Political News: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತರಲು ಹೊರಟಿರುವ ಜಾತಿ ಗಣತಿ ವರದಿಯ ಕುರಿತು ಪರ – ವಿರೋಧದ ಚರ್ಚೆಗಳು ವ್ಯಾಪಕವಾಗಿ ಜೋರಾಗಿವೆ. ಅಲ್ಲದೆ ಸ್ವಪಕ್ಷದ ಶಾಸಕರು ಹಾಗೂ ಸಚಿವರೇ ಈ ಜಾತಿ ಗಣತಿಯನ್ನು ತಿರಸ್ಕರಿಸುತ್ತೇವೆಂದು ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇನ್ನೂ ಈ ಜಾತಿ ಗಣತಿಯು ಅವೈಜ್ಞಾನಿಕವಾಗಿದೆ, ಒಂದು ವೇಳೆ ಇದು ರಾಜ್ಯದಲ್ಲಿ ಜಾರಿಯಾದರೆ ಕರ್ನಾಟಕ ಬಂದ್ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ ಎಂದು ಒಕ್ಕಲಿಗರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇದಕ್ಕೆಲ್ಲ ಮಿಗಿಲಾಗಿ ಸರ್ಕಾರದಲ್ಲಿ ಹೆಚ್ಚಿನ ಶಕ್ತಿಯಾಗಿರುವ ಲಿಂಗಾಯತ ಸಮುದಾಯ ಈ ಜಾತಿ ಗಣತಿಯ ವಿರುದ್ಧ ಇದೀಗ ಸಿಡಿದೆದ್ದಿದ್ದು, ರಾಜ್ಯದಲ್ಲಿ ಜಾತಿ ಗಣತಿಯ ಜ್ವಾಲೆ ಇನ್ನಷ್ಟು ಸ್ಫೋಟಗೊಂಡಿದೆ.
ಇನ್ನೂ ಇದೇ ವಿಚಾರಕ್ಕೆ ಮಾತನಾಡಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಈ ಜಾತಿ ಗಣತಿಯ ವಿರುದ್ಧ ಒಕ್ಕಲಿಗರ ಜೊತೆಯಾಗಿ ನಾವು ಹೋರಾಟ ಮಾಡುತ್ತೇವೆ ಎಂದು ಗುಡುಗಿದ್ದಾರೆ. ಈ ಸರ್ಕಾರ ಜಾತಿ ಗಣತಿ ವರದಿ ಜಾರಿ ಮಾಡಿಕೊಂಡ್ರೇ ಏನ್ ಆಗುತ್ತೆ. ಅವರಿಗೆ ಅದು ಉಲ್ಟಾ ಹೊಡೆಯುತ್ತೆ. ರಾಜ್ಯದಲ್ಲಿ ಎರಡು ಮೇಜರ್ ಕಮ್ಯೂನಿಟಿಗಳಿವೆ ಎಂದು ತಮ್ಮದೇ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮನ್ನು ಎದುರು ಹಾಕಿಕೊಂಡು ರಾಜ್ಯಭಾರ ಮಾಡಲು ಆಗಲ್ಲ..!
ಅಲ್ಲದೆ ಈ ಕರ್ನಾಟಕ ರಾಜ್ಯದಲ್ಲಿ ಮೊದಲಿಗೆ ವೀರಶೈವರು, ಎರಡನೇ ಸ್ಥಾನದಲ್ಲಿ ಒಕ್ಕಲಿಗ ಸಮುದಾಯದವರು ಇದ್ದಾರೆ. ವೀರಶೈವ ಲಿಂಗಾಯತರನ್ನು ಹಾಗೂ ಒಕ್ಕಲಿಗರನ್ನು ಎದುರು ಹಾಕಿಕೊಂಡು ಅವರು ರಾಜ್ಯಭಾರ ಮಾಡಲು ಆಗುತ್ತಾ? ಲಿಂಗಾಯತರು ಹಾಗೂ ಒಕ್ಕಲಿಗರು ಇಬ್ಬರು ಸೇರಿ ಹೋರಾಟ ಮಾಡ್ತೇವೆ. ಇಬ್ಬರು ಒಟ್ಟಾಗಿ ಸೇರಲಿದ್ದೇವೆ, ನಮ್ಮನ್ನು ಎದುರು ಹಾಕಿಕೊಂಡು ರಾಜ್ಯ ಭಾರ ಮಾಡಲು ಸಾಧ್ಯವೇ ಇಲ್ಲ. ಇದರ ಬಗ್ಗೆ ಸಭೆ ನಡೆದಿದ್ದು, ಮುಂದೆಯೂ ಕೂಡ ಸಭೆ ಮಾಡುತ್ತೇವೆ ಎಂದು ಪರೋಕ್ಷವಾಗಿ ಶಾಮನೂರು ಶಿವಶಂಕರಪ್ಪ ಸರ್ಕಾರಕ್ಕೆ ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಇನ್ನೂ ಶಾಮನೂರು ಅವರ ಈ ಹೇಳಿಕೆಯು ರಾಜ್ಯ ಸರ್ಕಾರಕ್ಕೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಇಷ್ಟು ದಿನ ಜಾತಿ ಗಣತಿಯಲ್ಲಿ ಏನಿದೆ ಎನ್ನುವುದನ್ನು ನೋಡೋಣ ಎನ್ನುತ್ತಿದ್ದ ಅವರು ದಿಢೀರ್ ಆಗಿ ಸರ್ಕಾರದ ವಿರುದ್ಧ ಸಮರ ಸಾರಿರುವುದು ಸಿಎಂ ಸಿದ್ದರಾಮಯ್ಯನವರಿಗೆ ಇನ್ನೊಂದು ದೊಡ್ಡ ಟೆನ್ಷನ್ ಶುರುವಾಗಿದೆ.
ಸರ್ಕಾರವನ್ನೇ ನಡುಗಿಸಿದ್ದ ಶಾಮನೂರು ಹೇಳಿಕೆ..
ರಾಜ್ಯದಲ್ಲಿ ಪ್ರಭಾವಿ ಹಿರಿಯ ರಾಜಕಾರಣಿಯಾಗಿರುವ ಶಾಮನೂರು ಶಿವಶಂಕರಪ್ಪ ಅವರ ಒಂದೊಂದು ಹೇಳಿಕೆಗಳು ರಾಜಕಾರಣದಲ್ಲಿ ಅತ್ಯಂತ ಮಹತ್ವ ಪಡೆದುಕೊಳ್ಳುತ್ತವೆ. ವೀರಶೈವ ಲಿಂಗಾಯತ ಸಮುದಾಯದ ಪ್ರಮುಖ ನಾಯಕರಾಗಿರುವ ಅವರು ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಹಿಡಿತವನ್ನು ಇಟ್ಟುಕೊಂಡಿದ್ದಾರೆ. ಅಲ್ಲದೆ ಬಹುತೇಕ ಲಿಂಗಾಯತ ಶಾಸಕರು ಇವರ ಮಾತನ್ನು ಪಾಲಿಸುತ್ತಾರೆ. ಹೀಗಿರುವಾಗ ಸರ್ಕಾರದಲ್ಲಿ 7 ಸಚಿವರನ್ನು ಲಿಂಗಾಯತ ಸಮುದಾಯವು ಹೊಂದಿದ್ದು, ಇದೀಗ ಜಾತಿ ಗಣತಿಯ ವಿರುದ್ಧ ಆಕ್ರೋಶ ಹೊರ ಹಾಕುತ್ತಿರುವುದು ಸರ್ಕಾರಕ್ಕೆ ಎಚ್ಚರಿಕೆಯ ಕರೆ ಗಂಟೆಯಂತಿದೆ.
ಈ ಹಿಂದೆಯೂ ಇದೇ ರೀತಿ ಸಂಚಲನಕಾರಿ ಹೇಳಿಕೆ ನೀಡಿದ್ದ ಶಾಮನೂರು ಶಿವಶಂಕರಪ್ಪ ರಾಜ್ಯ ಸರ್ಕಾರವನ್ನೇ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದ್ದರು.ಕಳೆದ 2023ರ ಸಫ್ಟೆಂಬರ್ ತಿಂಗಳಲ್ಲಿ ಕಾರ್ಯಕ್ರಮವೊಂದರಲ್ಲಿ, ಯಾರೇ ಮುಖ್ಯಮಂತ್ರಿಯಾದರೂ ಅವರ ಸಮುದಾಯದ ಅಧಿಕಾರಿಗಳಿಗೆ ಒಳ್ಳೆಯ ಸ್ಥಾನ ಕೊಡುತ್ತಾರೆ. ಈಗ ನಮ್ಮ ಸಮುದಾಯದವರು ಮೂಲೆಗುಂಪು ಆಗಿದ್ದಾರೆ. ಹೀಗಾಗಿ ವೀರಶೈವ ಲಿಂಗಾಯತ ಅಧಿಕಾರಿಗಳ ಸ್ಥಿತಿ ನಾಯಿಪಾಡು ಆಗಿದೆ. ನಾವು ಒಗ್ಗಟ್ಟಾಗಿ ಇಲ್ಲದ ಕಾರಣ ಅನ್ಯಾಯಕ್ಕೆ ಒಳಗಾಗುತ್ತಿದ್ದೇವೆ. ಉಪಪಂಗಡಗಳೆಲ್ಲ ಒಂದಾಗಬೇಕು. ಎಲ್ಲ ಸಮುದಾಯದವರೂ ತಮ್ಮ ತಮ್ಮ ಸಮಾಜ ಮುಂದಕ್ಕೆ ಬರಬೇಕು ಎಂದು ಬಯಸುತ್ತಾರೆ. ರಾಜ್ಯದ ದೊಡ್ಡ ಸಮುದಾಯವಾಗಿರುವ ನಾವೂ ಹಿಂದಕ್ಕೆ ಉಳಿಯಬಾರದೆಂದು ಶಾಮನೂರು ಶಿವಶಂಕರಪ್ಪ ಹೇಳಿಕೆ ನೀಡಿದ್ದರು. ಈ ಒಂದೇ ಮಾತು ರಾಜ್ಯ ಸರ್ಕಾರವನ್ನೇ ಅಲ್ಲಾಡುವಂತೆ ಮಾಡಿತ್ತು, ಅಲ್ಲದೆ ಶಾಸಕರು ಹಾಗೂ ಸಚಿವರು ಇದರ ಬಗ್ಗೆ ತಮ್ಮ ಹೇಳಿಕೆಗಳನ್ನು ನೀಡಿದ್ದರು. ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ತಕ್ಷಣ ಇದಕ್ಕೆ ಪ್ರತಿಕ್ರಿಯಿಸಿ ಆಗಿರುವ ಲೋಪವನ್ನು ಸರಿಪಡಿಸುವ ಭರವಸೆ ನೀಡಿದ್ದರು. ಈ ಒಂದೇ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲಕ್ಕೆ ಕಾರಣವಾಗಿತ್ತು. ಅಲ್ಲದೆ ಈಗಲೂ ಸಹ ಶಾಮನೂರು ಶಿವಶಂಕರಪ್ಪ ಅವರ ಈ ಹೇಳಿಕೆಯು ಸರ್ಕಾರವನ್ನು ನಡುಗುವಂತೆ ಮಾಡಿದರೂ ಅಚ್ಚರಿಯಿಲ್ಲ.