Tuesday, April 29, 2025

Latest Posts

1990s ಚಿತ್ರ ವಿಮರ್ಶೆ: ಕಾಡುವ, ನೋಡುವ ಭಾವನಾತ್ಮಕ ಚಿತ್ರ!

- Advertisement -

ರೇಟಿಂಗ್ : 3.5/5

ಚಿತ್ರ: 1990s
ನಿರ್ದೇಶಕ : ನಂದಕುಮಾರ್
ನಿರ್ಮಾಣ: ಮನಸ್ಸು ಮಲ್ಲಿಗೆ ಸಂಸ್ಥೆ
ತಾರಾಗಣ: ಅರುಣ್, ರಾಣಿ ವರದ್, ಶಿವಾನಂದ, ಸ್ವಪ್ನ ಶೆಟ್ಟಿಗಾರ್, ದೇವ್ ಇತರರು.

ಏ ಜುಟ್ಟು ನಮ್ ತಂಟೆಗೆ ಬಂದ್ರೆ ಅಷ್ಟೇ, ಈ ಸಲ ನಿನ್ ಮಗಳ ಕೈ ಕಚ್ಚಿದ್ದಿನಿ. ಮುಂದೆ ನಿನ್ ಮಗಳ ಕೆನ್ನೆ ಕಚ್ಚೀತೀನಿ…

ಬಾಲ್ಯದಲ್ಲೇ ಆ ಹುಡುಗ ಈ ಖಡಕ್ ಡೈಲಾಗ್ ಹೇಳಿದ ಮೇಲೆ ಮುಂದೆಯೂ ಆ ಹುಡುಗ ಪಕ್ಕಾ ಲೋಕಲ್ ಹುಡುಗನಾಗಿ ಮೆರಿತಾನೆ ಅಂತ ಪ್ರತ್ಯೇಕವಾಗಿ ಹೇಳುವಂತಿಲ್ಲ ಬಿಡಿ. ಚಿಕ್ಕಂದಿನಲ್ಲೇ ಅವನೊಬ್ಬ ಪೋಲಿ. ಅಪ್ಪ, ಅಮ್ಮ ಅಷ್ಟೇ ಅಲ್ಲ, ಆ ಊರಿನ ಯಾರೊಬ್ಬರಿಗೂ ಬಗ್ಗದ ಹುಡುಗ. ಅವನೊಬ್ಬ ಮಹಾ ಕೋಪಿಷ್ಠ. ಇವಿಷ್ಟು ಹೇಳಿದ ಮೇಲೆ ಇದೊಂದು ಪಕ್ಕಾ ರಿವೇಂಜ್ ಸ್ಟೋರಿನೇ ಇರಬೇಕು ಅಂತ ಅಂದುಕೊಂಡರೆ ಆ ಊಹೆ ತಪ್ಪು.

ಹೌದು, ಇದೊಂದು ತೊಂಬತ್ತರ ಕಾಲಘಟ್ಟದ ಲವ್ ಸ್ಟೋರಿ. ಹಾಗಂತ ಬರೀ ಲವ್ವು ತುಂಬಿಕೊಂಡಿದೆ ಅಂದರೆ ಆ ಕಲ್ಪನೆಯೇ ಇಲ್ಲಿಲ್ಲ. ಇಲ್ಲಿ ನಿಷ್ಕಲ್ಮಷ ಪ್ರೀತಿ ಇದೆ. ಮುಗ್ಧ ಮನಸ್ಸಿಗೆ. ಗೆಳೆತನವಿದೆ. ಸಂಬಂಧಗಳ ಮೌಲ್ಯವಿದೆ. ಕೋಪ ತಾಪಗಳ ಮುಖವಾಡವಿದೆ. ಭಾವನಾತ್ಮಕ ಅಂಶಗಳೂ ಇವೆ. ಹಾಗಾಗಿ ಇದೊಂದು ಮನ ಮುಟ್ಟುವ ಮತ್ತು ಮಿಡಿಯುವ ಪ್ರೀತಿ ಕಥೆ ಅಂದರೆ ತಪ್ಪಿಲ್ಲ. ಸಿನಿಮಾ ಮೊದಲರ್ಧ ಸುಮ್ಮನೆ ನೋಡಿಸಿಕೊಂಡು ಹೋಗುತ್ತೆ. ದ್ವಿತಿಯಾರ್ಧ ಒಂದಷ್ಟು ಕಾಡುವ ಹಂತಕ್ಕೂ ಕರೆದುಕೊಂಡು ಹೋಗುತ್ತೆ. ಸಿನಿಮಾದ ಕ್ಲೈಮ್ಯಾಕ್ಸ್ ಜೀವಾಳ. ಇಲ್ಲಿ ಪ್ರೀತಿಯ ಉನ್ಮಾದತೆ ಜೊತೆಗೆ ಕಣ್ಣಾಲಿಗಳು ತುಂಬುವಂತಹ ದೃಶ್ಯಗಳು ನೋಡುಗರನ್ನು ಹಿಡಿದಿಟ್ಟುಕೊಳ್ಳುತ್ತವೆ. ಅದೇ ಚಿತ್ರದ ಪ್ಲಸ್ ಎನ್ನಬಹುದು.

ತೊಂಬತ್ತರ ಕಾಲಘಟ್ಟದ ಸಿನಿಮಾಗಳಲ್ಲಿ ಸೂಕ್ಷ್ಮತೆಗೆ ಹೆಚ್ಚು ಒತ್ತು ಕೊಡುವುದು ಕಾಮನ್. ಇಲ್ಲೂ ಅದು ಮುಂದುವರೆದಿದೆ. ಆಗಿನ ಪ್ರೀತಿ, ಕಾಸ್ಟ್ಯೂಮ್, ಮಾತು, ನಡೆ ನುಡಿ ಎಲ್ಲವನ್ನೂ ಅಷ್ಟೇ ಸೂಕ್ಷ್ಮವಾಗಿ ಕಟ್ಟಿ ಕೊಡುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಇಲ್ಲಿ ಮಳೆ ಇದೆ, ಬೆಂಕಿ ಇದೆ, ತಣ್ಣನೆಯ ಗಾಳಿ ಇದೆ, ಬಿರುಗಾಳಿಯೂ ಇದೆ. ಹಾಗಾಗಿ ಇದೊಂದು ಆ್ಯಕ್ಷನ್ ಕಮ್ ಲವ್ ಸ್ಟೋರಿ ಎನ್ನಬಹುದು. ಕೆಲವು ಕಡೆ ಅನಗತ್ಯ ದೃಶ್ಯಗಳಿವೆ. ಆಗಾಗ ಬೇಡವೆನಿಸುವ ಮಾತುಗಳೂ ಇವೆ. ಅಂತಹ ಸಮಯದಲ್ಲಿ ಮನಸ್ಸಿಗೆ ನಾಟುವ ಮುದವೆನಿಸುವ ಹಾಡು ಕಾಣಿಸಿಕೊಂಡು ಆ ಮಿಸ್​ಟೇಕ್ ಗಳನ್ನು ದೂರ ತಳ್ಳುತ್ತವೆ. ಆದ್ದರಿಂದ ಈ 90ರ ಕಾಲಘಟ್ಟದ ಕಥೆ ನೋಡುಗರಿಗೆ ಆಪ್ತವೆನಿಸುತ್ತಾ ಹೋಗುತ್ತದೆ.

ಸಿನಿಮಾದಲ್ಲಿ ಆಗಿನ ಕಥೆ ಹೇಳಿರುವುದು ತುಸು ಕಷ್ಟದ ಕೆಲಸವೇ. ಕೆಲವು ಕಡೆ ಅದು ಹರಸಾಹಸವಾಗಿಯೂ ಕಾಣುತ್ತದೆ. ಆದರೆ, ನಿರ್ದೇಶಕರ ಜಾಣತನ ಇಲ್ಲಿ ವರ್ಕೌಟ್ ಆಗಿರುವುದರಿಂದಲೇ ಸಿನಿಮಾ ಎಲ್ಲೂ ಬೋರ್ ಎನಿಸದೆ, ನೋಡಿಸಿಕೊಂಡು ಹೋಗುತ್ತದೆ. ಸಿನಿಮಾದ ಅವಧಿ ಕೊಂಚ ಜಾಸ್ತಿ ಆಯ್ತು ಅನ್ನುವ ಮಾತುಗಳನ್ನು ಬಿಟ್ಟರೆ, ಸಿನಿಮಾದಲ್ಲಿ ಬೇರೆ ಯಾವ ಮೈನಸ್ ಅಂಶಗಳು ಸಿಗುವುದಿಲ್ಲ. ಅವಧಿಯನ್ನು ಕೊಂಚ ಕಡಿಮೆ ಮಾಡಿದರೆ, ಮನಸ್ಸಿಗೆ ಇನ್ನಷ್ಟು ಆಪ್ತವಾಗುವ ಎಲ್ಲಾ ಸಾಧ್ಯತೆಗಳೂ ಇವೆ.

ಸಿನಿಮಾದ ಮೊದಲರ್ಧ ಜಾಲಿಯಾಗಿ ಕರೆದುಕೊಂಡು ಹೋಗುವ ಈ ಚಿತ್ರದ ಕಥೆ, ದ್ವಿತಿಯಾರ್ಧದಲ್ಲಿ ಒಂದಷ್ಟು ತಿರುವುಗಳನ್ನು ಕೊಡುತ್ತಾ ಹೋಗುತ್ತದೆ. ಚಿತ್ರದ ಕ್ಲ್ಯೆಮ್ಯಾಕ್ಸ್ ನಿಜಕ್ಕೂ ಊಹೆ ಮಾಡಿಕೊಳ್ಳಲಾಗುವುದಿಲ್ಲ. ಸಿನಿಮಾ ನೋಡಿ ಹೊರಬಂದವರಿಗೆ ಒಂದಷ್ಟು ಎದೆಭಾರ ಎನಿಸುವುದು ದಿಟ. ಆಗಿನ ಕಾಲಘಟ್ಟದ ಕಥೆಯಾದರೂ, ಈಗಿನ ಟ್ರೆಂಡ್ ಗೂ ಒಪ್ಪುವ ಮತ್ತು ಅಪ್ಪುವಂತಹ ಮೇಕಿಂಗ್ ಇಲ್ಲಿದೆ. ಎಲ್ಲಾ ವರ್ಗಕ್ಕೂ ನಾಟುವ ಎಳೆ ಇಲ್ಲಿರುವುದರಿಂದ ನೋಡುಗರನ್ನು ಒಂದಷ್ಟು ಭಾವುಕತೆಗೆ ದೂಡುತ್ತದೆ. ಸಿನಿಮಾದಲ್ಲಿ ಸಂಭಾಷಣೆಗೆ ಇನ್ನಷ್ಟು ಧಮ್ ಕಟ್ಟಿಕೊಡಬಹುದಿತ್ತು. ಸಂಕಲನ ಚಿತ್ರದ ವೇಗವನ್ನು ಎತ್ತಿ ಹಿಡಿದಿದೆ. ಸಿನಿಮಾದಲ್ಲಿ ಮಾತನಾಡುವ ಮತ್ತೊಂದು ಅಂಶವೆಂದರೆ ಅದು ಕಲಾತ್ಮಕತೆ. ಕಲಾನಿರ್ದೇಶಕರ ಕೈ ಚಳಕ ಆಗಿನ ಕಾಲಘಟ್ಟಕ್ಕೆ ಕರೆದೊಯ್ಯುತ್ತದೆ. ಇದು ಸಿನಿಮಾದ ಮತ್ತೊಂದು ಪ್ಲಸ್.

ಕಥೆ ಏನು?

ಚಿಕ್ಕಂದಿನಲ್ಲೇ ನಾಯಕ (ಅರುಣ್) ಕೋಪಿಷ್ಠ. ಅದು ದೊಡ್ಡವನಾದ ಮೇಲೂ ಮುಂದುವರೆಯುತ್ತೆ. ಊರಿನ ಬ್ರಾಹ್ಮಣ ಪೂಜಾರಿ ಮೇಲೆ ಅವನಿಗೆ ಎಲ್ಲಿಲ್ಲದ ಕೋಪ. ಕಾರಣ ಚಿಕ್ಕಂದಿನಲ್ಲಿ ಆದಂತಹ ಅವಮಾನ. ಅದು ಎಷ್ಟರಮಟ್ಟಿಗೆ ಅಂದರೆ, ಬ್ರಾಹ್ಮಣ ಮಗಳನ್ನು ಕಿಚಾಯಿಸುವಷ್ಟು. ಆದರೆ, ಮುಂಗೋಪಿ ನಾಯಕನೆಂದರೆ, ಆ ಬ್ರಾಹ್ಮಣ ಮಗಳಿಗೆ ಪ್ರೀತಿ. ಕಲ್ಲು ಮನಸ್ಸಿನ ನಾಯಕನನ್ನು ಹೇಗೆ ಮೃದುಗೊಳಿಸಿ, ಪ್ರೀತಿಯತ್ತ ಕರೆದೊಯ್ಯುತ್ತಾಳೆ ಅನ್ನೋದೇ ಕಥೆಯ ಒನ್ ಲೈನ್. ಇಬ್ಬರ ಪ್ರೀತಿ ಶುರುವಾಗೋಕೆ ಮೊದಲರ್ಧ ಮುಗಿಯುತ್ತೆ. ದ್ವಿತಿಯಾರ್ಧದಲ್ಲಿ ನಿರೀಕ್ಷಿಸದ ಸಂಗತಿಗಳು ನಡೆದುಹೋಗುತ್ತವೆ. ಸಿನಿಮಾದ ಕೊನೆಯಲ್ಲೆ ಎಲ್ಲವೂ ನಿಶಬ್ಧ. ಅಲ್ಲೊಂದಷ್ಟು ಘಟನೆಗಳು ನಡೆದುಹೋಗುತ್ತವೆ. ಈ ನಡುವೆ, ಜಾತಿ, ಧರ್ಮ, ಅಧರ್ಮ, ಪ್ರೀತಿ, ದ್ವೇಷ ಎಲ್ಲವೂ ಇಣುಕಿ ನೋಡುತ್ತವೆ. ತಣ್ಣಗೆ ಶುರುವಾದ ಪ್ರೀತಿ ಕೊನೆಗೆ ಕೆಂಡವಾಗುತ್ತೆ. ಅಂತ್ಯದಲ್ಲೇ ಏನಾಗುತ್ತೆ ಅನ್ನೋದೇ ಸಸ್ಪೆನ್ಸ್. ಆ ಕುತೂಹಲವಿದ್ದರೆ ಒಮ್ಮೆ 1990s ಸಿನಿಮಾ ನೋಡಲ್ಲಡ್ಡಿಯಿಲ್ಲ.

ನಾಯಕ ಅರುಣ್ ಫೈಟ್ ಮತ್ತು ಡ್ಯಾನ್ಸ್ ನಲ್ಲಿ ಇಷ್ಟವಾಗುತ್ತಾರೆ. ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಬಾಡಿಲಾಂಗ್ವೇಜ್, ಡೈಲಾಗ್ ಡಿಲವರಿಯಲ್ಲಿ ಹಿಂದೆ ಬಿದ್ದಿಲ್ಲ. ಫಸ್ಟ್ ಸಿನಿಮಾ ಆಗಿದ್ದರೂ, ಅನುಭವಿ ನಟರಂತೆ ಕಾಣುತ್ತಾರೆ. ಸಣ್ಣಪುಟ್ಟ ಮಿಸ್ಟೇಕ್ ಸರಿಪಡಿಸಿಕೊಂಡರೆ, ಕನ್ನಡಕ್ಕೊಬ್ಬ ಒಳ್ಳೆಯ ಹೀರೋ ಆಗುವ ಎಲ್ಲಾ ಲಕ್ಷಣಗಳಿವೆ. ನಾಯಕಿ ರಾಣಿವರದ್ ಅಂದದಷ್ಟೇ ಪಾತ್ರವನ್ನೂ ಕಟ್ಟಿಕೊಟ್ಟಿದ್ದಾರೆ. ಕ್ಲ್ಯೆಮ್ಯಾಕ್ಸ್ ನಲ್ಲಿ ಎಲ್ಲರನ್ನೂ ಮೌನವಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದಂತೆ ಅರುಣ್ ಕುಮಾರ್, ಶಾಸ್ತ್ರಿ ಪಾತ್ರದಲ್ಲಿ ಮೆಚ್ಚುಗೆ ಆಗುತ್ತಾರೆ. ಉಳಿದಂಂತೆ ಸ್ವಪ್ನ ಶೆಟ್ಟಿಗಾರ್ ಪಾತ್ರ ಗಮನಸೆಳೆಯುತ್ತೆ. ದೇವ್, ಶಿವಾನಂದ ಇತರರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಮಹಾರಾಜ ಅವರ ಸಂಗೀತ ಇಲ್ಲಿ ಮಾತಾಡಿದೆ. ಅಪ್ಪ ನಿನ್ನ ಕಣ್ಣ ನೀರು, ಕಂಡೊಡನೆ ಮೌನಿ ನಾನು ಹಾತು ಮತ್ತು ಮಳೆ ಕುರಿತ ಸಾಂಗ್ ಇಷ್ಟವಾಗುತ್ತವೆ. ಹಾಲೇಶ್ ಅವರ ಕ್ಯಾಮೆರಾ ಕೈಚಳಕ ಸಿನಿಮಾದ ಅಂದವನ್ನು ಹೆಚ್ಚಿಸಿದೆ.

ವಿಜಯ್ ಭರಮಸಾಗರ್, ಫಿಲ್ಮ್‌ಬ್ಯೂರೋ, ಕರ್ನಾಟಕ ಟಿವಿ

- Advertisement -

Latest Posts

Don't Miss