Sunday, December 22, 2024

Latest Posts

‘ಮಹದಾಯಿ, ಕೃಷ್ಣಾ ಮೇಲ್ದಂಡೆಗೂ ಸರ್ವ ಪಕ್ಷ ನಿಯೋಗ ಕರೆದೊಯ್ಯಲು ನಾವು ಸಿದ್ದರಿದ್ದೇವೆ’

- Advertisement -

Political News: ಈ ಬಾರಿ ಬೆಳಗಾವಿ ಅಧಿವೇಶನದಲ್ಲಿ ಮಹದಾಯಿ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಲೇಬೇಕು ಎಂದು ಉತ್ತರಕರ್ನಾಟಕ ಭಾಗದ ಜನರು ಆಗ್ರಹಿಸಿದ್ದರು. ಈ ಬಗ್ಗೆ ಇಂದು ಬೆಳಗಾವಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮಹದಾಯಿ, ಕೃಷ್ಣಾ ಮೇಲ್ದಂಡೆಗೂ ಸರ್ವ ಪಕ್ಷ ನಿಯೋಗ ಕರೆದೊಯ್ಯಲು ನಾವು ಸಿದ್ದರಿದ್ದೇವೆ ಎಂದಿದ್ದಾರೆ. ಅಲ್ಲದೇ, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ವಿವರವಾಗಿ ಟ್ವೀಟ್ ಮಾಡಿದ್ದಾರೆ.

ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಮತ್ತು ತೀರುವಳಿಗಳನ್ನು ಪಡೆಯಲು ಸರ್ವ ಪಕ್ಷ ನಿಯೋಗ ಕೊಂಡೊಯ್ಯಲು ಸರ್ಕಾರ ಸಿದ್ಧವಿದೆ. ಕೇಂದ್ರದ ಮೇಲೆ ಒತ್ತಡ ಹಾಕಿ ತೀರುವಳಿಗಳನ್ನು ಕೊಡಿಸಿದರೆ ತಕ್ಷಣವೇ ಕಾಮಗಾರಿಗಳ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು.

ನೀರಾವರಿ ಕೃಷ್ಣಾ ಭಾಗ್ಯ ಜಲ ನಿಗಮ 3ನೇ ಹಂತದಲ್ಲಿ 130 ಟಿಎಂಸಿ ನೀರು ಬಳಸಬೇಕು ಎಂಬ ಆದೇಶವಿದ್ದರೂ, ಅಫಿಡವಿಟ್ ಹಾಕಿಲ್ಲ. 2ನೇ ಟ್ರಿಬ್ಯುನಲ್ ಬ್ರಿಜೇಶ್ ಕುಮಾರ್ ವರದಿ ಕೊಟ್ಟು 13 ವರ್ಷಗಳಾಯಿತು. 13 ವರ್ಷಗಳಿಂದ ಗೆಜೆಟ್ ಅಧಿಸೂಚನೆ ಆಗಿಲ್ಲ. ಇದು ಆಗದೇ ಆಲಮಟ್ಟಿ ಜಲಾಶಯದ ಎತ್ತರವನ್ನು 524 ಮೀಟರ್ ಗೆ ಏರಿಸಲಾಗುವುದಿಲ್ಲ. ಈ ಬಗ್ಗೆ ಒತ್ತಾಯಿಸಲು ಸರ್ವ ಪಕ್ಷ ನಿಯೋಗ ಕರೆದೊಯ್ಯಲು ನಾವು ಸಿದ್ದರಿದ್ದೇವೆ. ಆದರೆ ಪ್ರಧಾನಿಗಳು ಭೇಟಿಗೆ ಅವಕಾಶವನ್ನೇ ನೀಡುವುದಿಲ್ಲ.

ಮಹದಾಯಿ ಕುಡಿಯುವ ನೀರಿನ ಯೋಜನೆಗೆ ಅರಣ್ಯ ಮತ್ತು ಪರಿಸರದ ತೀರುವಳಿಯಾಗಬೇಕು. ಅವರು ಕೊಟ್ಟ ತಕ್ಷಣ ನಾವು ಕೆಲಸ ಪ್ರಾರಂಭ ಮಾಡುತ್ತೇವೆ. ಮಹದಾಯಿ, ಕೃಷ್ಣಾ ಮೇಲ್ದಂಡೆಗೂ ಸರ್ವ ಪಕ್ಷ ನಿಯೋಗ ಕರೆದೊಯ್ಯಲು ನಾವು ಸಿದ್ದರಿದ್ದೇವೆ.

ಕೃಷ್ಣ ಮೇಲ್ದಂಡೆಗೆ 21 ಸಾವಿರ ಕೋಟಿ ರೂ.ಗಳ ಪರಿಷ್ಕೃತ ಅಂದಾಜು ಪಟ್ಟಿ. 5,300 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಘೋಷಣೆಯಾಗಿದೆ. ಇವತ್ತಿನವರೆಗೆ ಒಂದು ಪೈಸೆ ಬಿಡುಗಡೆಯಾಗಿಲ್ಲ. ಆದರೆ ಮತ್ತೊಂದೆಡೆ ಕೇಂದ್ರ ಹಣಕಾಸು ಮಂತ್ರಿಗಳು ಕರ್ನಾಟಕಕ್ಕೆ ಯಾವುದೇ ಅನುದಾನ ಬಾಕಿ ಇಲ್ಲ ಎನ್ನುತ್ತಾರೆ. ನಾವು ಅಧಿಸೂಚನೆ ಆಗುವವರೆಗೆ ಪುನರ್ವಸತಿ ಮತ್ತು ಪುನಶ್ಚೇತನ ಕಾರ್ಯವನ್ನು ಕೈಗೊಳ್ಳುತ್ತೇವೆ. ನಾವು ಅತಿ, ಅತ್ಯಂತ, ಹಿಂದುಳಿದ ತಾಲ್ಲೂಕುಗಳನ್ನು ಅಭಿವೃದ್ಧಿ ಮಾಡಲು ಬದ್ಧರಿದ್ದೇವೆ.

ಮೇಕೆ ದಾಟು 2018ರಲ್ಲಿ ಸುಪ್ರೀಂ ಕೋರ್ಟ್ ನಿರ್ಧಾರ ಸಾಮಾನ್ಯ ವರ್ಷಗಳಲ್ಲಿ 177. 25 ಟಿಎಂಸಿ ತಮಿಳುನಾಡಿಗೆ ಕೊಡಬೇಕು ಎಂದು ತೀರ್ಪು ನೀಡಿದೆ. ಸಂಕಷ್ಟದ ಪರಿಸ್ಥಿತಿಯಲ್ಲಿ ಎರಡೂ ರಾಜ್ಯಗಳೂ ನೀರು ಹಂಚಿಕೊಳ್ಳಬೇಕು ಎಂದು ತಿಳಿಸಿದೆ. ಮೇಕೆದಾಟು ಯೋಜನೆಯು ಕುಡಿಯುವ ನೀರು, ವಿದ್ಯುತ್ ಉತ್ಪಾದನೆ ಮಾಡುವ ಸಲುವಾಗಿ ರೂಪಿಸಿರುವ ಯೋಜನೆ. ಅಣೆಕಟ್ಟು, ಬ್ಯಾಲೆಲ್ಸಿಂಗ್ ರಿಸರ್ವಾಯರ್. ಕರ್ನಾಟಕದ ವ್ಯಾಪ್ತಿಯಲ್ಲಿಯೇ ನಿರ್ಮಿಸುವುದು. ಇದರಿಂದ ತಮಿಳುನಾಡಿಗೆ ಏನೂ ಹಾನಿಯಿಲ್ಲ. ಬದಲಿಗೆ ಅನುಕೂಲವಾಗುತ್ತದೆ. ತಮಿಳುನಾಡು, ಕೇರಳ, ಆಂಧ್ರದ ಜೊತೆ ಮಾತುಕತೆ ವಿಫಲವಾಗಿ ನ್ಯಾಯಮಂಡಳಿಯು 193 ಟಿಎಂಸಿ ನೀರು ಕೊಡಬೇಕು ಎಂದು ತೀರ್ಪು ನೀಡಿತ್ತು. ನಂತರ 177.25 ಟಿಎಂಸಿ ಯನ್ನು ತಮಿಳುನಾಡಿಗೆ ಬಿಡುಗಡೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಉತ್ತರ ಕರ್ನಾಟಕದ ಚರ್ಚೆಯಲ್ಲಿ 42 ಜನ ಭಾಗವಹಿಸಿದ್ದು 11. ಗಂಟೆ 4 ನಿಮಿಷಗಳ ಕಾಲ ಮಾತನಾಡಿದ್ದಾರೆ. ರಾಜಕೀಯ ಬೆರೆಸದೆ ರಾಜ್ಯದ ಅಭಿವೃದ್ಧಿ, 7 ಕೋಟಿ ಕನ್ನಡಿಗರ ಬಗ್ಗೆ ಚರ್ಚೆಯಾಗಿದೆ. ರಾಜ್ಯದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಚರ್ಚೆಯಾಗಿದೆ. ಕಾಂಗ್ರೆಸ್ ನ 24 ಜನ ಬಿಜೆಪಿಯ 15, ಜನತಾ ದಳದ 2, ಪಕ್ಷೇತರರು ಒಬ್ಬರು ವಿಶೇಷ ಚರ್ಚೆಯಲ್ಲಿ ಭಾಗವಹಿಸಿ ಅಭಿವೃದ್ಧಿಗೆ ಸಲಹೆಗಳನ್ನು ಕೊಟ್ಟಿದ್ದಾರೆ. ಸಮ್ಮಿಶ್ರ ಸರ್ಕಾರವಿದ್ದಾಗ ಹಾಗೂ ಬಿಜೆಪಿ ಮೂರು ವರ್ಷ ಆಡಳಿತ ನಡೆಸಿದಾಗ ಉತ್ತರ ಕರ್ನಾಟಕದ ಬಗ್ಗೆ ಒಮ್ಮೆ ಮಾತ್ರ ಚರ್ಚೆಯಾಗಿತ್ತು.

ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬದ್ಧವಾಗಿದ್ದು, ಪ್ರತ್ಯೇಕ ರಾಜ್ಯದ ಬೇಡಿಕೆ ಸಲ್ಲದು ಹಾಗೂ ಅದು ತಾರತಮ್ಯ ನಿವಾರಣೆಗೆ ಪರಿಹಾರವೂ ಅಲ್ಲ. ಪ್ರತ್ಯೇಕ ಕರ್ನಾಟಕಕ್ಕೆ ಒತ್ತಾಯ ಮಾಡುವುದು ಏಕೀಕರಣಕ್ಕೆ ಹೋರಾಡಿ, ಪ್ರಾಣ ತ್ಯಾಗ ಮಾಡಿದವರಿಗೆ ನಾವು ಮಾಡುವ ಅವಮಾನವಾಗಿದೆ.

ಏಕೀಕರಣಕ್ಕಾಗಿ ಬಹಳ ಜನ ಗಣ್ಯರು ಹೋರಾಡಿದರು. ಭಾಷಾವಾರು ಪ್ರಾಂತ್ರ್ಯ ರಚನೆಯಾಗುವಾಗಲು ಹೋರಾಟ ಮಾಡಿದವರಿದ್ದಾರೆ. ಹೈದರಾಬಾದ್ ಕರ್ನಾಟಕಕ್ಕೆ 371 ಗೆ ತಿದ್ದುಪಡಿ ಆಗಿ 371 ಜೆ ಪರಿಚ್ಛೇದಕ್ಕಾಗಿ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್, ವೈಜನಾಥ್ ಪಾಟೀಲ್ ಮುಂತಾದವರು ಹೋರಾಡಿದರು. ನಾನು ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 2014 ಮತ್ತು 2017 ರಲ್ಲಿ ಉತ್ತರ ಕರ್ನಾಟಕದದ ಬಗ್ಗೆ ಚರ್ಚೆಯಾಗಿತ್ತು. ಒಮ್ಮೆ ಈ ಬಗ್ಗೆ ಎರಡು ಗಂಟೆಗಳಿಗೂ ಹೆಚ್ಚು ಕಾಲ ಉತ್ತರ ನೀಡಿದ್ದೆ.

ಅಭಿವೃದ್ಧಿಗಾಗಿ ಮೀಸಲಿಟ್ಟ ಅನುದಾನ ಪೂರ್ತಿ ಖರ್ಚಾಗಿ ಅಭಿವೃದ್ಧಿಯಾಗಬೇಕು. ಕಿತ್ತೂರು ಕರ್ನಾಟಕದ 5 ತಾಲ್ಲೂಕುಗಳು ಸೇರಿದಂತೆ ಹಿಂದುಳಿದ, ಅತೀ ಹಿಂದುಳಿದ ತಾಲ್ಲೂಕುಗಳಿಗೂ ಅನುದಾನ ಕೊಡಲಾಗುವುದು. ಕಲ್ಯಾಣ ಕರ್ನಾಟಕಕ್ಕೆ 2013-14 ರಿಂದ ಈವರೆಗೆ 14,877.36 ಕೋಟಿ ರೂ.ಗಳು ಮೀಸಲಿಡಲಾಗಿದೆ. ಬಿಡುಗಡೆಯಾಗಿದ್ದು 10,280 ಕೋಟಿ ರೂ. ಹಾಗೂ 8,330 ಕೋಟಿ ರೂ. ವೆಚ್ಚವಾಗಿದೆ. ಮುಂದಿನ ವರ್ಷದಿಂದ 5,000 ಕೋಟಿ ರೂ.ಗಳನ್ನು ಕಲ್ಯಾಣ ಕರ್ನಾಟಕಕ್ಕೆ ನೀಡಲಾಗುವುದು. ಮುಂಬೈ ಕರ್ನಾಟಕದ ಹಿಂದುಳಿದ ತಾಲ್ಲೂಕುಗಳಿಗೂ ಅನುದಾನ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಹೇಳಿದ್ದಾರೆ.

‘ವಿಮಾನ ನಿಲ್ದಾಣಕ್ಕೆ ಕ್ರೂರಿಗಳು, ಕೊಲೆ ಕಡುಕರ ಹೆಸರಿಟ್ಟರೆ ಬಿಜೆಪಿ ಉಗ್ರ ಹೋರಾಟ ಮಾಡಲಿದೆ’

ಹುಟ್ಟುಹಬ್ಬದ ದಿನ ನಾನು ಬೆಂಗಳೂರಿನಲ್ಲಿ ಲಭ್ಯವಿರುವುದಿಲ್ಲ: ಮಾಜಿ ಸಿಎಂ ಕುಮಾರಸ್ವಾಮಿ

‘ನಾನು ಸಚಿವನಾಗಿ ನನಗೆ ಇನ್ನೂ ಲೋಕಸಭೆಗೆ ಹೋಗಲು ಆಗಿಲ್ಲ. ಹಾಗಾದರೆ ಇವನು ಹೇಗೆ ಹೋದ?’

- Advertisement -

Latest Posts

Don't Miss