ನೀನು ಮುಸ್ಲಿಂ. ನಾನು ನಿಂಗೆ ಟ್ರೀಟ್ಮೆಂಟ್ ಕೊಡಲ್ಲಾ ಅಂತ ವೈದ್ಯರೊಬ್ಬರ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಉತ್ತರ ಪ್ರದೇಶದ ಜೌನ್‌ಪುರ ನಲ್ಲಿ ಈ ಘಟನೆ ನಡೆದಿದೆ. ಮಹಿಳಾ ಆಸ್ಪತ್ರೆಯಲ್ಲಿ ವೈದ್ಯೆಯೊಬ್ಬರು ಧರ್ಮದ ಆಧಾರದ ಮೇಲೆ ಮಹಿಳೆಯೊಬ್ಬರಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ. ಈ ಆರೋಪದಿಂದ ಹೊಸ ವಿವಾದವೊಂದು ಹುಟ್ಟಿಕೊಂಡಿದ್ದು, ರಾಜ್ಯದ ವೈದ್ಯಕೀಯ ವ್ಯವಸ್ಥೆಯ ಮೇಲೆಯೇ ಸವಾಲು ಎಸೆದಿದೆ.
ಬಿರಿಬರಿ ಗ್ರಾಮದ ನಿವಾಸಿ ಶಮಾ ಪರ್ವೀನ್ ಎಂಬ ಮಹಿಳೆಯನ್ನು ಸೆಪ್ಟೆಂಬರ್ 30ರ ರಾತ್ರಿ ಹೆರಿಗೆ ನೋವಿನಿಂದ ಜಿಲ್ಲಾ ಮಹಿಳಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಾಥಮಿಕ ಪರೀಕ್ಷೆಯ ನಂತರ ಅಕ್ಟೋಬರ್ 1 ರಂದು ಕರ್ತವ್ಯದಲ್ಲಿದ್ದ ವೈದ್ಯೆಯೊಬ್ಬರು ನಿನ್ನ ಹೆರಿಗೆ ಮಾಡುವುದಿಲ್ಲ. ಆಪರೇಷನ್ ಥಿಯೇಟರ್‌ನಿಂದ ಕರೆದುಕೊಂಡು ಹೋಗಿ ಎಂದು ನರ್ಸ್‌ಗೆ ಸೂಚಿಸಿದ್ದಾಗಿ ಕುಟುಂಬದವರು ದೂರಿದ್ದಾರೆ.
ಈ ಸಂಬಂಧದ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೈದ್ಯರು ಧರ್ಮದ ಆಧಾರದ ಮೇಲೆ ವೈದ್ಯಕೀಯ ಸೇವೆ ನೀಡಲು ನಿರಾಕರಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ವಿಡಿಯೋದಲ್ಲಿ ಕುಟುಂಬದವರಿಗೆ ಅವರನ್ನು ಬೇರೆ ಎಲ್ಲಾದರೂ ಕರೆದುಕೊಂಡು ಹೋಗಿ ಎಂದು ತಿಳಿಸುತ್ತಿರುವುದು ಕೇಳಿಬಂದಿದೆ. ಸದ್ಯ ಉತ್ತರ ಪ್ರದೇಶದ ಜೌನ್‌ಪುರದಲ್ಲಿ ಈ ವಿವಾದ ಭುಗಿಲೆದ್ದಿದೆ.
ಘಟನೆಯ ನಂತರ ಜಿಲ್ಲಾ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ. ಗುಪ್ತಾ ಈ ಕುರಿತು ಸ್ಪಂದಿಸಿದ್ದಾರೆ. ಆರೋಪವನ್ನು ತೀವ್ರವಾಗಿ ಗಮನದಲ್ಲಿಟ್ಟುಕೊಂಡು ಆರೋಪಿತ ವೈದ್ಯರಿಂದ ವಿವರಣೆ ಕೇಳಲಾಗಿದೆ ಹಾಗೂ ತನಿಖೆಗೆ ಆದೇಶಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋವನ್ನ ಹರಿಯಬಿಟ್ಟ ಇಬ್ಬರು ಸ್ಥಳೀಯ ಪತ್ರಕರ್ತರ ವಿರುದ್ಧ ಪೊಲೀಸರು FIR ದಾಖಲಿಸಿದ್ದಾರೆ.
ಇಬ್ಬರು ಪತ್ರಕರ್ತರು ಬಲವಂತವಾಗಿ ಹೆರಿಗೆ ರೂಮ್‌ಗೆ ನುಗ್ಗಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಆಸ್ಪತ್ರೆಯ ಆಸ್ತಿಪಾಸ್ತಿಗೆ ಹಾನಿ ಮಾಡಿದ್ದಾರೆ ಎಂದು ಕೋಟ್ವಾಲಿ ಪೊಲೀಸ್ ಠಾಣೆಯಲ್ಲಿ ವೈದ್ಯಕೀಯ ಅಧೀಕ್ಷರು ದೂರು ದಾಖಲಿಸಿದ್ದಾರೆ. ಈ ಘಟನೆ ರಾಜಕೀಯವಾಗಿಯೂ ಬಿರುಗಾಳಿ ಎಬ್ಬಿಸಿದೆ.
ವರದಿ : ಲಾವಣ್ಯ ಅನಿಗೋಳ

