International News: ಅಮೆರಿಕದಲ್ಲಿ ಅಧ್ಯಕ್ಷ ಘೋಷಿಸಿರುವ ನೂತನ ತೆರಿಗೆ ನೀತಿ ಏಪ್ರಿಲ್ 9ರಿಂದ ಜಾರಿಗೆ ಬರಲಿದೆ. ಇದಕ್ಕೂ ಮುನ್ನ ತೆರಿಗೆ ನೀತಿಯಿಂದ ಪಾರಾಗಲು ಆಪಲ್ ಕಂಪನಿ ಹೊರ ಉಪಾಯೊಂದನ್ನು ಮಾಡಿದ್ದು, ಭಾರತದಿಂದ 5 ವಿಮಾನದಷ್ಟು ಐಫೋನ್ ಹಾಗೂ ಇತರ ಉತ್ಪನ್ನಗಳನ್ನು ಅಮೆರಿಕಕ್ಕೆ ರಫ್ತು ಮಾಡಿದೆ. ಟ್ರಂಪ್ ಸುಂಕ ನೀತಿ ಬಂದರೆ ಅಲ್ಲಿನ ಐಪೋನ್‌ಗಳ ಬೆಲೆಯು ಏರಿಕೆಯಾಗಲಿವೆ. ಈ ಹಿನ್ನೆಲೆಯಲ್ಲಿ ಇದರಿಂದ ಬಚಾವಾಗಲು ಆಪಲ್ ಕಂಪನಿಯು ಮುಂಚಿತವಾಗಿಯೇ ತನ್ನ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿದೆ.
ಭಾರತದ ಮೇಲಿನ ಸುಂಕ ಕಡಿಮೆ..
ಇನ್ನೂ ಭಾರತದ ಮೇಲೆ ಟ್ರಂಪ್ ಶೇಕಡಾ 26ರಷ್ಟು, ಚೀನಾದ ಮೇಲೆ ಶೇಕಡಾ 52ರಷ್ಟು ತೈವಾನ್ ಮೇಲೆ ಶೇಕಡಾ 32ರಷ್ಟು ತೆರಿಗೆ ಹೇರಲಾಗಿದೆ. ಐಫೋನ್ ಅಮೆರಿಕ ಕಂಪನಿಯಾದರೂ ಸಹ ಬಹತೇಕ ಐಫೋನ್‌ಗಳ ಬಿಡಿ ಭಾಗಗಳು ಭಾರತ, ತೈವಾನ್, ವಿಯೆಟ್ನಾಂ ಹಾಗೂ ಚೀನಾ ದೇಶಗಳಲ್ಲಿ ತಯಾರಾಗುತ್ತವೆ. ಈ ಹಿನ್ನೆಲೆಯಲ್ಲಿ ಈ ದೇಶಗಳಿಂದ ರಫ್ತಾಗುವ ಐಫೋನ್‌ಗಳೂ ದುಬಾರಿ ಆಗಲಿವೆ. ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದ ಮೇಲೆ ವಿಧಿಸಿದ ಸುಂಕ ಕಡಿಮೆಯಿದೆ.
ಅಮೆರಿಕಕ್ಕೆ 9 ಶತಕೋಟಿ ಡಾಲರ್‌ನಷ್ಟು ಐಫೋನ್ ರಫ್ತು..
ಅಲ್ಲದೆ ಮಾರ್ಚ್ ಕೊನೆಯ ವಾರದಲ್ಲಿ ಆಪಲ್ ಐಫೋನ್‌ಗಳನ್ನು ರಫ್ತು ಮಾಡಿದೆ. ಏಪ್ರಿಲ್ 5 ರಿಂದ ಜಾರಿಗೆ ಬಂದ ಟ್ರಂಪ್ ಆಡಳಿತವು ವಿಧಿಸಿದ 10% ಪ್ರತಿ ತೆರಿಗೆ ಮೊದಲು ರಫ್ತಾಗಿದೆ. ಚೀನಾದ ಸರಕುಗಳ ಮೇಲೆ 54% ತೆರಿಗೆ ವಿಧಿಸಿದರೆ ಭಾರತದ ವಸ್ತುಗಳ ಮೇಲೆ 26% ತೆರಿಗೆ ವಿಧಿಸಲಾಗುತ್ತಿದೆ. ಈ ನಿರ್ಧಾರದಿಂದ ಭಾರತವು ಆಪಲ್‌ನ ದೊಡ್ಡ ಜಾಗತಿಕ ಉತ್ಪಾದನಾ ನೆಲೆಯಾಗಿ ಹೊರಹೊಮ್ಮುವ ಸಾಧ್ಯತೆಯಿದೆ. ಅಂದಾಜು ಅಮೆರಿಕಕ್ಕೆ 9 ಶತಕೋಟಿ ಡಾಲರ್ ಮೌಲ್ಯದ ಐಫೋನ್‌ಗಳನ್ನು ಭಾರತ ರಫ್ತು ಮಾಡುತ್ತಿದೆ. ಮುಂಬೈನಿಂದ ಅಮೆರಿಕಕ್ಕೆ ರತ್ನಗಳು ಮತ್ತು ಆಭರಣಗಳ ರಫ್ತು ಏಪ್ರಿಲ್ 1 ಮತ್ತು 4 ರ ನಡುವೆ ಆರು ಪಟ್ಟು ಹೆಚ್ಚಾಗಿ 344 ಮಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಒಂದು ವರ್ಷದ ಹಿಂದೆ ರಫ್ತು 61 ಮಿಲಿಯನ್ ಡಾಲರ್ ಆಗಿತ್ತು.
ಫಾಕ್ಸ್‌ಕಾನ್ 2019ರಿಂದ ಆಪಲ್ ಐಫೋನ್‌ಗಳನ್ನು ಭಾರತದಲ್ಲಿ ತಯಾರಿಸುತ್ತಿದ್ದು, ತಮಿಳುನಾಡಿನಲ್ಲಿ ತನ್ನ ಘಟಕ ತೆರದಿದೆ. ಕರ್ನಾಟಕದ ಕೋಲಾರದ ನರಸಾಪುರ ಮತ್ತು ಬೆಂಗಳೂರಿನ ಪೀಣ್ಯದಲ್ಲಿ ವಿಸ್ಟ್ರಾನ್ ಕಂಪನಿ ಐಫೋನ್ ತಯಾರಿಸುತ್ತಿದೆ.