Koppala News: ಬರಗಾಲದಲ್ಲೂ ಅರ್ಥಪೂರ್ಣವಾಗಿ ನೆರವೇರಿದ ೧೪ನೇ ಕನ್ನಡ ಸಾಹಿತ್ಯ ಸಮ್ಮೇಳನ

Koppala News: ಕೊಪ್ಪಳ ಜಿಲ್ಲೆಯ ೧೪ನೇ ಕನ್ನಡ ಸಾಹಿತ್ಯ ಸಮ್ಮೇಳನವು ಬರಗಾಲದ ಸನ್ನಿವೇಶದಲ್ಲೂ ಅತ್ಯಂತ ಸಡಗರ ಹಾಗೂ ಅರ್ಥಪೂರ್ಣವಾಗಿ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ಸಾಹಿತಿ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯನವರು, ನಗರದ ಜಂಜಾಟಕ್ಕಿಂತ ಗ್ರಾಮೀಣ ಭಾಗದಲ್ಲಿ ಸಾಹಿತ್ಯವು ನೈಸರ್ಗಿಕವಾಗಿ ಬೆಳೆಯುತ್ತದೆ ಎಂದರಲ್ಲದೆ, ಸಾಹಿತ್ಯ ಮತ್ತು ಸಮಾಜ ಒಂದೇ ನಾಣ್ಯದ ಎರಡು ಮುಖಗಳು ಎಂದು ಪ್ರತಿಪಾದಿಸಿದರು.

ಲೇಖಕರು ಸತ್ಯ, ಮಾನವೀಯತೆ ಹಾಗೂ ಸಮಸಮಾಜದ ಕಲ್ಪನೆಯನ್ನು ಹೊಂದಿರಬೇಕು ಎಂದು ಕರೆ ನೀಡಿದ ಅವರು, ಜಾತಿ ವ್ಯವಸ್ಥೆ, ದಲಿತರ ಸ್ಥಿತಿಗತಿ, ಪರಿಸರ ನಾಶ ಹಾಗೂ ತಂತ್ರಜ್ಞಾನದ ಸವಾಲುಗಳ ಕುರಿತು ಕಳಕಳಿ ವ್ಯಕ್ತಪಡಿಸಿದರು.

ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಹಾಗೂ ಶಾಸಕ ದೊಡ್ಡನಗೌಡ ಪಾಟೀಲರು ಅಕ್ಷರ ಹಬ್ಬಕ್ಕೆ ಸಹಕರಿಸಿದ ಗ್ರಾಮಸ್ಥರಿಗೆ ಹಾಗೂ ಕನ್ನಡಾಭಿಮಾನಿಗಳಿಗೆ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ನಾಡದೇವತೆಯ ಭಾವಚಿತ್ರಕ್ಕೆ ಶಾಸಕ ದೊಡ್ಡನಗೌಡ ಪಾಟೀಲ್ ಹಾಗೂ ಮಾಜಿ ಸಚಿವ ಅಮರೇಗೌಡ ಪಾಟೀಲ್ ಪುಷ್ಪಾರ್ಪಣೆ ಮಾಡಿದರು.

ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲರು ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಲೇಖಕರನ್ನು ಬೆಳೆಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸದಾ ಮುಂಚೂಣಿಯಲ್ಲಿದೆ ಎಂದು ಹೆಮ್ಮೆಯಿಂದ ಸ್ಮರಿಸಿದರು. ಜೊತೆಗೆ ಜುಮ್ಮನಗೌಡ ಪಾಟೀಲ್ ಹಾಗೂ ಸುಕಮುನಿ ಗುಮಗೇರಿ ತಂಡದವರಿಂದ ನಾಡಗೀತೆ ಮತ್ತು ರೈತಗೀತೆ ಕಾರ್ಯಕ್ರಮ ಪ್ರಸ್ತುತಗೊಂಡಿತು.

ಕಾರ್ಯಕ್ರಮದ ಪ್ರಮುಖ ಘಟ್ಟವಾದ ಧ್ವಜ ಹಸ್ತಾಂತರ ಪ್ರಕ್ರಿಯೆಯಲ್ಲಿ ನಿಕಟಪೂರ್ವ ಸಾಹಿತಿ ಲಿಂಗಾರಡ್ಡಿ ಆಲೂರು ಅವರು ನೂತನ ಸರ್ವಾಧ್ಯಕ್ಷ ಶೇಖರಗೌಡ ಮಾಲಿ ಪಾಟೀಲರಿಗೆ ಅಧಿಕಾರ ಹಸ್ತಾಂತರಿಸಿದರು.

ಈ ಸಂಭ್ರಮದ ಸಮ್ಮೇಳನದಲ್ಲಿ ಮಾಜಿ ಸಚಿವ ಅಮರೇಗೌಡ ಪಾಟೀಲ್, ಸಂಸದ ಸಂಗಣ್ಣ ಕರಡಿ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಖ್ಯಾತ ಸಾಹಿತಿ ಎಸ್. ಜಿ. ಸಿದ್ದರಾಮಯ್ಯ ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಗೂ ಗಣ್ಯರು ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆ ತಂದರು. ಶಿಕ್ಷಕ ರಾಮಚಂದ್ರಪ್ಪ ಬಡಿಗೇರ ಮತ್ತು ತನುಜಾ ಪೊಲೀಸ್ ಪಾಟೀಲ್ ಅವರು ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

About The Author