಾಯಕನ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ ಎನ್ನಲಾಗಿದೆ.