ವಿನಯ್ ಕುಲಕರ್ಣಿ ಅವರಿಗೆ ಶಿಕ್ಷೆ ವಿಧಿಸಿರುವ ಪ್ರಕರಣದ ವಿರುದ್ಧ ಇದೀಗ ಕಾಂಗ್ರೆಸ್ ಬೆಂಬಲಕ್ಕೆ ನಿಂತಿದೆ. ಕಾಂಗ್ರೆಸ್ ನಾಯಕರು ಏಪ್ರಿಲ್ 25ರಂದು ಧಾರವಾಡದಲ್ಲಿ ವಿನಯ್ ಕುಲಕರ್ಣಿ ಪರವಾಗಿ ಬೃಹತ್ ಮೌನ ಮೆರವಣಿಗೆ ನಡೆಸಲು ನಿರ್ಧರಿಸಿದ್ದಾರೆ.
ಈ ಪ್ರತಿಭಟನೆಯ ರೂಪರೇಷೆಗಳ ಬಗ್ಗೆ ಚರ್ಚಿಸಲು ಸೋಮವಾರ ತಡರಾತ್ರಿ ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಪ್ರಮುಖ ನಾಯಕರ ಸಭೆ ನಡೆಯಿತು. ಸಭೆ ಅನಿಲ್ ಕುಮಾರ್ ಪಾಟೀಲ್ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ನಾಯಕರು, ವಿನಯ್ ಕುಲಕರ್ಣಿಗೆ ರಾಜಕೀಯ ಪಿತೂರಿಯಿಂದ ಶಿಕ್ಷೆಯಾಗಿದೆ ಎಂದು ಆರೋಪಿಸಿದರು. ಇದೇ ಕಾರಣಕ್ಕಾಗಿ ಪಕ್ಷದ ಶಕ್ತಿ ಪ್ರದರ್ಶನ ಮತ್ತು ನೈತಿಕ ಬೆಂಬಲಕ್ಕಾಗಿ ಏಪ್ರಿಲ್ 25ರಂದು ಜಿಲ್ಲಾಧಿಕಾರಿ ಕಚೇರಿವರೆಗೆ ಮೌನ ಮೆರವಣಿಗೆ ನಡೆಸಲು ತೀರ್ಮಾನಿಸಲಾಗಿದೆ.
2016ರ ಜೂನ್ 15ರಂದು ಧಾರವಾಡದ ಸಪ್ತಾಪುರ ಬಡಾವಣೆಯ ಜಿಮ್‌ನಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೀಶ್ ಗೌಡ ಅವರನ್ನು ಹತ್ಯೆ ಮಾಡಲಾಗಿತ್ತು. ಆರಂಭದಲ್ಲಿ ಇದು ಆಸ್ತಿ ವಿವಾದಕ್ಕೆ ಸಂಬಂಧಿಸಿದ ಕೊಲೆ ಎಂದು ಹೇಳಲಾಗಿದ್ದರೂ, ನಂತರ ಪ್ರಕರಣವನ್ನು ಕೈಗೆತ್ತಿಕೊಂಡ ಸಿಬಿಐ ಇದು ರಾಜಕೀಯ ಪ್ರೇರಿತ ಕೊಲೆ ಎಂದು ತನಿಖೆಯಲ್ಲಿ ಉಲ್ಲೇಖಿಸಿತ್ತು.
ಸುದೀರ್ಘ ವಿಚಾರಣೆ ಬಳಿಕ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 2026ರ ಏಪ್ರಿಲ್ 17ರಂದು ವಿನಯ್ ಕುಲಕರ್ಣಿ ಸೇರಿದಂತೆ 16 ಮಂದಿಯನ್ನು ದೋಷಿಗಳು ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದೀಗ ಜೈಲಿನಲ್ಲಿರುವ ವಿನಯ್ ಕುಲಕರ್ಣಿ ಪರ ವಕೀಲರು ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದು, ಕಾಂಗ್ರೆಸ್ ಪಕ್ಷವೂ ರಾಜಕೀಯವಾಗಿ ಹೋರಾಟಕ್ಕೆ ಇಳಿದಿದೆ.




