Mumbai News: ನೀಟ್ ಪರೀಕ್ಷೆ ಫಲಿತಾಂಶ ಬಂದಿದ್ದು, ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಎಂದು ಓರ್ವ ವಿದ್ಯಾರ್ಥಿನಿ ಡೆತ್ ನೋಟ್ ಬರೆದಿರಿಸಿ, ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಮುಂಬೈನ ಜಲಾಲ್ಪುರ ಗ್ರಾಮದ ನಿವಾಸಿ ಅಂಕಿತಾ ಸಾಂಗ್ಲೆ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯಾಗಿದ್ದು, ಶನಿವಾರ ಸಂಜೆ ನೇಣು ಬಿಗಿದ ಸ್ಥಿತಿಯಲ್ಲಿ ಆಕೆ ಪತ್ತೆಯಾಗಿದ್ದಾಳೆಂದು ಹೇಳಲಾಗಿದೆ. ಪರೀಕ್ಷೆಯಲ್ಲಿ ಕೇವಲ 166 ಅಂಕ ಬಂದ ಕಾರಣ, ಆಕೆ ಸದಾಕಾಲ ಬೇಸರದಲ್ಲಿರುತ್ತಿದ್ದಳು ಎಂದು ಮನೆಯವರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ಇನ್ನು ಸ್ಥಳೀಯ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಪರಿಶೀಲನೆ ವೇಳೆ ಮರಾಠಿ ಭಾಷೆಯಲ್ಲಿ ಬರೆದಿದ್ದ ಪತ್ರ ಸಿಕ್ಕಿದೆ. ಪತ್ರದಲ್ಲಿ ಅಪ್ಪ-ಅಮ್ಮನಿಗೆ ಕ್ಷಮೆ ಕೇಳಿರುವ ಅಂಕಿತಾ, ಅಣ್ಣನಲ್ಲೂ ಕ್ಷಮೆ ಕೇಳಿದ್ದಾಳೆ. ನೀನು ನನ್ನನ್ನು ಅಪ್ಪೃಅಮ್ಮನಿಗಿಂತ ಹೆಚ್ಚಾಗಿ ಪ್ರೀತಿಸಿದ್ದೆ. ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದಿದ್ದಾಳೆ.
ಅಲ್ಲದೇ ನನ್ನ ವಿದ್ಯಾಭ್ಯಾಸಕ್ಕಾಗಿ ನೀವು ಎಲ್ಲವನ್ನೂ ತ್ಯಾಗ ಮಾಡಿದ್ದೀರಿ. ಆದರೆ ನಾನು ಮಾತ್ರ ನಿಮ್ಮ ಆಸೆ ಈಡೇರಿಸುವುದರಲ್ಲಿ ವಿಫಲಳಾಗಿದ್ದೇನೆ. ಅಣ್ಣ, ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೋ ಎಂದು ಅಂಕಿತಾ ಪತ್ರದೆರಿಸಿ, ಸಾವಿಗೀಡಾಗಿದ್ದಾಳೆ. ಪೋಲೀಸರು ಈ ಕೇಸನ್ನು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿದ್ದಾರೆ.



