ಆಪರೇಷನ್ ಸಿಂಧೂರ್ ಅಪ್ಡೆಟ್ :
ನವದೆಹಲಿ : ಪಹಲ್ಗಾಮ್ ದಾಳಿಯ ಪ್ರತೀಕಾರವಾಗಿ ಪಾಕಿಸ್ತಾನದ ಭಯೋತ್ಪಾದಕೆರ ಅಡಗುತಾಣಗಳ ಮೇಲೆ ಏರ್‌ಸ್ಟ್ರೈಕ್ ಮಾಡಿ ಉಗ್ರರ 21 ನೆಲೆಗಳನ್ನು ಧ್ವಂಸ ಮಾಡಿರುವುದರ ಕುರಿತು ಅಧಿಕೃತವಾಗಿ ಭಾರತ ಸರ್ಕಾರ ಮಾಹಿತಿ ನೀಡಿದೆ. ಇನ್ನೂ ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ಪಾಕಿಸ್ತಾನವು ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗವಾಗಿದೆ. ಭಾರತವು ಪಾಕಿಸ್ತಾನದಲ್ಲಿನ ಭಯೋತ್ಪಾದಕರ ನೆಲೆಗಳನ್ನು ನಾಶಪಡಿಸುವ ನಿಟ್ಟಿನಲ್ಲಿ ತನ್ನ ಕಾರ್ಯವನ್ನು ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ಗಡಿಯಾಚೆಗಿನ ಕಾರ್ಯಾಚರಣೆ ನಡೆಸಿದೆ
ಪ್ರಮುಖವಾಗಿ ಕಳೆದ ಏಪ್ರಿಲ್ 22ರ ಪಹಲ್ಗಾಮ್ ದಾಳಿ ನಡೆಸಿದ್ದ ಉಗ್ರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ, ಅವರನ್ನು ಶಿಕ್ಷೆಗೆ ಗುರಿಪಡಿಸುವ ಕೆಲಸ ಮಾಡಿರಲಿಲ್ಲ. ದಾಳಿ ನಡೆದು 15 ದಿನಗಳು ಕಳೆದರೂ, ಪಾಕಿಸ್ತಾನವು ತನ್ನ ಭೂಪ್ರದೇಶ ಹಾಗೂ ಅದರ ನಿಯಂತ್ರಣದಲ್ಲಿರುವ ಸ್ಥಳಗಳಲ್ಲಿನ ಉಗ್ರರ ನೆಲೆಗಳ ಮೇಲೆ ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ. ಅದರ ಬದಲಾಗಿ, ನಮ್ಮ ಆರೋಪಗಳನ್ನು ನಿರಾಕರಿಸುತ್ತಾ, ಅಲ್ಲದೆ ಭಾರತದ ವಿರುದ್ಧ ಸುಳ್ಳು ಆರೋಪಗಳನ್ನು ಮಾತ್ರ ಮಾಡುತ್ತಿದೆ ಎಂದು ಮಿಶ್ರಿ ವಾಗ್ದಾಳಿ ನಡೆಸಿದ್ದಾರೆ.
ಇನ್ನೂ ಪಾಕಿಸ್ತಾನ ಮೂಲದ ಭಯೋತ್ಪಾದಕರ ನೆಲೆಗಳ ಮೇಲೆ ನಮ್ಮ ಗುಪ್ತಚರ ಮೇಲ್ವಿಚಾರಣೆಯ ಕಾರಣಕ್ಕಾಗಿ ಭಾರತದ ವಿರುದ್ಧ ಮತ್ತಷ್ಟು ದಾಳಿಗಳು ನಡೆಯುವ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ, ಆ ದಾಳಿಗಳನ್ನು ಪೂರ್ವಭಾವಿಯಾಗಿ ತಡೆಯಲು ಇಂದು ಬೆಳಗ್ಗೆ ಭಾರತವು ಗಡಿಯಾಚೆಗಿನ ಕಾರ್ಯಾಚರಣೆ ನಡೆಸಿದೆ ಎಂದರು. ಪಾಕಿಸ್ತಾನ ನಡೆಸುತ್ತಿರುವ ಅಪ್ರಚೋದಿತ ಗುಂಡಿನ ದಾಳಿಗೆ ಪ್ರತಿಯಾಗಿ ಭಾರತ ಪ್ರತ್ತ್ಯುತ್ತರ ನೀಡುತ್ತಿದೆ ಎಂದು ಹೇಳಿದ್ದಾರೆ.
ಪಾಕಿಗಳ ಮಿಲಿಟರಿ ಗುರಿಯಾಗಿಸಿಲ್ಲ..
ರೆಸಿಸ್ಟೆನ್ಸ್ ಫ್ರಂಟ್ ಎನ್ನುವ ಭಯೋತ್ಪಾದಕರ ಗುಂಪು ಪಹಲ್ಗಾಮ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಇದು ಲಷ್ಕರ್-ಎ-ತೈಬಾ ಎಲ್‌ಇಟಿಯ ಜೊತೆಗೆ ಸಂಪರ್ಕ ಇಟ್ಟುಕೊಂಡಿದೆ. ಪಹಲ್ಗಾಮ್ ದಾಳಿಯ ವಿಧಾನವು ಜಮ್ಮು ಮತ್ತು ಕಾಶ್ಮೀರ ಹಾಗೂ ಭಾರತದ ಇತರ ಭಾಗಗಳಲ್ಲಿ ಕೋಮು ಸಂಘರ್ಷವನ್ನು ಪ್ರಚೋದಿಸುವ ಗುರಿಯನ್ನು ಹೊಂದಿದೆ. ಭಾರತದ ಇಂದಿನ ದಾಳಿಯು ಪಾಕಿಸ್ತಾನದ ಯಾವುದೇ ಮಿಲಿಟರಿ ನೆಲೆಯನ್ನು ಗುರಿಯಾಗಿಸಿಲ್ಲ. ಅಲ್ಲಿನ ಭಯೋತ್ಪಾದಕ ನೆಲೆಗಳನ್ನು ನಾಶಮಾಡುವ ಗುರಿ ಹೊಂದಿತ್ತು ಎಂದು ಮಿಶ್ರಿ ಸ್ಪಷ್ಟನೆ ನೀಡಿದ್ದಾರೆ.
ಪಾಕಿಸ್ತಾನ ದಾರಿ ತಪ್ಪಿಸುವುದಕ್ಕೆ ಹೆಸರುವಾಸಿ..
ಪಾಕಿಸ್ತಾನವು ಭಯೋತ್ಪಾದಕರಿಗೆ ಸುರಕ್ಷಿತ ತಾಣವಾಗಿ ಹೊರಹೊಮ್ಮಿದೆ. ನಿಷೇಧಿತ ಅಂತರರಾಷ್ಟ್ರೀಯ ಭಯೋತ್ಪಾದಕರು ಶಿಕ್ಷೆಗೆ ಗುರಿಯಾಗುವುದರಿಂದ ಈ ದೇಶದಲ್ಲಿ ಸುರಕ್ಷಿತವಾಗಿದ್ದಾರೆ. ಪಾಕಿಸ್ತಾನವು ಜಗತ್ತನ್ನು ಮತ್ತು ಅಂತರರಾಷ್ಟ್ರೀಯ ವೇದಿಕೆಗಳನ್ನು ಉದ್ದೇಶಪೂರ್ವಕವಾಗಿ ದಾರಿತಪ್ಪಿಸುವುದಕ್ಕೆ ಹೆಸರುವಾಸಿಯಾಗಿದೆ ಎಂದು ಕಿಡಿ ಕಾರಿದ್ದಾರೆ.
ದಾಳಿಕೋರರನ್ನು ಗುರುತಿಸಲಾಗಿದೆ..
ಇನ್ನೂ ಪಹಲ್ಗಾಮ್ ಭಯೋತ್ಪಾದಕ ದಾಳಿಯ ತನಿಖೆಯ ನಂತರ, ಭಯೋತ್ಪಾದಕರು ಮತ್ತು ಪಾಕಿಸ್ತಾನದ ನಡುವೆ ನಿರಂತರ ಮಾತುಕತೆಗಳು ನಡೆಯುತ್ತಿವೆ ಎಂಬ ಮಾಹಿತಿಯು ನಮಗೆ ಲಭ್ಯವಾಗಿದೆ. ಪ್ರತ್ಯಕ್ಷದರ್ಶಿಗಳು ಮತ್ತು ಇತರ ಏಜೆನ್ಸಿಗಳ ತನಿಖೆಯ ಆಧಾರದ ಮೇಲೆ, ದಾಳಿಕೋರರನ್ನು ಸಹ ಗುರುತಿಸಲಾಗಿದೆ ಎಂದು ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ಪ್ರವಾಸೋದ್ಯಮ ಮತ್ತೆ ಅಭಿವೃದ್ಧಿ ಹೊಂದುತ್ತಿರುವುದರಿಂದ, ಅದನ್ನು ನಾಶ ಮಾಡುವುದೇ ದಾಳಿಯ ಮುಖ್ಯ ಉದ್ದೇಶವಾಗಿತ್ತು ಎಂದು ಅವರು ಹೇಳಿದ್ದಾರೆ.