ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ತಮ್ಮ ಎಕ್ಸ್ ಖಾತೆಯಲ್ಲಿ ಮಾಡಿದ ಒಂದು ಪೋಸ್ಟ್ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ನಿಖಿಲ್ ಕುಮಾರಸ್ವಾಮಿ ‘ಕರ್ನಾಟಕ ಅಸಲಿ ಮುಖ್ಯಮಂತ್ರಿ ನೋಡಲು ಸ್ಕ್ಯಾನ್ ಮಾಡಿ’ ಎಂಬ ಟೀಕಾತ್ಮಕ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ನಲ್ಲಿ ಅವರು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ, ಫೇಸ್‌ಬುಕ್ ಖಾತೆಯ ಕ್ಯೂಆರ್ ಕೋಡ್ ಹಾಕಿದ್ದಾರೆ.
ಕರ್ನಾಟಕವು ಕನ್ನಡಿಗ ಸಿಎಂಗೆ ಮತ ಹಾಕಿದೆ. ಆದರೆ ಹರಿಯಾಣದ ಸೂಪರ್ ಸಿಎಂ ನಮ್ಮನ್ನು ಆಳುತ್ತಿದ್ದಾರೆ! ಅವರು ಈಗ ಮಂತ್ರಿಗಳೊಂದಿಗೆ ಮಾತ್ರವಲ್ಲ, ಸರಕಾರದ ಅಧಿಕಾರಿಗಳೊಂದಿಗೆ ಸಭೆಗಳನ್ನೂ ನಡೆಸುತ್ತಿದ್ದಾರೆ!! ಕನ್ನಡಿಗ ಹೆಮ್ಮೆಯ ಸ್ವಯಂಘೋಷಿತ ಚಾಂಪಿಯನ್ ಸಿದ್ದರಾಮಯ್ಯನವರು ರಾಜ್ಯದ ಆಡಳಿತವನ್ನು ಸದ್ದಿಲ್ಲದೆ ಹೊರಗುತ್ತಿಗೆ ನೀಡಿದ್ದಾರೆ. ನಮ್ಮ ಹೆಮ್ಮೆ ಎಲ್ಲಿದೆ? ಅಂತ ಎಕ್ಸ ಖಾತೆಯಲ್ಲಿ ನಿಖಿಲ್ ಕುಮಾರಸ್ವಾಮಿ ಪೋಸ್ಟ್ ಹಾಕಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಆರೋಪದ ಪ್ರಕಾರ, ರಣದೀಪ್ ಸಿಂಗ್ ಸುರ್ಜೇವಾಲಾ, ಸಚಿವರು ಹಾಗೂ ಅಧಿಕಾರಿಗಳೊಂದಿಗೆ ನಿರಂತರ ಸಭೆ ನಡೆಸುತ್ತಿದ್ದಾರೆ. ಶಾಸನಸಭೆಯಲ್ಲಿ ಬಹುಮತ ಪಡೆದ ನಾಯಕನಿಗೆ ಆಡಳಿತದ ಹೊಣೆ ಇರುತ್ತದೆ. ಆದರೆ ಪಕ್ಷದ ಉಸ್ತುವಾರಿ ನಾಯಕ ಅಧಿಕಾರಿಗಳೊಡನೆ ನೇರವಾಗಿ ಸಂವಾದ ನಡೆಸುವುದು, ಹಲವರಿಗೂ ಅಸಹಜವಾಗಿ ಕಾಣುತ್ತದೆ ಅಂತಾ, ನಿಖಿಲ್ ಕುಮಾರಸ್ವಾಮಿ ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ.
ವರದಿ : ಲಾವಣ್ಯ ಅನಿಗೋಳ