ಮನುಷ್ಯ ತೀರಿಹೋದ ಮೇಲೆ ಅವನ ಸಂಬಂಧಿಕರು ಪಿಂಡ ಪ್ರಧಾನ ಕಾರ್ಯ ಮಾಡಲೇಬೇಕು. ಇಲ್ಲವಾದಲ್ಲಿ ಸತ್ತವನ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ ಅನ್ನೋ ಹಿಂದೂ ಧರ್ಮದಲ್ಲಿರುವ ನಂಬಿಕೆ. ಹಾಗಾಗಿ ಸತ್ತವರ ಆತ್ಮಕ್ಕೆ ಶಾಂತಿ ಸಿಗಲಿ, ಮುಂದಿನ ಜನ್ಮದಲ್ಲಿ ಒಳ್ಳೆ ಮನೆತನದಲ್ಲಿ ಜನ್ಮ ಸಿಗಲಿ ಎಂಬ ಕಾರಣಕ್ಕೆ ಪಿಂಡ ಪ್ರಧಾನ, ಶ್ರಾದ್ಧಕಾರ್ಯವನ್ನ ಮಾಡಲಾಗತ್ತೆ. ಆ ಪಿಂಡ ಪ್ರಧಾನವನ್ನ ಕೆಲವರು ನದಿ ತೀರದಲ್ಲೇ ಮಾಡುತ್ತಾರೆ. ಹಾಗಾದ್ರೆ ನದಿ ತೀರದಲ್ಲಿ ಸತ್ತವರ ಕಾರ್ಯ ಮಾಡುವುದರ ಹಿಂದಿರುವ ವಿಷಯವಾದ್ರೂ ಏನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಪಿಂಡ ಪ್ರಧಾನ, ಅಂತ್ಯಸಂಸ್ಕಾರ, ಕುಂಭ ಮೇಳಗಳಗಳೆಲ್ಲಾ ನಡಿಯೋದು ನದಿ ತೀರದಲ್ಲೇ. ಅದರಲ್ಲೂ ಉತ್ತರ ಭಾರತದ ಗಯಾದ ನದಿ ತೀರದಲ್ಲಿ ಹೆಚ್ಚಿನವರು ಸಂಬಂಧಿಕರ ಪಿಂಡ ಪ್ರಧಾನ, ಅಂತ್ಯ ಸಂಸ್ಕಾರವನ್ನು ಮಾಡಲು ಬರುತ್ತಾರೆ. ಇನ್ನು ಉಜ್ಜಯಿನಿ, ನಾಸಿಕ್, ಪ್ರಯಾಗ್ ರಾಜ್, ಹರಿದ್ವಾರದಂಥ ಸ್ಥಳದಲ್ಲೇ ಕುಂಭಮೇಳಗಳು ನಡೆಯೋದು. ಮತ್ತು ಕುಂಭ ಮೇಳದಲ್ಲಿ ನಾಗಾಸಾಧುಗಳು ಭಾಗವಹಿಸೋದು. ಹಾಗಾದ್ರೆ ಇವೆಲ್ಲಾ ನದಿಯ ದಡದಲ್ಲೇ ನಡೆಸೋದ್ಯಾಕೆ ಅನ್ನೋ ಬಗ್ಗೆ ಧರ್ಮಶಾಸ್ತ್ರದಲ್ಲಿ ಉತ್ತರವಿದೆ.
ಯಾರ ಅಧಿಕಾರವೂ ಇಲ್ಲದ ಜಾಗದಲ್ಲಿ ಪಿಂಡ ಪ್ರಧಾನ ಮಾಡಬೇಕು ಅನ್ನೋ ಪದ್ಧತಿ ಇದೆ. ಹಾಗಾಗಿ ನದಿ ತೀರದಲ್ಲಿ ಶ್ರಾದ್ಧಕಾರ್ಯ ಮಾಡಲಾಗತ್ತೆ. ಯಾಕಂದ್ರೆ ನದಿ ಮತ್ತು ನದಿ ತೀರ ಯಾರ ಸ್ವತ್ತೂ ಅಲ್ಲ. ಕುಂಭಮೇಳಕ್ಕೂ ಇದೇ ರೀತಿಯ ಪದ್ಧತಿ ಇರುವ ಕಾರಣಕ್ಕೆ, ಕುಂಭಮೇಳವನ್ನು ನದಿ ತೀರದಲ್ಲಿ ಮಾಡಲಾಗುತ್ತದೆ. ಇನ್ನು ಬಿಹಾರದಲ್ಲಿರುವ ಗಯಾ ಎಂಬ ಪುಣ್ಯಕ್ಷೇತ್ರದಲ್ಲಿ ಪಿಂಡ ಪ್ರಧಾನವನ್ನ ಮಾಡಲಾಗತ್ತೆ.
ಯಾಕಂದ್ರೆ ಇಲ್ಲಿ ಶ್ರಾದ್ಧ ಕಾರ್ಯಗಳನ್ನ ಮಾಡಿದ್ರೆ, ಸತ್ತವರ ಆತ್ಮಕ್ಕೆ ಶಾಂತಿ ಸಿಗುವುದಲ್ಲದೇ, ಅವರ ಪಾಪ ಕರ್ಮಗಳೆಲ್ಲಾ ತೊಲಗಿ ಅವರು, ಮುಂದಿನ ಜನ್ಮದಲ್ಲಿ ಒಳ್ಳೆಯ ಕುಲದಲ್ಲಿ ಜನಿಸುತ್ತಾರೆಂಬ ನಂಬಿಕೆ ಇದೆ. ಗಯಾ ಓರ್ವ ರಾಕ್ಷಸನಾಗಿದ್ದ, ಆದರೆ ಅವನಲ್ಲಿ ರಾಕ್ಷಸೀಯ ಗುಣಗಳಿರಲಿಲ್ಲ. ಆತ ವಿಷ್ಣುವಿಗಾಗಿ ತಪಸ್ಸು ಮಾಡಿ ವರ ಪಡೆದಿದ್ದ. ಅವನನ್ನು ಯಾರು ನೋಡುತ್ತಾರೋ, ಅವರ ಪಾಪವೆಲ್ಲ ಕಳೆದು ಹೋಗುತ್ತಿತ್ತು. ಇದರಿಂದ ಯಮನಿಗೆ ಚಿಂತೆಯುಂಟಾಯಿತು.
ಆಗ ಬ್ರಹ್ಮನ ಬಳಿ ಮಾತನಾಡಿದ ಯಮ, ಈ ಸಮಸ್ಯೆಗೆ ಪರಿಹಾರ ನೀವೇ ಕೊಡಿಸಬೇಕು. ಗಯಾನಿಂದ ನನ್ನ ಲೆಕ್ಕಾಚಾರವೆಲ್ಲ ಹಾಳಾಗುತ್ತಿದೆ ಎನ್ನುತ್ತಾನೆ. ಆಗ ಗಯಾನ ಬೆನ್ನ ಮೇಲೆ ಕುಳಿತು, ವಿಷ್ಣು ಹೋಮ ಮಾಡಬೇಕು ಅನ್ನುತ್ತಾನೆ. ಇದಕ್ಕೆ ಒಪ್ಪಿದ ಗಯಾ ತಾನು ಮಲಗಿ, ತನ್ನ ಬೆನ್ನಿನ ಮೇಲೆ ವಿಷ್ಣುವನ್ನು ಕೂರಿಸಿಕೊಳ್ಳುತ್ತಾನೆ. ಹಾಗೆ ಕುಳ್ಳರಿಸಿದಾಗ ಗಯಾನ ದೇಹ ಛಿದ್ರವಾಗುತ್ತದೆ. ಆ ಸ್ಥಳವೇ ಬಿಹಾರದ ಗಯಾ. ಆಗ ವಿಷ್ಣು, ಈ ಸ್ಥಳಕ್ಕೆ ಭೇಟಿ ನೀಡಿ ಯಾರು ತಮ್ಮ ಪೂರ್ವಜರ ಶ್ರಾದ್ಧ ಕಾರ್ಯ ಮಾಡುತ್ತಾರೋ, ಅಂಥವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಮಮತ್ತು ಅವರ ಪಾಪ ಕರ್ಮಗಳೆಲ್ಲವೂ ಕಳೆದು ಹೋಗುತ್ತದೆ ಎಂದು ಗಯಾನಿಗೆ ವರ ನೀಡುತ್ತಾನೆ. ಹಾಗಾಗಿ ಜನ ಇಲ್ಲಿ ಪೂರ್ವಜರ ಪಿಂಡ ಪ್ರಧಾನ ಮಾಡಲು ಬರುತ್ತಾರೆ.