Saturday, July 5, 2025

Latest Posts

ಯಡಿಯೂರಪ್ಪ ಬಂಧನ? ಪೋಕೋ ಕೇಸ್​ನಲ್ಲಿ ಬಿಎಸ್​ವೈ ಬಂಧನಕ್ಕೆ ಸಿದ್ಧತೆ..!

- Advertisement -

Political News: ಪೋಕ್ಸೋ ಪ್ರಕರಣದಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಬಂಧಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಲೋಕಸಭಾ ಚುನಾವಣೆಗೂ ಮೊದಲು ದಾಖಲಾಗಿದ್ದ ಅಪ್ರಾಪ್ತ ಬಾಲಕಿ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ ಬೆಳವಣಿಗೆ ಕಂಡಿದ್ದು, ಯಡಿಯೂರಪ್ಪ ಅವರ ಬಂಧನ ನಿಶ್ಚಿತ ಎನ್ನುವ ಹಂತಕ್ಕೆ ತಲುಪಿದೆ.

ಬಿಎಸ್​ವೈಗೆ ಸಿಐಡಿ ಮಂಗಳವಾರ ದಿಢೀರ್‌ ನೋಟಿಸ್ ನೀಡಿ ಬುಧವಾರವೇ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಇನ್ನೊಂದೆಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರನ್ನು ಬಂಧಿಸುವಂತೆ ಆದೇಶ ಕೋರಿ ಹೈಕೋರ್ಟ್‌ನಲ್ಲಿ ಸಂತ್ರಸ್ತೆಯ ಸಹೋದರ ಮನವಿ ಮಾಡಿದ್ದಾರೆ.

ಜೂನ್ 12ರಂದು ಯಡಿಯೂರಪ್ಪ ವಿಚಾರಣೆಗೆ ಹಾಜರಾಗದ ಹಿನ್ನೆಲೆ ಜಾಮೀನು ರಹಿತ ​ವಾರಂಟ್ ಹೊರಡಿಸಲು ಪೊಲೀಸರು ತ್ವರಿತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇಂದು ಬಂಧನ ವಾರಂಟ್ ಹೊರಡಿಸುವ ಬಗ್ಗೆ ಬೆಂಗಳೂರಿನ 42ನೇ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ನೀಡಲಿದೆ. ಒಂದು ಪಕ್ಷ ಕೋರ್ಟ್ ವಾರಂಟ್ ಜಾರಿ ಮಾಡಿದರೆ ಪೊಲೀಸರು ​ ಯಡಿಯೂರಪ್ಪ ಅವರನ್ನು ಬಂಧಿಸಲಿದ್ದಾರೆ.

ತನಿಖೆಗೆ ಹಾಜರಾಗುವಂತೆ ಪೊಲೀಸರು ನೀಡಿದ್ದ ನೋಟಿಸ್​ಗೆ ಯಡಿಯೂರಪ್ಪ ಅವರು ಉತ್ತರಿಸಿದ್ದಾರೆ. ಮಾರ್ಚ್ 28 ರಂದು ನೀಡಿದ್ದ ನೋಟಿಸ್​ನಂತೆ ನಾನು ವಿಚಾರಣೆಗೆ ಹಾಜರಾಗಿ ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದೆ.

ಜೂನ್ 12 ರಂದು ತಾವು ನೀಡಿರುವ ನೋಟಿಸ್ ನನಗೆ ನಿನ್ನೆಯಷ್ಟೇ ತಲುಪಿದೆ. ನಾನು ಪಕ್ಷದ ಪೂರ್ವ ನಿರ್ಧರಿತ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿರುವುದರಿಂದ ದೆಹಲಿಗೆ ತೆರಳುತ್ತಿದ್ದೇನೆ. ಹೀಗಾಗಿ ಈ ಬಾರಿ ನಾನು ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ. ನಾನು ಜೂನ್ 17 ರಂದು ಖುದ್ದಾಗಿ ವಿಚಾರಣೆಗೆ ಹಾಜರಾಗುತ್ತೇನೆ. ಈ ಹಿಂದೆಯೂ ನಾನು ತನಿಖೆಗೆ ಸಹಕರಿಸಿದ್ದೇನೆ. ಪೂರ್ವನಿಯೋಜಿತ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕಾದ ಕಾರಣದಿಂದ ಈ ಬಾರಿ ತನಿಖೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವಿಚಾರಣೆಯಿಂದ ವಿನಾಯಿತಿ ನೀಡಬೇಕು ಎಂದು ಯಡಿಯೂರಪ್ಪ ಮನವಿ ಮಾಡಿದ್ದಾರೆ.

ತಮ್ಮ ವಿರುದ್ಧದ ಪೋಕ್ಸೊ ಪ್ರಕರಣ ರದ್ದುಪಡಿಸುವಂತೆ ಕೋರಿ ಯಡಿಯೂರಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ನಾನು ಯಾವುದೇ ಕಾನೂನು ಬಾಹಿರ ಕೃತ್ಯ ಎಸಗಿಲ್ಲ. ದೂರುದಾರ ಮಹಿಳೆಗೆ ದೂರು ನೀಡುವುದೇ ಹವ್ಯಾಸ. ಎಫ್‌ಐಆರ್‌ ದಾಖಲಾದ ನಂತರ ಏಪ್ರಿಲ್‌ 12ರಂದು ಪೊಲೀಸರ ವಿಚಾರಣೆಗೆ ಹಾಜರಾಗಿದ್ದೆ. ಪೊಲೀಸರು ಹೇಳಿಕೆ ದಾಖಲಿಸಿಕೊಳ್ಳದೇ ಧ್ವನಿ ಮಾದರಿ ಸಂಗ್ರಹಿಸಿದರು. ದೂರಿನಲ್ಲಿ ಅಪರಾಧದ ಅಂಶಗಳು ಇಲ್ಲದೇ ಇರುವುದರಿಂದ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದ್ದಾರೆ.

ಇನ್ನೂ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣದಲ್ಲಿ ವಿಚಾರಣಾ ಮತ್ತು ಜಿಲ್ಲಾ ಸೆಷನ್ಸ್ ನ್ಯಾಯಾಲಯಗಳಲ್ಲಿ ಪ್ರಾಸಿಕ್ಯೂಷನ್‌ ಪರವಾಗಿ ಹಾಜರಾಗಿ ವಾದ ಮಂಡಿಸಲು ಅಶೋಕ್‌ ನಾಯಕ್‌ ಅವರನ್ನು ವಿಶೇಷ ಸರ್ಕಾರಿ ವಕೀಲರನ್ನಾಗಿ ನೇಮಕ ಮಾಡಲಾಗಿದೆ.

ಬಿ ರಿಪೋರ್ಟ್‌ ಸಲ್ಲಿಸಬಹುದು ಎನ್ನಲಾಗಿದ್ದ ಪ್ರಕರಣ ದಿಢೀರ್ ಬೆಳವಣಿಗೆ ಕಂಡಿರುವುದು ರಾಜಕೀಯ ಪ್ರೇರಿತ ಎಂಬ ಆರೋಪವು ಕೇಳಿಬಂದಿದೆ. ದೂರು ನೀಡಿದ ಮಹಿಳೆ ಯಡಿಯೂರಪ್ಪ ಸೇರಿದಂತೆ 53 ವಿವಿಧ ಗಣ್ಯರ ವಿರುದ್ಧ ದೂರು ನೀಡಿದ್ದರು. ಆ ಸಂದರ್ಭದಲ್ಲಿ ದೂರು ನೀಡಿದ ಸಂತ್ರಸ್ತೆಯ ತಾಯಿಯನ್ನು ಮಾನಸಿಕ ಅಸ್ವಸ್ಥೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ ಕೊಟ್ಟಿದ್ದರು. ಹೀಗೆಲ್ಲ ಇದ್ದರೂ ತನಿಖೆ ದಿಢೀರ್ ಈ ಹಂತಕ್ಕೆ ಬೆಳವಣಿಗೆ ಕಂಡಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.

ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಪ್ರಕರಣದ ವಿಚಾರಣೆ ತೀವ್ರಗೊಳಿಸಿ ಯಡಿಯೂರಪ್ಪ ಅವರನ್ನು ಬಂಧಿಸುವ ಪ್ರಯತ್ನ ನಡೆದಿರುವುದರ ಹಿಂದೆ ರಾಜಕೀಯ ಅಡಗಿದೆ ಎಂದು ಅವರ ಆಪ್ತರು ಆರೋಪಿಸುತ್ತಿದ್ದಾರೆ. ಪೋಕ್ಸೋ ಪ್ರಕರಣದಲ್ಲಿ ಇವರನ್ನು ಬಂಧಿಸುವುದಾದರೆ ಈ ಮೂರು ತಿಂಗಳು ಯಾಕೆ ಬಂಧಿಸಿರಲಿಲ್ಲ? ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಅದರಲ್ಲೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಫಲಿತಾಂಶದ ಹಿನ್ನಡೆಯ ನಂತರ ಈ ಬೆಳವಣಿಗೆ ಆಗುತ್ತಿರುವುದು ಯಾಕೆ ಎಂದು ಬಿಎಸ್​ವೈ ಬೆಂಬಲಿಗರು ಪ್ರಶ್ನಿಸುತ್ತಿದ್ದಾರೆ.

ತಮ್ಮ ಪುತ್ರಿ ಮೇಲೆ ನಡೆದಿದ್ದ ಅತ್ಯಾಚಾರ ಪ್ರಕರಣದಲ್ಲಿ ಸೂಕ್ತ ತನಿಖೆ ನಡೆಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸುವಂತೆ ಯಡಿಯೂರಪ್ಪನವರ ನೆರವು ಕೋರಲು ಸಂತ್ರಸ್ತೆ ತಾಯಿ ನಿರ್ಧರಿಸಿದ್ದರು. ಫೆ.2 ರಂದು ಡಾಲರ್ಸ್‌ ಕಾಲೋನಿಯಲ್ಲಿರುವ ಯಡಿಯೂರಪ್ಪನವರ ಮನೆಗೆ ತಮ್ಮ 17 ವರ್ಷದ ಮಗಳ ಜತೆ ತಾಯಿ ತೆರಳಿದ್ದರು. ಆಗ ಬಾಲಕಿ ಜತೆ ಅನುಚಿತವಾಗಿ ಯಡಿಯೂರಪ್ಪನವರು ವರ್ತಿಸಿದ್ದಾರೆ ಎಂದು ದೂರಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸದಾಶಿವನಗರ ಠಾಣೆಗೆ ಮಾ.14 ರಂದು ಸಂತ್ರಸ್ತೆ ತಾಯಿ ದೂರು ನೀಡಿದ್ದರು. ಅದರನ್ವಯ ಯಡಿಯೂರಪ್ಪನವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದರು. ಈ ಪ್ರಕರಣದ ಸಂಬಂಧ ಸಿಐಡಿ ತನಿಖೆಗೆ ಡಿಜಿಪಿ ಅಲೋಕ್ ಮೋಹನ್ ಆದೇಶಿಸಿದ್ದರು.

ದರ್ಶನ್​ಗೆ ಶಾಕ್! ವಿಜಯಲಕ್ಷ್ಮೀ ಮಹತ್ವ ನಿರ್ಧಾರ

ಕುವೈತ್‌ನಲ್ಲಿ ಬೆಂಕಿ ಅಪಘಾತ: 40ಕ್ಕೂ ಹೆಚ್ಚು ಭಾರತೀಯರ ಸಾವು

ಅಭಿಮಾನಿಗಳನ್ನು ಠಾಣೆಯಿದ ದೂರವಿಡಲು ಅನ್ನಪೂರ್ಣೆಶ್ವರಿ ಠಾಣೆ ಸುತ್ತಮುತ್ತ 144 ಸೆಕ್ಷನ್ ಜಾರಿ

- Advertisement -

Latest Posts

Don't Miss