ಬಿಹಾರ : ಮಹತ್ವದ ಬೆಳವಣಿಗೆಯಲ್ಲಿ ಬಿಹಾರದ ಆರ್‌ಜೆಡಿ ಪಕ್ಷದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ತಮ್ಮ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್‌ರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದ್ದಾರೆ. ಈ ಮೂಲಕ ರಾಜಕೀಯದಲ್ಲಿರುವ ಮಕ್ಕಳು ದಾರಿ ತಪ್ಪದಂತೆ, ನೈತಿಕ ಮೌಲ್ಯಗಳನ್ನು ಕಡೆಗಣಿಸದಂತೆ ಎಚ್ಚರಿಸಲು ಇಂತಹ ದೊಡ್ಡ ನಿರ್ಧಾರ ಕೈಗೊಂಡಿದ್ದಾರೆ. ಇನ್ನೂ ಈ ಬಗ್ಗೆ ಖುದ್ದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ಟರ್‌ನಲ್ಲಿ ಸುದೀರ್ಘವಾದ ಪೋಸ್ಟ್ ಹಂಚಿಕೊಂಡಿರುವ ಅವರು ಪುತ್ರನ ನಡವಳಿಕೆಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಬೇಜವಾಬ್ದಾರಿ ವರ್ತನೆ ನಮ್ಮ ಕೌಟುಂಬಿಕ ಮೌಲ್ಯ, ಸಂಪ್ರದಾಯಗಳಿಗೆ ತಕ್ಕಂತೆ ಇಲ್ಲ..
ತೇಜ್ ಪ್ರತಾಪ್ ಈಗ ಕುಟುಂಬ ಮತ್ತು ಪಕ್ಷದಲ್ಲಿ ಯಾವುದೇ ಪಾತ್ರ ಹೊಂದಿಲ್ಲ. ವೈಯಕ್ತಿಕ ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಕಡೆಗಣಿಸುವುದರಿಂದ ಸಾಮಾಜಿಕ ನ್ಯಾಯಕ್ಕಾಗಿ ನಾವು ನಡೆಸುವ ಸಾಮೂಹಿಕ ಹೋರಾಟಗಳು ದುರ್ಬಲಗೊಳ್ಳುತ್ತವೆ. ಹಿರಿಯ ಮಗನ ಚಟುವಟಿಕೆಗಳು, ಸಾರ್ವಜನಿಕ ನಡವಳಿಕೆ ಮತ್ತು ಬೇಜವಾಬ್ದಾರಿ ವರ್ತನೆ ನಮ್ಮ ಕೌಟುಂಬಿಕ ಮೌಲ್ಯಗಳು ಮತ್ತು ಸಂಪ್ರದಾಯಗಳಿಗೆ ತಕ್ಕಂತೆ ಇಲ್ಲ. ಆದ್ದರಿಂದ, ನಾನು ಅವರನ್ನು ಪಕ್ಷ ಮತ್ತು ಕುಟುಂಬದಿಂದ ದೂರವಿಡುತ್ತಿದ್ದೇನೆ. ಇನ್ನು ಮುಂದೆ ಅವರಿಗೆ ಪಕ್ಷ ಮತ್ತು ಕುಟುಂಬದಲ್ಲಿ ಯಾವುದೇ ರೀತಿಯ ಸಂಬಂಧವಿರುವುದಿಲ್ಲ. ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಹೊರಹಾಕಲಾಗುತ್ತದೆ. ಇದಲ್ಲದೆ ತೇಜ್ ಪ್ರತಾಪ್ ತಮ್ಮ ವೈಯಕ್ತಿಕ ಜೀವನದಲ್ಲಿ ಒಳ್ಳೆಯ ಮತ್ತು ಕೆಟ್ಟದ್ದನ್ನು ಗುರುತಿಸುವ ಸಾಮರ್ಥ್ಯ ಹೊಂದಿದ್ದಾರೆ. ಅವರೊಂದಿಗೆ ಸಂಬಂಧ ಹೊಂದಿರುವವರು ತಮ್ಮ ಸ್ವಂತ ವಿವೇಚನೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ನನ್ನ ಹೃದಯದ ಭಾವನೆಗಳನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ..
ಇನ್ನೂ ಆರ್‌ಜೆಡಿ ಮುಖ್ಯಸ್ಥರ ಈ ರೀತಿಯ ನಿರ್ಧಾರಕ್ಕೆ ಕಾರಣವೆನೆಂದು ನೋಡಿದಾಗ, ಅಲ್ಲಿ ಸಾಮಾಜಿಕ ಜಾಲತಾಣದಲ್ಲಿ ತೇಜ್ ಪ್ರತಾಪ್ ಹಂಚಿಕೊಂಡಿದ್ದ ಆ ಒಂದು ಪೋಸ್ಟ್ ಎನ್ನುವುದು ಗಮನಾರ್ಹ. ಮುಖ್ಯವಾಗಿ ತೇಜ್ ಪ್ರತಾಪ್ ಕಳೆದೆರಡು ದಿನಗಳ ಹಿಂದಷ್ಟೇ ಯುವತಿಯೊಬ್ಬರೊಂದಿಗೆ ತಮ್ಮ ಸಂಬಂಧವನ್ನು ಹೊಂದಿರುವುದಾಗಿ ಹೇಳಿದ್ದರು. ಕಳೆದ 12 ವರ್ಷಗಳಿಂದ ಅನುಷ್ಕಾ ಯಾದವ್ ಎಂಬ ಯುವತಿಯ ಸಂಬಂಧದಲ್ಲಿ ಇದ್ದೇನೆ. ನಾನು ಈ ವಿಚಾರವನ್ನು ನಿಮ್ಮೆಲ್ಲರಿಗೂ ಬಹಳ ದಿನಗಳಿಂದ ಹೇಳಬೇಕೆಂದು ಬಯಸುತ್ತಿದ್ದೆ. ಆದರೆ ಅದನ್ನು ಹೇಗೆ ಹೇಳಬೇಕೆಂದು ನನಗೆ ತಿಳಿದಿರಲಿಲ್ಲ. ಹೀಗಾಗಿ ಇಂದು ಈ ಪೋಸ್ಟ್ ಮೂಲಕ ನನ್ನ ಹೃದಯದ ಭಾವನೆಗಳನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ! ನಾನು ಹೇಳುತ್ತಿರುವುದು ನಿಮಗೆಲ್ಲರಿಗೂ ಅರ್ಥವಾಗುತ್ತದೆ ಎಂದು ಭಾವಿಸುತ್ತೇನೆ ಎಂದು ಬರೆದುಕೊಳ್ಳುವ ಮೂಲಕ ತಮ್ಮ ಲವ್ ಮ್ಯಾಟರ್ ಬಗ್ಗೆ ಹೇಳಿಕೊಂಡಿದ್ದರು.
ಅಲ್ಲದೆ ತೇಜ್ ಪ್ರತಾಪ್ ಪೋಸ್ಟ್‌ನಲ್ಲಿ, ಆ ಯುವತಿಯ ಚಿತ್ರವನ್ನೂ ಹಂಚಿಕೊಂಡಿದ್ದರು. ಆದರೆ ಈ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದ ಬಳಿಕ, ತೇಜ್ ಪ್ರತಾಪ್ ತಮ್ಮ ಪೋಸ್ಟ್‌ಗೆ ಸ್ಪಷ್ಟನೆ ನೀಡಿ, ನನ್ನ ಸೋಷಿಯಲ್ ಮೀಡಿಯಾ ಅಕಂಟ್ ಹ್ಯಾಕ್ ಮಾಡಲಾಗಿದೆ. ಅಲ್ಲದೆ ನನ್ನ ಫೋಟೋಗಳನ್ನು ಫೇಕ್ ಆಗಿ ಎಡಿಟ್ ಮಾಡಿ ನನಗೆ ಮತ್ತು ನನ್ನ ಕುಟುಂಬ ಸದಸ್ಯರಿಗೆ ಕಿರುಕುಳ ನೀಡುವುದರ ಜೊತೆಗೆ ಮಾನಹಾನಿಗೆ ಪ್ರಯತ್ನಿಸಲಾಗಿದೆ ಎಂದು ಹೇಳಿದ್ದರು. ನನ್ನ ಹಿತೈಷಿಗಳು ಮತ್ತು ಅನುಯಾಯಿಗಳು ಎಚ್ಚರದಿಂದಿರಿ, ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ ಎಂದು ನಾನು ಮನವಿ ಮಾಡುತ್ತೇನೆ ಎಂದು ಕೇಳಿಕೊಂಡಿದ್ದರು.
ತಂದೆಯ ನಿರ್ಧಾರ ಸರಿಯಾಗಿದೆ, ಪಕ್ಷವು ಇಂತಹ ವಿಚಾರಗಳನ್ನು ಸಹಿಸುವುದಿಲ್ಲ..
ಇನ್ನೂ ಮದುವೆ ಮತ್ತು ಪ್ರೀತಿ ವಿಚಾರವಾಗಿ ವ್ಯಾಪಕ ವಿವಾದಕ್ಕೆ ಗುರಿಯಾಗಿ ಪಕ್ಷದಿಂದ ಉಚ್ಚಾಟನೆಯಾಗಿರುವ ಸಹೋದರ ತೇಜ್ ಪ್ರತಾಪ್ ವಿರುದ್ಧ ಅವರ ತಮ್ಮ ಹಾಗೂ ಲಾಲು ಪ್ರಸಾದ್ ಕಿರಿಯ ಪುತ್ರ ತೇಜಸ್ವಿ ಯಾದವ್ ಕಿಡಿಕಾರಿದ್ದು, ಇಂತಹವುಗಳನ್ನೆಲ್ಲಾ ಸಹಿಸಲಸಾಧ್ಯ ಎಂದು ಹೇಳಿದ್ದಾರೆ, ಸಹೋದರ ತೇಜ್ ಪ್ರತಾಪ್ ಯಾದವ್ ವಯಸ್ಕರಾಗಿದ್ದು, ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಹೊಂದಿದ್ದಾರೆ. ಆದರೆ ಸಹೋದರನ ಉಚ್ಚಾಟನೆಯ ಬಗ್ಗೆ ತಂದೆಯ ನಿರ್ಧಾರವು ಸರಿಯಾಗಿದೆ. ಅಲ್ಲದೆ ಪಕ್ಷವು ಇಂತಹ ವಿಚಾರಗಳನ್ನು ಸಹಿಸುವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ.
ನಾವು ಬಿಹಾರದ ಜನರಿಗಾಗಿ ಕೆಲಸ ಮಾಡುತ್ತಿದ್ದೇವೆ, ಬಿಹಾರದ ಜನರಿಗಾಗಿಯೇ ಸಮರ್ಪಿತರಾಗಿದ್ದೇವೆ. ನನ್ನ ಅಣ್ಣನ ವಿಷಯಕ್ಕೆ ಬಂದರೆ, ರಾಜಕೀಯ ಜೀವನ ಮತ್ತು ವೈಯಕ್ತಿಕ ಜೀವನ ಬೇರೆ ಬೇರೆಯಾಗಿದೆ. ಅವರಿಗೆ ತಮ್ಮ ವೈಯಕ್ತಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕಿದೆ… ನಮ್ಮ ಪಕ್ಷದ ಮುಖ್ಯಸ್ಥರು ನಿಲುವು ಸ್ಪಷ್ಟಪಡಿಸಿದ್ದಾರೆ. ನಾವು ಅದಕ್ಕೆ ಬದ್ಧರಾಗಿದ್ದೇವೆ ಎಂದು ಹೇಳುವ ಮೂಲಕ ತೇಜಸ್ವಿ ಯಾದವ್ ಅಣ್ಣನ ನಡೆಯನ್ನು ಖಂಡಿಸಿದ್ದಾರೆ.
ಪಕ್ಷ, ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಯು ನಮ್ಮ ಪೂಜೆಯಾಗಿದೆ..
ಅಲ್ಲದೆ ವಾತಾವರಣ, ಸಂಪ್ರದಾಯ, ಕುಟುಂಬ ಪಾಲನೆಯ ಘನತೆಯನ್ನು ನೋಡಿಕೊಳ್ಳುವವರನ್ನು ಎಂದಿಗೂ ಪ್ರಶ್ನಿಸಲಾಗುವುದಿಲ್ಲ… ಯಾರ ಕಾರಣದಿಂದಾಗಿಯೂ, ಕುಟುಂಬ ಮತ್ತು ಪಕ್ಷದ ಖ್ಯಾತಿಗೆ ಕಳಂಕ ಬಂದರೂ ನಾವು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ನಮ್ಮ ತಂದೆ ಲಾಲೂ ಪ್ರಸಾದ್ ಯಾದವ್ ಅವರು ತಮ್ಮ ನಿರ್ಧಾರದ ಮೂಲಕ ಸ್ಪಷ್ಟಪಡಿಸಿದ್ದಾರೆ ಎಂದು ಆರ್‌ಜೆಡಿ ನಾಯಕಿ ಹಾಗೂ ಲಾಲೂ ಪುತ್ರಿ ರೋಹಿಣಿ ಆಚಾರ್ಯ ಹೇಳಿದ್ದಾರೆ. ನಮಗೆ, ಅಪ್ಪ ದೇವರಿದ್ದಂತೆ, ಕುಟುಂಬ ನಮ್ಮ ದೇವಾಲಯ ಮತ್ತು ಹೆಮ್ಮೆ, ಅಪ್ಪನ ಅವಿರತ ಪ್ರಯತ್ನಗಳು ಮತ್ತು ಹೋರಾಟಗಳಿಂದ ಪಕ್ಷವನ್ನು ಕಟ್ಟಲಾಗಿದೆ. ಪಕ್ಷ, ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಯು ನಮ್ಮ ಪೂಜೆಯಾಗಿದೆ. ಯಾರ ಕಾರಣದಿಂದಾಗಿಯೂ ಇವುಗಳ ಖ್ಯಾತಿಗೆ ಕಳಂಕ ಬಂದರೂ ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ತಂದೆಯ ನಿರ್ಧಾರವನ್ನು ರೋಹಿಣಿ ಬೆಂಬಲಿಸುವ ಮೂಲಕ ಸಹೋದರನ ನಡವಳಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊದಲ ಮದುವೆಯಾಗಿದ್ದ ತೇಜ್ ಪ್ರತಾಪ್ ದಾಂಪತ್ಯದ ಕಥೆ ಏನು..?
ಇನ್ನೂ ಲಾಲೂ ಪುತ್ರ ತೇಜ್ ಪ್ರತಾಪ್‌ಗೆ ಈಗಾಗಲೇ ಒಂದು ಮದುವೆಯಾಗಿದೆ, ಆದರೆ ಕೌಟುಂಬಿಕ ಕಲಹದಿಂದ ಪತ್ನಿ ತವರಿನಲ್ಲಿದ್ದಾಳೆ.ಈ ತೇಜ್ ಪ್ರತಾಪ್ ಯಾದವ್ ಕಳೆದ 2018ರಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ದರೋಗಾ ರಾಯ್ ಅವರ ಮೊಮ್ಮಗಳು, ಹಾಗೂ ಮಾಜಿ ಸಚಿವ ಚಂದ್ರಿಕಾರ ರಾಯ್ ಅವರ ಮಗಳಾದ ಐಶ್ವರ್ಯಾ ಅವರನ್ನು ಮದುವೆಯಾಗಿದ್ದರು.
ಕೆಲವೇ ತಿಂಗಳಲ್ಲಿ ಐಶ್ವರ್ಯಾ ಗಂಡನ ಮನೆ ಬಿಟ್ಟು ಬಂದಿದ್ದರು. ತನ್ನ ಗಂಡ ಹಾಗೂ ಅವನ ಕುಟುಂಬಸ್ಥರು ಒಂದಾಗಿ ಮನೆಯಿಂದ ನನ್ನ ಹೊರಹಾಕಿದ್ದಾರೆ ಎಂದು ಅವಳು ಆರೋಪಿಸಿದ್ದಳು. ಅಲ್ಲದೆ, ತೇಜ್ ಪ್ರತಾಪ್ ಯಾದವ್ ದಾರಿತಪ್ಪಿದ ವ್ಯಕ್ತಿಯಾಗಿದ್ದು, ಡ್ರಗ್ಸ್ ದಾಸರಾಗಿದ್ದಾರೆ, ಮಹಿಳೆಯರ ಗುಣಗಳನ್ನು ಒಳಗೊಂಡಂತೆ ಒಬ್ಬನೇ ಇದ್ದಾಗ ವಿಲಕ್ಷಣವಾಗಿ ವರ್ತನೆ ಮಾಡುತ್ತಾನೆ ಎಂದು ಐಶ್ವರ್ಯಾ ಆರೋಪಿಸಿದ್ದರು. ಇವರ ವಿವಾಹ ವಿಚ್ಛೇದನ ಅರ್ಜಿಯು ಪಾಟ್ನಾದ ಕೌಟುಂಬಿಕ ನ್ಯಾಯಾಲಯದಲ್ಲಿಇತ್ಯರ್ಥವಾಗದೇ ಇನ್ನೂ ಕೂಡ ಬಾಕಿ ಉಳಿದಿದೆ. ಚಂದ್ರಿಕಾ ರಾಯ್ ಅವರು ತಮ್ಮ ಮಗಳಿಗೆ ನ್ಯಾಯ ಕೊಡಿಸುವ ಸಲುವಾಗಿಯೇ ಆರ್ಜೆಡಿಗೆ ಗುಡ್ ಬೈ ಹೇಳಿದ್ದರು. ಆದರೆ ಇದೀಗ ಅತ್ತ ಒಂದೇ ಒಂದು ಪೋಸ್ಟ್ ಇಡೀ ಲಾಲೂ ಪ್ರಸಾದ್ ಯಾದವ್ ಕುಟುಂಬದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದರೆ, ಇತ್ತ ಚುನಾವಣೆ ಹೊಸ್ತಿಲಲ್ಲಿರುವ ಬಿಹಾರ ರಾಜಕೀಯದಲ್ಲಿ ಹೊಸ ಸಮೀಕರಣಕ್ಕೆ ನಾಂದಿ ಹಾಡಿದಂತಾಗಿದೆ.