Wednesday, January 22, 2025

Latest Posts

Bhavya : ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಹಾಸನ ಚೆಲುವೆ ; ಭವ್ಯಾ ಎಂಬ ಭರವಸೆಯ ನಟಿ

- Advertisement -

ಬಣ್ಣದ ಲೋಕದಲ್ಲಿ ಮಿಂದೇಳಬೇಕು. ಎಲ್ಲರಂತೆ ತಾನೂ ಗಟ್ಟಿನೆಲೆ ಕಂಡುಕೊಳ್ಳಬೇಕು ಅಂತ ಬಂದ ಪ್ರತಿಭೆಗಳಿಗೆ ಇಲ್ಲಿ ಲೆಕ್ಕವಿಲ್ಲ. ಅಂತೆಯೇ, ತಾನೂ ಇಲ್ಲೊಂದು ಜಾಗ ಮಾಡಿಕೊಳ್ಳಬೇಕು, ಎಲ್ಲರನ್ನೂ ನಕ್ಕು ನಗಿಸಬೇಕು, ಅತ್ತು ಅಳಿಸಬೇಕು ಅಂದುಕೊಂಡು ಬಂದ ಅದೆಷ್ಟೋ ಯುವ ನಟಿಮಣಿಗಳು ಇಲ್ಲಿ ನೆಲೆಕಂಡಿದ್ದಾರೆ. ನೆಲೆ ಕಾಣಲು ಹಪಾಹಪಿಸುತ್ತಿದ್ದಾರೆ. ಸಿನಿಲೋಕದಲ್ಲಿ ಜಾಗ ಮಾಡಿಕೊಂಡವರೂ ಇದ್ದಾರೆ. ಈಗ ಅಂತಹ ಪ್ರತಿಭಾವಂತ ನಟಿಮಣಿಯರ ಸಾಲಿಗೆ ಭವ್ಯಾ ಎಂಬ ಕನಸು ಕಂಗಳ ಹುಡುಗಿಯೂ ಸೇರಿದ್ದಾಳೆ.

 

 

ಹೌದು, ಹೆಸರಿಗೆ ತಕ್ಕಂತೆ ಭವ್ಯವಾಗಿರುವ ಈಕೆಗೆ ಸ್ಯಾಂಡಲ್‌ವುಡ್‌ನಲ್ಲಿ ಮಿಂದೇಳುವ ಆಸೆ. ಅಷ್ಟೇ ಅಲ್ಲ, ತನ್ನ ನಟನೆಯ ಮೂಲಕ ಬಣ್ಣದ ಲೋಕದಲ್ಲಿ ನೆಲೆಕಾಣುವ ಅದಮ್ಯ ಬಯಕೆ. ಹಾಸನದ ಈ ಚೆಲುವೆ ಓದಿರೋದು ಬಿಎಸ್ಸಿ. ಪದವಿ ಪಡೆದಿದ್ದರೂ, ಕೆಲಸದ ಬಗ್ಗೆ ತಲೆಕೆಡಿಸಿಕೊಳ್ಳದೆ, ತನ್ನ ಭವಿಷ್ಯವೇನಿದ್ದರೂ, ವರ್ಣರಂಜಿತ ಚಿತ್ರರಂಗದಲ್ಲಿದೆ ಅಂದುಕೊಂಡು, ಇಲ್ಲಿಯೇ ಕಲಾಸೇವೆ ಮಾಡಿಕೊಂಡು, ನಾಯಕಿಯಾಗಿ ಗುರುತಿಸಿಕೊಂಡು ಎಲ್ಲರ ಮನ ಗೆಲ್ಲಬೇಕೆಂಬ ಛಲ ಮತ್ತು ಹಠ ಈಕೆಯದ್ದು.

ಅಂದಹಾಗೆ, ಯಾರೇ ಇರಲಿ ಸಿನಿಮಾ ರಂಗವನ್ನು ಸ್ಪರ್ಶಿಸುವುದು ಸುಲಭದ ಮಾತಲ್ಲ. ಅದರಲ್ಲೂ ಇಲ್ಲಿ ಅವಕಾಶ ಗಿಟ್ಟಿಸಿಕೊಳ್ಳಬೇಕು ಅಂದರೆ, ಯಾರಾದರೂ ಗಾಡ್‌ ಫಾದರ್‌ ಇರಬೇಕು. ಇಲ್ಲವೇ ಅದೃಷ್ಟ ಇರಬೇಕು. ಆದರೆ, ಇದ್ಯಾವುದನ್ನೂ ಈ ಭವ್ಯಾ ನಂಬಿಕೊಂಡು ಬಂದಿಲ್ಲ. ಪ್ರತಿಭೆಯನ್ನು ಮಾತ್ರ ನಂಬಿಕೊಂಡು ಗಾಂಧಿನಗರಕ್ಕೆ ಬಲಗಾಲಿಟ್ಟು ಬಂದಿದ್ದಾರೆ. ಸ್ಯಾಂಡಲ್‌ವುಡ್‌ ಸ್ಪರ್ಶಿಸಿರುವ ಭವ್ಯಾ ಈಗಾಗಲೇ ಸಿನಿಮಾವೊಂದರಲ್ಲಿ ನಟಿಸಿದ್ದಾಗಿದೆ. “ದುನಿಯಾ” ರಶ್ಮಿ ಅವರೊಂದಿಗೆ ರಂಗಿನ ರಾಟೆ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಅದು ಅವರ ಮೊದಲ ಎಂಟ್ರಿ. ಅಲ್ಲಿಂದ ಒಂದಷ್ಟು ಸಿನಿಮಾಗಳಲ್ಲಿ ನಟಿಸುವ ಅವಕಾಶ ಒದಗಿಬಂದರೂ, ಭವ್ಯಾ ಮಾತ್ರ, ಬಂದಿದ್ದೆಲ್ಲವನ್ನೂ ಒಪ್ಪಿಕೊಳ್ಳಲಿಲ್ಲ. ಕಾರಣ, ಪಾತ್ರ ಮತ್ತು ಕಥೆಯ ಆಯ್ಕೆಯತ್ತ ಗಮನಹರಿಸಿದರು. ಭವ್ಯಾ ಅವರು ಒಂದೊಳ್ಳೆಯ ಪಾತ್ರವನ್ನು ಎದುರು ನೋಡುತ್ತಿದ್ದಾರೆ. ಕಥೆ ಮತ್ತು ಪಾತ್ರಕ್ಕೆ ಪ್ರಮುಖ ಆದ್ಯತೆ ಎನ್ನುವ ಭವ್ಯಾ, ಕಮರ್ಷಿಯಲ್‌ ಮತ್ತು ಕಲಾತ್ಮಕ ಸಿನಿಮಾಗಳಲ್ಲೂ ನಟಿಸೋಕೆ ಸೈ ಎನ್ನುತ್ತಾರೆ.
ಸದ್ಯ ಅವರು ಹಲವಾರು ಬ್ರಾಂಡೆಡ್ ಜಾಹಿರಾತುಗಳಲ್ಲಿ‌ ನಟಿಸುವ ಮೂಲಕ ಬಣ್ಣದ ಲೋಕದ ನಂಟನ್ನು ಬೆಳೆಸಿಕೊಂಡಿದ್ದಾರೆ.

ಸದ್ಯ ರಂಗಿನ ರಾಟೆ ಬಳಿಕ ಭವ್ಯಾ ಅವರು “ಪೈನ್‌ ಕಿಲ್ಲರ್”‌ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಚಿತ್ರವಿನ್ನು ಬಿಡುಗಡೆಯಾಗಬೇಕಿದೆ. ಇದರ ನಡುವೆ, ತಮಿಳು ಭಾಷೆಗೂ ಲಗ್ಗೆ ಇಟ್ಟಿರುವ ಭವ್ಯಾ ಅಲ್ಲಿನ “ಟಿಂಗ್‌ ಟಾಂಗ್”‌ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಸಿನಿಮಾ ಕೂಡ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾ ನನ್ನ ಮೊದಲ ಆದ್ಯತೆ ಎನ್ನುವ ಭವ್ಯಾ, ಹೊಸ ಜಾನರ್‌ ಕಥೆಗಳಲ್ಲಿ ಕಾಣಿಸಿಕೊಳ್ಳುವ ಆಸೆ ಇದೆ. ಅದರಲ್ಲೂ, ಮಹಿಳಾ ಪ್ರಧಾನ ಕಥೆಗಳು ಮತ್ತು ಥ್ರಿಲ್ಲಿಂಗ್‌ ಎಲಿಮೆಂಟ್ಸ್‌ ಇರುವ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಹಂಬಲವಿದೆ ಎನ್ನುತ್ತಾರೆ.

ಅದೇನೆ ಇರಲಿ, ಕನ್ನಡ ಚಿತ್ರರಂಗಕ್ಕೆ ದಿನ ಕಳೆದಂತೆ ಹೊಸ ನಟಿಮಣಿಗಳ ಆಗಮನವಾಗುತ್ತಲೇ ಇರುತ್ತೆ. ಅಂತಹವರ ಸಾಲಿಗೆ ಈಗ ಭವ್ಯಾ ಕೂಡ ಸೇರಿದ್ದಾರಾದರೂ, ಅವರೊಳಗೆ ಇಲ್ಲಿ ಗಟ್ಟಿಯಾಗಿ ಬೇರೂರಬೇಕೆಂಬ ಆಸೆ ಇದೆ. ಅದರಲ್ಲೂ, ಒಂದಷ್ಟು ಹೀರೋಗಳ ಜೊತೆ ಕಾಣಿಸಿಕೊಳ್ಳುವ ಆಸೆಯೂ ಅವರೊಳಗಿದೆ. ಅದಕ್ಕಾಗಿ ಈಗಾಗಲೇ ಸಾಕಷ್ಟು ತಯಾರಿ ಮಾಡಿಕೊಂಡಿರುವ ಭವ್ಯಾ, ಮೂರು ಭಾಷೆಯನ್ನೂ ಅರಿತಿದ್ದಾರೆ. “ನನಗಿಲ್ಲಿ ಯಾವ ಗಾಡ್‌ ಫಾದರ್‌ ಇಲ್ಲ. ನಾನು ನನ್ನ ಪ್ರತಿಭೆಯನ್ನು ಮಾತ್ರ ನಂಬಿಕೊಂಡು ಇಲ್ಲಿಗೆ ಬಂದಿದ್ದೇನೆ. ಸಿನಿಮಾವನ್ನೂ ಸವಾಲಾಗಿ ಸ್ವೀಕರಿಸಿದ್ದೇನೆ. ಅತೀವ ಉತ್ಸಾಹದಲ್ಲೇ ಸಿನಿಮಾದಲ್ಲಿ ಭವಿಷ್ಯ ಕಂಡುಕೊಳ್ಳುವ ಆಸೆಯೂ ಇದೆ. ವಲ್ಗರ್‌ ಎನ್ನುವ ಪಾತ್ರಗಳನ್ನು ಹೊರತುಪಡಿಸಿ ಮಿಕ್ಕ ಎಲ್ಲಾ ಚಾಲೆಂಜ್‌ ಪಾತ್ರಗಳಲ್ಲೂ ಕಾಣಿಸಿಕೊಳ್ಳಬೇಕು ಎಂಬ ಬಯಕೆ ನನ್ನದು. ಕನ್ನಡದ ಅನೇಕ ಹಿರಿಯ ನಟಿಯರು ನನಗೆ ಸ್ಪೂರ್ತಿ. ಕನ್ನಡ ಚಿತ್ರರಂಗದಲ್ಲೇ ನನ್ನ ಕೆರಿಯರ್‌ ಶುರುವಾಗಿದ್ದು, ಇಲ್ಲಿಯೇ ಹೊಸಬಗೆಯ ಸಿನಿಮಾಗಳಲ್ಲಿ ನಟಿಸುವ ಆಸೆ ಇದೆ ಎನ್ನುವ ಭವ್ಯಾ, ಕನ್ನಡ ಚಿತ್ರರಂಗ ಪ್ರತಿಭಾವಂತರನ್ನು ಯಾವತ್ತಿಗೂ ಕೈ ಬಿಟ್ಟಿಲ್ಲ. ಹಾಗಾಗಿ ನನಗೂ ಇಲ್ಲಿ ಭವ್ಯ ಭವಿಷ್ಯವಿದೆ ಅನ್ನುವ ನಂಬಿಕೆಯಲ್ಲೇ ಸಿನಿಮಾಗಳನ್ನು ಎದುರು ನೋಡುತ್ತಿದ್ದೇನೆ ಎನ್ನುತ್ತಾರೆ ಭವ್ಯಾ.

- Advertisement -

Latest Posts

Don't Miss