‘ಸಾವಿರ ತಲೆಗಳ ವಿಷ ಸರ್ಪ’ – RSS ವಿರುದ್ಧ ಯತೀಂದ್ರ ಸಿಡಿಮಿಡಿ!

ಮೈಸೂರಿನಲ್ಲಿ ಮಾತನಾಡುತ್ತಾ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು RSS ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, RSS ಅನ್ನು ‘ಸಾವಿರ ತಲೆಗಳ ವಿಷ ಸರ್ಪ’ ಎಂದು ಬಣ್ಣಿಸಿದ್ದಾರೆ. ಈ ಹೇಳಿಕೆ ಸದ್ಯ ಇದೀಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಸಲಿಗೆ ಯತೀಂದ್ರ ಸಿದ್ದರಾಮಯ್ಯ ಅವ್ರು ಹೇಳಿದ್ದೇನು? ಇದರ ಸಂಪೂರ್ಣ ವಿವರ ನೋಡೋಣ ಬನ್ನಿ!

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಯತೀಂದ್ರ ಅವರು, ಆರ್‌ಎಸ್‌ಎಸ್ ಚಟುವಟಿಕೆಗಳನ್ನು ಕಠಿಣವಾಗಿ ನಿಯಂತ್ರಿಸದಿದ್ದರೆ ಅದು ಸಮಾಜ ಹಾಗೂ ದೇಶದ ಮೇಲೆ ಗಂಭೀರವಾದ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದ್ದಾರೆ. ಜಾತಿ ವ್ಯವಸ್ಥೆ ಸಂಪೂರ್ಣವಾಗಿ ನಿರ್ಮೂಲನೆಯಾಗಬೇಕು ಎಂದು ಬಯಸುವ ಪ್ರತಿಯೊಬ್ಬರೂ ಆರ್‌ಎಸ್‌ಎಸ್ ಮನಸ್ಥಿತಿಯನ್ನು ಪ್ರಶ್ನಿಸಬೇಕು ಮತ್ತು ಅದರ ವಿರುದ್ಧ ಧ್ವನಿ ಎತ್ತಬೇಕು ಎಂದು ಸಚಿವರು ಕರೆ ನೀಡಿದ್ದಾರೆ.

ಇದೇ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿಚಾರವಾಗಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಪ್ರಸ್ತಾಪಿಸಿದ ಯತೀಂದ್ರ, ಆರ್‌ಎಸ್‌ಎಸ್, ಬಿಜೆಪಿ ಹಾಗೂ ಶ್ರೀರಾಮಸೇನೆ ನಾಯಕರು ಖರ್ಗೆ ಅವರಲ್ಲಿ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಯಾವುದೇ ಕಾರಣಕ್ಕೂ ಹಿಂಜರಿಯಬಾರದು ಎಂದು ಹೇಳಿರುವ ಅವರು, ಪಕ್ಷದ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆಗಳು ಯಾವುದೇ ಕಾರಣಕ್ಕೂ ನಿಲ್ಲಬಾರದು, ಹೋರಾಟ ಮುಂದುವರಿಯಬೇಕು ಅಂತ ಮನವಿ ಮಾಡಿದ್ದಾರೆ.

ಇನ್ನು ಇದರ ಜೊತೆಗೆ ‘ಸಾಮಾಜಿಕ ಸಮಾನತೆ ಮತ್ತು ಜಾತಿ ವ್ಯವಸ್ಥೆ ನಿರ್ಮೂಲನೆಗೆ ಬದ್ಧರಾಗಿರುವವರು ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳಬೇಕು ಎಂದಿರುವ ಯತೀಂದ್ರ ಸಿದ್ದರಾಮಯ್ಯ ಅವರ ಈ ಹೇಳಿಕೆಗಳು ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಕಾವು ಹೆಚ್ಚಿಸುವುದು ಖಚಿತ.

About The Author