ಪ್ರಹ್ಲಾದ್ ಜೋಶಿ ವಿರುದ್ಧ ಕಣಕ್ಕಿಳಿಯುವ ‘ಕೈ’ ಅಭ್ಯರ್ಥಿ ಯಾರು?

Political News: ಧಾರವಾಡ: ಲೋಕಸಭಾ ಚುನಾವಣೆ 2024) ಸಮೀಪಿಸಲಾರಂಭಿಸಿದ್ದು, ಧಾರವಾಡ (Dharwad) ಕ್ಷೇತ್ರದಲ್ಲಿ ಸದ್ದಿಲ್ಲದೆ ಕಾವೇರಲಾರಂಭಿಸಿದೆ. ಬಿಜೆಪಿ (BJP) ಹಾಗೂ ಕಾಂಗ್ರೆಸ್ಗಳಲ್ಲಿ (Congress) ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆದಿವೆ. ಬಿಜೆಪಿ ಭದ್ರಕೋಟೆಗೆ ಲಗ್ಗೆ ಹಾಕಲು ಕೈ ಪಡೆ ಪ್ರಬಲ ಅಭ್ಯರ್ಥಿಯನ್ನು ಅಖಾಡಕ್ಕಿಳಿಸಲು ಮುಂದಾಗಿದೆ. ಮತ್ತೊಮ್ಮೆ ಸ್ಪರ್ಧಿಸುವ ಲೆಕ್ಕಾಚಾರದಲ್ಲಿರೋ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚುನಾವಣಾ ಚಟುವಟಿಕೆ ಬಿರುಸುಗೊಳಿಸಿದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ಮೊದಲು ಧಾರವಾಡ ಉತ್ತರ ಕ್ಷೇತ್ರವಾಗಿದ್ದ ಇದು, ಆರಂಭದಲ್ಲಿ ಕಾಂಗ್ರೆಸ್ ಭದ್ರಕೋಟೆ ಎನಿಸಿಕೊಂಡಿದೆ.

ಈ ಕ್ಷೇತ್ರದಲ್ಲಿ ಒಟ್ಟು 17 ಚುನಾವಣೆಗಳು ನಡೆದಿದ್ದು, ಈ ಪೈಕಿ 10 ಬಾರಿ ಕಾಂಗ್ರೆಸ್, ಏಳು ಬಾರಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಸರೋಜಿನಿ ಮಹಿಷಿ ಅಂಥವರು ನಾಲ್ಕು ಬಾರಿ ಪ್ರತಿನಿಧಿಸಿದ್ದರೆಂಬುದು ಈ ಕ್ಷೇತ್ರದ ಹೆಗ್ಗಳಿಕೆ. 1996ರಲ್ಲಿ ಮೊದಲ ಬಾರಿಗೆ ಕ್ಷೇತ್ರದಲ್ಲಿ ಕಮಲ ಅರಳಿತು. ಅಲ್ಲಿಂದ ಇಲ್ಲಿಯವರೆಗೂ ಕಮಲ ಕಲಿಗಳದ್ದೇ ದರ್ಬಾರ್. ಇಂತಹ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸದ್ದಿಲ್ಲದೇ ಚುನಾವಣಾ ಕಾವು ಏರಲಾರಂಭಿಸಿದೆ.

ಸದ್ಯ ಧಾರವಾಡ ಲೋಕಸಭೆ ಬಿಜೆಪಿ ಮತ್ತು ಕಾಂಗ್ರೆಸ್ನ ಪ್ರತಿಷ್ಠೆಯ ಅಖಾಡವಾಗಿದೆ. ಬಿಜೆಪಿ ಭದ್ರಕೋಟೆಗೆ ಲಗ್ಗೆ ಇಡೋ ಮೂಲಕ ತಮ್ಮ ಪ್ರಾಬಲ್ಯ ಮರು ಪ್ರತಿಷ್ಠಾಪಿಸೋ ತವಕದಲ್ಲಿದೆ ಕೈ ಪಡೆ.

ಎಂಟು ವಿಧಾನಸಭಾ ಕ್ಷೇತ್ರಗಳು

ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ ನಾಲ್ಕು ಶಾಸಕರನ್ನು ಹೊಂದಿವೆ. ಕೇಂದ್ರದಲ್ಲಿ ಪ್ರಭಾವಿ ಸಚಿವರಾಗಿರೋ ಪ್ರಹ್ಲಾದ್ ಜೋಶಿ ಕ್ಷೇತ್ರದ ಪ್ರತಿನಿಧಿಯಾಗಿದ್ದಾರೆ. ಮುಂಬರುವ ಚುನಾವಣೆಯಲ್ಲಿಗೂ ಅವರೇ ಬಿಜೆಪಿ ಹುರಿಯಾಳಾಗೋ ಸಾಧ್ಯತೆಗಳಿವೆ. ಹೀಗಾಗಿ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ದಂಡು ಕಾಣಿಸ್ತಿಲ್ಲ.

ಕಾಂಗ್ರೆಸ್ನಲ್ಲಿ ಟಿಕೆಟ್ ಆಕಾಂಕ್ಷಿಗಳ ದಂಡು

ಕಾಂಗ್ರೆಸ್ನಲ್ಲಿ ಟಿಕೆಟ್ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಈಗಾಗಲೇ 17 ಜನ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಈ ಸಂಖ್ಯೆ 20ನ್ನು ದಾಟುವ ಸಾಧ್ಯತೆಗಳಿವೆ. ಸ್ಪರ್ಧಾಕಾಂಕ್ಷಿಗಳ ಪಟ್ಟಿಯಲ್ಲಿ ಘಟಾನುಘಟಿ ನಾಯಕರು ಇರೋದು ವಿಶೇಷ.

ಯಾರೆಲ್ಲಾ ಟಿಕೆಟ್ ಆಕಾಂಕ್ಷಿಗಳು?

ಹಾಲಿ ಸಚಿವರು, ಹಾಲಿ ಶಾಸಕರ ಸಂಬಂಧಿಗಳು, ಮಾಜಿ ಶಾಸಕರು, ಮತ್ತಿತರರ ನಡುವೆ ಪೈಪೋಟಿ ಏರ್ಪಟ್ಟಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅಳಿಯ ರಜತ್ ಉಳ್ಳಾಗಡ್ಡಿ ಮಠ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅನಿಲ್ ಪಾಟೀಲ, ಮಾಜಿ ಶಾಸಕ ಮೋಹನ ಲಿಂಬಿಕಾಯಿ, ಎಂ.ಎಸ್.ಅಕ್ಕಿ, ಶಾಸಕ ವಿನಯ್ ಕುಲಕರ್ಣಿ ಸಹೋದರ ವಿಜಯ್ ಕುಲಕರ್ಣಿ, ಮಾಜಿ ಎಂ.ಪಿ. ಪುತ್ರ ಶಾಕೀರ್ ಸನದಿ ಮತ್ತಿತರರ ಹೆಸರು ಆಕಾಂಕ್ಷಿಗಳ ಪಟ್ಟಿಯಲ್ಲಿದೆ.

ಟಿಕೆಟ್ ಕೊಟ್ಟಲ್ಲಿ ಕಾಂಗ್ರೆಸ್ಗೆ ಬರ್ತೇವೆ ಅನ್ನೋರ ಪಟ್ಟಿ ಮತ್ತೊಂದೆಡೆ ಇದೆ. ಇದರ ನಡುವೆ ಹೈಕಮಾಂಡ್ ಮಟ್ಟದಲ್ಲಿ ಜಗದೀಶ್ ಶೆಟ್ಟರ್ ಹೆಸರು ತೇಲಿ ಬಂದಿದೆ. ಆದರೆ ನಾನು ಟಿಕೆಟ್ ಆಕಾಂಕ್ಷಿಯಲ್ಲ ಅಂತಿದಾರೆ ಮಾಜಿ ಸಿಎಂ ಜಗದೀಶ್ ಶೆಟ್ಟರ್. ಹೈಕಮಾಂಡ್ ಸೂಚಿಸಿದಲ್ಲಿ ಆಗ ವಿಚಾರ ಮಾಡೋಣ. ಸದ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸೋದು ನಮ್ಮ ಗುರಿ ಅಂತ ಶೆಟ್ಟರ್ ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ನಲ್ಲಿ ಒಗ್ಗಟ್ಟಿನ ಮಂತ್ರ

ಟಿಕೆಟ್ಗಾಗಿ ಕೈ ಪಾಳಯದಲ್ಲಿ ಇನ್ನಿಲ್ಲದ ಕಸರತ್ತು ಮುಂದುವರಿದಿದೆ. ಜಿಲ್ಲಾಧ್ಯಕ್ಷ, ಇತರೆ ಟಿಕೆಟ್ ಆಕಾಂಕ್ಷಿಗಳೂ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ. ಹೈಕಮಾಂಡ್ ಯಾರಿಗೇ ಟಿಕೆಟ್ ಕೊಡಲಿ. ಒಟ್ಟಾಗಿ ಕೆಲಸ ಮಾಡಿ, ಕೈ ಅಭ್ಯರ್ಥಿಯನ್ನು ಗೆಲ್ಲಿಸ್ತೇವೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಮತ್ತು ಟಿಕೆಟ್ ಆಕಾಂಕ್ಷಿಗಳು ಹೇಳುತ್ತಿದ್ದಾರೆ.

ಯಾರೇ ನಿಂತುಕೊಳ್ಳಲಿ, ಅದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂದು ಹಾಲಿ ಸಂಸದ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಕಾಂಗ್ರೆಸ್ ಯಾರನ್ನು ಅಖಾಡಕ್ಕಿಳಿಸುತ್ತೆ ಅನ್ನೋದನ್ನು ತಲೆಕೆಡಿಸಿಕೊಳ್ಳದೇ ಪ್ರಹ್ಲಾದ್ ಜೋಶಿ, ತಮ್ಮ ಚುನಾವಣಾ ತಯಾರಿ ನಡೆಸಿದ್ದಾರೆ.

ಪಕ್ಷ ಸಂಘಟನೆಯಲ್ಲಿ ಬಿಜೆಪಿ

ಇನ್ನು ಮೈತ್ರಿಯ ಕಾರಣಕ್ಕೆ ಜೆಡಿಎಸ್ ನಾಯಕರು ಚುನಾವಣೆ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ. ಬಿಜೆಪಿ ಭದ್ರಕೊಟೆಯನ್ನು ಸುಭದ್ರಗೊಳಿಸೋ ಗುರಿಯೊಂದಿಗೆ ಕಮಲ ಕಲಿಗಳು ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ.

ಅಭ್ಯರ್ಥಿ ಫೈನಲ್ ಆಗಿಲ್ಲದಿದ್ದರೂ ಕಾಂಗ್ರೆಸ್ನಲ್ಲಿ ಪಕ್ಷ ಸಂಘಟನೆ ಬಿರುಸುಗೊಂಡಿದೆ. ವಿಧಾನಸಭಾ ಕ್ಷೇತ್ರವಾರು ಪಕ್ಷ ಸಂಘಟನೆಯಲ್ಲಿ ಮುಖಂಡರು ತೊಡಗಿಕೊಂಡಿದ್ದಾರೆ. ಮತ್ತೊಂದೆಡೆ ಪ್ರಹ್ಲಾದ್ ಜೋಶಿ ಸದ್ದಿಲ್ಲದೆ ಚುನಾವಣಾ ತಯಾರಿ ನಡೆಸಿದ್ದಾರೆ. ಮೋದಿ ಮತ್ತು ತಮ್ಮ ಅಭಿವೃದ್ಧಿ ಕಾರ್ಯ ಮುಂದಿಟ್ಟುಕೊಂಡು ಜೋಶಿ ಚುನಾವಣಾ ತಯಾರಿ ನಡೆಸಿದ್ದಾರೆ. ಹೀಗಾಗಿ ಧಾರವಾಡ ಅಖಾಡ ದಿನದಿಂದ ದಿನಕ್ಕೆ ಕಾವೇರುತ್ತಿದೆ.

‘ಪ್ರಧಾನಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ, ನೆರವು ನೀಡುತ್ತಾರೆಂದು ಭಾವಿಸಿದ್ದೇನೆ’

ಬಿಜೆಪಿಗೆ ನಾನೇ ಟಾರ್ಗೆಟ್ ಆಗ್ತಿದ್ದೇನೆ! ನನ್ನ ಬಗ್ಗೆ ಅವರಿಗೆ ಈಗ ಅರ್ಥವಾಗಿದೆ ಎಂದ ಶೆಟ್ಟರ್

‘ಬಿಜೆಪಿಯ ಪಕ್ಷದ MPಗಳನ್ನು ಮಾತ್ರ ಇಟ್ಟುಕೊಂಡು ಸಂಸತ್ ಅಧಿವೇಶನ ನಡೆಸುವುದು ನಾಚಿಕೆಗೇಡು’

About The Author