ಬೆಲೆ ಇಳಿಕೆಯ ಭರವಸೆ ನೀಡಿ ಕಳೆಯಿತು 20 ದಿನ: ಆದರೂ ಕಡಿಮೆಯಾಗಿಲ್ಲ ಮೊಸರಿನ ಬೆಲೆ: ವಿಜಯೇಂದ್ರ ಆಕ್ರೋಶ

Political News: ಸಿಎಂ ಡಿ.ಕೆ.ಶಿವಕುಮಾರ್ ಹೆಚ್ಚಾಗಿದ್ದ ಮೊಸರಿನ ದರವನ್ನು 2 ರೂಪಾಯಿ ಕಡಿಮೆ ಮಾಡಬೇಕು ಎಂದು ಹೇಳಿ 20 ದಿನಗಳೇ ಕಳೆದಿದೆ. ಆದರೂ ಕೂಡ ಕೆಎಂಎಫ್ ಸಿಎಂ ಮಾತಿಗೂ ಬೆಲೆ ನೀಡದೇ, ದರ ಇಳಿಸಿಲ್ಲ.

ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮಾನ್ಯ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರೇ, ರಾಜ್ಯದಲ್ಲಿ ಯಾರ ಅಧಿಕಾರ ನಡೆಯುತ್ತಿದೆ? ರಾಜ್ಯದ ಮುಖ್ಯಮಂತ್ರಿಗಳ ಮಾತಿಗೂ ಕವಡೆ ಕಾಸಿನ ಕಿಮ್ಮತ್ತು ನೀಡದಷ್ಟು ಅಧಿಕಾರ ಯಾರ ಬಳಿಯಿದೆ? ಮೊದಲು ನುಡಿದಂತೆ ನಡೆಯಿರಿ, ರಾಜ್ಯದ ಮುಖ್ಯಮಂತ್ರಿ ಸ್ಥಾನದ ಘನತೆ ಉಳಿಸಿ! ಎಂದು ಜರಿದಿದ್ದಾರೆ.

ನಂದಿನಿ ಹಾಲು, ಮೊಸರಿನ ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೊಸರಿನ ಬೆಲೆ ಕಡಿತಗೊಳಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿ 20 ದಿನಗಳಿಗೂ ಹೆಚ್ಚು ಕಾಲ ಕಳೆದರೂ, ಆ ಭರವಸೆ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ! ರೈತರ ಹಿತ ಕಾಪಾಡುವುದು ಎಷ್ಟು ಮುಖ್ಯವೋ, ಗ್ರಾಹಕರ ಹಿತ ಕಾಪಾಡುವುದೂ ಅಷ್ಟೇ ಮುಖ್ಯ. ಬರೀ ಘೋಷಣೆಗಳಿಗೆ ಸೀಮಿತವಾಗಿರುವ ಈ ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನ ರೋಸಿ ಹೋಗಿದ್ದಾರೆ!

ನಿಮ್ಮ ಸೂಚನೆಯ ಹೊರತಾಗಿಯೂ 20 ದಿನಗಳಿಂದ ನಂದಿನಿ ಮೊಸರಿನ ದರ ಕಡಿತವಾಗದಿರುವುದು ನಿಮ್ಮ ಆಡಳಿತದ ವೈಫಲ್ಯವನ್ನು ಜಗಜ್ಜಾಹೀರು ಮಾಡಿದೆ. ಬಡ-ಮಧ್ಯಮ ವರ್ಗದ ಕುಟುಂಬಗಳ ಮೇಲೆ ಭಾರಿ ಹೊರೆ ಹಾಕಿ, ಸ್ವಲ್ಪ ಇಳಿಕೆಯ ಭರವಸೆ ನೀಡಿ, ಈಗ ನಿಮ್ಮ ಭರವಸೆಯನ್ನು ಉಳಿಸಿಕೊಳ್ಳದಿರುವುದು ಜನವಿರೋಧಿ ಧೋರಣೆ ಮಾತ್ರವಲ್ಲ, ಹೊಣೆಗೇಡಿತನ! ಎಂದು ವಿಜಯೇಂದ್ರ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಾಗ್ದಾಳಿ ನಡೆಸಿದ್ದಾರೆ.

About The Author