Spiritual: ಸೀತೆ. ರಾಮಾಯಣದಲ್ಲಿ ಬರುವ ಪ್ರಮುಖ ಪಾತ್ರಧಾರಿ. ಪತಿವೃತಾ ಶಿರೋಮಣಿ. ಇಂಥ ಸೀತಾಮಾತೆಗೆ ಜಾತಕವೇ ಇರಲಿಲ್ಲ. ಆಕೆ ಮನುಕುಲದಲ್ಲಿ ಜನಿಸಿದ ಬಳಿಕವೂ ಆಕೆಗೆ ಜಾತಕವೇ ಇಲ್ಲದಿರಲು ಕಾರಣವೇನು..? ರಾಮನ ಸಹಾಯಕ್ಕಾಗಿ ಬಂದ ಸೀತೆ ಯಾರು..? ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ..
ಜನಕಪುರಿಯ ರಾಜ ಜನಕನಿಗೆ ಮಕ್ಕಳಿರಲಿಲ್ಲ. ಹಾಗಾಗಿ ಆತ ದೇವಾನುದೇವತೆಗಳಲ್ಲಿ ಸಂತಾನ ಭಾಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದ. ಒಮ್ಮೆ ಹೊಲದಲ್ಲಿ ಕೆಲಸ ಮಾಡುವಾಗ, ಮಣ್ಣಿನಲ್ಲಿ ಹೂತುಹೋಗಿದ್ದ ಪೆಟ್ಟಿಗೆಯಲ್ಲಿ ಹೊಳೆಯುವ ವಸ್ತು ಇರುವುದು ಕಂಡಿತು. ಅದೇನೆಂದು ಜನಕರಾಜ ಪೆಟ್ಟಿಗೆ ತೆರೆದಾಗ, ಅದರಲ್ಲಿ ಪುಟ್ಟ ಹೆಣ್ಣು ಮಗುವೊಂದು ಇತ್ತು. ಆಕೆಯನ್ನು ದೇವರು ಕೊಟ್ಟ ವರವೆಂದೇ ಭಾವಿಸಿದ್ದ ರಾಜ, ಮನೆಗೆ ತೆಗೆದುಕೊಂಡು ಹೋಗಿ, ಇವಳು ಇನ್ನು ಮುಂದೆ ನನ್ನ ಮಗಳೆಂದು ಹೇಳಿ, ವಿಜೃಂಭಣೆಯಿಂದ ನಾಮಕರಣ ಮಾಡಿದ.
ಆಕೆಯೇ ಸೀತೆ. ಇದೇ ಸೀತೆ ಮುಂದೊಂದು ದಿನ ಸ್ವಯಂವರದಲ್ಲಿ ಶಿವಧನಸ್ಸನ್ನು ಮುರಿದ ಶ್ರೀರಾಮನನ್ನು ವರಿಸಿ, ಅಯೋಧ್ಯೆಯ ಸೊಸೆಯಾಗಿ ಹೋದಳು. ಆದರೆ ಸೀತೆ ಮನುಷ್ಯ ಜನ್ಮದಲ್ಲಿ ಹುಟ್ಟಿದರು ಕೂಡ ಆಕೆಗೆ ಜಾತಕವಿರಲಿಲ್ಲ. ಶ್ರೀರಾಮ ಪುನರ್ವಸು ನಕ್ಷತ್ರದಲ್ಲಿ ಹುಟ್ಟಿದ್ದನೆಂದು ಹೇಳಲಾಗುತ್ತದೆ. ಹಾಗಾದ್ರೆ ಸೀತೆಗೇಕೆ ಜಾತಕವೇ ಇರಲಿಲ್ಲವೆಂದರೆ, ಆಕೆ ಭೂಮಿಯಿಂದ ಎದ್ದು ಬಂದವಳು. ಹಾಗಾಗಿ ಆಕೆಗೆ ಜಾತಕವೇ ಇರಲಿಲ್ಲ. ಆಕೆ ತಾಯಿಯ ಗರ್ಭದಿಂದ ಜನಿಸಿದ್ದರೆ, ಆಕೆಗೆ ಜಾತಕವಿರುತ್ತಿತ್ತು.
ಇನ್ನು ಸೀತಾಮಾತೆ ಯಾರು..? ಆಕೆ ಭೂಮಿಯಿಂದ ಬರಲು ಕಾರಣವೇನು ಎಂದರೆ, ಆಕೆ ಸಾಕ್ಷಾತ್ ಲಕ್ಷ್ಮೀಯ ಸ್ವರೂಪ. ಲಂಕಾಧಿಪತಿ ರಾವಣ ಸೇರಿ, ಭೂಲೋಕದಲ್ಲಿ ಆತಂಕ ಸೃಷ್ಟಿಸಿದ್ದ ಹಲವು ರಾಕ್ಷಸರ ಸಂಹಾರಕ್ಕಾಗಿ, ವಿಷ್ಣು, ರಾಮನ ರೂಪ ಧರಿಸಿ, ಭೂಲೋಕಕ್ಕೆ ಬರಬೇಕಿತ್ತು. ಏಕೆಂದರೆ, ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದ್ದ ರಾವಣ, ತಾನು ದೇವರು, ದೇವತೆಗಳು, ರಾಕ್ಷಸರು ಸೇರಿ ಇನ್ನಿತರರಿಂದ ಸಾವನ್ನಪ್ಪಬಾರದು ಎಂದು ಹೇಳಿದ್ದ. ಆದರೆ ಮಾನವ ಮತ್ತು ವಾನರನ ಬಗ್ಗೆ ಏನೂ ಹೇಳಿರಲಿಲ್ಲ. ಏಕೆಂದರೆ, ತಾನೊಬ್ಬ ಪ್ರಚಂಡ ರಾಕ್ಷಸನಾಗಿದ್ದು, ಓರ್ವ ತುಚ್ಛ ಮನುಷ್ಯ ಮತ್ತು ವಾನರರು ತನ್ನನ್ನೇನು ಮಾಡಲು ಸಾಧ್ಯ ಎಂಬ ಅಹಂ ಅವನಲ್ಲಿತ್ತು.
ಅವನ ಈ ಅಹಂ ಮುರಿದು ಸಂಹಾರ ಮಾಡಲು, ಸ್ವತಃ ಶ್ರೀವಿಷ್ಣುವೇ ಭೂಲೋಕಕ್ಕೆ ಶ್ರೀರಾಮನ ಅವತಾರ ಪಡೆದು ಬರಬೇಕೆಂದು ನಿರ್ಧಾರವಾಯಿತು. ಶ್ರೀರಾಮನೊಬ್ಬನೇ ರಾವಣನೊಂದಿಗೆ ಸೆಣೆಸಾಡುವ ಬದಲು, ತಾನೂ ಶ್ರೀವಿಷ್ಣುವಿಗೆ ಸಹಾಯ ಮಾಡಬೇಕು ಎಂದು ಲಕ್ಷ್ಮೀ ದೇವಿ ಬಯಸಿದಳು. ಆಕೆಯೂ ಮಾನವನ ರೂಪ ತಾಳಬೇಕೆಂದುಕೊಂಡಳು. ಆದರೆ ಶ್ರೀರಾಮನ ಜನನವಾದ ಬಳಿಕ, ರಾವಣ ನವಗ್ರಹಗಳನ್ನು ತನ್ನ ವಶಕ್ಕೆ ಪಡೆದಿದ್ದ.
ಲಕ್ಷ್ಮೀ ದೇವಿ ಮಾನವಳಾಗಿ ಜನಿಸಿದರೆ, ಆಕೆಯ ಜಾತಕದಲ್ಲಿ ಸಮಸ್ಯೆಯುಂಟಾಗಬಹುದು. ಈತನ ಸುಪರ್ದಿಯಲ್ಲಿರುವ ನವಗ್ರಹಗಳು ಆತ ಹೇಳಿದಂತೆ ಕೇಳಿ, ಆಕೆಯ ಕೆಲಸಕ್ಕೆ ಅಡಚಣೆಯುಂಟು ಮಾಡಬಹುದು ಎಂದು ದೇವತೆಗಳು ಹೇಳಿದರು. ಆ ಬಳಿಕ ಲಕ್ಷ್ಮೀ ದೇವಿ, ತಾನು ಭೂದೇವಿಯ ಗರ್ಭದಿಂದ ಜನಿಸುವುದಾಗಿಯೂ, ಆ ವೇಳೆ ತನಗೆ ಜಾತಕವೇ ಇರುವುದಿಲ್ಲ ಎಂದಾಗಿಯೂ ನಿರ್ಧರಿಸಿದಳು. ಹೀಗಾಗಿ ಸೀತಾ ಮಾತೆಗೆ ಜಾತಕವಿಲ್ಲ.