ಕಸ ಹಾಕಿ ಬರುತ್ತೇನೆಂದು ಮನೆಯಿಂದ ಹೊರಟ ಮಹಿಳೆ ಗಂಡನಿಗೆ ನಿದ್ರೆ ಮಾತ್ರೆ ಹಾಕಿ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರು ನಗರದ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ. ಇಬ್ಬರು ಮಕ್ಕಳ ತಾಯಿ ಪ್ರಿಯಾಂಕಾ ಎಂಬ ಮಹಿಳೆ ಕಸದ ಬುಟ್ಟಿ ಹಾಗೂ ಬ್ಯಾಗ್ ಹಿಡಿದು ಮನೆಯಿಂದ ಹೊರಟಿದ್ದಾಳೆ.
ಅದಾದ ಬಳಿಕ ಮನೆಗೆ ವಾಪಸ್ ಬಂದಿಲ್ಲ. ಇದರಿಂದ ಆತಂಕಗೊಂಡ ಪತಿ ಶರತ್ ಕುಮಾರ್, ಪತ್ನಿ ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಪ್ರಿಯಾಂಕಾ ಪರಿಚಿತ ವ್ಯಕ್ತಿಯೊಬ್ಬರೊಂದಿಗೆ ತೆರಳಿರುವ ಸಾಧ್ಯತೆ ವ್ಯಕ್ತವಾಗುತ್ತಿದೆ.
ತಮ್ಮ ಪ್ರದೇಶದಲ್ಲಿರುವ ಕಟಿಂಗ್ ಶಾಪ್ ನಡೆಸುತ್ತಿದ್ದ ಪ್ರಭು ಎಂಬಾತನೇ ನನ್ನ ಪತ್ನಿಯನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಪತಿ ಶರತ್ ಕುಮಾರ್ ಆರೋಪಿಸಿದ್ದಾರೆ. ಇದೇ ವೇಳೆ, ಮಹಿಳೆ ಮನೆಯಿಂದ ಹೊರಡುವ ಮುನ್ನ ಪತಿಗೆ ನಿದ್ರೆ ಮಾತ್ರೆ ನೀಡಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ಪ್ರಕರಣ ಮತ್ತಷ್ಟು ಸಂಶಯಕ್ಕೆ ಕಾರಣವಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಬಾಗಲಗುಂಟೆ ಪೊಲೀಸರು ಮಹಿಳೆಯ ಪತ್ತೆಗೆ ಕ್ರಮ ಕೈಗೊಂಡಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಕುಟುಂಬ ಸಂಬಂಧಗಳು ಮತ್ತು ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದ ಪ್ರಕರಣಗಳು ನಗರದಲ್ಲಿ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ.




