ಮದುವೆಯಾದ ಕೇವಲ ಎರಡು ವರ್ಷಗಳಲ್ಲೇ ಪತ್ನಿ ಪತಿಯ ಸ್ನೇಹಿತನೊಂದಿಗೆ ಪರಾರಿಯಾಗಿ, ದೇವಸ್ಥಾನದಲ್ಲಿ ಮದುವೆಯಾಗಿರುವ ವಿಲಕ್ಷಣ ಘಟನೆ ಮಂಡ್ಯ ಜಿಲ್ಲೆಯ ಗ್ರಾಮಾದಲ್ಲಿ ನಡೆದಿದೆ.
ಬನ್ನಂಗಾಡಿ ಗ್ರಾಮದ ಆಟೋ ಚಾಲಕ ಸಾಗರ್ ಅವರ ಪತ್ನಿ ರಕ್ಷಿತಾ ಪತಿಯ ಸ್ನೇಹಿತ ಇಂದ್ರ ಎಂಬುವವನ ಜೊತೆ ಓಡಿಹೊಗಿ, ದೇವಸ್ಥಾನದಲ್ಲಿ ಮದುವೆಯಾಗಿದ್ದಾಳೆ. ನಂತರ ಅದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಮಾಹಿತಿಯ ಪ್ರಕಾರ, ರಕ್ಷಿತಾ ಕಾಲೇಜಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಸಾಗರ್ ಪರಿಚಯವಾಗಿ, ನಂತರ ಇಬ್ಬರ ನಡುವೆ ಪ್ರೀತಿ ಮೂಡಿ ಮದುವೆಯಾಗಿದ್ದರು. ಮದುವೆಯಾದ ನಂತರ ಸುಮಾರು ಎರಡು ವರ್ಷಗಳ ಕಾಲ ದಂಪತಿಗಳಿಬ್ಬರು ಸಹಜವಾಗಿ ಜೀವನ ನಡೆಸುತ್ತಿದ್ದರು. ಆದರೆ ಇತ್ತೀಚೆಗೆ ಪತಿ ಸಾಗರ್ ಸ್ನೇಹಿತ ಇಂದ್ರನೊಂದಿಗೆ ರಕ್ಷಿತಾ ಹತ್ತಿರವಾಗಿದ್ದಾಳು ಎಂಬುದು ತಿಳಿದುಬಂದಿದೆ.
ಮನೆಯಿಂದ ಹೊರಡುವ ವೇಳೆ ರಕ್ಷಿತಾ ಸುಮಾರು ಒಂದು ಲಕ್ಷ ರೂಪಾಯಿ ನಗದು ಹಾಗೂ 22 ಗ್ರಾಂ ಚಿನ್ನದ ಒಡವೆಗಳನ್ನು ತೆಗೆದುಕೊಂಡು ಹೋಗಿದ್ದಾಳೆ ಎಂದು ಸಾಗರ್ ಆರೋಪಿಸಿದ್ದಾರೆ. ದೇವಸ್ಥಾನದಲ್ಲಿ ಇಂದ್ರನೊಂದಿಗೆ ಮದುವೆಯಾದ ಬಳಿಕ ಅದರ ಚಿತ್ರಗಳನ್ನು ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಂಚಿಕೊಳ್ಳುವ ಮೂಲಕ ಪತಿಗೆ ಆಘಾತ ನೀಡಿದ್ದಾಳೆ.
ಈ ಘಟನೆಗೆ ಸಂಬಂಧಿಸಿದಂತೆ ಸಾಗರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ. ‘ಅವರು ತಮ್ಮ ಇಚ್ಛೆಯಂತೆ ಬದುಕಲಿ, ಆದರೆ ನನಗೆ ತಕ್ಷಣ ವಿಚ್ಛೇದನ ನೀಡಬೇಕು. ಜೊತೆಗೆ ಮನೆಯಿಂದ ತೆಗೆದುಕೊಂಡು ಹೋದ ಹಣ ಮತ್ತು ಒಡವೆಗಳನ್ನು ಹಿಂತಿರುಗಿಸಬೇಕು’ ಎಂದು ಸಾಗರ್ ಮನವಿ ಮಾಡಿದ್ದಾರೆ.
ಮಗನ ಪರಿಸ್ಥಿತಿಯನ್ನು ಕಂಡು ಸಾಗರ್ ತಾಯಿ ದುಃಖ ವ್ಯಕ್ತಪಡಿಸಿದ್ದು, ಕುಟುಂಬದಲ್ಲಿ ಆಕ್ರಂದನದ ವಾತಾವರಣ ನಿರ್ಮಾಣವಾಗಿದೆ. ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದೆ.




