www.karnatakatv.net ತುಮಕೂರು: ನಗರದ ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಕುಂದೂರು ಗ್ರಾಮದಲ್ಲಿ ಅಭಿವೃದ್ದಿ ಮಾಡುವುದಾಗಿ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.
ಈ ಗ್ರಾಮದಲ್ಲಿ ರಸ್ತೆ, ಚರಂಡಿ, ವಿದುತ್, ಕುಡಿಯುವ ನೀರು ಹೀಗೆ ಸಮಸ್ಯೆಯ ಸರಮಾಲೇಯನ್ನೇ ಹೊದ್ದು ಮಲಗಿದೆ. ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಗಾದೆಯಂತಿದೆ ಈ ಊರಿನ ಜನರ ಪರಿಸ್ಥಿತಿದೆ. ಜೆಡಿಎಸ್ ಹಾಲಿ ಶಾಸಕ ಗೌರಿಶಂಕರ್ ಹಾಗೂ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡರ ವೈಯಕ್ತಿಕ ಪ್ರತಿಷ್ಠೆಗೆ ಈ ಊರಿನ ಅಭಿವೃದ್ದಿ ಮರೀಚಿಕೆಯಾಗಿದೆ.
ಸುರೇಶ್ ಗೌಡರು ಶಾಸಕರಾಗಿದ್ದಾಗ ಬಿಡುಗಡೆಯಾದ ಅನುದಾನದಲ್ಲಿ ಹಾಲಿ ಶಾಸಕ ಗೌರಿ ಶಂಕರ್ ಕಾಮಗಾರಿ ಮಾಡಲು ಆಗುತ್ತಿಲ್ಲವಂತೆ. ಯಾಕಂದರೆ ಅನುದಾನದ ಹಣವನ್ನೆಲ್ಲಾ ಸುರೇಶ್ ಗೌಡ ತಮ್ಮ ಸರ್ಕಾರದ ಮೇಲೆ ಪ್ರಭಾವ ಬೀರಿ ವಾಪಸ್ಸ್ ಪಡೆದಿದ್ದಾರೆ ಎನ್ನಲಾಗಿದೆ. ಅದೇ ರೀತಿ ಕುಂದೂರು ಗ್ರಾಮದಲ್ಲಿ ಬಿಜೆಪಿ ಪಾಲೋವರ್ಸ ಸಂಖ್ಯೆ ಜಾಸ್ತಿ ಇದೆಯಂತೆ. ಹಾಗಾಗಿ ಹಾಲಿ ಶಾಸಕ ಗೌರಿಶಂಕರ್ ಕುಂದೂರು ಗ್ರಾಮದ ಕುಂದುಕೊರತೆ ಬಗೆಹರಿಸಲು ಪ್ರಯತ್ನಪಡುತ್ತಿಲ್ಲ ಅನ್ನೋದು ಗ್ರಾಮಸ್ಥರ ಆರೋಪ. ಅಲ್ಲದೆ ಕೆಲವು ಕಡೆ ರಸ್ತೆ ಮಾಡಲು ಶಾಸಕ ಗೌರಿಶಂಕರ್ ಮುಂದಾದರೂ ಅದು ಬಿಜೆಪಿ ಫಾಲೋವರ್ಸ ಹೆಚ್ಚಿಗೆ ಇರುವ ಮನೆ, ಏರಿಯಾ ಎಂದು ತಿಳಿದು ರಸ್ತೆ ನಿರ್ಮಾಣದಿಂದ ಹಿಂದಕ್ಕೆ ಸರಿದಿದ್ದಾರಂತೆ.
ಈ ಹಾಲಿ ಮಾಜಿ ಶಾಸಕರುಗಳ ಕಿತ್ತಾಟಕ್ಕೆ ಇಡೀ ಊರಿಗೆ ಊರೇ ಹಾಳು ಕೊಂಪೆಯಂತಾಗಿದೆ. ಅಲ್ಲೊಂದು ಇಲ್ಲೊಂದು ಹೊಸ ಮನೆ, ಕಟ್ಟಡಗಳು ನಿರ್ಮಾಣವಾಗಿದರೂ ಮೂಲ ಸೌಕರ್ಯ ಒದಗಿಸಿಲ್ಲ.ಗ್ರಾಮದ ನಾಲ್ಕೂ ದಿಕ್ಕಿನಲ್ಲಿ ಮಣ್ಣಿನ ರಸ್ತೆಗಳು ಕಾಣಸಿಗುತ್ತದೆಯೇ ಹೊರತು ಟಾರ್ ರೋಡ್ ಗಳು ಇಲ್ಲವೇ ಇಲ್ಲ. ಬೆಳಗುಂಬದಿಂದ ಸಿದ್ದಗಂಗಾ ಮಠಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ರಾಜಕೀಯದಿಂದಾಗಿ ಅರ್ಧಕ್ಕೆ ನಿಂತಿದೆ. ಚರಂಡಿ ವ್ಯವಸ್ಥೆಯನ್ನು ಈ ಗ್ರಾಮದ ಜನರು ನೋಡೇ ಇಲ್ಲ. ಕಂಡಕಂಡಲ್ಲಿ ಬಚ್ಚಲು ನೀರು ಹರಿದು ಗ್ರಾಮದ ತುಂಬಾ ದುರ್ವಾಸನೆ ಎದ್ದಿದೆ. ಡೆಂಗ್ಯೂ, ಚಿಕೂನ್ ಗುನ್ಯಾ ರೋಗದಿಂದ ಜನರು ನರಳುತಿದ್ದಾರೆ. ಕುಡಿಯುವ ನೀರಿಲ್ಲದೆ ಜನರು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತಿದ್ದಾರೆ.
ಸುಮಾರು ೫೦೦ ಕುಟುಂಬಗಳಿರುವ ಕುಂದೂರು ಗ್ರಾಮ ತುಮಕೂರು ಬಸ್ ನಿಲ್ದಾಣದಿಂದ ಕೇವಲ ೫ ಕಿ.ಮಿ.ದೂರದಲ್ಲಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯ ಗಡಿಯಿಂದ ಕೇವಲ ೧ ಕಿಮಿ ದೂರದಲ್ಲಿದೆ. ಮುಂದಿನ ಎರಡ್ಮೂರು ವರ್ಷದಲ್ಲಿ ಪಾಲಿಕೆ ವ್ಯಾಪ್ತಿಗೂ ಸೇರಲಿದೆ. ಆದರೂ ಈಗಲೂ ಇಲ್ಲಿ ಹಳ್ಳಿಯಂತೆ ಪರಿಸ್ಥಿತಿ ಇದೆ. ಹಾಲಿ ಮಾಜಿ ಶಾಸಕರುಗಳ ಒಣ ಪ್ರತಿಷ್ಠೆಗೆ ಜನರು ಮಾತ್ರ ಸಂಕಷ್ಟಕ್ಕೆ ಸಿಲುಕಿ ಸೊರಗಿ ಹೋಗುತಿದ್ದಾರೆ. ಅತ್ತ ಹಳ್ಳಿಯೂ ಅಲ್ಲ, ಇತ್ತ ಸಿಟಿಯೂ ಅಲ್ಲದಂತೆ ತ್ರಿಶಂಕು ಸ್ಥಿತಿಯಲ್ಲಿರುವ ಗ್ರಾಮಕ್ಕೆ ಬೇಕಿದೆ ಮೂಲಭೂತ ಸೌಕರ್ಯದ ಸವಲತ್ತು.
ದರ್ಶನ್ ಕೆ.ಡಿ.ಆರ್, ಕರ್ನಾಟ ಟಿವಿ -ತುಮಕೂರು