Friday, July 11, 2025

Latest Posts

 ರಾಜ್ಯದ ಗೃಹಲಕ್ಷ್ಮಿಯರಿಗೆ 200ರೂ. ಜೊತೆ ಇನ್ನೊಂದು‌ ಗುಡ್‌ ನ್ಯೂಸ್ : ಸಚಿವೆ ಹೆಬ್ಬಾಳ್ಕರ್‌ ಘೋಷಣೆ ಏನು..?

- Advertisement -

ಬೆಂಗಳೂರು : ಗೃಹಲಕ್ಷ್ಮೀ ಯಜಮಾನಿಯರನ್ನು ಆರ್ಥಿಕವಾಗಿ ಮತ್ತಷ್ಟು ಸದೃಢರನ್ನಾಗಿ ಮಾಡುವ ಉದ್ದೇಶದಿಂದ “ಗೃಹಲಕ್ಷ್ಮೀ ಸಂಘ” ಗಳನ್ನು ರಚಿಸಲು ಕಾರ್ಯಯೋಜನೆ ರೂಪಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಮಹತ್ವದ ಘೋಷಣೆ ಮಾಡಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯರಿಂದ ಸ್ವಸಹಾಯ/ಸ್ತ್ರೀ ಶಕ್ತಿ ಗುಂಪುಗಳನ್ನು ರಚಿಸುವ ಸಂಬಂಧ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ‘ಗೃಹಲಕ್ಷ್ಮಿ’ ಸಂಘವನ್ನು ರಚಿಸಲಾಗುವುದು. ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 1.25 ಕೋಟಿ ಫಲಾನುಭವಿಗಳಿದ್ದಾರೆ. ಪ್ರತಿ ತಿಂಗಳು ಸಂದಾಯ ಆಗುತ್ತಿರುವ 2 ಸಾವಿರ ರೂಪಾಯಿ ಹಣವನ್ನು ಇನ್ನಷ್ಟು ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಗೃಹಲಕ್ಷ್ಮಿ ಸಂಘಗಳನ್ನು ರಚಿಸಲಾಗುವುದು. ಈ ಮೂಲಕ ಗೃಹಲಕ್ಷ್ಮಿ ಯಜಮಾನಿಯರನ್ನು ಆರ್ಥಿಕವಾಗಿ ಮತ್ತಷ್ಟು ಸದೃಢರನ್ನಾಗಿ ಮಾಡುವುದೇ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

ಮೋಟಮ್ಮ ಮಹಿಳೆಯರಲ್ಲಿ ಆರ್ಥಿಕ ಕ್ರಾಂತಿಕಾರಿ ಬದಲಾವಣೆ ತಂದಿದ್ದರು..

ರಾಜ್ಯದಲ್ಲಿ ಈ ಹಿಂದೆ ಮೋಟಮ್ಮನವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿದ್ದಾಗ ಸ್ತ್ರೀಶಕ್ತಿ ಸಂಘಗಳನ್ನು ಹುಟ್ಟುಹಾಕಿ, ಮಹಿಳೆಯರಲ್ಲಿ ಆರ್ಥಿಕ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದ್ದರು. ಅದೇ ರೀತಿ ಈಗ ಗೃಹಲಕ್ಷ್ಮಿ ಸಂಘಗಳ ಮೂಲಕ ಕುಟುಂಬದ ಯಜಮಾನಿಯರಲ್ಲಿ ಆರ್ಥಿಕ ಬದಲಾವಣೆ ತರಬೇಕೆಂಬ ಉದ್ದೇಶದಿಂದ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಸಂಘ ರಚಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಅಂಗನವಾಡಿಗಳು ಅಸ್ತಿತ್ವಕ್ಕೆ ಬಂದು ಐವತ್ತು ವರ್ಷ..

ರಾಜ್ಯದಲ್ಲಿ ಗೃಹಲಕ್ಷ್ಮಿ ಸಂಘಗಳನ್ನು ಆಯ್ದ ನಾಲ್ಕೈದು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲು ಉದ್ದೇಶ ಹೊಂದಲಾಗಿದೆ. ನಂತರದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಗರ- ಗ್ರಾಮೀಣ ಪ್ರದೇಶಗಳಲ್ಲಿ ಗೃಹಲಕ್ಷ್ಮೀ ಸಂಘಗಳನ್ನು ಅಸ್ತಿತ್ವಕ್ಕೆ ತರಲಾಗುವುದು. ರಾಜ್ಯದಲ್ಲಿ ಅಂಗನವಾಡಿಗಳು ಅಸ್ತಿತ್ವಕ್ಕೆ ಬಂದು ಐವತ್ತು ವರ್ಷಗಳಾಗಿವೆ. ಹಾಗಾಗಿ, ಇಲಾಖೆ ವತಿಯಿಂದ ‘ಅಂಗನವಾಡಿಗಳ ಸುವರ್ಣೋತ್ಸವ’ ವನ್ನು ಅಕ್ಟೋಬರ್ ತಿಂಗಳಿನಲ್ಲಿ ಆಚರಿಸಲು ಈಗಾಗಲೇ ತೀರ್ಮಾನಿಸಲಾಗಿದೆ. ಮೈಸೂರು ಅಥವಾ ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಅದೇ ಸಂದರ್ಭದಲ್ಲಿ ಗೃಹಲಕ್ಷ್ಮಿ ಸಂಘಗಳನ್ನು ಉದ್ಘಾಟಿಸಲಾಗುವುದೆಂದು ಸಚಿವೆ ಹೆಬ್ಬಾಳ್ಕರ್‌ ಮಾಹಿತಿ ನೀಡಿದ್ದಾರೆ.

ಅತ್ಯಂತ ದುಬಾರಿ ವೆಚ್ಚದ ಗ್ಯಾರಂಟಿ ಯೋಜನೆ..

ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯು ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿಯೇ ಅತ್ಯಂತ ದುಬಾರಿ ವೆಚ್ಚದ ಗ್ಯಾರಂಟಿ ಯೋಜನೆಯಾಗಿದೆ. ಈ ಯೋಜನೆಗೆ ಬಜೆಟ್​​ನಲ್ಲಿ 28,800 ಕೋಟಿ ರೂಪಾಯಿ ಹಣವನ್ನು ಮೀಸಲಿಡಲಾಗಿದೆ. ಬಜೆಟ್​ನಲ್ಲಿ ಗೃಹ ಲಕ್ಷ್ಮಿ ಗ್ಯಾರಂಟಿ ಯೋಜನೆಗಾಗಿಯೇ ಪ್ರತ್ಯೇಕ ಹಣ ಮೀಸಲಿಟ್ಟಿದ್ದರೂ ಪ್ರತಿ ತಿಂಗಳು ಯೋಜನೆಯ ಫಲಾನುಭವಿಗಳಿಗೆ ಸಕಾಲಕ್ಕೆ ಸರಿಯಾಗಿ ಹಣ ಪಾವತಿ ಮಾಡಲು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಪ್ರಯಾಸ ಪಡುತ್ತಿದೆ. ಪ್ರತಿ ತಿಂಗಳು ಖಜಾನೆಯಿಂದ 1 ಕೋಟಿ 26 ಲಕ್ಷ ಮಹಿಳೆಯರಿಗೆ 2000 ರೂಪಾಯಿ ಹಣ ಹೊಂದಿಸಿ ಪಾವತಿ ಮಾಡುವುದು ಸವಾಲಿನ ಕೆಲಸವಾಗಿದೆ.

ರಾಜ್ಯ ಸರಕಾರವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 33 ಸಾವಿರ ಕೋಟಿ ಅನುದಾನವನ್ನು ಬಜೆಟ್​​ನಲ್ಲಿ ಘೋಷಣೆ ಮಾಡಿದೆ. ಇದರಲ್ಲಿ 28,800 ಕೋಟಿ ರೂಪಾಯಿ ಗೃಹ ಲಕ್ಷ್ಮಿ ಗ್ಯಾರಂಟಿ ಯೋಜನೆಗಾಗಿಯೇ ವೆಚ್ಚವಾಗುತ್ತಿದೆ. ಗೃಹ ಲಕ್ಷ್ಮಿಯೂ ಸೇರಿದಂತೆ ಐದು ಗ್ಯಾರಂಟಿ ಯೋಜನೆಗಳಿಗೆ ರಾಜ್ಯ ಸರಕಾರ ಬಜೆಟ್​​ನಲ್ಲಿ ಒಟ್ಟು 52 ಸಾವಿರ ಕೋಟಿ ರೂಪಾಯಿ ಅನುದಾನ ನಿಗದಿಪಡಿಸಿದೆ.

- Advertisement -

Latest Posts

Don't Miss