Monday, December 23, 2024

Latest Posts

ಮೋದಿ ಅವರ ಟೀಂ ಇಂಡಿಯಾದಲ್ಲಿ ಕರ್ನಾಟಕದ ಗರಿಷ್ಠ ಆಟಗಾರರು ಇರಲಿ: ಯೋಗಿ ಆದಿತ್ಯನಾಥ್

- Advertisement -

ಮಂಡ್ಯ: ಮೋದಿಜಿ ಅವರ ಟೀಂ ಇಂಡಿಯದಲ್ಲಿ ಕರ್ನಾಟಕದ ಗರಿಷ್ಠ ಆಟಗಾರರು ಇರುವಂತೆ ನೋಡಿಕೊಳ್ಳಿ; ಇದಕ್ಕಾಗಿ ಇಲ್ಲಿನ ಅಭ್ಯರ್ಥಿಗಳನ್ನು ನೀವೆಲ್ಲರೂ ಗೆಲ್ಲಿಸಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಸ್ಥಾಪಿಸಿ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮನವಿ ಮಾಡಿದರು.

ಮಂಡ್ಯದಲ್ಲಿ ಇಂದು ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಆದಿಚುಂಚನಗಿರಿ ಮಠ ಇಲ್ಲಿದೆ. ಭೈರೇಶ್ವರ ಸ್ವಾಮಿ ಅಲ್ಲಿ ನೆಲೆಸಿದ್ದಾರೆ. ಕರ್ನಾಟಕ- ಉತ್ತರ ಪ್ರದೇಶದ ನಡುವಿನ ಸಂಬಂಧಗಳನ್ನು ಗಮನಿಸಿ ನನಗೆ ಸಂತಸವಾಗುತ್ತದೆ ಎಂದರು. ಪ್ರಧಾನಿ ಮೋದಿಜಿ ಅವರ ಏಕ್ ಭಾರತ್ ಶ್ರೇಷ್ಠ ಭಾರತ್ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಬಿಜೆಪಿಗೆ ಮತ ಕೊಡಿ; ಬಿಜೆಪಿಯನ್ನೇ ಗೆಲ್ಲಿಸಿ ಎಂದು ಮನವಿ ಮಾಡಿದರು.

ಕರ್ನಾಟಕದ ಬಿಜೆಪಿ ಸರಕಾರವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತ್ವರಿತವಾಗಿ ಅನುಷ್ಠಾನಕ್ಕೆ ತಂದಿದೆ. ಯುವಜನರಿಗಾಗಿ ಅನೇಕ ಯೋಜನೆಗಳು ಜಾರಿಯಾಗಿವೆ. ಇದಕ್ಕಾಗಿ ಕರ್ನಾಟಕಕ್ಕೆ ಅಭಿನಂದನೆಗಳು ಎಂದು ತಿಳಿಸಿದರು.

ಡಬಲ್ ಎಂಜಿನ್ ಸರಕಾರದಿಂದ ಸಮೃದ್ಧಿ, ಸುರಕ್ಷತೆ ಸಿಗುತ್ತದೆ. ಏಕ್ ಭಾರತ್, ಶ್ರೇಷ್ಠ ಭಾರತ್ ಪರಿಕಲ್ಪನೆಯನ್ನು ಜಾರಿ ಮಾಡಲು ಬಿಜೆಪಿಗೇ ಮತ ಕೊಡಿ. ಮೋದಿಜಿ ಟೀಂ ಇಂಡಿಯದ ಕ್ಯಾಪ್ಟನ್ ಆಗಿದ್ದಾರೆ. ಮೋದಿಜಿ ಅವರ ಟೀಂ ಇಂಡಿಯದಲ್ಲಿ ಕರ್ನಾಟಕದ ಗರಿಷ್ಠ ಆಟಗಾರರು ಇರುವಂತೆ ನೋಡಿಕೊಳ್ಳಿ. ಕಾಂಗ್ರೆಸ್ ಪಕ್ಷದ ಫೇಯಿಲ್ಡ್ ಎಂಜಿನ್ ದೂರವಿಡಿ. ಕರ್ನಾಟಕದಲ್ಲಿ ಬಿಜೆಪಿ ಸರಕಾರ ಮತ್ತೆ ಕೆಲಸ ಮಾಡುವಂತಾಗಲಿ ಎಂದು ವಿಶ್ವಾಸದಿಂದ ನುಡಿದರು.

ಮಂಡ್ಯವು ಕೃಷಿ, ಕಾರ್ಖಾನೆಗಳಿಗೆ ಪ್ರಖ್ಯಾತ. ಕರ್ನಾಟಕವು ವಿಕಾಸದ ಹಾದಿಯಲ್ಲಿ ಮುನ್ನಡೆಯಲು ಕರ್ನಾಟಕದಲ್ಲೂ ಡಬಲ್ ಎಂಜಿನ್ ಸರಕಾರವನ್ನು ಮತ್ತೆ ಸ್ಥಾಪಿಸಿ. ರಾಮಜನ್ಮಭೂಮಿ ಆಂದೋಲನದಲ್ಲಿ ನೀವೂ ಪಾಲ್ಗೊಂಡಿದ್ದೀರಿ. 2024ರ ಜನವರಿಯಲ್ಲಿ ರಾಮಮಂದಿರ ಪೂರ್ಣಗೊಂಡು ಉದ್ಘಾಟನೆ ಆಗಲಿದೆ. ಇದೊಂದು ಮಹತ್ವದ ದಿನವಾಗಲಿದೆ. ನೀವೆಲ್ಲರೂ ಅಲ್ಲಿಗೆ ಬನ್ನಿ ಎಂದು ಆಹ್ವಾನಿಸಿದರು.

ಬ್ರಿಟನ್ ದೇಶವನ್ನು ಹಿಂದಿಕ್ಕಿ ನಾವು ದೊಡ್ಡ ಆರ್ಥಿಕ ವ್ಯವಸ್ಥೆಯಾಗಿ ಹೊರಹೊಮ್ಮಿದ್ದೇವೆ. ನಮ್ಮ ದೇಶ ಮತ್ತು ನಮ್ಮ ಪ್ರಧಾನಿಯವರು ಜಗತ್ತಿನಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಕರ್ನಾಟಕದ ಬೆಂಗಳೂರು ಐಟಿ ಕ್ಷೇತ್ರದಲ್ಲಿ ಪ್ರಮುಖ ಕೇಂದ್ರವಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.

ನಮ್ಮ ಬಳಿ ಶಕ್ತಿ ಇದೆ. 2014ರಲ್ಲಿ ಮೋದಿಜಿ ಅವರಿಗೆ ನಾಯಕತ್ವ ಲಭಿಸಿತು. ಆ ಬಳಿಕ ಅಭಿವೃದ್ಧಿ ನಿರಂತರವಾಗಿತ್ತು. ಕಾಂಗ್ರೆಸ್ ಪಕ್ಷದ್ದು ಕೇವಲ ಶಿಲಾನ್ಯಾಸಗಳ ಪಂಚವಾರ್ಷಿಕ ಯೋಜನೆಯ ಸರಕಾರವಾಗಿತ್ತು. ಇದು ಕಾಂಗ್ರೆಸ್‍ನ ಅಸಲಿ ನೀತಿ ಎಂದು ಟೀಕಿಸಿದರು.

ಇವತ್ತು ಮೂಲಸೌಕರ್ಯಗಳ ಅಭಿವೃದ್ಧಿ ನಿರಂತರವಾಗಿದೆ. ಶಿಲಾನ್ಯಾಸದ ದಿನವೇ ಭವಿಷ್ಯದ ಉದ್ಘಾಟನೆಯ ದಿನವೂ ನಿಗದಿ ಆಗುತ್ತಿದೆ. ಪರಿವರ್ತನೆಯ ಯುಗ ಆರಂಭವಾಗಿದೆ ಎಂದ ಅವರು, ಭಾರತ ಕೃಷಿ ಪ್ರಧಾನ ದೇಶವಾಗಿದೆ. ಆದರೆ, ಇಲ್ಲಿನ ರೈತರು ಆತ್ಮಹತ್ಯೆ ಹಾದಿ ಹಿಡಿದಿದ್ದರು. ರೈತರಿಗೆ ಕಿಸಾನ್ ಸಮ್ಮಾನ್ ಮೂಲಕ ನಿಧಿ ನೀಡಿದ ಮೇರು ವ್ಯಕ್ತಿ ಮೋದಿಜಿ ಎಂದು ಶ್ಲಾಘಿಸಿದರು. ಎಂಎಸ್‍ಪಿ, ಸಿಂಚಾಯಿ ಯೋಜನೆ, ವಿಮೆ ಮೊದಲಾದ ಯೋಜನೆಗಳನ್ನು ಜಾರಿ ಮಾಡಿದ್ದಾರೆ ಎಂದು ತಿಳಿಸಿದರು.

ಬಿಜೆಪಿಯ ಡಬಲ್ ಎಂಜಿನ್ ಸರಕಾರದ ಸುರಕ್ಷತೆ, ಅಭಿವೃದ್ಧಿಯ ಭರವಸೆ ಉತ್ತರ ಪ್ರದೇಶದಲ್ಲಿದೆ. ಪಿಎಫ್‍ಐ ಸಂಘಟನೆಯನ್ನು ನಿಷೇಧಿಸುವ ಕೆಲಸವನ್ನು ಬಿಜೆಪಿ ಮಾಡಿದೆ. ಕಾಂಗ್ರೆಸ್ ಪಕ್ಷವು ಪಿಎಫ್‍ಐ ತುಷ್ಟೀಕರಣ ಕಾರ್ಯ ಮಾಡುತ್ತಿದೆ ಎಂದು ಆಕ್ಷೇಪಿಸಿದರು.

ಧರ್ಮದ ಆಧಾರದಲ್ಲಿ ಮೀಸಲಾತಿ ಸಂವಿಧಾನವಿರೋಧಿ ಎಂದು ಟೀಕಿಸಿದ ಅವರು, 1947ರಲ್ಲಿ ಭಾರತದ ವಿಭಜನೆ ಆಗಿತ್ತು. ಮತ್ತೆ ಅಂಥ ದಿನವನ್ನು ನಾವು ಎದುರು ನೋಡಲು ಬಿಜೆಪಿ ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಸಿದರು. ತುಷ್ಟೀಕರಣದ ಬದಲು ಸಶಕ್ತೀಕರಣದ ಕಡೆ ನಾವು ಗಮನ ಕೊಡುತ್ತೇವೆ ಎಂದರು.

ಕನ್ನಡದಲ್ಲೇ ಭಾಷಣ ಆರಂಭಿಸಿದ ಅವರು, ಜೈ ಭಾರತ ಜನನಿಯ ತನುಜಾನೆ, ಜೈ ಕರ್ನಾಟಕ ಮಾತೆ ಎನ್ನುವ ಮೂಲಕ ಭಾಷಣ ಮುಕ್ತಾಯಗೊಳಿಸಿದರು. ಬಿಜೆಪಿ ಕರ್ನಾಟಕ ಘಟಕವು ನನಗೆ ಇಲ್ಲಿ ಬರಲು ಅವಕಾಶ ನೀಡಿದೆ. ಇದರಿಂದ ಸಂತಸವಾಗಿದೆ ಎಂದರು. ತ್ರೇತಾಯುಗದಿಂದ ಉತ್ತರ ಪ್ರದೇಶ ಮತ್ತು ಕರ್ನಾಟಕದ ನಡುವೆ ಸಂಬಂಧ ಇದೆ. ಭಗವಾನ್ ಹನುಮಾನ್ ಅವರ ಜನ್ಮಭೂಮಿ ಕರ್ನಾಟಕ ಎಂದ ಅವರು, ಈ ಎರಡು ರಾಜ್ಯಗಳ ನಡುವೆ ವಿಶಿಷ್ಟ ಸಂಬಂಧವಿದೆ ಎಂದರು.

ಸಚಿವರಾದ ಡಾ.ಕೆ.ಸಿ.ನಾರಾಯಣಗೌಡ, ಡಾ.ಸಿ.ಎನ್.ಅಶ್ವತ್ಥನಾರಾಯಣ್, ಸಂಸದರಾದ ಸುಮಲತಾ ಅಂಬರೀಷ್ ಅವರು ಮಾತನಾಡಿ, ಮಂಡ್ಯ ಮತ್ತು ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು. ಅತಂತ್ರ ಫಲಿತಾಂಶ ಬರಲಿ ಎಂದು ಒಂದು ಪಕ್ಷ ಕಾದು ಕುಳಿತಿದೆ ಎಂದು ಸುಮಲತಾ ಅವರು ವ್ಯಂಗ್ಯವಾಡಿದರು.

ರಾಜ್ಯದ ಸಚಿವರಾದ ಡಾ.ಕೆ.ಸಿ.ನಾರಾಯಣಗೌಡ, ಡಾ.ಸಿ.ಎನ್.ಅಶ್ವತ್ಥನಾರಾಯಣ್, ರಾಜ್ಯ ಉಪಾಧ್ಯಕ್ಷ ನಿರ್ಮಲ್‍ಕುಮಾರ್ ಸುರಾಣ, ಅಭ್ಯರ್ಥಿ ಇಂಡ್ಲವಾಡು ಸಚ್ಚಿದಾನಂದ, ಅಶೋಕ್ ಜಯರಾಂ, ಸಂಸದರಾದ ಪ್ರತಾಪಸಿಂಹ, ಸುಮಲತಾ ಅಂಬರೀಷ್, ಜಿಲ್ಲಾಧ್ಯಕ್ಷ ಉಮೇಶ್, ಸ್ಥಳೀಯ ಅಭ್ಯರ್ಥಿಗಳು, ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

ಕಾಂಗ್ರೆಸ್ ಅಭ್ಯರ್ಥಿ ಶರತ್ ಬಚ್ಚೇಗೌಡ ಪ್ರಚಾರದ ವೇಳೆ ಕಾರಿಗೆ ಕಲ್ಲು

‘ಅಕ್ರಮಗಳನ್ನು ಬುಲ್ಡೋಜರ್‌ನಿಂದ ತಡೆದ ನಾಯಕ ಯೋಗಿಜಿ’

‘ರಾಜಕಾರಣಿಗಳ ಬದುಕು ಖುಷಿ-ಖುಷಿಯಾಗಿರುತ್ತದೆಂದು ನೀವು ಅಂದುಕೊಂಡಿರಬಹುದು. ಆದರೆ..’

- Advertisement -

Latest Posts

Don't Miss