ಶಬರಿಮಲೆ ಅಯ್ಯಪ್ಪ ದೇವಾಲಯದ ಚಿನ್ನ ಕಳ್ಳತನ ಪ್ರಕರಣದ ತನಿಖೆಯನ್ನ ಕೇರಳ SIT ವೇಗವಾಗಿ ಮುಂದುವರೆಸುತ್ತಿದೆ. ಸುಮಾರು 4 ಕಿಲೋ ಚಿನ್ನ ಕಳುವಾದ ಪ್ರಕರಣದಲ್ಲಿ, ತನಿಖಾಧಿಕಾರಿಗಳು ಬಳ್ಳಾರಿಯ ರೊದ್ದಂ ಜ್ಯುವೆಲ್ಲರಿ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲಿ ಚಿನ್ನದ ಅಂಗಡಿ ಮಾಲೀಕನು, ತಾನು ಆ ಚಿನ್ನವನ್ನು ಖರೀದಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.
ತನಿಖೆಯ ಹಿನ್ನಲೆಯಲ್ಲಿ, ಎಸ್‌ಐಟಿ ತಂಡವು ಚಿನ್ನ ಮಾರಾಟ ಮಾಡಿದ ಪೋಟಿ ಉನ್ನಿಕೃಷ್ಣನ್ ಅವರ ಮನೆಯನ್ನು ಅ.24ರಂದು ಪರಿಶೀಲನೆಗೆ ಒಳಪಡಿಸಿದೆ. ಈ ವೇಳೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಳ್ಳಾರಿಯ ಚಿನ್ನದ ವ್ಯಾಪಾರಿ ಗೋವರ್ಧನ್, ಸುಮಾರು 476 ಗ್ರಾಂ ಚಿನ್ನ ಖರೀದಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಆದರೆ, ಅದು ಶಬರಿಮಲೆಯಲ್ಲಿ ಕಳ್ಳತನವಾದ ಚಿನ್ನ ಎನ್ನುವುದು ತಿಳಿದಿರಲಿಲ್ಲ ಎಂದು ಹೇಳಿಕೊಂಡಿದ್ದಾನೆ. ಅದು ಕದ್ದ ಚಿನ್ನ ಎನ್ನುವುದನ್ನು ತಿಳಿದಿದ್ದರೆ ಖರೀದಿ ಮಾಡುತ್ತಿರಲಿಲ್ಲ ಎಂದು ಗೋವರ್ಧನ್ ಎಸ್‌ಐಟಿ ಅಧಿಕಾರಿಗಳಿಗೆ ಸ್ಪಷ್ಟನೆ ನೀಡಿದ್ದಾನೆ. ಅಧಿಕಾರಿಗಳು, ಮುಂದಿನ ತನಿಖೆಗೆ ಅಗತ್ಯವಿದ್ದರೆ ಅವರನ್ನು ಮತ್ತೆ ವಿಚಾರಣೆಗೆ ಕರೆಯಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿಯ ಮಾಜಿ ಅಧಿಕಾರಿ ಬಿ.ಮುರಾರಿ ಬಾಬು ಅವರನ್ನು ಎಸ್‌ಐಟಿ ಈಗಾಗಲೇ ಬಂಧಿಸಿದೆ. ಶಬರಿಮಲೆ ದೇವಸ್ಥಾನದ ಚಿನ್ನದ ಲೇಪನ ಕಾರ್ಯ ಮತ್ತು ಚಿನ್ನದ ದುರುಪಯೋಗ ಪ್ರಕರಣದಲ್ಲಿ ಉನ್ನಿಕೃಷ್ಣನ್ ಅವರ ಪಾತ್ರ ಸ್ಪಷ್ಟವಾಗಿದ್ದು, ಅವರು ದೇವಾಲಯದ ಮೂರ್ತಿಗಳಿಂದ 475 ಗ್ರಾಂ ಚಿನ್ನದ ಪ್ಲೇಟ್‌ಗಳನ್ನು ಕದ್ದಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಪ್ರಸ್ತುತ ಅವರು ಎಸ್‌ಐಟಿ ವಶದಲ್ಲಿದ್ದಾರೆ. ಪ್ರಕರಣದ ತನಿಖೆ ಬಳ್ಳಾರಿ ಮತ್ತು ಬೆಂಗಳೂರು ಪ್ರದೇಶಗಳಲ್ಲಿ ಮುಂದುವರೆದಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

