ಹಳ್ಳಿಹಕ್ಕಿ ವಿಶ್ವನಾಥ್ ಸಚಿವರಾಗಲು ಕೋರ್ಟ್ ನಿರಾಕರಿಸಿದ್ದು, ಈ ಬಗ್ಗೆ ಸಾರಾ ಮಹೇಶ್ ಹೇಳಿಕೆ ನೀಡಿದ್ದಾರೆ. ತಪ್ಪಿಗೆ ತಕ್ಕ ಶಿಕ್ಷೆಯಾಗಿದೆ. ಕಳೆದ ವರ್ಷ ವಿಶ್ವನಾಥ್ ನನ್ನ ಮೇಲೆ ಆರೋಪ ಮಾಡಿದಾಗ, ನೀನೇ ತಪ್ಪಿತಸ್ಥರಿಗೆ ಶಿಕ್ಷೆ ಕೊಡು ಎಂದು ಬೇಡಿ, ಕಣ್ಣೀರಿಟ್ಟಿದ್ದೆ. ತಾಯಿ ಚಾಮುಂಡೇಶ್ವರಿ ಈ ಘಟನೆ ನಡೆದ ಒಂದು ವರ್ಷಕ್ಕೆ ತಕ್ಕ ಶಿಕ್ಷೆ ನೀಡಿದ್ದಾಳೆ ಎಂದು ಹೇಳಿದರು. ಈ ಕಾರಣಕ್ಕಾಗಿಯೇ ಸಾರಾ ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಇನ್ನು ಈ ಹೇಳಿಕೆಗೆ ತಿರುಗೇಟು ನೀಡಿರುವ ವಿಶ್ವನಾಥ್, ಸಾರಾ ಮಹೇಶ್ ಕೊಚ್ಚೆಗುಂಡಿ, ನಾನು ಅದಕ್ಕೆ ಕಲ್ಲೆಸೆದು ನನ್ನ ಶುಭ್ರಬಟ್ಟೆ ಕೊಳೆ ಮಾಡಿಕೊಳ್ಳುವುದಿಲ್ಲ. ಅವರ ಬಗ್ಗೆ ನಾನು ಮಾತನಾಡುವುದಿಲ್ಲ, ಅವರ ಹೇಳಿಕೆಗೂ ನಾನು ಪ್ರತಿಕ್ರಿಯಿಸುವುದಿಲ್ಲ ಎಂದಿದ್ದಾರೆ.
ಅಲ್ಲದೇ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿರುವ ವಿಶ್ವನಾಥ್, ಸರ್ಕಾರ ರಚಿಸುವಾಗ ನನ್ನ ಸಹಾಯ ತೆಗೆದುಕೊಂಡಿದ್ದಾರೆ. ಆದ್ರೆ ನನ್ನ ಪರವಾಗಿ ಸರಿಯಾಗಿ ತೀರ್ಪು ಮಂಡಿಸಿಲ್ಲ. ಈ ಕಾರಣಕ್ಕಾಗಿ ನನಗೆ ಸೋಲಾಗಿದೆ. ನನ್ನ ಬೆನ್ನಿಗೆ ಚೂರಿ ಹಾಕಿದವರ ಬಗ್ಗೆಯೂ ನಾನು ಏನು ಹೇಳಿರಲಿಲ್ಲ. ಆದ್ರೆ ಈಗ ಸಚಿವ ಸ್ಥಾನಕ್ಕೇರುವ ಬಗ್ಗೆ ತೀವ್ರ ನಿರಾಸೆಯಾಗಿದೆ ಎಂದು ಬೇಸರ ಹೊರಹಾಕಿದರು.
ಅಲ್ಲದೇ, ನಾನು ಈ ಬಗ್ಗೆ ಹೋರಾಟ ಮುಂದುವರಿಸುತ್ತೇನೆ. ನನ್ನ ರಾಜಕೀಯ ಜೀವನ ಇಲ್ಲಿಗೆ ಮುಗೀತು ಎನ್ನುವವರು ಅಪ್ರಬುದ್ಧರು. ನಾನು ಇಷ್ಟು ಬೇಗ ರಾಜಕೀಯ ನಿವೃತ್ತಿ ಘೋಷಿಸುವುದಿಲ್ಲ ಎಂದಿದ್ದಾರೆ.