ಶಿವ ಭಸ್ಮಧಾರಿಯಾಗಿದ್ದೇ ಒಂದು ರೋಚಕ ಕಥೆ. ಉಜ್ಜಯಿನಿಯ ಮಹಾಕಾಲನಿಗೆ ಈಗಲೂ ಭಸ್ಮದಿಂದಲೇ ಅಭಿಶೇಕ ಮಾಡಲಾಗತ್ತೆ. ಅದು ಅಂತಿಂಥ ಭಸ್ಮವಲ್ಲ. ಬದಲಾಗಿ ಸುಟ್ಟ ಶವದ ಭಸ್ಮ. ಹಾಗಾದ್ರೆ ಶಿವನೇಕೆ ಭಸ್ಮ ಹಚ್ಚಿಕೊಳ್ಳಲು ಆರಂಭಿಸಿದ..? ಈ ಭಸ್ಮಧಾರಣೆಯ ಹಿಂದಿರುವ ಕಥೆಯೇನು..? ಯಾವ ಭಸ್ಮದಿಂದ ಶಿವ ಪ್ರಸನ್ನನಾಗುತ್ತಾನೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಧಾರ್ಮಿಕ ನಂಬಿಕೆಯ ಪ್ರಕಾರ ಶಿವನನ್ನು ಮೃತ್ಯುವಿನ ಸ್ವಾಮಿ ಎಂದು ಹೇಳಲಾಗುತ್ತದೆ. ಹಾಗಾಗಿ ಶವ ಅಂದ್ರೆ ಶಿವ ಅಂತಾ ಹೇಳಲಾಗತ್ತೆ. ಅಪ್ಪನಿಂದ ಯಜ್ಞಕ್ಕಾಗಿ ಕರೆ ಬರದ ಕಾರಣ, ಅವಮಾನಿತಳಾದ ಸತಿ, ಅಗ್ನಿಸ್ಪರ್ಶ ಮಾಡಿಕೊಳ್ಳುತ್ತಾಳೆ. ಚಿತೆಗೆ ಹಾರಿದ ಸತಿಯ ದೇಹವನ್ನ ತೆಗೆದುಕೊಂಡು ಶಿವ ಭೂಲೋಕದಿಂದ ಆಕಾಶದವರೆಗೂ, ಎಲ್ಲೆಡೆ ತಿರುಗುತ್ತಾನೆ. ಶಿವನ ಈ ಸಿಟ್ಟದ ನೋಡಲಾಗದ ವಿಷ್ಣು, ಸತಿಯ ದೇಹವನ್ನು ಭಸ್ಮ ಮಾಡಿಬಿಡುತ್ತಾನೆ.
ಆಗ ಶಿವ ಸತಿಯ ದೇಹ ಭಸ್ಮವಾಗಿದ್ದನ್ನ ನೋಡಿ, ಸತಿಯನ್ನ ನೆನೆದು ಆ ಭಸ್ಮವನ್ನ ದೇಹಕ್ಕೆ ಹಚ್ಚಿಕೊಳ್ಳುತ್ತಾನೆ. ಈ ಜಗತ್ತೇ ಸ್ಮಶಾನ ಎನ್ನುವ ಶಿವ, ತನ್ನ ಮೈಗಂಟಿದ ಭಸ್ಮದಿಂದಲೇ, ಹಲವು ಜೀವಗಳನ್ನು ಸೃಷ್ಟಿಸುತ್ತಾನೆಂದು ಪುರಾಣ ಕಥೆಗಳಲ್ಲಿ ಹೇಳಲಾಗಿದೆ. ಇನ್ನು ಅಷ್ಟ ವಸ್ತುಗಳಿಂದ ಮಾಡಲ್ಪಟ್ಟ ಭಸ್ಮವೆಂದರೆ ಶಿವನಿಗೆ ಇಷ್ಟವೆನ್ನಲಾಗಿದೆ. ಆ ಅಷ್ಟ ವಸ್ತುಗಳು ಯಾವುದೆಂದರೆ, ಗೋವಿನ ಸಗಣಿಯ ಬೆರಣಿ, ಬಿಲ್ವಪತ್ರೆಯ ಕಟ್ಟಿಗೆ, ಶಮಿ ವೃಕ್ಷದ ಕಟ್ಟಿಗೆ, ಅರಳಿ ಮರದ ಕಟ್ಟಿಗೆ, ಮುತ್ತುಗ ಮರದ ಕಟ್ಟಿಗೆ, ಆಲದ ಮರದ ಕಟ್ಟಿಗೆ, ಬೋರೆಹಣ್ಣಿನ ಮರದ ಕಟ್ಟಿಗೆ, ಬ್ಯಾಟೆ ಮರ ಇವನ್ನೆಲ್ಲ ಸೇರಿಸಿ, ಮಾಡಿದ ಭಸ್ಮ ಶಿವನಿಗೆ ಬಲು ಇಷ್ಟ.