ನಾಡದೇವತೆ ಶ್ರೀ ಚಾಮುಂಡೇಶ್ವರಿ ತಾಯಿಯ ದರ್ಶನದ ಹೆಸರಿನಲ್ಲಿ ₹2,000 ಲೂಟಿ!: ಆರ್.ಅಶೋಕ್ ಆರೋಪ

Political News: ಆಷಾಢ ಮಾಸಾರಂಭವಾಗಿದ್ದು, ಹಲವು ಭಕ್ತರು ಮೈಸೂರಿನ ಚಾಮುಂಡಿ ದೇವಸ್ಥಾನಕ್ಕೆ ಹೋಗಿ, ದೇವಿಯ ದರ್ಶನಕ್ಕಾಗಿ ಗಂಟೆಗಟ್ಟಲೇ ಕಾಾಯುವಂತಾಗಿದೆ. ಈ ಬಗ್ಗೆ ಮೈಸೂರಿನಲ್ಲಿ ಕ್ಯೂನಲ್ಲಿ ನಿಂತಿರುವ ಮಹಿಳೆ ಬಳಿ ಕೇಳಿದಾಗ, ಆಕೆ ನಾವು 2 ಸಾವಿರ ರೂ. ನೀಡಿ, ಸ್ಪೆಶಲ್ ಟಿಕೇಟ್ ಪಡೆದು ಬಂದಿದ್ದೇವೆ. ಆದರೂ ನಮಗೆ ಕ್ಯೂನಲ್ಲಿ ನಿಲ್ಲುವ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ₹2,000 ಪಡೆದು 20 ನಿಮಿಷದಲ್ಲಿ ವಿಶೇಷ ಶೀಘ್ರ ದರ್ಶನ ಎಂದು ಹೇಳಿ, ನಂತರ ವಿಐಪಿಗಳ ಆಗಮನದ ನೆಪದಲ್ಲಿ ಭಕ್ತರನ್ನು 4-5 ಗಂಟೆಗಳ ಕಾಲ ಸಾಲಿನಲ್ಲಿ ನಿಲ್ಲಿಸುವುದು ಯಾವ ಸೀಮೆ ವ್ಯವಸ್ಥೆ? ವಯೋವೃದ್ಧರು, ಮಹಿಳೆಯರು, ಪುಟ್ಟ ಮಕ್ಕಳೊಂದಿಗೆ ಬಂದ ಕುಟುಂಬಗಳು ಅನುಭವಿಸಿದ ಸಂಕಷ್ಟಕ್ಕೆ ಯಾರು ಹೊಣೆ..?? ಎಂದು ಪ್ರಶ್ನಿಸಿದ್ದಾರೆ.

ಮೈಸೂರು ಉಸ್ತುವಾರಿ ಸಚಿವ ಯತೀಂದ್ರ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ, ಭಕ್ತರಿಂದ ಹಣ ವಸೂಲಿ ಮಾಡುವಾಗ ಇರುವ ಆಸಕ್ತಿ, ಅವರಿಗೆ ಗೌರವಯುತ ದರ್ಶನ ವ್ಯವಸ್ಥೆ ಕಲ್ಪಿಸುವಲ್ಲಿ ಏಕೆ ಕಾಣಿಸುತ್ತಿಲ್ಲ? ಆಷಾಢ ಮಾಸದಲ್ಲಿ ಲಕ್ಷಾಂತರ ಭಕ್ತರು ನಾಡ ಅಧಿದೇವತೆಯ ದರ್ಶನಕ್ಕಾಗಿ ಬರುತ್ತಾರೆ. ಅವರ ಧಾರ್ಮಿಕ ಭಾವನೆಗಳಿಗೆ ಗೌರವ ನೀಡುವುದು ಸರ್ಕಾರದ ಕರ್ತವ್ಯ. VIP ಸಂಸ್ಕೃತಿಯ ಹೆಸರಿನಲ್ಲಿ ಸಾಮಾನ್ಯ ಭಕ್ತರನ್ನು ಗಂಟೆಗಟ್ಟಲೆ ಕಾಯಿಸಿ ಕಳುಹಿಸುವುದು ಅತ್ಯಂತ ಖಂಡನೀಯ.

ದೇವಾಲಯದ ವ್ಯವಸ್ಥೆಯ ಜೊತೆ ಚೆಲ್ಲಾಟವಾಡಬೇಡಿ. ಭಕ್ತರಿಗೆ ಪಾರದರ್ಶಕ, ಸಮಯೋಚಿತ ಮತ್ತು ಗೌರವಯುತ ದರ್ಶನ ವ್ಯವಸ್ಥೆ ಕಲ್ಪಿಸಿ. ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಯ ಸನ್ನಿಧಿಯಲ್ಲಿ ಭಕ್ತರ ನಂಬಿಕೆಗೆ ಧಕ್ಕೆ ತರುವ ಆಡಳಿತವನ್ನು ಜನರು ಎಂದಿಗೂ ಒಪ್ಪುವುದಿಲ್ಲ ಎಂದು ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

About The Author